ಬೆಳಗಾವಿ: ಕಣದಲ್ಲಿ 57 ಅಭ್ಯರ್ಥಿಗಳು, ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಬುಧವಾರ, ಏಪ್ರಿಲ್ 24, 2019
23 °C

ಬೆಳಗಾವಿ: ಕಣದಲ್ಲಿ 57 ಅಭ್ಯರ್ಥಿಗಳು, ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

Published:
Updated:

ಬೆಳಗಾವಿ: ರಾಜ್ಯದಲ್ಲಿಯೇ ಅತಿ ಹೆಚ್ಚು 57 ಅಭ್ಯರ್ಥಿಗಳು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಸ್ಪರ್ಧಾಳುಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯ ನಡುವೆಯೇ ನೇರ ಹಣಾಹಣಿ ನಡೆಯಲಿದೆ.

ಹಾಲಿ ಸಂಸದ, ಬಿಜೆಪಿಯ ಸುರೇಶ ಅಂಗಡಿ ಲಿಂಗಾಯತ– ಬಣಜಿಗ ಸಮುದಾಯಕ್ಕೆ ಸೇರಿದವರು. ಸತತ ಮೂರು ಸಲ ಗೆದ್ದು, ನಾಲ್ಕನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿದ್ದ ಜಗದೀಶ ಮೆಟಗುಡ್ಡ ಅವರು ಕೂಡ ಪಕ್ಷಕ್ಕೆ ಮರಳಿ ಬಂದಿರುವುದು ಅಂಗಡಿ ಅವರಿಗೆ ಆನೆ ಬಲ ತಂದು ಕೊಟ್ಟಂತಾಗಿದೆ.

ಇದನ್ನೂ ಓದಿ: ಸಂದರ್ಶನ: ‘ಮೋದಿ ಅಲೆಯ ಜೊತೆ ನನ್ನ ಕೆಲಸವೂ ನನಗೆ ಶ್ರೀರಕ್ಷೆ’– ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ

ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರು ಹಾಗೂ ಮರಾಠರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ತಾನು ಇಷ್ಟು ವರ್ಷಗಳ ಕಾಲ ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಎನ್ನುವ ಲೆಕ್ಕಾಚಾರದಲ್ಲಿ ಅವರಿದ್ದಾರೆ.

ಕಾಂಗ್ರೆಸ್‌ ಗುಂಪುಗಾರಿಕೆ ಸಮಸ್ಯೆ: ಪ್ರತಿಸ್ಪರ್ಧಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯ ಸಮಸ್ಯೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಗುಂಪುಗಾರಿಕೆಯಿಂದಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ವಿಫಲರಾಗಿದ್ದಾರೆ. ಅಳೆದು ತೂಗಿ ಆಯ್ಕೆಯಾಗಿರುವ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ, ಬಹುಪಾಲು ಜನರಿಗೆ ‘ಅಪರಿಚಿತರಾಗಿದ್ದಾರೆ’. ಮತದಾರರಿಗೆ ಅಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರಿಗೂ ‘ಅಚ್ಚರಿ’ ಅಭ್ಯರ್ಥಿಯಾಗಿದ್ದಾರೆ.

ಇದನ್ನೂ ಓದಿ: ರಮೇಶ ಬಿಜೆಪಿಗೆ ಹೋದರೆ ಪರಿಸ್ಥಿತಿಯೇ ಬೇರೆ: ಅಣ್ಣನಿಗೆ ಸತೀಶ ಜಾರಕಿಹೊಳಿ ಎಚ್ಚರಿಕೆ​

ಸಾಧುನವರ ಅವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ತಮ್ಮ ಸಮಾಜದ ಮತಗಳ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾದ ಮುಸ್ಲಿಂ, ದಲಿತರು ಹಾಗೂ ಹಿಂದುಳಿದ ವರ್ಗದವರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಮತಗಳ ಈ ಸಮೀಕರಣ ಫಲಿಸಿದರೆ ಅಂಗಡಿ ಅವರನ್ನು ಸುಲಭವಾಗಿ ಮಣಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಅವರಿದ್ದಾರೆ.

ಇದನ್ನೂ ಓದಿ: ಸಾಧುನವರ ಪ್ರಚಾರಕ್ಕೆ ಬಲತುಂಬಿದ ಲಕ್ಷ್ಮಿ!

ಒಳಹೊಡೆತದ ಆತಂಕ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳು ದೊರೆತಿದ್ದವು. ಅದರ ಹಿಂದೆ ಶಾಸಕ ರಮೇಶ ಜಾರಕಿಹೊಳಿ ಅವರ ಶ್ರಮ ಅಡಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ರಮೇಶ ಅವರು ಲಕ್ಷ್ಮಿ ಅವರ ಜೊತೆಗೆ ಅಷ್ಟೇ ಅಲ್ಲ, ಪಕ್ಷದ ಮೇಲೂ ಮುನಿಸಿಕೊಂಡಿದ್ದಾರೆ. ಒಮ್ಮೆಯೂ ಪ್ರಚಾರಕ್ಕೆ ಬಂದಿಲ್ಲ. ಇದು ಕಾಂಗ್ರೆಸ್‌ ಪಾಳೆಯದಲ್ಲಿ ‘ಆತಂಕ’ ಸೃಷ್ಟಿಸಿದೆ. ರಮೇಶ ಒಳಗೊಳಗೆ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಗುಮಾನಿಯು ಪಕ್ಷದ ಮುಖಂಡರ ನಿದ್ದೆಗೆಡಿಸಿದೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಲೋಕಸಭಾ ಕ್ಷೇತ್ರ ದರ್ಶನ: ಬೆಳಗಾವಿ 

ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆಯಿಲ್ಲ. ಜೆಡಿಎಸ್‌ ಜೊತೆ ಮಾಡಿಕೊಳ್ಳಲಾದ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಪ್ರಯೋಜನ ದಕ್ಕಿದಂತಾಗಿಲ್ಲ. ತನ್ನ ಬಲದ ಮೇಲೆಯೇ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ.

* ‘ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಜೊತೆಗೆ 15 ವರ್ಷಗಳ ಕಾಲ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಕೈ ಹಿಡಿಯಲಿವೆ. ಸ್ಮಾರ್ಟ್‌ ಸಿಟಿ ಯೋಜನೆಗೆ ಬೆಳಗಾವಿ ಸೇರ್ಪಡೆಗೊಳಿಸಿರುವುದು, ರೈಲ್ವೆ ಮೇಲ್ಸೇತುವೆ, ಪಾಸ್‌ಪೋರ್ಟ್‌ ಕಚೇರಿ, ರಫ್ತು ನಿರ್ದೇಶನಾಲಯ ಕಚೇರಿ ಸ್ಥಾಪನೆ, ಉಡಾನ್‌ ಯೋಜನೆಯಡಿ ವೈಮಾನಿಕ ಸಂಪರ್ಕ ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದೇನೆ. ಇವುಗಳನ್ನು ನೋಡಿ ಜನರು ನನಗೆ ಮತ ಹಾಕಲಿದ್ದಾರೆ’

– ಸುರೇಶ ಅಂಗಡಿ, ಬಿಜೆಪಿ ಅಭ್ಯರ್ಥಿ

ಇದನ್ನೂ ಓದಿ: ಅಂದು ಬಂಡಾಯ, ಈಗ ‘ಸಾಧು’ ಅಭ್ಯರ್ಥಿ

* ‘ಸುರೇಶ ಅಂಗಡಿ ಅವರು ಪ್ರತಿ ಸಲ ಅವರಿವರ ಹೆಸರಿನಲ್ಲಿಯೇ ಮತ ಕೇಳುತ್ತಾರೆ. ಅಟಲ್‌ ಬಿಹಾರಿ ವಾಜಪೇಯಿ, ಬಿ.ಎಸ್‌. ಯಡಿಯೂರಪ್ಪ, ಮೋದಿ ಅವರ ಹೆಸರು ಹೇಳಿಕೊಂಡು ಗೆಲ್ಲುತ್ತಾ ಬಂದಿದ್ದಾರೆ. ಆದರೆ, ಅವರು ಬೆಳಗಾವಿ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಹೇಳಿ ಮತಯಾಚಿಸಲಿ. ಆಗ ಗೊತ್ತಾಗುತ್ತದೆ ಬಂಡವಾಳ’

– ಡಾ.ವಿ.ಎಸ್‌. ಸಾಧುನವರ, ಕಾಂಗ್ರೆಸ್‌ ಅಭ್ಯರ್ಥಿ

ಇದನ್ನೂ ಓದಿ: ಕ್ಷೇತ್ರದ ನೆನಪು: 17 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಖಾನಗೌಡರ!

* ‘ಅಭ್ಯರ್ಥಿ ಹಾಗೂ ಪಕ್ಷವನ್ನು ನೋಡಿ ಮತ ಚಲಾಯಿಸುತ್ತೇನೆ. ಯುವಕರಿಗೆ ಉದ್ಯೋಗ, ಶಿಕ್ಷಣ ನೀಡುವ ಸರ್ಕಾರ ರಚನೆಯಾಗಬೇಕು’.

– ಅಂಕಿತ ಡೋಂಗ್ರೆ, ಕಾಲೇಜ್‌ ವಿದ್ಯಾರ್ಥಿ

‘ಸ್ಥಳೀಯ ಪ್ರದೇಶ ಹಾಗೂ ದೇಶದ ಅಭಿವೃದ್ಧಿಗೆ ಒತ್ತು ನೀಡುವವರು ಆಯ್ಕೆಯಾಗಿ ಬರಲಿ. ದೇಶದ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸುವವರು ಸರ್ಕಾರ ರಚಿಸಲಿ’

– ಅಜಯ ಕಂಗ್ರಾಳಕರ, ವ್ಯಾಪಾರಿ 

 

ಲೋಕಸಭೆ ಚುನಾವಣೆ, ಬೆಳಗಾವಿ ಕಣದ ಬಗ್ಗೆ ಇನ್ನಷ್ಟು...

ಬೆಳಗಾವಿಗೆ ಹೆಚ್ಚುವರಿ ಮತ ಯಂತ್ರ, ವಿವಿಪ್ಯಾಟ್ ಹಂಚಿಕೆ

* ಬೀದರ್ ಮತ್ತು ಚಿಕ್ಕೋಡಿ: ಶತಾಯುಷಿ ಮತದಾರರಿಗೆ ‘ವಿವಿಐಪಿ’ ಟ್ರೀಟ್ಮೆಂಟ್- ಚುನಾವಣಾಧಿಕಾರಿ

ಅಂಧ ಮತದಾರರಿಗೆ ವಿಶೇಷ ಸೌಲಭ್ಯ; ಇವಿಎಂಗೆ ಬ್ರೈಲ್‌ ಲಿಪಿ ಸ್ಟಿಕ್ಕರ್‌!

* ಚುನಾವಣೆ; ಎಂಇಎಸ್‌ಗೆ ನೆಲೆಯೇ ಇಲ್ಲ !

ಕ್ಷೇತ್ರದ ನೆನಪು: ಬೆಳಗಾವಿಯ 2 ಸಂಸದರಿಗೆ ದಕ್ಕಿದ ಸಚಿವ ಸ್ಥಾನ ಭಾಗ್ಯ!

* ಸಂಸದ ಹುಕ್ಕೇರಿ, ಶಾಸಕ ರಮೇಶ ಜಾರಕಿಹೊಳಿ ಆಪ್ತರ ನಿವಾಸಗಳ ಮೇಲೆ ಐ.ಟಿ ದಾಳಿ

* ಬೆಳಗಾವಿಯಲ್ಲಿ ಉಪೇಂದ್ರ: ‘ಬದಲಾವಣೆಗಾಗಿ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ’

ಪ್ರಜಾವಾಣಿ ವಿಶೇಷ ಸಂದರ್ಶನಗಳು...

ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌
ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !