ಸೋಮವಾರ, ನವೆಂಬರ್ 30, 2020
24 °C
ರಾಜಸ್ಥಾನದಲ್ಲಿ ಪಕ್ಷಾಂತರ ಪರ್ವ l ಮಾಯಾವತಿ ಕಿಡಿ l ಗೆಹ್ಲೋಟ್ ಸರ್ಕಾರಕ್ಕೆ ಸ್ಥಿರತೆ

ಬಿಎಸ್‌ಪಿಗೆ ಮತ್ತೆ ‘ಕೈ’ಕೊಟ್ಟ ಶಾಸಕರು

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ/ಲಖನೌ: ಮುಖ್ಯಸ್ಥೆ ಮಾಯಾವತಿ ವಿರುದ್ಧ ‘ವಿಶ್ವಾಸದ್ರೋಹ’ ಆರೋಪ ಹೊರಿಸಿರುವ ರಾಜಸ್ಥಾನದ ಬಿಎಸ್‌ಪಿಯ ಆರು ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ರಾಜಸ್ಥಾನ ವಿಧಾನಸಭೆಯ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲೇ ನಡೆದಿರುವ ಈ ಬೆಳವಣಿಗೆಯಿಂದ ಮಾಯಾವತಿ ತೀವ್ರ ಆಕ್ರೋಶಗೊಂಡಿದ್ದಾರೆ. 

ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾಗಿರುವ ಮಾಯಾವತಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಿಡಿಕಾರಿದ್ದಾರೆ. ವಿಶ್ವಾಸಾರ್ಹವಲ್ಲ ಎಂಬುದನ್ನು ಕಾಂಗ್ರೆಸ್ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ತಮ್ಮ ಪಕ್ಷವನ್ನು ಒಡೆದಿದೆ ಎಂದು ಅವರು ಸಿಟ್ಟು ವ್ಯಕ್ತಪಡಿಸಿದ್ದಾರೆ. 

200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಎಸ್‌ಪಿ ಶಾಸಕರ ಸೇರ್ಪಡೆಯಿಂದ ಕಾಂಗ್ರೆಸ್ ಬಲ 106ಕ್ಕೆ ಏರಿದೆ. ಸದ್ಯ 198 ಸದಸ್ಯರಿದ್ದು, ಎರಡು ಸ್ಥಾನ ಖಾಲಿಯಿವೆ. 

ಶಾಸಕರಾದ ರಾಜೇಂದ್ರ ಸಿಂಗ್ ಗುಡಾ, ಜೋಗೇಂದ್ರ ಸಿಂಗ್ ಅವಾನಾ, ವಜೀಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪಚಂದ್ ಅವರು ವಿಧಾನಸಭೆ ಸ್ಪೀಕರ್ ಸಿ.ಪಿ. ಜೋಷಿ ಅವರನ್ನು ಸೋಮವಾರ ರಾತ್ರಿ ಭೇಟಿಯಾಗಿದ್ದರು. ತಾವೆಲ್ಲರೂ ಕಾಂಗ್ರೆಸ್ ಸೇರುತ್ತಿರುವ ಪತ್ರವನ್ನು ಸ್ಪೀಕರ್‌ಗೆ ಹಸ್ತಾಂತರಿಸಿದ್ದರು. 

ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಬಿಎಸ್‌ಪಿ ಶಾಸಕರು ಮುಖ್ಯಮಂತ್ರಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿ, ಸರ್ಕಾರವನ್ನು ಬಲಪಡಿಸಲು ನಿರ್ಧರಿಸಿದ್ದೇವೆ ಎಂದು ಶಾಸಕ ಜೋಗಿಂದರ್ ಹೇಳಿದ್ದಾರೆ. 

***

ಮಾಯಾವತಿ ಅವರಿಂದ ಇಂತಹ ಹೇಳಿಕೆ ಸಹಜ. ಆದರೆ ಬಿಎಸ್‌ಪಿ ಶಾಸಕರ ಮೇಲೆ ಯಾವುದೇ ಒತ್ತಡ ಹೇರಿರಲಿಲ್ಲ. ಸರ್ಕಾರಕ್ಕೆ ಸ್ಥಿರತೆ ಬೇಕಿದ್ದಿದ್ದು ನಿಜ. ಮತದಾರರ ಅಭಿಲಾಷೆಯಂತೆ ಅವರು ಪಕ್ಷಾಂತರ ಮಾಡಿದ್ದಾರೆ. ಬಿಎಸ್‌ಪಿ ಸರ್ಕಾರದ ಭಾಗವಾಗಿಯೂ ಇಲ್ಲ, ಸರ್ಕಾರ ರಚಿಸುವ ಹಂತದಲ್ಲಿಯೂ ಇಲ್ಲ ಎಂಬುದನ್ನು ಮಾಯಾವತಿ ಅರ್ಥ ಮಾಡಿಕೊಳ್ಳಲಿ
ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

***

ಯಾವುದೇ ಷರತ್ತು ಇಲ್ಲದೇ ಶಾಸಕರು ಪಕ್ಷಕ್ಕೆ ಬಂದಿಲ್ಲ. ಇದಕ್ಕಿಂತ ಇನ್ನೇನು ಬೇಕು? ಸರ್ಕಾರದ ಆಡಳಿತದಿಂದ ಪ್ರೇರೇಪಿತರಾಗಿ ಶಾಸಕರು ಪಕ್ಷಕ್ಕೆ ಸೇರಲು ಬಯಸಿದರೆ ಯಾರೂ ಆಕ್ಷೇಪ ಎತ್ತುವುದಿಲ್ಲ. ಶಾಸಕರ ಸೇರ್ಪಡೆಯಿಂದ ಅವರ ಕ್ಷೇತ್ರಗಳು ಅಭಿವೃದ್ಧಿಯಾಗಲಿವೆ
ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ

***

ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ ಮಾಯಾ

l ಕಾಂಗ್ರೆಸ್ ಪಕ್ಷ ವಿಶ್ವಾಸದ್ರೋಹಿ ಎಂದು ಮತ್ತೆ ಸಾಬೀತುಪಡಿಸಿದೆ. ವಿರೋಧಿಗಳ ವಿರುದ್ಧ ಹೋರಾಡುವ ಬದಲಾಗಿ ಸಹಕಾರ, ಬೆಂಬಲ ನೀಡುತ್ತಿರುವ ಪಕ್ಷಗಳಿಗೇ ಹಾನಿ ಮಾಡುತ್ತಿದೆ

l ಕಾಂಗ್ರೆಸ್ ಪಕ್ಷವು ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳ ವಿರೋಧಿಯಾಗಿದ್ದು, ಈ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿ ಹಕ್ಕುಗಳನ್ನು ದೊರಕಿಸುವ ವಿಚಾರದಲ್ಲಿ ಎಂದಿಗೂ ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ತೋರಿಲ್ಲ

l ಡಾ. ಭೀಮರಾವ್ ಅಂಬೇಡ್ಕರ್ ಅವರ ಮಾನವೀಯ ಸಿದ್ಧಾಂತಗಳನ್ನು ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ದೇಶದ ಮೊದಲ ಕಾನೂನು ಸಚಿವರಾಗಿದ್ದ ಅವರು ಬೇಸತ್ತು ರಾಜೀನಾಮೆ ನೀಡಿದರು. ಲೋಕಸಭೆಗೆ ಆಯ್ಕೆಯಾಗಲು ಪಕ್ಷ ಅವಕಾಶ ನೀಡಲಿಲ್ಲ. ಅವರಿಗೆ ‘ಭಾರತರತ್ನ’ ಗೌರವವನ್ನೂ ನೀಡಲಿಲ್ಲ. ಇದು ನಾಚಿಕೆಗೇಡು

2ನೇ ಬಾರಿ ಪೆಟ್ಟು ಕೊಟ್ಟ ಗೆಹ್ಲೋಟ್

ಕಳೆದ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದಿದ್ದ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಬೆಳವಣಿಗೆಗಳಿಂದ ಸ್ಥಿರತೆ ಸಿಕ್ಕಂತಾಗಿದೆ. ಗೆಹ್ಲೋಟ್ ಅವರು ಇಂಥದೇ ಯತ್ನವನ್ನು ಈಗ್ಗೆ 10 ವರ್ಷಗಳ ಹಿಂದೆ ಮಾಡಿದ್ದರು. 2009ರಲ್ಲಿ ಬಿಎಸ್‌ಪಿಯ ಎಲ್ಲ 6 ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡು ಸರ್ಕಾರ ಗಟ್ಟಿ ಮಾಡಿಕೊಂಡಿದ್ದರು.

ಬಹುಮತಕ್ಕೆ 5 ಸ್ಥಾನ ಕೊರತೆ ಎದುರಿಸುತ್ತಿದ್ದ ಗೆಹ್ಲೋಟ್, ಬಿಎಸ್‌ಪಿ ಶಾಸಕರ ಸೇರ್ಪಡೆಯಿಂದ ಸರ್ಕಾರದ ಬಲವನ್ನು 102ಕ್ಕೆ ಏರಿಸಿಕೊಂಡಿದ್ದರು. ಅಂದು ಕಾಂಗ್ರೆಸ್‌ಗೆ ಸೇರಿದ್ದ ಬಿಎಸ್‌ಪಿ ಶಾಸಕರ ಪೈಕಿ ರಾಜೇಂದ್ರ ಸಿಂಗ್ ಗುಡಾ ಕೂಡಾ ಒಬ್ಬರು. ಕಳೆದ ತಿಂಗಳು ಮಾಯವತಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ಗುಡಾ ಅವರು, ಹಣ ಪಡೆದು ಟಿಕೆಟ್‌ಗೆ ಹಂಚಿಕೆ ಮಾಡಿದ್ದಾರೆ ಎಂದಿದ್ದರು.

ರಾಜಸ್ಥಾನ ವಿಧಾನಸಭೆ ಬಲಾಬಲ

ಸದನದ ಬಲ: 200

ಬಹುಮತ: 101

ಕಾಂಗ್ರೆಸ್: 100

ಬಿಜೆಪಿ: 73

ಬಿಎಸ್‌ಪಿ: 6

ಪಕ್ಷೇತರ: 13

ಆರ್‌ಎಲ್‌ಪಿ: 3

ಸಿಪಿಎಂ: 2

ಬಿಟಿಪಿ: 2

ಆರ್‌ಎಲ್‌ಡಿ: 1

 

*6 ಬಿಎಸ್‌ಪಿ ಶಾಸಕರ ಸೇರ್ಪಡೆಯಿಂದ ಕಾಂಗ್ರೆಸ್ ಬಲ 106ಕ್ಕೆ ಏರಿಕೆ

*ಕಾಂಗ್ರೆಸ್ ಮಿತ್ರಪಕ್ಷ ರಾಷ್ಟ್ರೀಯ ಲೋಕದಳದ ಒಬ್ಬ ಶಾಸಕನ ಬೆಂಬಲ

*13 ಮಂದಿ ಪಕ್ಷೇತರ ಶಾಸಕರ ಬಾಹ್ಯ ಬೆಂಬಲವೂ ಸರ್ಕಾರಕ್ಕೆ ಇದೆ

* ಮಾರ್ಚ್ ತಿಂಗಳಲ್ಲಿ ಪಕ್ಷೇತರ ಶಾಸಕರು ಕಾಂಗ್ರೆಸ್‌ ಪಕ್ಷ ಸೇರಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು