ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಲೋಕಸಭೆಯಲ್ಲಿ ಪ್ರತಿಭಟನೆ

ಯೋಜನೆ ಪರ ದನಿ ಎತ್ತಿದ ರಾಜ್ಯ ಸಂಸದರು
Last Updated 19 ಡಿಸೆಂಬರ್ 2018, 19:36 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಲೋಕಸಭೆಯಲ್ಲಿ ಬುಧವಾರ ಎಐಎಡಿಎಂಕೆ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದು, ಯೋಜನೆಯ ಪರ ರಾಜ್ಯದ ಸಂಸದರು ದನಿ ಎತ್ತಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಎಐಎಡಿಎಂಕೆ ಸದಸ್ಯರು ಭಿತ್ತಿಪತ್ರ ಹಿಡಿದು ಸ್ಪೀಕರ್‌ ಎದುರಿನ ಜಾಗಕ್ಕೆ ಧಾವಿಸಿ ಘೋಷಣೆ ಕೂಗಲಾರಂಭಿಸಿದರು. ತಕ್ಷಣವೇ ರಾಜ್ಯದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರೂ ‘ಬೇಕೇ ಬೇಕು ಮೇಕೆದಾಟು’ ಎಂಬ ಘೋಷಣೆ ಕೂಗಿದರು.

ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ, ಎಸ್‌.ಪಿ. ಮುದ್ದಹನುಮೇಗೌಡ, ಕೆ.ಎಚ್‌. ಮುನಿಯಪ್ಪ, ವಿ.ಎಸ್‌. ಉಗ್ರಪ್ಪ, ಜೆಡಿಎಸ್‌ನ
ಎಲ್‌.ಆರ್‌. ಶಿವರಾಮೇಗೌಡ ಅವರು ಸ್ಪೀಕರ್‌ ಎದುರಿನ ಜಾಗಕ್ಕೆ ಬಂದು ಘೋಷಣೆ ಕೂಗಿದರೆ, ಬಿಜೆಪಿಯ ಸುರೇಶ ಅಂಗಡಿ, ಸಂಗಣ್ಣ ಕರಡಿ, ಪಿ.ಸಿ. ಗದ್ದಿಗೌಡರ್‌ ತಾವು ಕುಳಿತಿದ್ದ ಜಾಗದಲ್ಲೇ ಎದ್ದು ನಿಂತು ಮೇಕೆದಾಟು ಪರ ದನಿ ಎತ್ತಿದರು.

ಸಂಸತ್‌ನ ಚಳಿಗಾಲದ ಅಧಿವೇಶನದ ಆರಂಭದಿಂದಲೂ ತಮಿಳುನಾಡಿನ ಸಂಸದರು, ‘ಮೇಕೆದಾಟು ಯೋಜನೆಗೆ ಅನುಮತಿ ಬೇಡ’ ಎಂದು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯದ ಸಂಸದರು ಯೋಜನೆಯ ಪರ ಬುಧವಾರ ಪ್ರತಿಭಟನೆ ಆರಂಭಿಸಿದರು.

ಸಂಸದರಿಗೆ ಮಾಹಿತಿ: ತಮಿಳುನಾಡಿನ ಸಂಸದರು ತಪ್ಪು ತಿಳಿವಳಿಕೆಯಿಂದ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದು, ಸಂಸತ್‌ನಲ್ಲಿ ಹೋರಾಟ ರೂಪಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರಿಗೆ ಮನವಿ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ಕುರಿತು ರಾಜ್ಯದ ಎಲ್ಲ ಪಕ್ಷಗಳ ಸಂಸದರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.

ಯೋಜನೆಯಿಂದ ಎರಡೂ ರಾಜ್ಯಗಳಿಗೆ ನೆರವಾಗಲಿದೆ. ಕರ್ನಾಟಕಕ್ಕಿಂತ ತಮಿಳುನಾಡಿಗೆ ಅಧಿಕ ಲಾಭ ಆಗಲಿದೆ. ಈ ಕುರಿತು ತಮಿಳುನಾಡಿನ ಸಂಸದರಿಗೆ ಸಂಪೂರ್ಣ ಅರಿವಿದೆ. ಆದರೂ ಅವರು ಅನಗತ್ಯವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದ ಅವರು ಹೇಳಿದರು.

ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತಕುಮಾರ್‌ ಹೆಗಡೆ ಹಾಗೂ ಕೆಲವು ಸಂಸದರನ್ನು ಅವರು ಬುಧವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT