ಶುಕ್ರವಾರ, ಏಪ್ರಿಲ್ 23, 2021
32 °C

ನಕಲಿ ಪ್ರಮಾಣಪತ್ರ ಪ್ರಕರಣ: ಸಂಸದ ಆಜಂ ಖಾನ್‌, ಹೆಂಡತಿ, ಮಗನಿಗೆ ನ್ಯಾಯಾಂಗ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್‌ ಅವರನ್ನು ಮಗನ ಜನನ ದಿನಾಂಕದ ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದೆ. ರಾಂಪುರ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಈ ಬಂಧನ ನಡೆದಿದೆ. ಆಜಂ ಅವರ ಹೆಂಡತಿ ತನ್‌ಜೀನ್‌ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಂ ಅವರನ್ನೂ ಬಂಧಿಸಲಾಗಿದೆ. ಈ ಇಬ್ಬರೂ ಉತ್ತರ ಪ್ರದೇಶದ ಶಾಸಕರು. 

ಈ ಎಲ್ಲರಿಗೂ ಮಾರ್ಚ್‌ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಮೂವರಿಗೂ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿತ್ತು. ಹಾಗಾಗಿ ಅವರು ನ್ಯಾಯಾಲಯಕ್ಕೆ ಶರಣಾಗಿದ್ದರು. 

ಆಜಂ ಅವರ ಮಗ ಅಬ್ದುಲ್ಲಾ ಅವರು ಭಿನ್ನ ಜನ್ಮ ದಿನಾಂಕಗಳಿರುವ ಎರಡು ಜನನ ಪ್ರಮಾಣಪತ್ರ ಹೊಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಎರಡು ಪಾಸ್‌ಪೋರ್ಟ್‌ ಮತ್ತು ಎರಡು ಪ್ಯಾನ್‌ ಕಾರ್ಡ್‌ಗಳನ್ನೂ ಅಬ್ದುಲ್ಲಾ ಹೊಂದಿದ್ದಾರೆ ಎಂದು ಆರೋ‍‍ಪಿಸಲಾಗಿದೆ. ಜನನದ ಎರಡು ಪ್ರಮಾಣಪತ್ರಗಳನ್ನು ಪಡೆಯಲು ಆಜಂ ಮತ್ತು ಹೆಂಡತಿ ನೆರವಾಗಿದ್ದಾರೆ ಎಂಬ ಆರೋಪ ಈ ಇಬ್ಬರ ಮೇಲೆ ಇದೆ. 

ಸಮಾಜವಾದಿ ಪಕ್ಷವು ಈ ಬಂಧನವನ್ನು ಖಂಡಿಸಿದೆ. ಬಿಜೆಪಿ ನೇತೃತ್ವದ ಸರ್ಕಾರವು ‘ದ್ವೇಷ ರಾಜಕಾರಣ’ ಮಾಡುತ್ತಿದೆ ಎಂದು ಪಕ್ಷವು ಆರೋಪಿಸಿದೆ. ಆದರೆ, ಇದನ್ನು ಬಿಜೆಪಿ ಅಲ್ಲಗಳೆದಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. 

ಜಮೀನು ಒತ್ತುವರಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಆಕ್ಷೇಪಾರ್ಹ ಹೇಳಿಕೆ ಸೇರಿ ಆಜಂ ವಿರುದ್ಧ ಕಳೆದ ಕೆಲವು ತಿಂಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. 

ಹಿಂದಿ ಸಿನಿಮಾ ನಟಿ ಮತ್ತು ಬಿಜೆಪಿ ನಾಯಕಿ ಜಯಪ್ರದಾ ಅವರ ಬಗ್ಗೆ ಆಜಂ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಪ್ರಕರಣದಲ್ಲಿ ರಾಂಪುರ ಪೊಲೀಸರು ಇತ್ತೀಚೆಗಷ್ಟೇ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ. 

ಆಜಂ ಅವರು ‘ಭೂ ಮಾಫಿಯಾ’ ಎಂದು ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಘೋಷಿಸಿದೆ. ‘ಭೂ ಮಾಫಿಯಾ ತಡೆ’ ಪೋರ್ಟಲ್‌ನಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಸ್ಥಳೀಯ ರೈತರ ಜಮೀನು ಕಸಿದುಕೊಂಡ ಹಲವು ಆರೋಪಗಳು ಅವರ ಮೇಲೆ ಇವೆ. ಕಳೆದ ಕೆಲವು ವಾರಗಳಲ್ಲಿ ಅವರ ವಿರುದ್ಧ ಜಮೀನು ಕಸಿದುಕೊಂಡಿದ್ದಕ್ಕೆ ಸಂಬಂಧಿಸಿದ 13 ಪ್ರಕರಣಗಳು ದಾಖಲಾಗಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು