ಮಂಗಳವಾರ, ಏಪ್ರಿಲ್ 7, 2020
19 °C

ಮಧ್ಯಪ್ರದೇಶ ಬಿಕ್ಕಟ್ಟು | ಸಿಂಧಿಯಾ ಬಣದ 19 ಶಾಸಕರಿಂದ ಕಾಂಗ್ರೆಸ್‌ಗೆ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌: ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಆರು ಸಚಿವರೂ ಸೇರಿದಂತೆ ಒಟ್ಟು 19 ಜನ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಹೀಗಾಗಿ ಮಧ್ಯಪ್ರದೇಶದಲ್ಲಿ ಕಮಲನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನದ ಹಾದಿ ಹಿಡಿದಿದೆ. ಸಿಂಧಿಯಾ ತಮ್ಮ ರಾಜೀನಾಮೆ ಸಂಬಂಧ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ‘ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಮುಂದೆ ಸಾಗಲು ನನಗಿದು ಸಕಾಲ’ ಎಂದು ತಿಳಿಸಿದ್ದರು.

ಇದನ್ನೂ ಓದಿ: ಸೋನಿಯಾ ಗಾಂಧಿಗೆ ಸಿಂಧಿಯಾ ಸಲ್ಲಿಸಿದ ರಾಜೀನಾಮೆ ಪತ್ರದಲ್ಲೇನಿದೆ?

ಸಿಂಧಿಯಾ ರಾಜೀನಾಮೆ ನೀಡಿದ ಕೆಲಹೊತ್ತಿನಲ್ಲೇ, ಅವರ ಬೆಂಬಲಿಗ ಶಾಸಕರು ರಾಜೀನಾಮೆ ನೀಡಿದ್ದಾರೆ. ಎಲ್ಲ ಶಾಸಕರು ರಾಜೀನಾಮೆ ಪತ್ರವನ್ನು ಹಿಡಿದಿರುವ ಚಿತ್ರವೊಂದು ವೈರಲ್‌ ಆಗಿದೆ. ಮಾತ್ರವಲ್ಲದೆ ಇನ್ನೂ ಆರು ಶಾಸಕರು ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದೂ ವರದಿಯಾಗಿದೆ.

ಸದ್ಯ ರಾಜೀನಾಮೆ ಸಲ್ಲಿಸಿರುವ ಸಚಿವರಾದ ಇಮಾರ್ತಿ ದೇವಿ, ತುಳಸಿ ಸಿಲಾವತ್‌, ಗೋವಿಂದ್‌ ಸಿಂಗ್‌ ರಜಪೂತ್‌, ಮಹೇಂದ್ರ ಸಿಂಗ್‌ ಸಿಸೋಡಿಯಾ, ಪ್ರದ್ಯುಮಾನ್‌ ಸಿಂಗ್ ತೋಮರ್‌ ಹಾಗೂ ಡಾ. ಪ್ರಭುರಾಮ್‌ ಚೌಧರಿ ಅವರನ್ನು ಈ ಕೂಡಲೇ ಉಚ್ಚಾಟನೆ ಮಾಡುವಂತೆ ರಾಜ್ಯಪಾಲ ಲಾಲ್‌ಜಿ ತೊಂಡನ್‌ ಅವರಿಗೆ ಮುಖ್ಯಮಂತ್ರಿ ಕಮಲನಾಥ್‌ ಪತ್ರ ಬರೆದಿದ್ದಾರೆ.

ಕಮಲನಾಥ್‌ ಸಂಪುಟ‌ದ ಎಲ್ಲ ಸಚಿವರಿಂದ ರಾಜೀನಾಮೆ
ರಾಜ್ಯಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಂಧಿಯಾ ಮತ್ತು ಅವರ ಬೆಂಬಲಿಗರು ‍ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದು ಪಕ್ಷದ ಆತಂಕ ಹೆಚ್ಚಿಸಿತ್ತು. ಹೀಗಾಗಿ, ಕಮಲನಾಥ್‌ ಸಂಪುಟ‌ ಪುನಾರಚನೆಗೆ ನಿರ್ಧರಿಸಿದ್ದರು.

ಇದನ್ನೂ ಓದಿ: ಕಮಲನಾಥ್‌ ಸಂಪುಟದ 20 ಸಚಿವರ ರಾಜೀನಾಮೆ  

ಸಿಂಧಿಯಾ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ಕಮಲನಾಥ್‌ ಸಂಪುಟ‌ದ ಎಲ್ಲ ಸಚಿವರೂ ಸೋಮವಾರ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು