ಶುಕ್ರವಾರ, ಮೇ 29, 2020
27 °C

Covid-19 Karnataka Update | 67 ಹೊಸ ಪ್ರಕರಣ: ಬೆಂಗಳೂರಿನಲ್ಲಿ 250ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಬೆಂಗಳೂರು: ರಾಜ್ಯದಾದ್ಯಂತ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 67 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ಒಬ್ಬರು ಮೃತಪಟ್ಟಿದ್ದು, 13 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ. ಈ ಪೈಕಿ 864 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಮೃತಪಟ್ಟರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 556 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಬೆಂಗಳೂರಿನಲ್ಲಿ ಬುಧವಾರ 4 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಇಂದು ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 124 ಸೋಂಕಿತರು ಚೇತರಿಸಿಕೊಂಡಿದ್ದು, 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9 ಜನ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: 

ಉಳಿದಂತೆ ಮಂಡ್ಯದಲ್ಲಿ 8, ಕಲಬುರ್ಗಿಯಲ್ಲಿ 7, ಬೀದರ್‌ನಲ್ಲಿ 10, ಉತ್ತರ ಕನ್ನಡ 1, ಹಾಸನದಲ್ಲಿ 21, ದಕ್ಷಿಣ ಕನ್ನಡದಲ್ಲಿ 1, ಉಡುಪಿಯಲ್ಲಿ 6, ತುಮಕೂರಿನಲ್ಲಿ 4, ರಾಯಚೂರು 4, ಯಾದಗಿರಿಯಲ್ಲಿ 1 ಹೊಸ ಪ್ರಕರಣಗಳು ಪತ್ತೆಯಾಗಿವೆ.

ನಗರದಲ್ಲಿ ಒಂದೇ ಸಮನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಂಚನೆ ಪ್ರಕರಣದಲ್ಲಿ  ಬಂಧಿಸಲ್ಪಟ್ಟಿದ್ದ 30 ವರ್ಷದ ವ್ಯಕ್ತಿ ಹಾಗೂ 28 ವರ್ಷದ ಯುವಕನಿಗೆ ಸೋಂಕು ಇರುವುದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ. ಇದರಿಂದಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್‌ ಠಾಣೆಗೆ ಸೋಂಕು ನಿವಾರಕವನ್ನು ಸಿಂಪಡಿಸಿ, ಸೇವೆಗೆ ಅನುವು ಮಾಡಿಕೊಡಲಾಗಿದೆ. 

ಕೋಲ್ಕತ್ತದ 49 ವರ್ಷದ ಮಹಿಳೆಯ (ರೋಗಿ 701) ಸಂಪರ್ಕದಿಂದ ಇಬ್ಬರು ಸೋಂಕಿತರಾಗಿದ್ದಾರೆ. ಮಹಿಳೆ ಯಶವಂತಪುರದಲ್ಲಿ ವಾಸವಿದ್ದ ಪುತ್ರನ ಮನೆಗೆ ಬಂದಾಗ ಅನಾರೋಗ್ಯಕ್ಕೆ ಒಳಗಾಗಿ, ಕಮಲಾ ನೆಹರು ಎಕ್ಸ್‌ಟೆನ್ಶನ್‌ ಮಂಗಳಾ ನರ್ಸಿಂಗ್‌ ಹೋಮ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಅವರಿಗೆ ಸೋಂಕು ದೃಢಪಟ್ಟಿತ್ತು. ಇದರಿಂದ ನರ್ಸಿಂಗ್‌ ಹೋಮ್‌ಗೆ ಬೀಗ ಹಾಕಿ, ವೈದ್ಯರು ಸೇರಿದಂತೆ 13 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ ವೈದ್ಯರೊಬ್ಬರ ಕಟುಂಬದ ಸದಸ್ಯರಿಗೆ (31 ವರ್ಷದ ಮಹಿಳೆ) ಸೋಂಕು ಕಾಣಿಸಿಕೊಂಡಿದೆ. ಮಹಿಳೆ ವಾಸವಿದ್ದ ಪಕ್ಕದ ಮನೆಯ 40 ವರ್ಷದ ಪುರುಷನಿಗೂ ಸೋಂಕು ತಗುಲಿದೆ. ಈ ಇಬ್ಬರು ಸೋಂಕಿತರಿಂದ 14 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 

ಮೃತರ ಸಂಖ್ಯೆ 9ಕ್ಕೆ ಏರಿಕೆ: ಆನೇಕಲ್‌ನ ಹೆಬ್ಬಗೋಡಿಯಲ್ಲಿ 43 ವರ್ಷದ ಫಿಸಿಯೋಥೆರಪಿಸ್ಟ್‌ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಇದರಿಂದಾಗಿ ನಗರದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ತಮಿಳುನಾಡಿನ ವೆಲ್ಲೂರಿನಿಂದ ಬಂದ ಎರಡು ದಿನಗಳ ಬಳಿಕ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. 

‌ನಗರದಲ್ಲಿ ಸದ್ಯ 116 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 124 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು