ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಸಂಕಷ್ಟ ಕಾಲದಲ್ಲಿ ಕೇಳಿಬರುವ ‘ಕಾಮರಾಜ್‌ ಸೂತ್ರ’ ಎಂದರೆ ಏನು?

Last Updated 8 ಜುಲೈ 2019, 12:45 IST
ಅಕ್ಷರ ಗಾತ್ರ

ಭಿನ್ನಮತ, ಮಂತ್ರಿ ಮಂಡಲ ಪುನಾರಚನೆ, ನಾಯಕತ್ವ ಬದಲಾವಣೆಯ ವೇಳೆ ಮುಂಚೂಣಿಗೆ ಬರುವ ಈ ಕಾಮರಾಜ್‌ ಸೂತ್ರ ಎಂದರೇನು? ಇದು ಪ್ರಯೋಗಕ್ಕೆ ಬಂದಿದ್ದು ಯಾವಾಗ? ಅದರ ಪರಿಣಾಮಗಳೇನು? ಇಲ್ಲಿದೆ ವಿವರಣೆ...

***

ರಾಜ್ಯ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.ಕೆಲ ಶಾಸಕರ ರಾಜೀನಾಮೆಯೊಂದಿಗೆ ಮೈತ್ರಿ ಸರ್ಕಾರ ಉಳಿಯುವುದೋ, ಉರುಳುವುದೋ ಎಂಬ ಅನುಮಾನಗಳು ಮೂಡಿವೆ. ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಜೆಡಿಎಸ್–ಕಾಂಗ್ರೆಸ್ ನಾಯಕರು, ಸದ್ಯ ಸಂಪುಟದಲ್ಲಿದ್ದ ಎಲ್ಲ ಸಚಿವರಿಂದರಾಜೀನಾಮೆ ಪಡೆದು, ಬಂಡಾಯವೆದ್ದವರಲ್ಲಿ ಮಂತ್ರಿಗಿರಿಯ ಆಸೆ ಹುಟ್ಟಿಸಿದ್ದಾರೆ. ಮೈತ್ರಿ ನಾಯಕರು ಹೆಣೆದಿರುವ ಈ ತಂತ್ರವನ್ನು ಕಾಮರಾಜ್‌ ಸೂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ದಿವಂಗತ ಕುಮಾರಸ್ವಾಮಿ ಕಾಮರಾಜ್‌. ತಮಿಳುನಾಡಿನ ಮೂರನೇ ಮುಖ್ಯಮಂತ್ರಿ.1954–1963ರ ವರೆಗೆ ಮೂರು ಬಾರಿ ಕರ್ನಾಟಕದ ನೆರೆಯ ರಾಜ್ಯದಲ್ಲಿ ಅವರು ಆಡಳಿತ ನಡೆಸಿದ್ದರು. 60ರ ದಶಕದಲ್ಲಿ ಕಾಮರಾಜ್‌ ಅವರನ್ನು ಅತ್ಯಂತ ಪ್ರಭಾವಿ ಹಾಗೂ ಕಿಂಗ್‌ಮೇಕರ್‌ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಲಾಗುತ್ತಿತ್ತು.

ಜವಾಹರಲಾಲ್‌ ನೆಹರೂ ಆಪ್ತರಾಗಿದ್ದಕಾಮರಾಜ್‌, ಎಐಸಿಸಿಗೆ ಎರಡು ಬಾರಿ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್‌ ಪಕ್ಷವನ್ನು ಪುನರುಜ್ಜೀವನಗೊಳಿಸುವಲ್ಲಿ ‌ಅವರು ಅನುಸರಿಸಿದ ಸೂತ್ರವನ್ನು ಇಂದಿಗೂ ‘ಕಾಮರಾಜ್‌ ಪ್ಲಾನ್‌’ಎಂದೇ ಕರೆಯಲಾಗುತ್ತದೆ. ಅಷ್ಟಕ್ಕೂ ಕಾಮರಾಜ್‌ ಸೂತ್ರ ಮೊದಲ ಬಾರಿಗೆ ಪ್ರಯೋಗಕ್ಕೆ ಬಂದದ್ದು ಸರ್ಕಾರದ ಉಳಿವಿಗಾಗಿ ಅಲ್ಲ. ಬದಲಾಗಿ ಪಕ್ಷದ ಪುನಶ್ಚೇತನಕ್ಕಾಗಿ.

ಕಾಂಗ್ರೆಸ್‌ ಪಕ್ಷಕ್ಕೆ ಹೊಸಜೀವ

1960ರ ದಶಕದಲ್ಲೇ ದೇಶಾದ್ಯಂತ ಕಾಂಗ್ರೆಸ್‌ ಕಳೆಗುಂದುತ್ತಿರುವ ಲಕ್ಷಣಗಳನ್ನು ಕಾಮರಾಜ್‌ ಸೂಕ್ಷ್ಮವಾಗಿ ಗಮನಿಸಿದ್ದರು. 1963ರ ಹೊತ್ತಿಗೆ ಕಾಂಗ್ರೆಸ್‌ ದೇಶದಲ್ಲಿ ಹಿನ್ನಡೆ ಅನುಭವಿಸಲು ಆರಂಭಿಸಿತ್ತು. ಜನಪ್ರಿಯ ನಾಯಕರೆನಿಸಿದ ಜವಾಹರಲಾಲ್‌ ನೆಹರೂ ಅವರಿಗೆ ವಯಸ್ಸಾಗಿತ್ತು. ಅವರು ಪ್ರಧಾನಿಯಾಗಿದ್ದಾಗಲೇ 1962ರಲ್ಲಿ ದೇಶಚೀನಾದ ಎದುರು ಯುದ್ಧದಲ್ಲಿ ಸೋತಿತ್ತು. ಪ್ರಮುಖ ಮೂರು ಉಪ ಚುನಾವಣೆಗಳಲ್ಲಿ ಸೋತಿತ್ತು.ಆಗ, ಪಕ್ಷದ ಪುನಶ್ಚೇತನಕ್ಕೆ ತಂತ್ರ ರೂಪಿಸಿದ ಕಾಮರಾಜ್‌ ಅಕ್ಟೋಬರ್‌ 2, 1963ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಸರ್ಕಾರದಲ್ಲಿ ಹೊಂದಿರುವ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಮತ್ತು ಅವರ ಶಕ್ತಿ ಸಾಮರ್ಥ್ಯಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು ಎಂಬ ಪ್ರಸ್ತಾವವನ್ನು ಪಕ್ಷದ ಮುಂದಿಟ್ಟರು. ಮುಂದೆ ಇದು ‘ಕಾಮರಾಜ್ ಸೂತ್ರ’ ಎಂದು ಹೆಸರುವಾಸಿಯಾಯಿತು.

ಕಾಂಗ್ರೆಸ್‌ ನಾಯಕರ ಮನಸ್ಸಿನಲ್ಲಿ ಇರಬಹುದಾದ ಅಧಿಕಾರದ ಲಾಲಸೆ ದೂರ ಮಾಡುವುದು.ಪಕ್ಷದ ಕಾರ್ಯಕ್ಕೆ ಎಲ್ಲರೂ ಶ್ರಮಿಸಬೇಕು ಎಂಬ ಭಾವನೆ ಬಿತ್ತುವುದು.ಆ ಮೂಲಕ ಪಕ್ಷವನ್ನು ಪುನಶ್ಚೇತನ ಮಾಡುವುದೇ ಈ ಸೂತ್ರದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಜಗಜೀವನ ರಾಮ್‌, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್‌ ಮತ್ತು ಎಸ್‌.ಕೆ ಪಾಟೀಲ್‌ ಸೇರಿದಂತೆ ವಿವಿಧ ರಾಜ್ಯಗಳ ಆರು ಮುಖ್ಯಮಂತ್ರಿಗಳು, ಆರು ಮಂದಿ ಕೇಂದ್ರ ಸಚಿವರು ಹುದ್ದೆಗಳಿಗೆರಾಜೀನಾಮೆ ನೀಡಿ ಪಕ್ಷದ ಸಂಘಟನೆಗೆ ತೊಡಗಿಸಿಕೊಂಡರು. ಈ ಬೆಳವಣಿಗೆ ಕಾಂಗ್ರೆಸ್‌ಗೆ ಸಂಘಟನಾತ್ಮಕವಾಗಿ ದೇಶಾದ್ಯಂತ ಬಹುದೊಡ್ಡ ಮುನ್ನಡೆ ನೀಡಿತ್ತು.

ಒಲಿದು ಬಂತು ಅಧ್ಯಕ್ಷ ಪಟ್ಟ

ಕಾಮರಾಜ್‌ ಅವರ ಸೂತ್ರ ಫಲ ನೀಡಿದ್ದರಿಂದ ಸಂಪ್ರೀತಗೊಂಡಿದ್ದ ಜವಾಹರಲಾಲ್‌ ನೆಹರೂ, ಕಾಮರಾಜ್ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದ್ದರು. ದೆಹಲಿಗೆ ಕರೆಸಿಕೊಂಡು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರು.ಪಕ್ಷದ ಹಿತಕ್ಕಾಗಿ ರೂಪ ಪಡೆದುಕೊಂಡಿದ್ದ ಈ ಸೂತ್ರ ಸದ್ಯ ಸರ್ಕಾರಗಳಲ್ಲಿ ಎದುರಾಗವು ಭಿನ್ನಮತದ ಸಂದರ್ಭದಲ್ಲಿ ಮಾತ್ರ ಹೆಚ್ಚು ಚಾಲ್ತಿಗೆ ಬರುತ್ತಿದೆ.

ಕರ್ನಾಟಕದಲ್ಲಿ ಚರ್ಚೆಗೆ ಬಂದಿದೆ ಕಾಮರಾಜ್ ಸೂತ್ರ

ಕರ್ನಾಟಕದ ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ವಿಶ್ಲೇಷಕರು ‘ಕಾಮರಾಜ್ ಸೂತ್ರ’ವನ್ನು ಉಲ್ಲೇಖಿಸುತ್ತಿದ್ದಾರೆ.ಆದರೆ ಕರ್ನಾಟಕದಲ್ಲಿ ಸೋಮವಾರ ನಡೆದ ರಾಜಕೀಯ ಬೆಳವಣಿಗೆಯನ್ನು ‘ಕಾಮರಾಜ್ ಸೂತ್ರ’ದ ಭಾಗ ಎಂದು ಹೇಳಲು ಸಾಧ್ಯವಿಲ್ಲ. ಇದು ಕೇವಲ ಸರ್ಕಾರ ಉಳಿಸಿಕೊಳ್ಳುವ ಸರ್ಕಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT