ಶನಿವಾರ, ಸೆಪ್ಟೆಂಬರ್ 19, 2020
22 °C

ಕೋವಿಡ್‌-19| ಹೊರ ರಾಜ್ಯಗಳಿಂದ ಬಂದವರು ತಂದ ಸೋಂಕು; ಮುಂದಿದೆ ಅಗ್ನಿಪರೀಕ್ಷೆ !

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Corona maramma

ಬೆಂಗಳೂರು: ಕೋವಿಡ್–19‌ ಲಾಕ್‌ಡೌನ್‌ ಆರಂಭಗೊಂಡು ಎರಡು ತಿಂಗಳು (ಮಾರ್ಚ್‌22 ರಿಂದ ಮೇ 22) ಪೂರ್ಣಗೊಂಡಿದೆ.  ರಾಜ್ಯದಲ್ಲಿ ಅತ್ಯಂತ ಕಡಿಮೆ ಇದ್ದ ಸೋಂಕಿತರ ಸಂಖ್ಯೆ ಹೊರ ರಾಜ್ಯ/ ದೇಶಗಳ ಕನ್ನಡಿಗರು ತವರಿಗೆ ಮರಳಿದ್ದರಿಂದಾಗಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೋವಿಡ್‌ ನಿಭಾಯಿಸುವುದರ ಜತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಹಳಿಗೆ ತರಬೇಕಾದ ಮಹತ್ವದ ಜವಾಬ್ದಾರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಗಲೇರಿದೆ.

ಲಾಕ್‌ಡೌನ್ 3ನೇ ಹಂತ ಮುಗಿಯುವವರೆಗೆ ಪಾಸಿಟಿವ್‌ ಪ್ರತಿದಿನ ಸರಾಸರಿ 15 ರಿಂದ 20 ಇದ್ದ ಸಂಖ್ಯೆ ಈಗ 100ರ ಆಸುಪಾಸು ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.

‘ಈವರೆಗೆ ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದ್ದ ಸರ್ಕಾರಕ್ಕೆ ಮುಂದೆ ದೊಡ್ಡ ಅಗ್ನಿಪರೀಕ್ಷೆಯೇ ಕಾದಿದೆ. ಕೇರಳದಂತಹ ಕಡಿಮೆ ಜನಸಂಖ್ಯೆಯ (3.44 ಕೋಟಿ) ಸಣ್ಣ ರಾಜ್ಯಗಳಲ್ಲಿ ಪರಿಸ್ಥಿತಿ ನಿಭಾಯಿಸುವುದು ಸುಲಭ. ಆದರೆ, ಕರ್ನಾಟಕದಂತದ ವೈವಿಧ್ಯತೆಯಿಂದ ಕೂಡಿದ ದೊಡ್ಡ ರಾಜ್ಯವನ್ನು (ಜನಸಂಖ್ಯೆ 6.7 ಕೋಟಿ) ನಿಭಾಯಿಸುವುದು ಸುಲಭದ ಮಾತಲ್ಲ. ಅದರೂ ಬೆಂಗಳೂರು ನಗರದಲ್ಲಿ (ಜನಸಂಖ್ಯೆ 1.25 ಕೋಟಿ) ಈಗಲೂ ಕೋವಿಡ್‌ ನಿಯಂತ್ರಣದಲ್ಲೇ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆರಂಭದಿಂದಲೂ ಕೋವಿಡ್‌ ಹರಡದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿತ್ತು. ಬಡವರಿಗೆ ಆಹಾರ ಧಾನ್ಯ ವಿತರಿಸಲಾಯಿತು. ಶ್ರಮಿಕರು ಮತ್ತು ರೈತರಿಗೆ ಮೂರು ಹಂತದ ಆರ್ಥಿಕ ಪ್ಯಾಕೇಜ್‌ ಪ್ರಕಟಿಸಲಾಯಿತು. ಆದಾಯ ಇಲ್ಲದೆ, ಕಂಗೆಟ್ಟಿದ್ದ ಶ್ರಮಿಕ ವರ್ಗ ಕೊಂಚ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸೋಂಕಿತರ ಪರೀಕ್ಷೆ ಮತ್ತು ಚಿಕಿತ್ಸಾ ವ್ಯವಸ್ಥೆ ಕಟ್ಟುನಿಟ್ಟಾಗಿ ನಡೆಯುತ್ತಿದೆ. ತಜ್ಞರ ಸಮಿತಿ ಸಲಹೆ ಪಡೆದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಲಾಯಿತು. ‘ಎಲ್ಲ ಆಸ್ಪತ್ರೆಗಳಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವಂತೆ ಆರೋಗ್ಯ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಐಸೋಲೇಷನ್‌ ವಾರ್ಡ್‌, ಐಸಿಯು ಮತ್ತು ವೆಂಟಿಲೇಟರ್‌ಗಳು ಖಾಸಗಿ ಹೈಟೆಕ್‌ ಆಸ್ಪತ್ರೆಗಳಿಗೆ ಸಮಾನವಾಗಿವೆ’ ಎಂದು ಫೌಂಡೇಷನ್‌ ಫಾರ್‌ ಈಕ್ವಾಲಿಟಿಯ ನಿರ್ದೇಶಕ ಡಾ.ಥುಪ್ಪಿಲ್ ವೆಂಕಟೇಶ್‌ ಹೇಳಿದ್ದಾರೆ.

ಬಡವರು, ಶ್ರಮಿಕರು, ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ತಲುಪಿಸುವಲ್ಲಿ ಸರ್ಕಾರ, ಖಾಸಗಿ ಸಂಘ– ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ. ಹೀಗಾಗಿ ಯಾರೂ ಹಸಿವಿನಿಂದ ಬಳಲುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿಲ್ಲ. ಆದರೆ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌– ಬಿಜೆಪಿ ಪಕ್ಷಗಳು ರಾಜಕೀಯವಾಗಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. 

ಕೇರಳ ಮತ್ತಿತರ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಲಾಯಿತು. ಆದರೆ, ರಾಜ್ಯ ಸರ್ಕಾರ ತನ್ನ ನೌಕರರಿಗೆ ಏಪ್ರಿಲ್‌ ತಿಂಗಳ ಪೂರ್ಣ ವೇತನ ನೀಡಿದೆ. ನಷ್ಟದಲ್ಲಿ ಇರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೂ ಪೂರ್ಣ ವೇತನ ನೀಡಲು ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಇಚ್ಛಾಶಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು