ಮಂಗಳವಾರ, ಜೂನ್ 2, 2020
27 °C

ಮಾನವೀಯತೆ ಮೆರೆದ ಸೇನೆ: ಹೆಲಿಕಾಪ್ಟರ್‌ ಮೂಲಕ ಜಮ್ಮು ವೃದ್ದನಿಗೆ ಚಿಕಿತ್ಸೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚಂಡೀಗಡ: ಅದು ಸಿಆರ್‌ಪಿಎಫ್ ಯೋಧರು ಕೇವಲ ಯುದ್ಧ ಮಾಡಲು ಮಾತ್ರ ಮೀಸಲು ಎಂಬ ಮಾತನ್ನು ದೂರ ಮಾಡಿ ಮಾನವೀಯತೆ ಮೆರೆದ ಘಟನೆ.

ಜಮ್ಮುವಿನಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವೃದ್ಧನನ್ನು ಹೆಲಿಕಾಪ್ಟರ್‌ನಲ್ಲಿ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ ಪ್ರಸಂಗ ಇಡೀ ರಾಷ್ಟ್ರದಲ್ಲಿ ಪ್ರಸಂಶೆಗೆ ಒಳಗಾಗಿದೆ.

ಈ ಘಟನೆ ನಡೆದಿದ್ದು ಹೀಗೆ. ಜಮ್ಮುವಿನ ರಜೋರಿಯಲ್ಲಿ ವಾಸಿಸುತ್ತಿದ್ದ ವಜೀರ್ ಹುಸೇನ್ (60) ಏಪ್ರಿಲ್ ಒಂದರಂದು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ವಜಿರ್ ಹುಸೇನ್ ಪುತ್ರ ಆರಿಫ್ ಮುಂಬೈನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಅವರ ಸಹಾಯಕ್ಕೆ ಯಾರೂ ಇರಲಿಲ್ಲ. ಅಕ್ಕಪಕ್ಕದ ಜನರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಲ್ಲಿ ಈ ಸಮಸ್ಯೆಗೆ ಚಿಕಿತ್ಸೆ ನೀಡುವ ಯಾವುದೇ ವೈದ್ಯರಾಗಲೀ, ಸೌಲಭ್ಯಗಳಾಗಲಿ ಇರಲಿಲ್ಲ. ಅಸಾಧ್ಯವೆಂದು ತಿಳಿಸಿದ ವೈದ್ಯರು ಕೂಡಲೆ ಅವರನ್ನು ಮನೆಗೆ ಕಳುಹಿಸಿದರು.

ಈ ವಿಷಯವನ್ನು ವೃದ್ದನ ಪುತ್ರ ಮುಂಬೈನಲ್ಲಿ ಕೆಲಸಕ್ಕೆ ತೆರಳಿದ್ದ ಆರಿಫ್‌ಗೆ ತಿಳಿಸಿದರು. ಆರಿಫ್‌‌ಗೆ ದಿಕ್ಕೇ ತೋಚದಾಯಿತು. ಏಕೆಂದರೆ, ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು ಜಮ್ಮುವಿಗೆ ತಲುಪಲು ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಆತ ತನ್ನ ಪ್ರಯತ್ನ ಮುಂದುವರಿಸಿ ಒಂದು ಸೈಕಲ್ ಪಡೆದು ಅದರ ಮೂಲಕ 2,100 ಕಿಲೋ ಮೀಟರ್ ದೂರದ ಜಮ್ಮುವಿನ ತನ್ನ ಊರು ತಲುಪಲು ಪ್ರಯಾಣ ಆರಂಭಿಸಿದ.

ಆತ ಸೈಕಲ್ ತುಳಿದು ಇಷ್ಟೊಂದು ದೂರ ತಲುಪುವ ಹೊತ್ತಿಗೆ ಆತನ ತಂದೆಯ ಸ್ಥಿತಿ ಹದೆಗೆಡಬಹುದು ಎಂದು ತಿಳಿದ ಸ್ಥಳೀಯರು ಕೊವಿಡ್ -19 ಹಾಗೂ ಲಾಕ್‌ಡೌನ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮೀಸಲಿರುವ ಸಿಆರ್‌‌ಪಿಎಫ್ ಸಹಾಯವಾಣಿಗೆ ವಿಷಯ ತಿಳಿಸಿದರು.

ಕೂಡಲೆ ಸ್ಪಂದಿಸಿದ ಸಿಆರ್‌‌ಪಿಎಫ್ ಸಿಬ್ಬಂದಿ ವಜೀರ್ ಹುಸೇನ್ ಅವರನ್ನು ಹೆಲಿಕಾಪ್ಟರ್ ಮೂಲಕ ರಜೋರಿಯ ಗ್ರಾಮದಿಂದ ಜಮ್ಮುವಿಗೆ ಹೆಲಿಕಾಪ್ಟರ್ ಮೂಲಕ ಸಾಗಿಸಿ, ನಂತರ ರಸ್ತೆಯ ಮೂಲಕ ಚಂಡೀಗಡ ಆಸ್ಪತ್ರೆಗೆ ಸಾಗಿಸಿದರು. "ಆರಿಫ್ ತಂದೆಗೆ ಸಾಕಷ್ಟು ವೈದ್ಯಕೀಯ ಆರೈಕೆ ದೊರಕಿಸಿಕೊಡಲು ನಾವು ಮಧ್ಯಪ್ರವೇಶಿಸಲು ನಿರ್ಧರಿಸಿದೆವು ಎಂದು ಚಂಡೀಗಡ ಸಿಆರ್‌ಪಿಎಫ್‌ ಕಮಾಂಡೆಂಟ್ ನಿಸಾರ್ ಮಹಮ್ಮದ್ ಹೇಳಿದರು.

ಈ ಮಧ್ಯೆ, ಆರಿಫ್ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ ತಂದೆಯನ್ನು ನೋಡಲು ಸೈಕಲ್ ಮೂಲಕ ಬರುತ್ತಿರುವುದನ್ನು ವಿಡಿಯೋ ಮಾಡಿ ಮನೆಗೆ ತಿಳಿಸಿದ. ಇದು ಸಾಮಾಜಿಕ ಜಾಲತಾಣಕ್ಕೆ ತಲುಪಿ ವೈರಲ್ ಆಯಿತು. ಕೂಡಲೆ ಈ ವಿಷಯ ತಿಳಿದ ಸಿಆರ್‌‌ಪಿಎಫ್ ಸಿಬ್ಬಂದಿ ಆತನನ್ನು ಪತ್ತೆ ಮಾಡಿತು. ಅಷ್ಟರಲ್ಲಿ ವಡೋದರಾ ತಲುಪಿದ್ದ ಆರಿಫ್‌ನನ್ನು ಸಂಪರ್ಕಿಸಿ ವಿಷಯ ತಿಳಿಸಿದರು.

ಸಿಆರ್‌‌ಪಿಎಫ್ ಸಿಬ್ಬಂದಿ ನನ್ನ ತಂದೆಗೆ ಚಂಡೀಗಡದಲ್ಲಿ ಚಿಕಿತ್ಸೆ ಕೊಡುತ್ತಿರುವ ಬಗ್ಗೆ ವಿಷಯ ತಿಳಿಸಿದರು. ಅಲ್ಲದೆ, ನನ್ನನ್ನು ವಡೋದರಾದಲ್ಲಿಯೇ ಇರಲು ಮನವೊಲಿಸಲು ಪ್ರಯತ್ನಿಸಿದರು. ಆದರೆ, ನಾನು ನನ್ನ ತಂದೆಯನ್ನು ನೋಡಬೇಕಾಗಿತ್ತು. ಅದಕ್ಕಾಗಿ ಸೈಕಲ್‌ ಮೂಲಕ ಹೋಗುವುದಾಗಿ ತಿಳಿಸಿದೆ ಆದರೆ, ನನ್ನನ್ನು ಬಿಡದ ಯೋಧರು ನನ್ನ ತಂದೆಯ ಸ್ಥಳಕ್ಕೆ ನನ್ನನ್ನು ತಲುಪಿಸುವ ಭರವಸೆ ನೀಡಿದರು ಎಂದು ಆರಿಫ್ ಹೇಳುತ್ತಾರೆ.

ಸಿಆರ್‌ಪಿಎಫ್ ವಡೋದರಾ ಸ್ಥಳೀಯ ಘಟಕ ಆರಿಫ್‌‌ನನ್ನು ಅಹಮದಾಬಾದ್‌ಗೆ ತಲುಪಿಸಿತು. ಅಲ್ಲಿಂದ ಮತ್ತೊಂದು ಘಟಕ ಲೂದಿಯಾನಕ್ಕೆ, ಹೀಗೆ ಚಂಡೀಗಡಕ್ಕೆ ತಲುಪುವವರೆಗೆ ಆರಿಫ್ ತನ್ನ ತಂದೆ ತಲುಪಲು ಸಿಆರ್‌ಪಿಎಫ್ ಸಹಾಯ ಮಾಡಲಾಯಿತು ಎಂದು ಸಿಆರ್‌ಪಿಎಫ್ ನ ಕಮಾಂಡೆಂಟ್ ಮಹಮದ್ ಹೇಳಿದರು.

ಇದನ್ನೂ ಓದಿ: ಜಮ್ಮು–ಕಾಶ್ಮೀರ: ಏಳು ಕೊರೊನಾ ಪ್ರಕರಣ ದೃಢ, ಸೋಂಕಿತರ ಸಂಖ್ಯೆ 45ಕ್ಕೆ ಏರಿಕೆ

ಸಿಆರ್‌‌ಪಿಎಫ್ ಸಿಬ್ಬಂದಿ ಇಷ್ಟೆಲ್ಲಾ ಪ್ರಯತ್ನದಿಂದಾಗಿ ಆರಿಫ್ ಈಗ ಆತನ ತಂದೆ ಬಳಿಗೆ ತಲುಪಿದ್ದಾರೆ. ಅಲ್ಲದೆ, ತನಗಾಗಿ ಇಷ್ಟೆಲ್ಲಾ ಶ್ರಮ ವಹಿಸಿದ ಸಿಆರ್ ಪಿಎಫ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ತಂದೆ ಮಾತನಾಡುತ್ತಿಲ್ಲ. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಂದೆಯನ್ನು ಈ ರೀತಿ ನೋಡುವುದು ಕಷ್ಟ ಎಂದು ಆರಿಫ್ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು