ಬುಧವಾರ, ಜೂನ್ 3, 2020
27 °C
ಮೇ 15ರವರೆಗೆ ಶಾಲೆ, ಕಾಲೇಜು ಪುನರಾರಂಭ ಬೇಡ l ಮಾಲ್‌, ಧಾರ್ಮಿಕ ಸಂಸ್ಥೆಗಳ ಮೇಲೆ ನಿರ್ಬಂಧ ಮುಂದುವರಿಯಲಿ l ಕೇಂದ್ರ ಸರ್ಕಾರಕ್ಕೆ ಸಲಹೆ

ಲಾಕ್‌ಡೌನ್ ತೆರವು ಬೇಡ: ರಾಜ್ಯಗಳ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ವಿಧಿಸಿರುವ 21 ದಿನಗಳ ದಿಗ್ಬಂಧನ ಅವಧಿ ಕೊನೆಗೊಳ್ಳಲು ವಾರವಷ್ಟೇ ಉಳಿದಿರುವ ಸಂದರ್ಭದಲ್ಲಿ ಹಲವು ರಾಜ್ಯಗಳು ನಿರ್ಬಂಧಗಳನ್ನು ಮುಂದುವರಿಸಲು ಬಯಸಿವೆ. ಲಾಕ್‌ಡೌನ್‌ ಅನ್ನು ಏಕಾಏಕಿ ತೆರವು ಮಾಡಿದರೆ ಸೋಂಕು ಹರಡುವಿಕೆ ಪ್ರಮಾಣ ತೀವ್ರವಾಗಿ ಏರಿಕೆಯಾಗಬಹುದು ಎಂಬ ಕಳವಳವನ್ನು ಈ ರಾಜ್ಯಗಳು ವ್ಯಕ್ತಪಡಿಸಿವೆ. ಹಾಗಾಗಿ, ದೇಶದ ಬಹುಭಾಗದಲ್ಲಿ ನಿರ್ಬಂಧವು ಇದೇ 14ರ ನಂತರವೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

ಲಾಕ್‌ಡೌನ್‌ನಿಂದಾಗಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಆದರೆ, ಈಗ ಅದನ್ನು ತೆರವು ಮಾಡಿದರೆ ಸೋಂಕು ಹರಡುವಿಕೆ ಒಮ್ಮಿಂದೊಮ್ಮೆಲೆ ಏರಿಕೆಯಾಗಬಹುದು ಎಂದು ತಜ್ಞರು ಕೂಡ ಎಚ್ಚರಿಸಿದ್ದಾರೆ. ಆದ್ದರಿಂದ, ಲಾಕ್‌ಡೌನ್‌ ಮುಂದು
ವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. 

ಹೋಟೆಲ್‌ ಮತ್ತು ಬಾರ್‌ಗಳು ಹಾಗೂ ಶಾಲೆ–ಕಾಲೇಜುಗಳನ್ನು ಸದ್ಯಕ್ಕೆ ತೆರೆಯುವುದು ಬೇಡ ಎಂಬ ನಿಲುವನ್ನು ಹಲವು ರಾಜ್ಯಗಳು ವ್ಯಕ್ತಪಡಿಸಿವೆ. 

ಇದೇ 14ರ ಬಳಿಕವೂ ಲಾಕ್‌ಡೌನ್‌ ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ಮಧ್ಯಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಕೇರಳ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. 

ಸಾವಿರ ದಾಟಿದ ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್‌ 19 ರೋಗಿಗಳ ಸಂಖ್ಯೆ ಮಂಗಳವಾರ 1,018ಕ್ಕೆ ಏರಿದೆ. ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ಸಾವಿರವನ್ನು ದಾಟಿದ ಮೊದಲ ರಾಜ್ಯ ಮಹಾರಾಷ್ಟ್ರ. 

ಬರಾತ್‌: ಅಂತರ ಕಾಯ್ದುಕೊಳ್ಳಿ: ಬುಧವಾರ ರಾತ್ರಿ ನಡೆಯಲಿರುವ, ಮುಸ್ಲಿಮರ ಪ್ರಮುಖ ಆಚರಣೆಯಾದ ಶಬ್‌–ಎ–ಬರಾತ್‌ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮಗಳು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ. 

ವುಹಾನ್‌ನಲ್ಲಿ ನಿರ್ಬಂಧ ಸಡಿಲು

ಕೊರೊನಾ ವೈರಸ್‌ ಕೇಂದ್ರ ಎಂದೇ ಪರಿಗಣಿಸಲಾಗಿದ್ದ ಚೀನಾದ ವುಹಾನ್‌ನಿಂದ ಜನರು ಹೊರಗೆ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಜನವರಿ 23ರಂದು ಲಾಕ್‌ಡೌನ್‌ ಹೇರಿಕೆಯಾದ ಬಳಿಕ ಇದೇ ಮೊದಲ ಬಾರಿಗೆ ಈ ಅವಕಾಶ ನೀಡಲಾಗಿದೆ. 

ಸಚಿವರ ಗುಂಪಿನ ಶಿಫಾರಸು

*ಲಾಕ್‌ಡೌನ್‌ ತೆರವಾದರೂ, ಶೈಕ್ಷಣಿಕ ಸಂಸ್ಥೆಗಳನ್ನು ಮೇ 15ರವರೆಗೆ ತೆರೆಯಬಾರದು. ಬೇಸಿಗೆ ರಜೆಯು ಮೇಯಲ್ಲಿ ಆರಂಭವಾಗುವುದರಿಂದ ವಿದ್ಯಾ ಸಂಸ್ಥೆಗಳು ಜೂನ್‌ ಕೊನೆಯವರೆಗೆ ತೆರೆಯುವ ಸಾಧ್ಯತೆ ಇಲ್ಲ

*ಸಾರ್ವಜನಿಕರು ಭಾಗವಹಿಸುವ ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆಗಳ ಮೇಲೆ ಮೇ 15ರವರೆಗೆ ನಿರ್ಬಂಧ; ಧಾರ್ಮಿಕ ಕೇಂದ್ರಗಳ ಮೇಲೆ ಡ್ರೋನ್‌ ಮೂಲಕ ನಿಗಾ ಇರಿಸಬೇಕು

*ಮಾಲ್‌ಗಳು, ಧಾರ್ಮಿಕ ಕೇಂದ್ರಗಳ ಸಹಜ ಚಟುವಟಿಕೆ ಮೇಲೆ ಏ. 14ರ ಬಳಿಕ ನಾಲ್ಕು ವಾರ ನಿರ್ಬಂಧ ಹೇರಬೇಕು

*ಪಿಡುಗು ತಡೆಗಟ್ಟುವ ದಿಸೆಯಲ್ಲಿ ರಾಜ್ಯಗಳು ನೀಡುವ ಸಲಹೆಗಳು ನಿರ್ಣಾಯಕ

*ಸೋಂಕು ಪರೀಕ್ಷೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಬೇಕು

*ಅಂತರರಾಜ್ಯ ಜನ ಸಂಚಾರಕ್ಕೆ ನಿರ್ಬಂಧ ಹೇರಬೇಕು, ಸಾರ್ವಜನಿಕ ಸಾರಿಗೆಗೆ ಸಮಯ ಮಿತಿ ಹಾಕಬೇಕು, ಹೆಚ್ಚು ಜನ ಬರುವ ಕಚೇರಿಗಳಲ್ಲಿಯೂ ನಿರ್ಬಂಧ ಇರಬೇಕು

*ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಚಿವರ ಗುಂಪಿನ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವರಾದ ರಾಮ್‌ ವಿಲಾಸ್‌ ಪಾಸ್ವಾನ್‌, ಪೀಯೂಷ್‌ ಗೋಯಲ್‌, ಸದಾನಂದ ಗೌಡ, ಸ್ಮೃತಿ ಇರಾನಿ ಇದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು