ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಮಧ್ಯ ಪ್ರದೇಶ: ಸೋಂಕು ಪರೀಕ್ಷೆಗೆ ಬಂದ ವೈದ್ಯರ ಮೇಲೆ ಕಲ್ಲು ತೂರಾಟ

Last Updated 2 ಏಪ್ರಿಲ್ 2020, 4:05 IST
ಅಕ್ಷರ ಗಾತ್ರ

ಇಂದೋರ್‌ (ಮಧ್ಯ ಪ್ರದೇಶ): ಕೊರೊನಾ ವೈರಸ್‌ ಸೋಂಕು ಆತಂಕ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಇಲ್ಲಿನ ಸ್ಥಳೀಯರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದು, ಅವರ ಮೇಲೆ ಕಲ್ಲು ತೂರಾಟ ನಡೆಸಿ ಓಡಿಸಲಾಗಿದೆ.

ಇಂದೋರ್‌ನ ಟಾಟಪಟ್ಟಿ ಬಖಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೂವರು ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಐವರ ತಂಡ ನಿರ್ದಿಷ್ಟ ವ್ಯಕ್ತಿಯ ಪರೀಕ್ಷೆಗಾಗಿ ಸ್ಥಳಕ್ಕೆ ತೆರಳಿತ್ತು. ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ವೈದ್ಯರು ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆದರೆ, ಆ ವ್ಯಕ್ತಿಯ ಕುರಿತು ವಿಚಾರಿಸುತ್ತಿದ್ದಂತೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದಾರೆ.

ಇಂದೋರ್‌ನಲ್ಲಿ 12 ಹೊಸ ಪ್ರಕರಣಗಳಲ್ಲಿ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಮಧ್ಯ ಪ್ರದೇಶದಲ್ಲಿ ದೃಢಪಟ್ಟಿರುವ ಒಟ್ಟು ಪ್ರಕರಣಗಳು 98.

'ಸೋಂಕು ಶಂಕಿತ ವ್ಯಕ್ತಿಯ ಕುರಿತು ವಿಚಾರಿಸುತ್ತಿದ್ದಂತೆ ಜನರು ಭಾರೀ ವಿರೋಧ ವ್ಯಕ್ತ ಪಡಿಸಲು ಶುರು ಮಾಡಿದರು, ಅವರೊಂದಿಗೆ ಇನ್ನಷ್ಟು ಜನ ಸೇರಿಕೊಂಡು ಕಲ್ಲು ತೂರಾಟ ಆರಂಭಿಸಿದರು. ಸಮೀಪದಲ್ಲೇ ಇದ್ದ ಪೊಲೀಸ್‌ ಸಿಬ್ಬಂದಿ ನಮ್ಮ ರಕ್ಷಣೆ ಬಂದರು' ಎಂದು ಗಾಯಗೊಂಡಿರುವ ವೈದ್ಯೆಯೊಬ್ಬರು ಹೇಳಿದ್ದಾರೆ.

'ಕೊರೊನಾ ವೈರಸ್‌ ಸೊಂಕಿನಿಂದ ಜನರನ್ನು ರಕ್ಷಿಸಲು ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಇದೊಂದು ದುರದೃಷ್ಟಕರ ಘಟನೆ. ಮಹಿಳಾ ವೈದ್ಯರು ತಹಸಿಲ್ದಾರ್‌ ವಾಹನದಲ್ಲಿ ಅಡಗಿ ಕುಳಿತುಕೊಳ್ಳುವ ಮೂಲಕ ಹೇಗೋ ತಮ್ಮ ರಕ್ಷಣೆ ಮಾಡಿಕೊಂಡಿದ್ದಾರೆ' ಎಂದು ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪ್ರವಿಣ್‌ ಜಾದಿಯಾ ತಿಳಿಸಿದ್ದಾರೆ.

ಛಾತ್ರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ವೈರಸ್‌ ಸೊಂಕಿನ ಕುರಿತು ಸರಿಯಾದ ಮಾಹಿತಿ ಇಲ್ಲದ್ದು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಹರಡಿರುವ ಊಹಾಪೋಹಗಳಿಂದ ಇಂಥ ಘಟನೆ ನಡೆದಿದೆ ಎಂದು ತನಿಖಾಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ದೇಶದಲ್ಲಿ 450 ಹೊಸ ಪ‍್ರಕರಣಗಳು ಪತ್ತೆಯಾಗಿವೆ. ವಿವಿಧ ರಾಜ್ಯಗಳು ವರದಿ ಮಾಡಿರುವಂತೆ ಸೋಂಕಿತರ ಸಂಖ್ಯೆ 1,949ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 59 ತಲುಪಿದೆ.

ಇಂಧೋರ್‌ನಲ್ಲಿ ಬುಧವಾರ 28 ವರ್ಷ ವಯಸ್ಸಿನ ವೈದ್ಯೆ ಕೊರೊನಾ ವೈರಸ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಯಾಗಿರುವ ಅವರು ಕೆಲವು ದಿನಗಳ ಹಿಂದೆ ಲಖನೌಗೆ ತೆರಳಿ ಅವರ ಪತಿಯನ್ನು ಭೇಟಿ ಮಾಡಿ ಬಂದಿದ್ದರು. ಪ್ರಸ್ತುತ ವೈದ್ಯೆಯ ಪತಿ ಹಾಗೂ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಇತರರನ್ನು ಕ್ವಾರಂಟೈನ್‌ ಮಾಡಲಾಗಿದೆ.

(ಮಾಹಿತಿ: ಎಎನ್‌ಐ, ಐಎಎನ್‌ಎಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT