ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹಿಂದಿ ಬರಲ್ಲಾ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ': ಛೇ ಎಂಥ ಮಾತು ಕೇಳಬೇಕಾಯ್ತು...

Last Updated 14 ಸೆಪ್ಟೆಂಬರ್ 2019, 7:47 IST
ಅಕ್ಷರ ಗಾತ್ರ

ಹಿಂದಿಯನ್ನು ಹೇರುವ ಮೂಲಕ ಅಪಮಾರ್ಗದಲ್ಲಿ ರಾಷ್ಟ್ರ ಭಾಷೆಯನ್ನಾಗಿ ಮಾಡಿಕೊಳ್ಳುವ ರಾಜಕೀಯದ ಪಟ್ಟಭದ್ರ ಹಿತಾಸಕ್ತಿಯ ಒತ್ತಡವನ್ನುಕನ್ನಡದ ಮನಸ್ಸುಗಳು ವಿರೋಧಿಸಿವೆ. ರಾಜಕೀಯವಾಗಿ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವವರೂ ಆ ಪಕ್ಷದಿಂದ ನಡೆಯುತ್ತಿರುವ ಭಾಷಾ ಹೇರಿಕೆಯನ್ನು ಖಂಡಿಸಿದ್ದಾರೆ. ತಾಯಿನಾಡು, ನುಡಿಯ ಬಗ್ಗೆ ಅಭಿಮಾನ ಮೆರೆದಿದ್ದಾರೆ. ಆ ಅಭಿಮಾನದ ಮಾತುಗಳು ಇಲ್ಲಿವೆ.

**

1) ಹಿಂದಿ ಬರಲ್ಲಾ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ...

ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ನಮಗೆಹಿಂದಿ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಇಂಥದ್ದೊಂದು ಮಾತನ್ನು ಕೇಳಬೇಕಾಗಿ ಬಂತು. ನನಗೆ ತುಂಬಾ ಬೇಸರ ತಂದ ಪ್ರಕರಣವದು. ಇಂದು ಆ ಘಟನೆಯನ್ನು ನೆನಪಿಸಿಕೊಳ್ಳುವಾಗಲೂ ನನ್ನಲ್ಲಿ ಅಂಥದ್ದೇ ಬೇಸರ ಮನೆ ಮಾಡುತ್ತೆ.

ವೃತ್ತಿಯಲ್ಲಿ ನಾನೊಬ್ಬ ಭಾಷಾ ಉಪನ್ಯಾಸಕ. ನನಗೆ ಎಲ್ಲ ಭಾಷೆಗಳ ಮೇಲೂ ಗೌರವ ಇದೆ. ನಾವೆಲ್ಲರೂ ಹಿಂದಿ ಸಿನಿಮಾ ನೋಡುತ್ತೇವೆ. ನಾನು ಖಂಡಿತ ಹಿಂದಿ ವಿರೋಧಿಯಲ್ಲ. ಆದರೆ ನನ್ನ ಕನ್ನಡದ ಅಭಿಮಾನವೂ ಕಡಿಮೆಯಾದುದಲ್ಲ.ದೇಶದಲ್ಲಿರಾಜ್ಯಗಳ ಉದಯವಾಗಿದ್ದೇ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ಎಂದ ಮೇಲೆ ದೇಶದಅರ್ಧಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಬಳಸಲ್ಪಡುವ ಹಿಂದಿಯನ್ನು ದೇಶದ 'ಕಚೇರಿ ಭಾಷೆ'ಯಾಗಿ ಅಂಗೀಕರಿಸಿದ್ದನ್ನು ಒಪ್ಪಿಕೊಳ್ಳಲು ಆಗದು. ಹಿಂದಿ ದಿವಸ್ ಮಾಡುವ ಹಾಗೆಯೇ ಭಾರತದ ಎಲ್ಲಾ ಭಾಷೆಗಳ ದಿವಸ್‌ಗಳನ್ನು ಮಾಡಬೇಕಿತ್ತು ಅಲ್ವಾ?

ಹಾಗೆ ನೋಡಿದರೆ ಈಗ ಆಡಳಿತದ ಹಂತಗಳಲ್ಲಿ ಸಂಪರ್ಕ ಭಾಷೆಯಾಗಿ (Connecting Language)ಬಳಕೆಯಾಗುತ್ತಿರುವುದು ಇಂಗ್ಲಿಷ್. ಅಂಥದ್ದರಲ್ಲಿ ಹಿಂದಿಯನ್ನು ಅನವಶ್ಯಕವಾಗಿ ಹೇರಲು ನಡೆಸುವ ಯಾವುದೇ ಹುನ್ನಾರಗಳನ್ನು ನಾವು ವಿರೋಧಿಸಬೇಕು. ಬ್ಯಾಂಕುಗಳಿಗೆ ನಡೆಯುವ ನೇಮಕಾತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಕೊಡದ ಕಾರಣಕ್ಕೆ ಸ್ಥಳೀಯ ಪ್ರತಿಭೆಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಈಗಲೂ ನಾವು ಧ್ವನಿ‌ ಎತ್ತದೇ ಹೋದರೆ ಹೇಗೆ ? ನಮ್ಮ ಸಂಸದರುಈ ಬಗ್ಗೆ ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕು.

ಉತ್ತರ ಭಾರತೀಯರಲ್ಲಿ ಕೆಲವರು ದಕ್ಷಿಣದ ಭಾಷೆಗಳ ಬಗ್ಗೆ ಹೊಂದಿರುವ ಅಸಡ್ಡೆ ಅಸಹ್ಯ ತರಿಸುತ್ತೆ. ನಾಲ್ಕು ವರ್ಷಗಳ ಹಿಂದೆ ಫತೇಪುರ್ ಸಿಕ್ರಿಗೆ ಹೋದಾಗ ಅಲ್ಲಿನ ಗೈಡ್ ಒಬ್ಬತನ್ನನ್ನು ನೇಮಿಸಿಕೊಳ್ಳುವಂತೆ ದುಂಬಾಲು ಬೀಳುತ್ತಿದ್ದ. ನನ್ನ ಜೊತೆಯಿದ್ದವರಲ್ಲಿ ಬಹುತೇಕರಿಗೆ ಹಿಂದಿ ಬರುವುದಿಲ್ಲ ಹಾಗಾಗಿ ಗೈಡ್ ನ ಅವಶ್ಯಕತೆ ಇಲ್ಲ ಎಂದು ಹೇಳಿದ್ದಕ್ಕೆ 'ಹಿಂದಿ ಬರುವುದಿಲ್ಲ ಎಂದು ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೆ ನಿಮಗೆ? ಹಿಂದಿ ನಮ್ಮ ರಾಷ್ಟ್ರಭಾಷೆ'ಎಂದ. ನನಗೂ ಕೋಪ ಬಂದು 'ನಿನಗೆ ಕನ್ನಡ ಬರುತ್ತದೆಯೇ?'ಎಂದೆ.‌ 'ಕನ್ನಡ್? ವೋ ಕ್ಯಾ ಹೋತಾ ಹೈ' ಎಂದು ಕೇಳಿದ ಈ ದೇಶದಲ್ಲಿ ಕನ್ನಡವೆಂಬ ಭಾಷೆಯೊಂದು ಅಸ್ತಿತ್ವದಲ್ಲಿದೆ ಎಂಬುದೂ ಅವನಿಗೆ ಗೊತ್ತಿಲ್ಲ ಅಥವಾ ಅವನ ಅಹಂ ಹಾಗೆ ಹೇಳಿಸಿರಬಹುದು.

ಅವನು ಮುಂದುವರೆದು ಹೇಳಿದ್ದನ್ನು ನೆನಪಿಸಿಕೊಂಡರೆ ಈಗಲೂ ನನಗೆ ಮೈ ಝುಂ ಅನ್ನುತ್ತೆ.'ಅಭಿ ಹಮಾರೆ ಸರ್ಕಾರ್ ಹೈ. ಆಪ್ ಜೈಸೇ ಲೋಗೋಂಕೋ ಪಾಕಿಸ್ತಾನ್ ಭೇಜನಾ ಹೈ'ಅಂದನಾತ. ದೂರದೂರಿನಿಂದ ಹೋಗಿದ್ದ ನನಗೆ ಪರಿಸ್ಥಿತಿ ನಿಭಾಯಿಸಿಕೊಂಡು ಬಂದರೆ ಸಾಕು ಅನ್ನಿಸಿತು.

ಹಿಂದಿ ದಿವಸ್ ಮಾಡುವುದು, ಅದನ್ನೇ ದೇಶದ ಭಾಷೆಯಾಗಿ ಮುನ್ನಲೆಗೆ ತರುವುದರ ಹಿಂದೆ ಇಂತಹ ಭಾವನೆಗಳು ಜಾಗೃತವಾಗಿಬಿಡುವ ಭಯವೂ ಇದೆ. ಹಾಗಾಗಿ ಈಗ ನಾವು ನಮ್ಮ ಮೇಲಿನ ಹಿಂದಿ ಹೇರಿಕೆಯನ್ನು ವಿರೋಧಿಸದೇ ಹೋದರೆ ಮುಂದೊಂದು ದಿನ 'ಹಿಂದಿ ಬರಲ್ವಾ? ನೀನು ಪಾಕಿಸ್ತಾನಕ್ಕೆ ಹೋಗು‌' ಎಂದು ಯಾವುದೋ ದಾರಿಹೋಕ ಹೇಳಿಬಿಡುತ್ತಾನೇನೋ ಎಂಬ ಭಯ ನನಗೆ. ಏಕೆಂದರೆ, ಇತ್ತೀಚಿಗೆ 'ಪಾಕಿಸ್ತಾನಕ್ಕೆ ಹೋಗು' ಎಂದು ಹೇಳುವುದು ಪರಮೋಚ್ಚ ದೇಶಭಕ್ತಿಯ ಸಂಕೇತವಾದಂತಿದೆ.

ಭಾರತಮಾತೆಯ ತನುಜಾತೆ ನಮ್ಮ ಕನ್ನಡತಾಯಿ ಎನ್ನುವ ಕುವೆಂಪು ಪ್ರತಿಪಾದನೆಯನ್ನು ಇನ್ನಾದರೂ ನಮ್ಮ ದೇಶ ಸರಿಯಾಗಿ ಗ್ರಹಿಸಬೇಕಿದೆ.

-ಇಂಗ್ಲಿಷ್ ಉಪನ್ಯಾಸಕರು, ಆರ್.ಎನ್.ಎಸ್ ಕಾಲೇಜು, ವಿಜಯನಗರ, ಬೆಂಗಳೂರು

**

ಕನ್ನಡವೂ ರಾಷ್ಟ್ರಭಾಷೆ

ನಮ್ಮದು ಬಹುತ್ವ ಭಾರತ. ಬಹು ಭಾಷೆ, ಸಂಸ್ಕೃತಿಗಳೇ ದೇಶದ ಚೆಲುವು. ಹೀಗಿರುವಾಗ ಹಿಂದಿ ಭಾಷೆಯೊಂದನ್ನೇ ಮೇಲಕ್ಕೆತ್ತಿ ಹಿಡಿದು ಇತರ ಭಾಷೆಗಳನ್ನು ಅದರಡಿಯಲ್ಲಿ ತರಲು ಯತ್ನಿಸುತ್ತಿರುವ ವಿದ್ಯಮಾನವನ್ನು ಖಂಡಿಸಲೇ ಬೇಕು. ಹಿಂದಿಯನ್ನು ಎತ್ತಿ ಹಿಡಿಯುವುದರ ಹಿಂದೆ ಅದು ಧ್ವನಿಸುವ ಮೇಲರಿಮೆ, ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅಪಾಯಕ್ಕೆ ನಾವೇ ಸಾಕ್ಷಿಗಳಾಗಬೇಕಾಗಬಹುದು.ಹಾಗೆಂದು ಹಿಂದಿ ಭಾಷೆಗೆ ನನ್ನ ವಿರೋಧವಿಲ್ಲ. ಹಿಂದಿ ಹೇರಿಕೆಗಷ್ಟೇ ವಿರೋಧ.
ಕನ್ನಡಿಗರಾದ ನಮಗೆ 2500 ವರ್ಷಗಳಷ್ಟು ಶ್ರೀಮಂತ ಇತಿಹಾಸವಿರುವ ಕನ್ನಡವೇ ಶ್ರೇಷ್ಠ ಭಾಷೆ, ಅದುವೇ ರಾಷ್ಟ್ರ ಭಾಷೆ.

- ಗುಲಾಬಿ ಬಿಳಿಮಲೆ, ಸಾಮಾಜಿಕ ಕಾರ್ಯಕರ್ತೆ

**

ಮೊದಲು ಕನ್ನಡ ಕಡ್ಡಾಯ ಮಾಡಿ

ಹಿಂದೆ ರಾಷ್ಟ್ರೀಯ ಭಾಷೆ ಎಂದು ಈವರೆಗೂನಂಬಿಕೊಂಡು ಬಂದಿರುವ ನಾವು ಆದಷ್ಟೂ ಬೇಗ ಅದರಿಂದ ಹೊರ ಬರಬೇಕಿದೆ. ಹಿಂದಿ ಅಥವಾ ಇಂಗ್ಲೀಷ್ ಅನ್ನುಕಡ್ಡಾಯಮಾಡುವುದರಿಂದ ಪ್ರಾಂತೀಯ ಭಾಷೆಗಳ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಈಗಾಗಲೇ ಮಹಾ ನಗರವನ್ನು ಆಕ್ರಮಿಸಿರುವ ಹಿಂದಿ ಹೇರಿಕೆಬೇರೆ ಭಾಗಗಳಿಗೆ ಹೋಗದಂತೆ ತಡೆಯಬೇಕಾದರೆ ರಾಜ್ಯ ಸರ್ಕಾರ ಪ್ರಾಂತೀಯ ಭಾಷೆಗೆ ಹೆಚ್ಚು ಒತ್ತುಕೊಡಬೇಕಾಗಿದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡ ಕಡ್ಡಾಯಮಾಡಬೇಕಾಗಿದೆ. ಹಿಂದೆ ನಾಡ ಭಾಷೆನಮ್ಮನ್ನು ಕಾಪಾಡುತ್ತಿತ್ತು, ಇಂದು ಭಾಷೆಯನ್ನು ನಾವು ಕಾಪಾಡಬೇಕಾದಸ್ಥಿತಿಗೆ ತಲುಪಿದ್ದೇವೆ. ಭಾಷೆಬಳಸದಿದ್ದರೆ ಹಳಸುತ್ತದೆ. ಬಳಸಿದಷ್ಟು ಉಳಿಯುತ್ತದೆ, ಹರಡುತ್ತದೆ.

- ನಟರಾಜ್, ರಾಮರಾಮರೇ, ನಟ

**

ಕನ್ನಡವೇ ರಾಷ್ಟ್ರೀಯ ಭಾಷೆಯಾಗಲಿ

ಸಾಹಿತ್ಯವೇ ಒಂದು ಭಾಷೆಯ ಕನ್ನಡಿ ಎನ್ನುವುದು ಜನಜನಿತವಾದ ಮಾತು.ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಪಡೆದ ಕನ್ನಡವೇ ನಮ್ಮ ರಾಷ್ಟ್ರೀಯ ಭಾಷೆ ಆಗಲಿ.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನು ಸ್ವತಂತ್ರ ಮತ್ತು ಅವನ ಭಾವನೆಗಳಿಗೆ ಬೆಲೆ ಕೊಡುವುದು ಎಲ್ಲರ ಕರ್ತವ್ಯ. ಭಾರತದಲ್ಲಿ 22 ಭಾಷೆಗಳು ನಮ್ಮ ಸಂವಿಧಾನದ ಪರಿಚ್ಚೇದ 8ರಲ್ಲಿ ನಮೂದಾಗಿದ್ದರೂ ಸರಿಸುಮಾರು 19,500ಕ್ಕೂ ಹೆಚ್ಚು ಭಾಷೆಗಳು ನಮ್ಮ ಭಾರತೀಯ ಪ್ರಜೆಗಳ ಮಾತೃ ಭಾಷೆಯಾಗಿ ಇಂದಿಗೂ ಇದೆ. ಆದರೆ ಹಿಂದಿಭಾಷೆಯನ್ನೇ ನಮ್ಮ ರಾಷ್ಟ್ರೀಯ ಭಾಷೆ ಎಂದು ನಮ್ಮ ಪಠ್ಯ ಪುಸ್ತಕದಲ್ಲಿ ಅಳವಡಿಸಿ ನಮ್ಮನ್ನ ದಾರಿ ತಪ್ಪಿಸಲಾಗಿದೆ.ನಾನು ನನ್ನ ಹೆತ್ತವರ ಜೊತೆಗೆ ಮಾತನಾಡುವ ಭಾಷೆಯೇ ನನ್ನ ಮಾತೃಭಾಷೆ.ಅದು ಕನ್ನಡ. ನಮ್ಮ ರಾಜ್ಯ ಕರ್ನಾಟಕ ಮತ್ತು ನಮ್ಮ ಹೆಮ್ಮೆಯ ದೇಶ ಭಾರತ ಎಂದು ನಾವೆಲ್ಲರೂಹೆಮ್ಮೆಯಿಂದ ಹೇಳ್ತೀವಿ.

- ಅಡ್ಲೂರು ರಾಜು ಅಷ್ಟೆ, ಯುವ ಬರಹಗಾರ

**

ಹಿಂದಿ ಹೇರಿಕೆಯ ಷಡ್ಯಂತ್ರ

ಹಿಂದಿ ಹೇರಿಕೆ ಕೇಂದ್ರ ಸರ್ಕಾರದ ಹುನ್ನಾರ. ಅಲ್ಲಿ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಗದ್ದುಗೆ ಏರಿದವರ ಚಿಂತನೆ ಒಂದೇ ರೀತಿ ಇರುತ್ತದೆ. ಸಂಸ್ಕೃತ ಸತ್ತೋಯ್ತು.ಈಗ ಅದರ ಜಾಗದಲ್ಲಿ ಹಿಂದಿ ತುರುಕುವ ಷಡ್ಯಂತ್ರ ನಡೆಯುತ್ತಿದೆ. ವಿವಿಧ ಸರ್ಕಾರಿಹುದ್ದೆಗಳಿಗೆ ಹಿಂದಿ ಭಾಷಿಕ ಪ್ರದೇಶದ ಜನರನ್ನು ಆಯ್ಕೆ ಮಾಡಿ ನಮಗೆ ದ್ರೋಹ ಮಾಡುತ್ತಿದೆ.ಸ್ವಂತ ಲಿಪಿ ಇಲ್ಲದ ಆ ಹಿಂದಿ ಭಾಷೆಗೆ ಲಿಪಿ ಅಭಿವೃದ್ಧಿ ಮಾಡಲಿ. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇದನ್ನ ಒಡೆಯುವ ದಿವಸಗಳು ನಮಗೆ ಬೇಡ.

- ಪ್ರವೀಣ್ ಸೂಡ, ಸಿನಿಮಾ ಬರಹಗಾರ ಹಾಗೂ ಸಹ-ನಿರ್ದೇಶಕ

**

ಭಾರತೀಯ ಭಾಷೆಗಳ ದಿನಾಚರಣೆ ಆಚರಿಸೋಣ

ಬೆಂಗಳೂರಿನ ಸುತ್ತಮುತ್ತಲಿನ ಸಣ್ಣ ಹಳ್ಳಿ ಮತ್ತು ಪಟ್ಟಣಗಳ ಜನ ವ್ಯಾಪಾರ, ವಿದ್ಯಾಭ್ಯಾಸ. ಕಛೇರಿ ಕೆಲಸ ಇತ್ಯಾದಿ ಇತ್ಯಾದಿ ಕಾರಣಗಳಿಂದ ಆಗಮಿಸಿ ಬೆಂಗಳೂರನ್ನು ಮಹಾನಗರವಾಗಿ ಮಾಡಿದ್ದಾರೆ. ಈ ದೊಡ್ಡ ಜನವರ್ಗ ಯೋಚಿಸುವ, ಆಡುವ ಭಾಷೆ ಕನ್ನಡ.

ಬೆಂಗಳೂರು ನಗರದ ಕೇಂದ್ರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಅಧ್ಯಪಕನಾಗಿ ಕೆಲಸ ಮಾಡುವ ನನ್ನ ಅನುಭವದಲ್ಲಿ ಹೇಳುವುದಾದರೆ, ಇಂದು ಕಲಾನಿಕಾಯಕ್ಕೆ ಬರುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬೆಂಗಳೂರು ಸುತ್ತಮುತ್ತಲಿನ ಹಳ್ಳಿ ಪಟ್ಟಣಗಳಲ್ಲಿನ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಬಂದವರು. ಹಾಗೆ ಬಂದು ಕನ್ನಡ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅವರ ಆಯ್ಕೆಯ ವಿಷಯದಲ್ಲಿ ಎನ್.ಇ.ಟಿ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆ ತೆಗೆದುಕೊಂಡರೆ ಅವರು ಕಡ್ಡಾಯವಾಗಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿಯೇ ಪರೀಕ್ಷೆ ಬರೆಯಬೇಕು. . .? ಏಕೆಂದರೆ ಆ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ನಡೆಸುವುದಿಲ್ಲ. . ! ನಮ್ಮ ಸಮಾಜದ ಕುರಿತು ಅಗಾಧ ಅನುಭವ ಮತ್ತು ಭೌದ್ಧಿಕ ತರಬೇತಿ ಮತ್ತು ತಿಳುವಳಿಕೆಯನ್ನು ಹೊಂದಿರುವ ಬುದ್ಧಿವಂತ ವಿಧ್ಯಾರ್ಥಿ ಕೂಡಾ ಭಾಷೆಯ ಅನ್ಯತೆಯ ಕಾರಣಕ್ಕೆ ಆ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿಲ್ಲ. . .! ಈ ತಾಂತ್ರಿಕವಾದ ಸೋಲು ನಿಧಾನವಾಗಿ ತಾನು ತನ್ನದೇ ಭಾಷೆಯಲ್ಲಿ ಹೊಂದಿರುವ ತಿಳುವಳಿಕೆಯ ಕುರಿತು ಕೀಳರಿಮೆ ಅನುಭವಿಸಲು ಕಾರಣವಾಗುತ್ತಿದೆ, ಉತ್ಸಾಹದಿಂದ ಜಗತ್ತಿನ ಕುರಿತು ಯೋಚಿಸಬೇಕಾದ ವಯಸ್ಸಿನಲ್ಲಿ ಭಾಷಾ ಹೇರಿಕೆಯ ಕಾರಣಕ್ಕೆ ಉಂಟಾಗುವ ತೊಡಕು ಯುವಜನರನ್ನು ನಿಸ್ತಜಗೊಳಿಸುತ್ತಿದೆ. ಕೇಂದ್ರ ಸರ್ಕಾರ ನಡೆಸುವ ಸ್ಪಾರ್ಧಾತ್ಮಕ ಪರೀಕ್ಷೆಗಳು ಅಕಾಂಕ್ಷಿ ಅಭ್ಯರ್ಥಿಗಳು ಈ ಸಮಸ್ಯೆಯಿಂದ ಹೊರತಾಗಿಲ್ಲ. .!

ಡಾ. ಕಿರಣ್ ಎಂ ಗಾಜನೂರು
ಡಾ. ಕಿರಣ್ ಎಂ ಗಾಜನೂರು

ಹಾಗಾಗಿ ನಾವು ಭಾಷಾ ಹೇರಿಕೆಯನ್ನು ಕೇವಲ ಯಾವುದೋ ರಾಜ್ಯದ ಜನವರ್ಗ ಬಂದು ಇಲ್ಲಿ ನೆಲೆಸುವುದು ಅವರ ಭಾಷೆಯನ್ನು ಇಲ್ಲಿ ಆಡುವುದು ಎಂಬ ಅರ್ಥದಲ್ಲಿ ಮಾತ್ರ ಶುಶ್ಕ ಅರ್ಥದಲ್ಲಿ ಗ್ರಹಿಸದೇ ಸ್ವತಃ ಪ್ರಭುತ್ವವೇ ಭೌದ್ಧಿಕ ಮತ್ತು ಸಾಂಸ್ಕೃತಿಕ ರಾಜಕೀಯದ ಮೂಲಕ ಹೇಗೆ ಭಾಷಾ ಹೇರಿಕೆಮಾಡುತ್ತಿದೆ, ಇದರಿಂದ ನಮ್ಮ ಮಕ್ಕಳು ತಮ್ಮದೇ ಭಾಷೆಯಲ್ಲಿ ಯೋಚಿಸಿದಾಗ ಹುಟ್ಟುವ ಕ್ರೀಯಾಶೀಲತೆಯ ಮೇಲೆ ಎನು ಪರಿಣಾಮವಾಗುತ್ತಿದೆ ಎಂಬ ಅರ್ಥದಲ್ಲಿಯೂ ಯೋಚಿಸಬೇಕಿದೆ.

ಜಗತ್ತಿನ ಶ್ರೇಷ್ಟ ಭಾಷಾಶಾಸ್ತ್ರಜ್ಞರು ಜ್ಞಾನ/ಅರಿವು ಹುಟ್ಟುವುದಕ್ಕೆ ಸಾಧ್ಯವಾಗುವುದು ವ್ಯಕ್ತಿ ಮಾತೃಭಾಷೆಯಲ್ಲಿ ಯೋಚಿಸಿದಾಗ ಮಾತ್ರ ಎಂಬ ಅಂಶವನ್ನು ಈಗಾಗಲೇ ಸಾಧಿಸಿದ್ದಾರೆ ಇಷ್ಟಿದ್ದರೂ ನಮ್ಮನ್ನು ಆಳುವ ಪ್ರಭುತ್ವಗಳು ಒಂದುದೇಶ- ಒಂದುಭಾಷೆ ಎಂಬ ಭಾವಾನಾತ್ಮಕ ಸಂಗತಿಯ ಮೂಲಕ ಭಾಷಾ ಹೇರಿಕೆಗೆ ಯತ್ನಿಸುತ್ತಿವೆ. ಈ ಸಂಗತಿಯನ್ನು ನಾವು ಪ್ರಶ್ನಿಸಬೇಕಿದೆ ಈ ಪ್ರಶ್ನೆಯ ಭಾಗವಾಗಿ ಹಿಂದಿ-ದಿವಸದ ಬದಲಾಗಿ ಸಂವಿಧಾನದ ಅನುಚ್ಚೇದ 8ರಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ ಭಾಷೆಗಳು ಮತ್ತು ಸ್ಥಳೀಯವಾಗಿ ಬಳಕೆಯಲ್ಲಿರುವ ಇತರೆ ಭಾಷೆಗಳನ್ನು ಪ್ರತಿನಿಧಿಸುವ “ಭಾರತೀಯ ಭಾಷೆಗಳ ದಿನಾಚರಣೆಯನ್ನು” ಆಚರಿಸಬೇಕು ಮತ್ತು ಕೇಂದ್ರ ಸರ್ಕಾರ ನಡೆಸುವ ಬ್ಯಾಂಕಿಂಗ್, ನಾಗರಿಕ ಸೇವೆ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅನುಚ್ಚೇದ 8ರಲ್ಲಿ ಸ್ಥಾನ ಪಡೆದಿರುವ ಎಲ್ಲಾ ಭಾಷೆಗಳಲ್ಲಿಯೂ ನಡೆಸಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸಬೇಕಿದೆ.

ರಾಜ್ಯಶಾಸ್ತ್ರ ಅಧ್ಯಾಪಕರು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

**

ಭಾರತ ದೇಶದ ಪರಿಕಲ್ಪನೆಗೆ ಮಾಡುತ್ತಿರುವ ಅವಮಾನ

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ದಿನಗಳಲ್ಲಿ ದೇಶದಲ್ಲಿನ ವಿಭಿನ್ನ ಭಾಷೆಗಳ ಹಾಗೂ ಭಾಷೆ ಬಳಕೆದಾರರ ವಿಸ್ತಾರಕ್ಕೆ ಅನುಗುಣವಾಗಿ ಭಾಷಾವಾರು ಪ್ರಾಂತ್ಯಗಳ ವಿಂಗಡಿಸಿಆಯಾ ಪ್ರಾಂತ್ಯಗಳ ರಾಜ್ಯವನ್ನಾಗಿ ಮಾಡಿ ಅದಕ್ಕೆ ರಾಜ್ಯ ಸರ್ಕಾರವೊಂದು ಚಾಲ್ತಿಯಲ್ಲಿರುವಂತೆಮಾಡಿ ಪ್ರತೀ ರಾಜ್ಯ ಭಾಷೆಗಳ "official language" ಎಂದು ಪರಿಗಣಿಸಿ (ಆಂಗ್ಲ ಭಾಷೆಯನ್ನೂ ಸೇರಿಸಿ), ಕೇವಲ ಪ್ರತಿ 26ನೇತಾರೀಕಿನಂದು "ಗಣರಾಜ್ಯೋತ್ಸವ" ಆಚರಿಸಿ ಸಂಭ್ರಮ ಪಟ್ಟ ನಂತರವೂ ಈ ಕೇಂದ್ರ ಸರ್ಕಾರದ ಮೂಲಕ ಎಂಬ ಬಹು ರಾಜ್ಯಗಳು ಬಳಸುವ "ಹಿಂದಿ" ಎಂಬ ಭಾಷೆಯನ್ನು ಇಂದು ಸಾರ್ವ್ರತಿಕ ಗಳಿಸಬೇಕೆಂಬ ನಿಟ್ಟಿನಲ್ಲಿ ಬೇರೆ ಭಾಷಾವಾರು ರಾಜ್ಯಗಳ ಮೇಲೆ "ಹಿಂದಿ" ಭಾಷೆಯ ಹೇರಿಕೆ ಮಾಡ ಹೊರಟಿರುವುದು ತೀವ್ರ ವಿಷಾದಕರ ಹಾಗೂ ಭಾರತ ದೇಶದ ಪರಿಕಲ್ಪನೆಗೆ ಮಾಡುತ್ತಿರುವ ಅವಮಾನ

– ದಿಗಂತ್ ಬಿಂಬೈಲ್

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT