ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಸಂಘರ್ಷ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?

ಭೀಕರ ಕಾಳಗಕ್ಕೆ ಕಾರಣವಾಗಿದ್ದ ಲಡಾಖ್ ಗಡಿ ಪ್ರದೇಶ
ಅಕ್ಷರ ಗಾತ್ರ
ADVERTISEMENT
""
""
""
""

ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ಎರಡು ರಾಷ್ಟ್ರಗಳ ಸೇನಾ ಪಡೆಗಳ ಮಧ್ಯೆ ಸಂಘರ್ಷ ಸಂಭವಿಸಿದೆ ಎಂದರೆ ಅದು ಗುಂಡಿನ ಚಕಮಕಿ ಅಥವಾ ಗುಂಡಿನ ದಾಳಿಯಾಗಿರುವುದು ಸಾಮಾನ್ಯ. ಪಾಕಿಸ್ತಾನದ ಜತೆಗಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಆಗಾಗ ಇಂಥ ಘಟನೆಗಳು ವರದಿಯಾಗುತ್ತವೆ.

ಆದರೆ,ಕಳೆದ ಸೋಮವಾರ (ಜೂನ್ 15) ಲಡಾಖ್‌ನ ಗಾಲ್ವನ್‌ ಕಣಿವೆಯ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) ಚೀನಾ ಸೇನಾ ಪಡೆಗಳ ಮತ್ತು ಭಾರತೀಯ ಸೇನೆಯ ಪಡೆಗಳ ನಡುವೆ ನಡೆದದ್ದು ಅದಕ್ಕಿಂತ ಭಿನ್ನವಾದ, ಭೀಕರವಾದ ಕಾಳಗ. ಹರಿತವಾದ ಆಯುಧಗಳು, ಕಬ್ಬಿಣದ ರಾಡ್‌ಗಳಿಂದ ಉಭಯ ಸೇನಾಪಡೆಗಳ ಯೋಧರು ಹೊಡೆದಾಡಿಕೊಂಡಿರುವುದು ಸಂಘರ್ಷೋತ್ತರ ವರದಿಗಳಿಂದ ದೃಢಪಟ್ಟಿವೆ.

ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಮೃತದೇಹದಲ್ಲಿ ಆಳವಾದ, ಗಂಭೀರ ಗಾಯಗಳು, ಮೂಳೆ ಮುರಿತ ಸಂಭವಿಸಿರುವುದು ಮರಣೊತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಯೋಧರ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎನ್ನಲಾಗಿದೆ.

ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ನಾಯ್ಬ್ ದೀಪಕ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಕಣ್ತುಂಬಿಕೊಳ್ಳುತ್ತಿರುವ ಅಜ್ಜಿ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಹಲವು ದಿನಗಳ ಹಿಂದೆಯೇ ಶುರುವಾಗಿತ್ತು ಶೀತಲ ಸಮರ

ಭಾರತ–ಚೀನಾ ನಡುವಣ ಗಡಿ ಸಂಘರ್ಷ ದಶಕಗಳ ಹಳೆಯದು. ಆದರೆ ಕಳೆದ ವಾರ 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾದ ಸಂಘರ್ಷದ ಮುನ್ಸೂಚನೆ ಜೂನ್ 6ರಂದೇ ದೊರೆತಿತ್ತು. ಲಡಾಖ್‌ನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಯೋಧರು ಭಾರತದ ಗಡಿಯೊಳಗೆ ಬೀಡುಬಿಟ್ಟಿದ್ದೇ ಇದಕ್ಕೆ ಕಾರಣ.

ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಚೀನಾ ಯೋಧರು ಟೆಂಟ್ ಹಾಕಿರುವ ವಿಚಾರವಾಗಿ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಮಾತುಕತೆ ಜೂನ್ 6ರಂದು ನಡೆದಿತ್ತು. ಆ ಸಂದರ್ಭ ಉಭಯ ಸೇನಾ ಪಡೆಗಳ ಕಮಾಂಡರ್‌ಗಳು ಒಮ್ಮತಕ್ಕೆ ಬಂದಿದ್ದರು. ಭಾರತಕ್ಕೆ ಸೇರಿದ ಭೂಭಾಗದಿಂದ ಟೆಂಟ್‌ಗಳನ್ನು ತೆಗೆದು ವಾಪಸಾಗುವುದಾಗಿ ಚೀನಾ ಸೇನಾಧಿಕಾರಿಗಳು ಒಪ್ಪಿಕೊಂಡಿದ್ದರು. ಅಲ್ಲಿಗೆ ಪ್ರಕರಣ ಸುಖಾಂತ್ಯವಾಯಿತೆಂದು ಭಾವಿಸಲಾಯಿತು.

ಆದರೆ, ನಂತರ ನಡೆದದ್ದೇ ಬೇರೆ!

ಮೊದಲೇ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ, ಚೀನಾ ಯೋಧರು ಆ ಪ್ರದೇಶದಿಂದ ಹಿಂದೆ ತೆರಳಿದ್ದಾರೆಯೇ ಎಂದು ಪರಿಶೀಲಿಸುವ ಸಲುವಾಗಿ 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ. ಸಂತೋಷ್ ಬಾಬು ನೇತೃತ್ವದ 30 ಯೋಧರ ತಂಡ ಜೂನ್ 15ರಂದು ಸಂಜೆ ಅಂದಾಜು 6 ಗಂಟೆ ವೇಳೆಗೆ ಗಸ್ತು ಕಾರ್ಯಾಚರಣೆಗೆ ತೆರಳಿತ್ತು.

ಈ ವೇಳೆ, ಗಸ್ತು ಪಾಯಿಂಟ್ 14 (ಪಿಪಿ14) ಬಳಿ ಚೀನಾ ಯೋಧರ ಟೆಂಟ್‌ಗಳು ಮತ್ತು ವೀಕ್ಷಣಾ ಪೋಸ್ಟ್‌ ಇರುವುದು ಗಮನಕ್ಕೆ ಬಂದಿದೆ. ಅಲ್ಲಿ ಸುಮಾರು 20 ಚೀನಾ ಯೋಧರು ಕಮಾಂಡಿಂಗ್ ಆಫೀಸರ್ ಜತೆಗೂಡಿ ಇರುವುದು ಗೊತ್ತಾಗುತ್ತದೆ. ಅಲ್ಲಿಗೆ ತೆರಳಿದ ಕರ್ನಲ್ ನೇತೃತ್ವದ ತಂಡ ’ಹಿರಿಯ ಅಧಿಕಾರಿಗಳ ನಡುವೆ ಆಗಿರುವ ಒಪ್ಪಂದದಂತೆ ನೀವು ಹಿಂದೆ ಸರಿಯಬೇಕು’ ಎಂದು ಚೀನಾ ಯೋಧರಿಗೆ ಸೂಚಿಸಿದೆ. ಇದನ್ನವರು ನಿರಾಕರಿಸಿದ್ದು ಕಲಹಕ್ಕೆ ಕಾರಣವಾಗಿದೆ. ಈ ವೇಳೆ ಬಲ ಪ್ರಯೋಗದ ಮೂಲಕ ಚೀನಾ ಸೈನಿಕರನ್ನು ಭಾರತೀಯ ಯೋಧರುಗಸ್ತು ಪಾಯಿಂಟ್‌ 14ರ ಆಚೆಗೆಹಿಮ್ಮೆಟ್ಟಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ’ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಬಳಿಕ ಚೀನಾ ಯೋಧರು ಭಾರತದ ನೆಲದಲ್ಲಿ ಹಾಕಿದ್ದ ಟೆಂಟ್‌ಗಳನ್ನು ಸಂತೋಷ್ ಬಾಬು ನೇತೃತ್ವದ ತಂಡ ಸುಟ್ಟುಹಾಕಿತ್ತು. ವೀಕ್ಷಣಾ ಪೋಸ್ಟ್‌ ಅನ್ನೂ ನಾಶಪಡಿಸಿತ್ತು.

ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಯೋಧ ಸತ್ನಾಮ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿರುವ ತಂದೆ ಜಾಗೀರ್ ಸಿಂಗ್. ಪಂಜಾಬ್‌ನ ಗುರುದಾಸ್‌ಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಪೂರ್ವ ನಿರ್ಧರಿತ ಸಂಚು

ತಾವು ಹಿಮ್ಮೆಟ್ಟಿಸಿದ ಚೀನಾ ಯೋಧರು ಮತ್ತು ಕಮಾಂಡಿಂಗ್ ಆಫೀಸರ್ ಅವರನ್ನು ಈ ಹಿಂದೆ ನೋಡಿದ್ದು ನೆನಪಿಲ್ಲ. ಮುಖ ಪರಿಚಯವೂ ಇಲ್ಲ. ಇದರ ಹಿಂದೆ ಏನೋ ಸಂಚು ಅಡಗಿದೆ ಎಂಬ ಅನುಮಾನ ಸಂತೋಷ್ ಬಾಬು ಅವರಿಗೆ ಆಗಲೇ ಮೂಡಿತ್ತು.

ಸಾಮಾನ್ಯವಾಗಿ ನಿರ್ದಿಷ್ಟ ಗಡಿ ಪ್ರದೇಶಗಳಲ್ಲಿ ಗಸ್ತು ಕಾರ್ಯಾಚರಣೆ ನಡೆಸುವ ಉಭಯ ದೇಶಗಳ ಯೋಧರಿಗೆ ಮುಖ ಪರಿಚಯವಿರುತ್ತದೆ. ಘರ್ಷಣೆ ಸಂಭವಿಸುವುದು ಕಡಿಮೆ. ಆದರೆ ಗಾಲ್ವನ್ ಪ್ರದೇಶಕ್ಕೆ ಉದ್ದೇಶಪೂರ್ವಕ ಚೀನಾ ಬೇರೆಡೆಗಳಿಂದ ಯೋಧರನ್ನು ಕರೆಸಿಕೊಂಡಿತ್ತು. ಈ ಕುತಂತ್ರವೂ ಸಂತೋಷ್ ಅವರ ಅರಿವಿಗೆ ಬಂದಿತ್ತು.

ಆ ಪ್ರದೇಶಕ್ಕೆ ಇನ್ನಷ್ಟು ಯೋಧರನ್ನು ನಿಯೋಜಿಸಲು ಅವರು ತಮ್ಮ ನೆಲೆಗೆ ವಿನಂತಿಸಿದರು. ಚೀನಾದವರು ಹಿಂತೆರಳಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತೆ ಗಸ್ತು ನಡೆಸಲಾಯಿತು. ಆಗ, ಚೀನಾ ಕಡೆಯ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗಿರುವುದು ಗಮನಕ್ಕೆ ಬಂದಿತ್ತು. ಹರಿತವಾದ ಆಯುಧಗಳು, ಕಬ್ಬಿಣದ ರಾಡ್‌ಗಳು, ಇನ್ನಿತರ ಸಲಕರಣೆಗಳೊಂದಿಗೆ ಸುಮಾರು 250ರಷ್ಟು ಚೀನಾ ಯೋಧರಿರುವುದು ಗಮನಕ್ಕೆ ಬಂದಿತ್ತು ಎಂದೂ ವರದಿ ಉಲ್ಲೇಖಿಸಿದೆ.

ಕೈ–ಕೈ ಮಿಲಾಯಿಸಿದ ಯೋಧರು: ಎರಡನೇ ಗಸ್ತು ಕಾರ್ಯಾಚರಣೆ ವೇಳೆ ಚೀನಾ ಯೋಧರು ಭಾರತೀಯ ಯೋಧರ ಮೇಲೆರಗಿದ್ದಾರೆ. ಸಂತೋಷ್ ಬಾಬು ಮತ್ತು ಇತರ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಸಂತೋಷ್ ಬಾಬು ಅವರು ಸಮೀಪದ ನದಿಗೆ ಬಿದ್ದರು ಎನ್ನಲಾಗಿದೆ.

ಕಮಾಂಡಿಂಗ್ ಆಫೀಸರ್ ಮೇಲೆ ಚೀನಾ ಯೋಧರು ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಭಾರತೀಯ ಯೋಧರು ಮುನ್ನುಗ್ಗಿ ದಾಳಿ ನಡೆಸಿದ್ದರು. ಚೀನಾದ ಹಲವು ಯೋಧರನ್ನು ಹತ್ಯೆ ಮಾಡಿದ್ದರು. ಘರ್ಷಣೆ ವೇಳೆ ಚೀನಾ ಕಡೆಯಲ್ಲಿ ಅಂದಾಜು 400ಕ್ಕೂ ಹೆಚ್ಚು ಯೋಧರಿದ್ದರು. ಘರ್ಷಣೆಯಲ್ಲಿ ಮೃತಪಟ್ಟ ಯೋಧರ ಶವಗಳನ್ನು ಮರುದಿನ ಭಾರತ ಮತ್ತು ಚೀನಾ ಪರಸ್ಪರ ಹಸ್ತಾಂತರಿಸಿದವು.

ಸೇನಾ ನಿಯೋಜನೆಗಳಲ್ಲಿ ಕಮಾಂಡಿಂಗ್ ಆಫೀಸರ್‌ಗೆ ಮಹತ್ವದ ಸ್ಥಾನವಿರುತ್ತದೆ. ನಿಯೋಜಿತ ತುಕಡಿಯ ಎಲ್ಲ ಯೋಧರೂ ಅವರನ್ನು ಭಾವುಕ ನೆಲೆಯಲ್ಲಿ ಕಾಣುತ್ತಾರೆ, ತಂದೆಯಂತೆ ಗೌರವಿಸುತ್ತಾರೆ. ಕಮಾಂಡಿಂಗ್ ಆಫೀಸರ್ ಸಹ ಎಲ್ಲ ಹಂತದ ಅಧಿಕಾರದ ಹಮ್ಮುಬಿಮ್ಮುಗಳಿಲ್ಲದ ಎಲ್ಲ ಹಂತದ ಸೈನಿಕರ ಜೊತೆಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಒಡನಾಟ ಇಟ್ಟುಕೊಂಡಿರುತ್ತಾರೆ, ಕಷ್ಟಸುಖ ವಿಚಾರಿಸುತ್ತಿರುತ್ತಾರೆ. ಕಮಾಂಡಿಂಗ್ ಆಫೀಸರ್ ಮೇಲೆ ಚೀನಾ ಕೈ ಮಾಡಿದ್ದು, ಭಾರತೀಯ ಯೋಧರ ಕೆಚ್ಚು ಹೆಚ್ಚಲು ಕಾರಣವಾಯಿತು ಎನ್ನಲಾಗಿದೆ.

ಚೀನಾ ಗಡಿಗೆ ಸೇನಾ ತುಕಡಿ ಮತ್ತು ಯುದ್ಧೋಪಕರಣಗಳ ನಿಯೋಜನೆ

ಆಯುಧಗಳಲ್ಲೇ ಹೊಡೆದಾಟ ನಡೆದಿದ್ದೇಕೆ?: ಉಭಯ ದೇಶಗಳ ನಡುವಣ ಗಡಿ ಒಪ್ಪಂದದ ಪ್ರಕಾರ, ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿಲ್ಲ ಎಂದು ಸರ್ಕಾರವೂ ಈಗಾಗಲೇ ಸ್ಪಷ್ಟನೆ ನೀಡಿದೆ. ಸಂಘರ್ಷದ ವೇಳೆ ಸ್ವರಕ್ಷಣೆಗೆ ಮತ್ತು ಶತ್ರುಗಳನ್ನು ಹಿಮ್ಮೆಟ್ಟಿಸಲು ಕೇವಲ ಲಭ್ಯ ಆಯುಧಗಳನ್ನಷ್ಟೇ ಬಳಸಿದ್ದರು ಭಾರತೀಯ ಯೋಧರು. ಬಿಹಾರ ರೆಜಿಮಂಟ್‌ಗೆ ಹೊರತಾಗಿ 3ನೇ ಪಂಜಾಬ್‌ ರೆಜಿಮೆಂಟ್‌, 3ನೇ ಮೀಡಿಯಂ ರೆಜಿಮೆಂಟ್‌ ಮತ್ತು 81ನೇ ಫೀಲ್ಡ್‌ ರೆಜಿಮೆಂಟ್‌ ಯೋಧರು ಘರ್ಷಣೆಯಲ್ಲಿ ಭಾಗಿಯಾಗಿದ್ದರು.

ಕೆಲವು ಗಂಟೆ ನಡೆದಿದ್ದ ಕಾದಾಟ: ಉಭಯ ಸೇನಾಪಡೆಗಳ ಯೋಧರ ನಡುವಣ ಕಾದಾಟ ಕೆಲವು ಗಂಟೆಗಳ ಕಾಲ ನಡೆದಿತ್ತು. ಕಾದಾಟದ ವೇಳೆ ಗಂಭಿರ ಗಾಯಗಳಾಗಿ, ನದಿಗೆ ಬಿದ್ದ ಪರಿಣಾಮ ಕೆಲವು ಯೋಧರು ಹುತಾತ್ಮರಾಗಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ’ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

‘ಹುತಾತ್ಮ ಯೋಧರ ದೇಹದಲ್ಲಿ ಕಂಡುಬಂದ ಗಾಯಗಳ ಗುರುತಿನಿಂದಾಗಿ ಭೀಕರ ಸಂಘರ್ಷ ನಡೆದಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಹರಿತವಾದ ಆಯುಧಗಳಿಂದ ಇರಿದ ಗಾಯಗಳು, ಕಾಲಿನ ಮೂಳೆ ಮುರಿತ ಹೆಚ್ಚಿನವರಲ್ಲಿ ಕಂಡುಬಂದಿದೆ’ ಎಂದು ಲೇಹ್‌ನ ‘ಸೋನಮ್ ನರ್ಬೂ ಸ್ಮಾರಕ ಆಸ್ಪತ್ರೆ’ಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಸಂಘರ್ಷದಲ್ಲಿ ಗಾಯಗೊಂಡ ಕನಿಷ್ಠ 18 ಯೋಧರನ್ನು ಚಿಕಿತ್ಸೆಗಾಗಿ ಲೇಹ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. 40ಕ್ಕೂ ಹೆಚ್ಚು ಯೋಧರನ್ನು ದೇಶದ ಇತರೆಡೆಗಳಲ್ಲಿರುವ ಸೇನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದೂ ಮೂಲಗಳು ಹೇಳಿವೆ. ಆದರೆ, ಸಂಘರ್ಷದಲ್ಲಿ ಒಟ್ಟು ಎಷ್ಟು ಯೋಧರು ಗಾಯಗೊಂಡಿದ್ದಾರೆ ಎಂಬುದನ್ನು ಸೇನೆ ಈವರೆಗೆ ಬಹಿರಂಗಪಡಿಸಿಲ್ಲ.

ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದ ಗಲ್ವಾನ್ ಕಣಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT