ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭದ್ರತೆಗೇ ಮೊದಲ ಆದ್ಯತೆ: ಬಿ.ವೈ.ರಾಘವೇಂದ್ರ

ಗೆಲುವು ಖಾತ್ರಿ ಎಂದ ಮಧು ಬಂಗಾರಪ್ಪ
Last Updated 30 ಏಪ್ರಿಲ್ 2019, 15:47 IST
ಅಕ್ಷರ ಗಾತ್ರ

ಐದು ತಿಂಗಳ ಹಿಂದಷ್ಟೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸೆಣಸಿದ್ದ ಮಾಜಿ ಮುಖ್ಯಮಂತ್ರಿಗಳ ಪುತ್ರರು ಈ ಸಾರ್ವತ್ರಿಕ ಚುನಾವಣೆಯಲ್ಲೂ ಮತ್ತೆ ಮುಖಾಮುಖಿಯಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಎಸ್‌.ಬಂಗಾರಪ್ಪ ಪುತ್ರ ಎಸ್.ಮಧು ಬಂಗಾರಪ್ಪ ಅವರ ಮಧ್ಯೆ ತೀವ್ರ ಪೈಪೋಟಿ ಇದೆ. 2014ರ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಕಂಡಿದ್ದ ಬಿಜೆಪಿಗೆ ಉಪ ಚುನಾವಣೆಯ ಮೈತ್ರಿ ಹೊಸ ಸವಾಲು ಹುಟ್ಟುಹಾಕಿತ್ತು. ಈಗ ಮೈತ್ರಿ ಮತ್ತಷ್ಟು ಗಟ್ಟಿಗೊಂಡಿದೆ. ಇಬ್ಬರ ಮಧ್ಯದ ಮತ್ತೊಂದು ಹೋರಾಟ ಸಾಕಷ್ಟು ಕುತೂಹಲ ಕೆರಳಿಸಿದೆ.

ದೇಶದ ಭದ್ರತೆಗೇ ಮೊದಲ ಆದ್ಯತೆ:ಬಿ.ವೈ.ರಾಘವೇಂದ್ರ

* 2014ರ ಚುನಾವಣೆಗೆ ಹೋಲಿಸಿದರೆ ಉಪ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಾಗಿತ್ತಲ್ಲಾ?

ಉಪ ಚುನಾವಣೆಯಲ್ಲಿ ಗೆದ್ದ ಸಂಸದರ ಅವಧಿ ಕೇವಲ ನಾಲ್ಕು ತಿಂಗಳು ಇದ್ದ ಕಾರಣ ಜನರು ಅಂತಹ ಉತ್ಸಾಹ ತೋರಲಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 25ರಿಂದ 30 ಸಾವಿರದಷ್ಟು ಕಡಿಮೆ ಮತದಾನವಾಗಿತ್ತು. ಆ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಆದರೆ, ಈ ಚುನಾವಣೆ ವಿಭಿನ್ನ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಆಯ್ಕೆಯಾದರೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾರೆ. ದುಬೈನಲ್ಲಿ ನೆಲೆಸಿರುವ ಬೈಂದೂರಿನ ಹಲವು ಜನರು ಮತಹಾಕಲೆಂದೇ ಬರುತ್ತಿದ್ದಾರೆ. ಇದು ಮೋದಿ, ಬಿಜೆಪಿ ಮೇಲೆ ಜನರು ಇಟ್ಟಿರುವ ನಂಬಿಕೆ.

* ‘ಮೈತ್ರಿ’ ಎದುರು ಈ ಬಾರಿ ಹ್ಯಾಟ್ರಿಕ್‌ ಗೆಲುವು ಸಾಧ್ಯವೇ?

ಬಿಜೆಪಿ ಗೆಲುವು ಮತದಾರರ ಗೆಲುವು. ಒಂದು ತಿಂಗಳಿನಿಂದ ಕಾರ್ಯಕರ್ತರು ಶ್ರಮಪಡುತ್ತಿದ್ದಾರೆ. ಪ್ರತಿ ಬೂತ್ ತಲುಪಿದ್ದಾರೆ. ದೇಶದ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಈ ಬಾರಿಯೂ ಬಿಜೆಪಿ ಗೆಲ್ಲಿಸುತ್ತಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಶರಣಾಗಿದೆ. ಸ್ವಾಭಿಮಾನಿ ಕಾಂಗ್ರೆಸ್ ಮತದಾರರು ದೇಶದ ದೃಷ್ಟಿಯಿಂದ ಈ ಬಾರಿ ಬಿಜೆಪಿ ಬೆಂಬಲಿಸುವರು.

* ಮೋದಿ, ದೇಶದ ಭದ್ರತೆ ವಿಷಯಗಳೇ ಪ್ರಾಮುಖ್ಯ ಪಡೆದಿವೆಯಲ್ಲ?

ಸ್ವಾತಂತ್ರ್ಯಾ ನಂತರ ಮೊದಲ ಬಾರಿ ದೇಶದ ಪ್ರಧಾನಿ ಯಾರಾಗಬೇಕು ಎಂಬ ವಿಷಯದ ಮೇಲೆ ಚುನಾವಣೆ ನಡೆಯುತ್ತಿದೆ. ಈಗಿನ ಸನ್ನಿವೇಶದಲ್ಲಿ ಸಮರ್ಥ ಪ್ರಧಾನಿ ಆಯ್ಕೆ ಅನಿವಾರ್ಯ. ಅಂತಹ ಸಾಮರ್ಥ್ಯ ಮೋದಿ ಅವರಲ್ಲಿದೆ. ಸ್ಥಳೀಯ ವಿಚಾರಗಳ ಜತೆ ರಾಷ್ಟ್ರದ ಭದ್ರತೆಯೂ ಮುಖ್ಯ ಎಂದು ಜನರು ಮನಗಂಡಿದ್ದಾರೆ.

* ಜನರು ನಿಮಗೇ ಏಕೆ ಮತಹಾಕಬೇಕು?

ಹಿಂದಿನ ಚುನಾವಣೆಗಳಲ್ಲಿ ಗೆದ್ದ ಮೇಲೆ ನುಡಿದಂತೆ ನಡೆದಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಹೊಸ ಹೆದ್ದಾರಿಗಳು, ಹೊಸ ರೈಲು ಮಾರ್ಗಗಳಿಗೆ ಅನುಮೋದನೆ ಕೊಡಿಸಿದ್ದೇವೆ. ಭದ್ರಾವತಿ ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಣಿ ಭೂಮಿ ಮಂಜೂರಾಗಿದೆ. ಹುಲಿ, ಸಿಂಹಧಾಮಕ್ಕೆ 130 ಹೆಕ್ಟೇರ್ ಭೂಮಿ ಮಂಜೂರು ಮಾಡಿಸಲಾಗಿದೆ. ತುಮರಿ ಸೇತುವೆ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ. ಬಗರ್‌ಹುಕುಂ, ಅರಣ್ಯಭೂಮಿ ಹೋರಾಟ, ಕೇಂದ್ರ ಸರ್ಕಾರದ ಸಾಧನೆಗಳು, 7 ಶಾಸಕರ ಅಭಿವೃದ್ಧಿ ಕೆಲಸಗಳು ಬೆನ್ನಿಗಿವೆ. ಜಿಲ್ಲೆಗೆ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಜನರು ಮತ ಹಾಕುತ್ತಾರೆ. ನನ್ನ ಗೆಲುವಿನ ಮೂಲಕ ಮೋದಿ ಅವರ ಕೈ ಬಲಪಡಿಸುತ್ತಾರೆ.

ಅಭೂತಪೂರ್ವ ಮೈತ್ರಿ, ಗೆಲುವು ಖಾತ್ರಿ: ಮಧು ಬಂಗಾರಪ್ಪ

* ಉಪ ಚುನಾವಣೆಯಲ್ಲಿ ‘ಮೈತ್ರಿ’ ಇದ್ದರೂ ಸೋಲು ಏಕೆ?

ಉಪ ಲೋಕಸಭಾ ಚುನಾವಣೆಯ ಸ್ಪರ್ಧೆ ಅನಿರೀಕ್ಷಿತ. ನಾಲ್ಕು ತಿಂಗಳಿಗೆ ಸೀಮಿತವಾಗಿ ಎದುರಾದ ಉಪ ಸಮರಕ್ಕೆ ಇಳಿಯಬೇಕು ಎಂದು ಎರಡೂ ಪಕ್ಷಗಳ ಮುಖಂಡರು ಸೂಚಿಸಿದ್ದರು. ಅವರ ಒತ್ತಾಸೆಗೆ ಇಲ್ಲ ಎನ್ನಲಾಗದೆ ಸ್ಪರ್ಧೆಗೆ ಇಳಿದೆ. ಆಗ ಸಿಕ್ಕಿದ್ದು ಕೇವಲ 13 ದಿನಗಳು. ಅಲ್ಲದೆ, ಕಾಂಗ್ರೆಸ್ ಒಂದು ದೊಡ್ಡ ಪರಿವಾರ. ತೆನೆಹೊತ್ತ ಮಹಿಳೆಗೆ ಆ ಮತಗಳನ್ನು ಪರಿವರ್ತಿಸಲು ಸ್ವಲ್ಪ ಸಮಯ ಬೇಕಿತ್ತು.

* ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿಯಲ್ಲೇ ಒಮ್ಮತ ಇಲ್ಲವಲ್ಲ?

ಈಗ ಎಲ್ಲ ಸರಿಯಾಗಿದೆ. ಹಲವು ದಶಕಗಳು ಪರಸ್ಪರ ವಿರುದ್ಧ ಸೆಣಸಿದ್ದ ನಾಯಕರು ಒಟ್ಟಿಗೆ ಹೋಗಲು ಒಂದಷ್ಟು ಮಾನಸಿಕ ಸಿದ್ಧತೆಬೇಕಿತ್ತು. ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಆದರೆ, ಒಟ್ಟಿಗೆ ಹೋಗಿರಲಿಲ್ಲ. ಈಗ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ. ಬೈಂದೂರಿನಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು 50 ಸಾವಿರ ಮತ ಕೊಡಿಸಿದ್ದಾರೆ. ಬಿಜೆಪಿಗೆ ಬಿದ್ದ ಮತಗಳು 5 ಲಕ್ಷಕ್ಕೆ ನಿಂತಿದೆ.

* ಜನರು ನಿಮಗೇ ಏಕೆ ಮತಹಾಕಬೇಕು?

ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರ 10 ವರ್ಷಗಳು ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಯಾವ ಕೆಲಸವನ್ನೂ ಮಾಡಿಲ್ಲ. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಗೆ ಸಂಸತ್‌ನಲ್ಲಿ ಪ್ರಶ್ನಿಸಿಲ್ಲ. ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿಲ್ಲ. ಭದ್ರಾವತಿ ವಿಐಎಸ್‌ಎಲ್‌, ಎಂಪಿಎಂ ಕಾರ್ಖಾನೆಗಳು ಚುನಾವಣಾ ಸಮಯದಲ್ಲಷ್ಟೇ ಅವರಿಗೆ ನೆನಪಾಗುತ್ತವೆ. ವಿಐಎಸ್‌ಎಲ್‌ ಪುನರುಜ್ಜೀವನಕ್ಕೆ ಕ್ರಮ ಕೈಗೊಂಡಿಲ್ಲ. ತುಮರಿ ಸೇತುವೆ ವಿಷಯದಲ್ಲೂ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಾಗ ಬಿಜೆಪಿ ನಾಯಕರು, ಶಾಸಕರು ಹರಿಯಾಣ ರೆಸಾರ್ಟ್‌ನಲ್ಲಿ ಚಳಿಗೆ ಬೆಂಕಿ ಕಾಯಿಸುತ್ತಿದ್ದರು. ನನಗೆ ಮತ ಹಾಕಿದರೆ ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಕ್ಷೇತ್ರದಲ್ಲೇ ಇದ್ದು, ಮಾದರಿ ಕ್ಷೇತ್ರವಾಗಿ ಪರಿವರ್ತಿಸುವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಕಾರಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

* ‘ಪ್ಯಾಕೇಜ್‌ ಅಭ್ಯರ್ಥಿ’ ಎಂಬ ಆರೋಪ ಇದೆಯಲ್ಲ?

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಾಗ ಬೇಸರವಾಗಿದ್ದು ನಿಜ. ವಿದೇಶಕ್ಕೆ ಹೋಗಿದ್ದಾಗಲೇ ಉಪ ಚುನಾವಣೆ ಘೋಷಣೆಯಾಗಿತ್ತು. ಮೈತ್ರಿ ಮುಖಂಡರ ಕರೆಗೆ ಓಗೊಟ್ಟು ವಾಪಸ್ ಬಂದೆ. ನಾನುವಿದೇಶದಲ್ಲೇ ನೆಲೆಸಿದ್ದೇನೆ ಎಂಬಂತೆ ಬಿಜೆಪಿ ಬಿಂಬಿಸಿತು. ಉಪ ಚುನಾವಣೆಯಲ್ಲಿ ಸೋಲು ಕಂಡರೂ ಜಿಲ್ಲೆಯ ಏತನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಸಲು ಶ್ರಮಿಸಿರುವೆ. ಇದನ್ನು ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ‘ರೈಲು’ ಬಿಡುವುದೇ ಕಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT