ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1996ರ ದೇವೇಗೌಡ ಮಾದರಿ ಜಾರಿಗೆ ತರುವುದೇ ಕೆಸಿಆರ್‌ ಯೋಜನೆ?

Last Updated 7 ಮೇ 2019, 11:29 IST
ಅಕ್ಷರ ಗಾತ್ರ

ನವದೆಹಲಿ: ಸಂಯುಕ್ತ ರಂಗವನ್ನು (ಫೆಡರಲ್‌ ಫ್ರಂಟ್‌) ಸಂಘಟಿಸುತ್ತಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಮೂಲ ಉದ್ದೇಶ ದಕ್ಷಿಣ ಭಾರತ ಮೂಲದ, ಬಿಜೆಪಿ, ಕಾಂಗ್ರೆಸ್ಸೇತರ ನಾಯಕರೊಬ್ಬರನ್ನು ಕೇಂದ್ರದಲ್ಲಿ ಪ್ರಧಾನಮಂತ್ರಿ ಮಾಡುವುದಾಗಿದೆ ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಗರಿಗೆದರಿವೆ.

ಸೋಮವಾರವಷ್ಟೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕೆ.ಚಂದ್ರಶೇಖರ್‌ ರಾವ್‌, ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.

ಕೆಸಿಆರ್‌ಭೇಟಿ ಮಾಡಿ ಅತ್ತ ತೆರಳುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಸದ್ಯದ ರಾಜಕೀಯದ ಪರಿಸ್ಥಿತಿಗಳ ಕುರಿತು ಕೆಸಿಆರ್‌ ನನ್ನೊಂದಿಗೆ ಚರ್ಚೆ ನಡೆಸಿದರು. ಕಾಂಗ್ರೆಸ್‌ ನೇತೃತ್ವದ ಯಪಿಎ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಗಳೆರಡೂ ಈ ಚುನಾವಣೆಯಲ್ಲಿ ಬಹುಮತ ಪಡೆಯುವುದಿಲ್ಲ ಎಂಬುದು ಕೆಸಿಆರ್‌ ಅಭಿಪ್ರಾಯ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಧಾನ ಮಂತ್ರಿ ಸ್ಥಾನದ ಕುರಿತು ಅವರು ಏನನ್ನೂ ಪ್ರಸ್ತಾಪಿಸಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

ಪಿಣರಾಯಿ ವಿಜಯನ್‌ ಅವರ ಭೇಟಿಯೊಂದಿಗೆ ಸಂಯುಕ್ತ ರಂಗದ ರಚನೆಗೆ ಮುಂದಾಗಿರುವ ಕೆಸಿಆರ್‌, ಎಲ್ಲ ನಾಯಕರ ಬಳಿಯೂ 1996ರ ಸಾರ್ವತ್ರಿಕ ಚುನಾವಣೆಗಳ ನಂತರದ ಪರಿಸ್ಥಿತಿಯ ಕುರಿತು ಕೆಸಿಆರ್‌ ಪ್ರಸ್ತಾಪ ಮಾಡುತ್ತಿದ್ದಾರೆ ಎನ್ನಲಾಗಿದೆ. 1996ರಂತೆಯೇ ದೇಶದಲ್ಲಿ ಯಾವೊಂದು ಪಕ್ಷ ಅಥವಾ ಒಕ್ಕೂಟವೂ ಬಹುಮತ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಹೊರತುಪಡಿಸಿ, ದಕ್ಷಿಣ ಭಾರತದ ಮೂಲದ ನಾಯಕರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡುವ ಯೋಜನೆಕೆಸಿಆರ್‌ ಅವರದ್ದು ಎನ್ನಲಾಗಿದೆ. ಆದರೆ, ಆ ನಾಯಕ ಯಾರು ಎಂಬುದರ ಬಗ್ಗೆ ಕೆಸಿಆರ್‌ ಎಲ್ಲಿಯೂಪ್ರಸ್ತಾಪಿಸುತ್ತಿಲ್ಲ ಎಂದೂ ಹೇಳಲಾಗಿದೆ.

ಕೆಸಿಆರ್‌ ತಮಿಳುನಾಡಿನದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮುಖ್ಯಸ್ಥ ಸ್ಟಾಲಿನ್‌ ಅವರೊಂದಿಗೂ ಇದೇ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಆದರೆ, ಸದ್ಯ ಸ್ಟಾಲಿನ್‌ ಅವರು ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಕೆಸಿಆರ್‌ ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಸ್ಟಾಲಿನ್‌ ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವುದು ಈನಿರಾಸಕ್ತಿಗೆ ಕಾರಣವಿರಬಹುದು ಎನ್ನಲಾಗಿದೆ.

ದಕ್ಷಿಣದ ನಾಯಕರನ್ನೆಲ್ಲ ಭೇಟಿಯಾಗಿ ಮಾತನಾಡುತ್ತಿರುವ ಕೆಸಿಆರ್‌ ಶೀಘ್ರದಲ್ಲೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾದ ಬಿಜು ಜನತಾದಳದ ನಾಯಕ,ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನೂ ಭೇಟಿಯಾಗುವ ಸಾಧ್ಯತೆಗಳಿವೆ.

ಸಂಯುಕ್ತ ರಂಗವನ್ನು ಸಂಘಟಿಸುವ ಕಾರ್ಯಕ್ಕೆ ಕೆಸಿಆರ್‌ ಒಂದು ವರ್ಷಕ್ಕೂ ಮೊದಲೇ ಕೈ ಹಾಕಿದ್ದರು. ಅದಕ್ಕೆ ದೇವೇಗೌಡರ ಮಾರ್ಗದರ್ಶನವನ್ನೂ ಪಡೆದಿದ್ದರು.

ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಪ್ರಾದೇಶಿಕ ಪಕ್ಷಗಳು ಬಹುದೊಡ್ಡ ಪಾತ್ರ ನಿರ್ವಹಿಸಲಿವೆ ಎಂದು ಭಾವಿಸಿರುವ ಕೆಸಿಆರ್‌, ವರ್ಷಕ್ಕೂ ಮೊದಲೇ ತೆಲಂಗಾಣ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು. ಯಾವ ಒತ್ತಡಗಳೂ ಇಲ್ಲದೇಲೋಕಸಭೆಗೆ ವೇದಿಕೆ ಸಿದ್ಧಪಡಿಸಿಕೊಳ್ಳುವುದುವಿಧಾನಸಭೆ ವಿಸರ್ಜನೆಯ ಹಿಂದಿನ ಯೋಜನೆಯಾಗಿತ್ತು ಎಂಬುದು ಈಗಾಗಲೇ ಬಹಿರಂಗವಾಗಿದೆ. ಅದರಂತೆ, ಸದ್ಯ ಕೆಸಿಆರ್‌ ಸಂಯುಕ್ತ ರಂಗದ ಸಂಘಟನೆಯಲ್ಲಿ ತೊಡಗಿದ್ದಾರೆ.

1996ರ ಚುನಾವಣೆಯಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾಗಿತ್ತು. ಈ ಸನ್ನಿವೇಶದ ಲಾಭ ಪಡೆದ ಸಂಯುಕ್ತ ರಂಗ ದೇವೇಗೌಡರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. ಈ ಮಾದರಿಯನ್ನು ಜಾರಿಗೆ ತರಲು ಸದ್ಯ ಕೆಸಿಆರ್‌ ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT