ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ₹1,054 ಕೋಟಿ ಬಿಡುಗಡೆ: ಕಂದಾಯ ಸಚಿವ ಆರ್‌.ಅಶೋಕ

ನೈಸರ್ಗಿಕ ವಿಕೋಪ: ಪರಿಹಾರಕ್ಕೆ ಪೂರ್ವ ಸಿದ್ಧತೆ
Last Updated 22 ಮೇ 2020, 9:51 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಮುಂಗಾರಿನಲ್ಲಿ ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪವನ್ನು ಎದುರಿಸಿ ಪರಿಹಾರಕ ಕಲ್ಪಿಸುವ ಉದ್ದೇಶದಿಂದ ಈಗಲೇ ತಯಾರಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಕ್ಕೆ ₹1,054 ಕೋಟಿ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿ, ರಾಜ್ಯ ನೈಸರ್ಗಿಕ ವಿಕೋಪ ಉಪಶಮನ ನಿಧಿ ಎಂಬ ಹೆಸರಿನಲ್ಲಿ ಈ ಹಣವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಹೇಳಿದರು.

ಪ್ರವಾಹ ಸಂಭಾವ್ಯ ಮತ್ತು ಭೂಕುಸಿತ ಉಂಟಾಗುವ ಜಿಲ್ಲೆಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಕೇಂದ್ರ, ಆಸ್ಪತ್ರೆ, ವಸತಿ, ಶೌಚಾಲಯ, ಸ್ನಾನದ ಮನೆ, ಆಹಾರ, ಆಪ್ತ ಸಲಹಾ ಕೇಂದ್ರಗಳನ್ನು ತೆರೆಯಲು ಈ ನಿಧಿಯಿಂದ ₹201.08 ಕೋಟಿ ಬಳಸಲು ಸೂಚಿಸಲಾಗಿದೆ. ಮುಂದಾಲೋಚನೆಯಿಂದ ಇಂತಹ ಕ್ರಮ ತೆಗೆದುಕೊಂಡಿರುವ ಪ್ರಧಾನಿಯವರು ಅಭಿನಂದನಾರ್ಹರು ಎಂದು ಅಶೋಕ ತಿಳಿಸಿದರು.

ಕೋವಿಡ್‌–19 ನಿಭಾಯಿಸುವ ಉದ್ದೇಶದಿಂದ ಆರೋಗ್ಯ, ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಕೇಂದ್ರ ಸರ್ಕಾರ ₹278.1 ಕೋಟಿ ಬಿಡುಗಡೆ ಮಾಡಿದೆ. ಇದಕ್ಕೆ ಎಷ್ಟು ಹಣ ಬಳಕೆ ಮಾಡಲಾಗಿದೆ ಮತ್ತು ಎಷ್ಟು ಹಣ ಉಳಿದಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಕಳೆದ ವರ್ಷದ ಪ್ರವಾಹದಿಂದ 6.25 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದೆ ರೈತರ ಖಾತೆಗೆ ₹1,185 ಕೋಟಿ ಜಮೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. 32,424 ಜನರಿಗೆ ತಲಾ ₹1 ಲಕ್ಷ, 11,307 ಜನರಿಗೆ ತಲಾ ₹ 2ಲಕ್ಷ, 4572 ಜನರಿಗೆ ತಲಾ ₹3 ಲಕ್ಷ, 656 ಜನರಿಗೆ ತಲಾ ₹ 4 ಲಕ್ಷ ಮತ್ತು 47 ಮಂದಿಗೆ ₹5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಕೋವಿಡ್‌ನಿಂದಾಗಿ ಕೆಲಸಕ್ಕೆ ಹಿನ್ನಡೆಯಾಗಿದೆ ಎಂದರು.

ಸುಮಾರು 12,677 ಜನ ಮೊದಲ ಕಂತಿನ ₹ 1 ಲಕ್ಷ ಪಡೆದೂ ಮನೆ ನಿರ್ಮಾಣದ ಕೆಲಸ ಆರಂಭಿಸಿಲ್ಲ. ಅಂತಹವರಿಗೆ ಜಿಲ್ಲಾಧಿಕಾರಿ, ಪಿಡಿಒಗಳು ಪತ್ರ ಬರೆದು ತಕ್ಷಣವೇ ಮನೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯ ತರಲು ಸೂಚಿಸಲಾಗಿದೆ ಎಂದು ಅಶೋಕ ಹೇಳಿದರು.

ಈವರೆಗೆ ಮನೆ ನಿರ್ಮಾಣ ಕಾರ್ಯಕ್ಕಾಗಿ ₹557.67 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಕೆಲವರು ಮನೆ ಪೂರ್ಣ ಆಗಿಲ್ಲ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT