ಶನಿವಾರ, ಡಿಸೆಂಬರ್ 14, 2019
25 °C
ಭಾರತದ ಚಂದ್ರಯಾನದ ಲ್ಯಾಂಡರ್ ನೌಕೆ * ಅನ್ವೇಷಣೆ ದೃಢಪಡಿಸಿದ ನಾಸಾ

ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ್ದು ಚೆನ್ನೈ ಟೆಕಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shanmuga Subramanian

ವಾಷಿಂಗ್ಟನ್/ಚೆನ್ನೈ: ಚಂದ್ರನ ಮೇಲ್ಮೈನಲ್ಲಿ ಅಪ್ಪಳಿಸಿದ್ದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಚಂದ್ರಯಾನ–2ರ ‘ವಿಕ್ರಂ’ ಲ್ಯಾಂಡರ್‌ ನೌಕೆಯ ಅವಶೇಷವನ್ನು ಚೆನ್ನೈನ ಟೆಕಿ ಒಬ್ಬರು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಪತ್ತೆ ಮಾಡಿದ್ದಾರೆ. ಚೆನ್ನೈನ ಟೆಕಿ ಅವರ ಪತ್ತೆಯನ್ನು ನಾಸಾ ದೃಢಪಡಿಸಿದೆ.

‘ಭಾರತದ ಷಣ್ಮುಗ ಸುಬ್ರಮಣಿಯನ್ ಅವರು, ವಿಕ್ರಂನ ನೌಕೆಯು ಚಂದ್ರನ ಮೇಲ್ಮೈನಲ್ಲಿ ಅಪ್ಪಳಿಸಿದ ಸ್ಥಳ ಮತ್ತು ಒಂದು ಅವಶೇಷವನ್ನು ನಮ್ಮ ಚಿತ್ರಗಳನ್ನು ಬಳಸಿಕೊಂಡು ಪತ್ತೆ ಮಾಡಿದ್ದರು. ಅವರು ಪತ್ತೆ ಮಾಡಿದ್ದ ಜಾಗ ಮತ್ತು ಸುತ್ತಮುತ್ತಲಿನ ಜಾಗವನ್ನು ಮತ್ತೆ ಶೋಧಿಸಿದೆವು. ಆಗ ವಿಕ್ರಂನ 24 ಅವಶೇಷಗಳು ಪತ್ತೆಯಾದವು. ಇದರ ಶ್ರೇಯ ಷಣ್ಮುಗ ಅವರಿಗೆ ಸಲ್ಲುತ್ತದೆ’ ಎಂದು ನಾಸಾದ ಚಂದ್ರನ ಮೇಲ್ಮೈ ಅನ್ವೇಷಣೆ ಕಕ್ಷೆಗಾಮಿ ಕ್ಯಾಮೆರಾ (ಲೂನಾರ್ ರಿಕಾನಿಸನ್ಸ್‌ ಆರ್ಬಿಟರ್‌ ಕ್ಯಾಮೆರಾ–ಎಲ್‌ಆರ್‌ಒಸಿ) ತಂಡವು ಹೇಳಿದೆ.

ಈ ಅನ್ವೇಷಣೆಯನ್ನು ಎಲ್‌ಆರ್‌ಒಸಿ ತಂಡವು ಮಂಗಳವಾರ ಬೆಳಿಗ್ಗೆ ಪ್ರಕಟಿಸಿದೆ. ಈ ಸಂಬಂಧ ನಾಸಾ, ಷಣ್ಮುಗ ಅವರಿಗೆ ಪ್ರಶಂಸಾ ಇ–ಮೇಲ್ ಸಹ ಮಾಡಿದೆ. ಇ–ಮೇಲ್‌ನ ಸ್ಕ್ರೀನ್‌ಶಾಟ್‌ ಅನ್ನು ಷಣ್ಮುಗ ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಸ್ರೊ ಮತ್ತು ನಾಸಾ ಇಂದ ಸಾಧ್ಯವಾಗದ ಕೆಲಸವನ್ನು ಷಣ್ಮುಗ ಮಾಡಿದ್ದಾರೆ ಎಂದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಷಣ್ಮುಗ ಅವರ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚೆನ್ನೈನ ಅವರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳು ಜಮಾಯಿಸಿದ್ದಾರೆ.

ಚಿತ್ರಗಳಿಂದಲೇ ಅವಶೇಷ ಹುಡುಕಿದ ಷಣ್ಮುಗ

* ಸೆಪ್ಟೆಂಬರ್‌ 7ರಂದು ವಿಕ್ರಂ ಲ್ಯಾಂಡರ್‌ ನೌಕೆಯು ಚಂದ್ರನ ಮೇಲ್ಮೈನಲ್ಲಿ ಇಳಿಯುವ ಮುನ್ನ ಸಂಪರ್ಕ ಕಳೆದುಕೊಂಡಿತ್ತು. ನಂತರ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು

* ಹಲವು ಪ್ರಯತ್ನಗಳ ನಂತರವೂ ನೌಕೆಯ ಜತೆ ಸಂಪರ್ಕ ಸಾಧಿಸಲು ಇಸ್ರೊ ವಿಫಲವಾಗಿತ್ತು. ನಾಸಾದ ಎಲ್‌ಆರ್‌ಒಸಿ ತಂಡವು ವಿಕ್ರಂ ನೌಕೆ ಅಪ್ಪಳಿಸಿರಬಹುದಾದ ಸ್ಥಳದ ಚಿತ್ರವನ್ನು ತೆಗೆದಿತ್ತು. ಆದರೆ ವಿಕ್ರಂ ನೌಕೆಯನ್ನು ಗುರುತಿಸುವಲ್ಲಿ ವಿಫಲವಾಗಿತ್ತು

* ಸೆಪ್ಟೆಂಬರ್ 17ರಂದು ತೆಗೆದಿದ್ದ ಈ ಚಿತ್ರವನ್ನು ಸೆಪ್ಟೆಂಬರ್ 27ರಂದು ಬಿಡುಗಡೆ ಮಾಡಿತ್ತು. ಜತೆಗೆ ಜುಲೈ 16ರಂದು ತೆಗೆಯಲಾಗಿದ್ದ ಅದೇ ಸ್ಥಳದ ಚಿತ್ರವನ್ನೂ ಬಿಡುಗಡೆ ಮಾಡಿತ್ತು. ಎರಡೂ ಚಿತ್ರಗಳ ನಡುವಣ ವ್ಯತ್ಯಾಸವನ್ನು ಪತ್ತೆ ಮಾಡಿ, ವಿಕ್ರಂ ನೌಕೆಯನ್ನು ಪತ್ತೆ ಮಾಡಬಹುದೇ ಎಂದು ನಾಸಾ ಟ್ವೀಟ್ ಮಾಡಿತ್ತು

* ಷಣ್ಮುಗ ಸುಬ್ರಮಣಿಯನ್ ಅವರು ತಮ್ಮ ಬಿಡುವಿನ ಸಮಯದಲ್ಲಿ ಈ ಎರಡೂ ಚಿತ್ರಗಳನ್ನು ಹೋಲಿಕೆ ಮಾಡಿ ವ್ಯತ್ಯಾಸ ಗುರುತಿಸಲು ಯತ್ನಿಸಿದ್ದರು. ನಾಸಾ ಬಿಡುಗಡೆ ಮಾಡಿದ್ದ ಚಿತ್ರಗಳ ರೆಸಲ್ಯೂಷನ್ ಕಡಿಮೆ ಇತ್ತು. ಹೀಗಾಗಿ ಎರಡೂ ಚಿತ್ರಗಳನ್ನು ಪೂರ್ತಿ ಹೋಲಿಸಿ ನೋಡಲು ಷಣ್ಮುಗ ಅವರಿಗೆ 40 ಗಂಟೆ ಬೇಕಾಯಿತು. ಇದಕ್ಕಾಗಿ ಅವರು ಐದು ದಿನ ತಮ್ಮ ಬಿಡುವಿನ ಸಮಯ ಮತ್ತು ನಿದ್ದೆಯ ಸಮಯವನ್ನು ವಿನಿಯೋಗಿಸಿದ್ದರು

* ಅಕ್ಟೋಬರ್ 3ರಂದು ಅವರು ತಾವು ಪತ್ತೆ ಮಾಡಿದ್ದ ಜಾಗವನ್ನು ಚಿತ್ರದಲ್ಲಿ ಗುರುತಿಸಿ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ ಅನ್ನು ನಾಸಾಗೆ ಟ್ಯಾಗ್‌ ಮಾಡಿದ್ದರು. ‘ನಿಗದಿತ ಸ್ಥಳಕ್ಕಿಂತ 1 ಕಿ.ಮೀ. ದೂರದಲ್ಲಿ ವಿಕ್ರಂ ಅಪ್ಪಳಿಸಿರಬಹುದೇ? ಚಂದ್ರನ ಮಣ್ಣಿನಲ್ಲಿ ವಿಕ್ರಂ ಹುದುಗಿರಬಹುದೇ’ ಎಂದು ಅವರು ಟ್ವೀಟ್‌ನಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ‘ನಿಗದಿತ ಸ್ಥಳಕ್ಕಿಂತ 750 ಮೀಟರ್ ದೂರದಲ್ಲಿ ವಿಕ್ರಂ ಚಂದ್ರನ ಮೇಲ್ಮೈ ಅನ್ನು ಅಪ್ಪಳಿಸಿರಬಹುದು’ ಎಂದು ನಾಸಾ ಅಧಿಕಾರಿಗಳಿಗೆ ಇ–ಮೇಲ್‌ ಮಾಡಿದ್ದರು

* ಷಣ್ಮುಗ ಅವರು ಕಳುಹಿಸಿದ್ದ ವಿವರವನ್ನು ಎಲ್‌ಆರ್‌ಒಸಿ ತಂಡವು ಗಂಭೀರವಾಗಿ ಪರಿಗಣಿಸಿತ್ತು. ಅಕ್ಟೋಬರ್ 14, 15 ಮತ್ತು ನವೆಂಬರ್ 11ರಂದು ಎಲ್‌ಆರ್‌ಒ ಕ್ಯಾಮೆರಾವು ಮತ್ತೆ ಅದೇ ಸ್ಥಳಗಳ ಚಿತ್ರವನ್ನು ತೆಗೆದಿತ್ತು. ನವೆಂಬರ್ 11ರ ಚಿತ್ರ ಹೆಚ್ಚು ಸ್ಪಷ್ಟವಾಗಿತ್ತು. ಷಣ್ಮುಗ ಅವರು ಗುರುತಿಸಿದ್ದ ಜಾಗ ಸರಿಯಾಗಿದೆ ಎಂಬುದನ್ನು ಎಲ್‌ಆರ್‌ಒಸಿ ವಿಜ್ಞಾನಿಗಳು ದೃಢಪಡಿಸಿಕೊಂಡರು

* ನಿಗದಿತ ಸ್ಥಳಕ್ಕಿಂತ 2,500 ಅಡಿ ದೂರದಲ್ಲಿ (762 ಮೀಟರ್) ವಿಕ್ರಂ ಅಪ್ಪಳಿಸಿದೆ ಎಂಬುದನ್ನು ವಿಜ್ಞಾನಿಗಳ ತಂಡವು ದೃಢಪಡಿಸಿತು. ಅಲ್ಲದೆ, ವಿಕ್ರಂನ ಅವಶೇಷಗಳು ಬಿದ್ದಿರುವ 24 ಸ್ಥಳಗಳು ಮತ್ತು ಅವು ಬಿದ್ದ ಪರಿಣಾಮವಾಗಿ ಮಣ್ಣು ಚದುರಿರುವುದನ್ನು ವಿಜ್ಞಾನಿಗಳು ಗುರುತಿಸಿದರು

ನಾಸಾದಿಂದ ಅಭಿನಂದನೆ

ಮೂಲತಃ ಮಧುರೆಯವರಾದ ಷಣ್ಮುಗ ಸುಬ್ರಮಣಿಯನ್ (33) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕದ ಸಾಫ್ಟ್‌ವೇರ್ ಕಂಪನಿ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ಬಾಹ್ಯಾಕಾಶ ವಿಜ್ಞಾನ ಮತ್ತು ವಿದ್ಯಮಾನಗಳ ಬಗ್ಗೆ ಅವರಿಗೆ ಇದ್ದ ಆಸಕ್ತಿ, ಈಗ ಅವರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ.

‘ನಾಸಾ ವಿಜ್ಞಾನಿಗಳ ಕೈಯಲ್ಲಿ ವಿಕ್ರಂ ಅನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಮತ್ತು ಪತ್ತೆ ಮಾಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದು, ನನ್ನೊಳಗೆ ಕುತೂಹಲವನ್ನು ಕೆರಳಿಸಿತ್ತು. ನಾಸಾ ನೀಡಿದ್ದ ಚಿತ್ರಗಳನ್ನು ಪರಿಶೀಲಿಸಲು ಮುಂದಾದೆ’ ಎಂದು ಷಣ್ಮುಗ ಅವರು ಹೇಳಿದ್ದಾರೆ.

‘ನನ್ನ ಬಳಿ ಬೇರೆ ಯಾವುದೇ ಸಾಧನ ಇರಲಿಲ್ಲ. ಎರಡು ಲ್ಯಾಪ್‌ಟಾಪ್‌ಗಳನ್ನು ಅಕ್ಕಪಕ್ಕ ಇಟ್ಟುಕೊಂಡೆ. ಒಂದರಲ್ಲಿ ಜುಲೈ 16ರ ಚಿತ್ರ ಮತ್ತೊಂದರಲ್ಲಿ ಸೆಪ್ಟೆಂಬರ್ 17ರ ಚಿತ್ರ ತೆರೆದುಕೊಂಡು ಪರಿಶೀಲಿಸಲು ಆರಂಭಿಸಿದೆ. ಎರಡೂ ಚಿತ್ರಗಳ ಪ್ರತಿ ಪಿಕ್ಸಲ್‌ಗಳನ್ನು ಪರಿಶೀಲಿಸಿದೆ. ಎರಡೂ ಚಿತ್ರದಲ್ಲಿ ಇದ್ದ ವ್ಯತ್ಯಾಸವನ್ನು ಗುರುತಿಸಿದೆ’ ಎಂದು ಅವರು ವಿವರಿಸಿದ್ದಾರೆ.

ನಾಸಾ ಅಭಿನಂದನೆ: ‘ನೀವು ಪತ್ತೆಮಾಡಿದ ವಿಷಯವನ್ನು ದೃಢಪಡಿಸುವಲ್ಲಿ ವಿಳಂಬವಾಗಿದ್ದಕ್ಕೆ ವಿಷಾದಿಸುತ್ತೇವೆ. ಇದನ್ನು ಘೋಷಿಸುವ ಮುನ್ನ ನಾವು ಹಲವು ಸಂಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಕೊಳ್ಳಬೇಕಿತ್ತು. ಈ ಹುಡುಕಾಟಕ್ಕಾಗಿ ನಿಮ್ಮ ಶ್ರಮ ಮತ್ತು ಸಮಯ ವಿನಿಯೋಗಿಸಿದ್ದಕ್ಕೆ ನಮ್ಮ ಅಭಿನಂದನೆಗಳು. ಬಹುಶಃ ಮಾಧ್ಯಮಗಳು ನಿಮ್ಮ ಬೆನ್ನುಹತ್ತುತ್ತವೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನೀವು ಸಿದ್ಧರಾಗಿ’ ಎಂದು ಷಣ್ಮುಗ ಅವರಿಗೆ ನಾಸಾ ಲ–ಮೇಲ್ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು