ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಕೋವಿಡ್‌–19 ಮುಕ್ತ; ಕೊಡಗಿನಲ್ಲಿ 28 ದಿನಗಳಿಂದ ಒಂದೂ ಪ್ರಕರಣ ಇಲ್ಲ

Last Updated 20 ಏಪ್ರಿಲ್ 2020, 13:07 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳು ದುಪ್ಪಟ್ಟು ಆಗುವ ಅವಧಿ 7.5 ದಿನಗಳ ವರೆಗೂ ಮುಂದೂಡಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಸೋಮವಾರ ಹೇಳಿದರು.

ಕರ್ನಾಟಕದ ಕೊಡಗು, ಪುದುಚೇರಿಯ ಮಾಹೆ ಹಾಗೂ ಉತ್ತರಾಖಂಡದ ಪುರಿ ಗಢವಾಲ್‌ನಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಕೋವಿಡ್‌–19 ಪ್ರಕರಣ ದಾಖಲಾಗಿಲ್ಲ. ಕಳೆದ 14 ದಿನಗಳಿಂದ ಒಂದೂ ಪ್ರಕರಣ ವರದಿಯಾಗದ ಜಿಲ್ಲೆಗಳ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಇನ್ನೂ ಗೋವಾದಲ್ಲಿನ ಎಲ್ಲ ಕೊರೊನಾ ವೈರಸ್‌ ಸೋಂಕಿತರು ಗುಣಮುಖರಾಗಿದ್ದು, ಗೋವಾ ಈಗ ಕೋವಿಡ್‌–19 ಮುಕ್ತ ಪ್ರದೇಶವಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಸೋಂಕು ಪ್ರಕರಣಗಳು ದುಪ್ಪಟ್ಟು ಆಗುವ ಅವಧಿ ಲಾಕ್‌ಡೌನ್‌ಗೂ ಮುನ್ನ ಇದ್ದ 3.4 ದಿನಗಳಿಂದ 7.5 ದಿನಗಳಿಗೆ ಹೆಚ್ಚಳವಾಗಿದೆ. ದೆಹಲಿ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಛತ್ತೀಸ್‌ಗಢ, ತಮಿಳುನಾಡು ಹಾಗೂ ಬಿಹಾರ ಸೇರಿದಂತೆ ಎಂಟು ರಾಜ್ಯಗಳು ಮತ್ತು ಒಂದು ಕೇಂದ್ರಾದಳಿತ ಪ್ರದೇಶದಲ್ಲಿ ಕೋವಿಡ್‌–19 ಪ್ರಕರಣಗಳು 20ಕ್ಕೂ ಕಡಿಮೆ ದಿನಗಳಲ್ಲಿ ದುಪ್ಟಟ್ಟು ಆಗಿರುವುದು ವರದಿಯಾಗಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಅಸ್ಸಾಂ, ಉತ್ತರಾಖಂಡ ಹಾಗೂ ಲಡಾಕ್‌ನಲ್ಲಿ 20ರಿಂದ 30 ದಿನಗಳಲ್ಲಿ ಸೋಂಕು ಪ್ರಕರಣಗಳು ದುಪ್ಪಟ್ಟು ಆಗುತ್ತಿವೆ.

ಒಡಿಶಾದಲ್ಲಿ 39.8 ದಿನಗಳು ಹಾಗೂ ಕೇರಳದಲ್ಲಿ 72.2 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಎರಡು ಪಟ್ಟಾಗಿದೆ. ಕೇರಳದಲ್ಲಿ ಸೋಂಕು ನಿಯಂತ್ರಣದಲ್ಲಿರುವುದು ಇದರಿಂದ ತಿಳಿದು ಬಂದಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,553 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17,265ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 543 ತಲುಪಿದೆ. ಈವರೆಗೂ 2,546 ಮಂದಿ ಗುಣಮುಖರಾಗಿದ್ದಾರೆ. ಶೇ 14.75ರಷ್ಟು ಚೇತರಿಕೆ ಕಂಡಂತಾಗಿದೆ.

'ಶೇ 80ರಷ್ಟು ಕೊರೊನಾ ವೈರಸ್‌ ಸೋಂಕಿತರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ ಅಥವಾ ಅತ್ಯಂತ ಕಡಿಮೆ ಲಕ್ಷಣಗಳು ಕಂಡಿವೆ' ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಮುಖ್ಯಸ್ಥ ರಮಣ್‌ ಗಂಗಾಖೇಡ್ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT