ಶುಕ್ರವಾರ, ಜೂನ್ 5, 2020
27 °C

ಕೊರೊನಾ ವಿರುದ್ಧ ಹೋರಾಟ | ಮೈಸೂರಿನ ವೈದ್ಯೆಗೆ ಅಮೆರಿಕದಲ್ಲಿ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಮೈಸೂರಿನ ವೈದ್ಯೆಯೊಬ್ಬರಿಗೆ ಅಮೆರಿಕದಲ್ಲಿ ಗೌರವ ಸಲ್ಲಿಸಲಾಗಿದೆ.

ಅಮೆರಿಕದ ಕನೆಕ್ಟಿಕಟ್ ರಾಜ್ಯದ ಸೌತ್ ವಿಂಡ್ಸರ್‌ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ.ಉಮಾ ಮಧುಸೂದನ್‌ ಅವರ ಸೇವೆ ಗುರುತಿಸಿ ಅಲ್ಲಿನ ಜನರು ವಾಹನಗಳ ಬೃಹತ್‌ ಪೆರೇಡ್‌ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ 1990ರ ಬ್ಯಾಚ್‌ನ ವಿದ್ಯಾರ್ಥಿನಿಯಾಗಿರುವ ಉಮಾ ಕೆಲ ವರ್ಷಗಳಿಂದ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಮರಣ ಮೃದಂಗ’ ಬಾರಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿ ನಿಂತಿದ್ದಾರೆ.

ಉಮಾ ಅವರ ಮನೆಯ ಮುಂಭಾಗದಿಂದ ವಾಹನಗಳಲ್ಲಿ ಸಾಗಿದ ನೂರಾರು ಮಂದಿ ಧನ್ಯವಾದ ಅರ್ಪಿಸಿದರು. ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರು, ಸಾರ್ವಜನಿಕರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು.

ವಾಹನಗಳು ಸಾಲುಗಟ್ಟಿ ಸಾಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾನ್‌, ಸೈರನ್‌ ಮೊಳಗಿಸುತ್ತಾ ಸಾಗಿದ ವಾಹನಗಳು ಉಮಾ ಬಳಿ ತಲುಪಿದಾಗ ವೇಗ ತಗ್ಗಿಸಿವೆ. ವಾಹನಗಳಲ್ಲಿದ್ದವರು ಕೈಬೀಸುತ್ತಾ ಅಭಿನಂದನೆ ಸಲ್ಲಿಸಿದ ದೃಶ್ಯ ವಿಡಿಯೊದಲ್ಲಿದೆ. ‘ಉಮಾ ಮಧುಸೂದನ್‌ ಅವರು ಸೌತ್‌ ವಿಂಡ್ಸರ್‌ನ ಹೀರೊ’ ಎಂದು ಬರೆದ ಭಿತ್ತಿಪತ್ರಗಳನ್ನು ಕೆಲವರು ಪ್ರದರ್ಶಿಸಿದರು.

‘ಜೆಎಸ್‌ಎಸ್‌ ಅಕಾಡೆಮಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ವೈದ್ಯರನ್ನಾಗಿಸುವ ಜತೆಗೆ ಅವರನ್ನು ಸಾಮಾಜಿಕ ಕಳಕಳಿಯುಳ್ಳ ನಾಯಕರನ್ನಾಗಿಯೂ ಬೆಳೆಸುತ್ತದೆ. ಅದಕ್ಕೆ ಉಮಾ ಉತ್ತಮ ಉದಾಹರಣೆ’ ಎಂದು ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧಮಾ ಅಕಾಡೆಮಿ ತನ್ನ ಫೇಸ್‌ಬುಕ್‌ ಪುಟದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

‘ಸಂತಸವಾಯಿತು’
‘ಡಾ.ಉಮಾ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರು, ಅಲ್ಲಿನ ಸರ್ಕಾರಿ ಸಂಸ್ಥೆಗಳು ಕೃತಜ್ಞತೆ, ಗೌರವ ತೋರಿದ ರೀತಿ ನೋಡಿ ತುಂಬಾ ಸಂತೋಷವಾಯಿತು. ನಿಜಕ್ಕೂ ಸಾರ್ಥಕತೆಯನ್ನು ಕಂಡಂತಾಯಿತು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು