ವರ್ಗಾವಣೆ ದಂಧೆ ನಿರತ ಮೈತ್ರಿ ಸರ್ಕಾರ

7
‘ಪ್ರಜಾವಾಣಿ’ ಒಳನೋಟದ ವರದಿ ಉಲ್ಲೇಖಿಸಿದ ಬಿ.ಎಸ್. ಯಡಿಯೂರಪ್ಪ

ವರ್ಗಾವಣೆ ದಂಧೆ ನಿರತ ಮೈತ್ರಿ ಸರ್ಕಾರ

Published:
Updated:
Deccan Herald

ಬೆಳಗಾವಿ: ‘ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬರದ ಸಮಸ್ಯೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ ಅವರು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‍‘ಪ್ರಜಾವಾಣಿ’ಯ ‘ಒಳ ನೋಟ’ದ ‘ಮುಖ್ಯ ಎಂಜಿನಿಯರ್‌ ಹುದ್ದೆಗೆ ₹10 ಕೋಟಿ ಕಪ್ಪ’ ವರದಿಯನ್ನು ಓದಿದರು. ಯಾವ ಹುದ್ದೆ ಎಷ್ಟು ಕೋಟಿಗೆ ಬಿಕರಿಯಾಗಿದೆ ಎಂಬ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ವರದಿಯ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. ಸ್ಪಷ್ಟೀಕರಣವನ್ನೂ ನೀಡಿಲ್ಲ. ಸತ್ಯ ಎಂದು ಒಪ್ಪಿಕೊಂಡಿದೆ’ ಎಂದು ಚುಚ್ಚಿದರು.

‘ಯಾವುದೇ ಕಾಮಗಾರಿಗೆ ₹100 ಕೋಟಿ ಬಿಡುಗಡೆಯಾದರೆ ಬಳಕೆಯಾಗುವುದು ₹35 ಕೋಟಿ ಮಾತ್ರ. ದಾಖಲೆ ಕೊಡುತ್ತೇನೆ. ಇದರ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ಮಾಡಿಸಿ’ ಎಂದು ಅವರು ಒತ್ತಾಯಿಸಿದರು.

ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ‘ಸರ್ಕಾರ ಬದಲಾಗಿದೆ. ಶಾಸಕರು ಬದಲಾಗಿದ್ದಾರೆ. ಅಧಿಕಾರಿಗಳು ಬದಲಾಗುವುದು ಅನಿವಾರ್ಯ. ಅವರು ಅಷ್ಟು ಹಣ ಕೊಟ್ಟು ಹೋಗುತ್ತಾರಾ? ಅಷ್ಟು ಕೊಟ್ಟು ಹೋದ ಮೇಲೆ ಅಷ್ಟು ದುಡಿಯಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ’ ಎಂದರು.

ಸಚಿವರಿಗೂ ತಾಜ್‌ ವೆಸ್ಟೆಂಡ್‌ನಲ್ಲಿ ರೂಮ್‌ ಕೊಡಿಸಿ’

‘ಜೆ.ಪಿ.ನಗರದ ನಿವಾಸವನ್ನೇ ಬಳಸಿ ಮಿತವ್ಯಯದ ಆಡಳಿತ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ, ತಾಜ್‌ ವೆಸ್ಟೆಂಡ್‌ನಲ್ಲಿ 2 ರೂಮ್‌ಗಳನ್ನು ಬುಕ್‌ ಮಾಡಿಸಿದ್ದಾರೆ. ಅದಕ್ಕೆ ವರ್ಷಕ್ಕೆ ₹2 ಕೋಟಿ ಬಾಡಿಗೆ ನೀಡುತ್ತಿದ್ದಾರೆ. ಸಚಿವರಿಗೂ ಅಲ್ಲೇ ಎರಡೆರಡು ಕೊಠಡಿಗಳನ್ನು ಕೊಡಿಸಿ’ ಎಂದು ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.

ಆಗ ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್, ‘ನನ್ನನ್ನು ಏಕೆ ಬಿಟ್ರಿ. ನನಗೂ ಎರಡು ಕೊಠಡಿಗಳನ್ನು ಕೊಡಿಸಿ. ಗೆಳೆಯರ ಜತೆಗೆ ಸಂಜೆ ಏನೇನೋ ಮಾತುಕತೆ ನಡೆಸುವುದು ಇರುತ್ತದೆ’ ಎಂದು ಚಟಾಕಿ ಹಾರಿಸಿದರು. ಯಡಿಯೂರಪ್ಪ ನಕ್ಕು ತಲೆಯಾಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !