ಶನಿವಾರ, ಏಪ್ರಿಲ್ 17, 2021
23 °C
ಯೋಗಾ ಯೋಗ

ಬೆನ್ನೆಲುಬು ವಿಶ್ರಾಂತಿಗೆ ಯೋಗದಂಡಾಸನ

ಜಿ.ಎನ್. ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಯೋಗದಂಡ ಎಂದರೆ ಯೋಗಿಗಳು ಉಪಯೋಗಿಸುವ ದಂಡ. ಕಟ್ಟಿಗೆಯಿಂದ ಮಾಡಿದ ಊರುಗೋಲು/ ಆಸರೆಗೋಲು ಇದಾಗಿದೆ. ಯೋಗಿಗಳು ಕುಳಿತಾಗ ದಂಡವನ್ನು ಕಂಕುಳ ಕೆಳಗೆ/ತೋಳಿನ ಕೆಳಭಾಗಕ್ಕೆ ಆಸರೆಯಾಗಿಟ್ಟುಕೊಳ್ಳುತ್ತಾರೆ. ಧ್ಯಾನ, ಜಪ ಹಾಗೂ ಹೆಚ್ಚುಕಾಲ ಕುಳಿತುಕೊಳ್ಳುವ ಸಂದರ್ಭಗಳಲ್ಲಿ ಇದನ್ನು ಬಳಕೆ ಮಾಡುತ್ತಾ ಬಂದಿದ್ದಾರೆ.

ಆಸನ ಅಭ್ಯಾಸದಲ್ಲಿ ಕಾಲೊಂದರ ಪಾದವು ಕಂಕುಳ ಕೆಳಗೆ ಬರುವಂತಿರಿಸಿ ದಂಡದಂತೆ ಬಳಕೆಯಾಗುತ್ತದೆ. ಆದ್ದರಿಂದ, ಇದಕ್ಕೆ ಯೋಗದಂಡಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ
ಕಾಲುಗಳನ್ನು ಚಾಚಿಟ್ಟು ನೆಲದ ಮೇಲೆ ಕುಳಿತುಕೊಳ್ಳಿ. ಬಲ ಮಂಡಿಯನ್ನು ಮಡಿಚಿ ಬಲ ಸೊಂಟದ ಪಕ್ಕ ಪಾದವನ್ನು ಮೇಲ್ಮೊಗವಾಗಿರಿಸಿ, ಈ ಹಂತವು ಅರ್ಧವೀರಾಸನ ಸ್ಥಿತಿಯಲ್ಲಿರುತ್ತದೆ. ನಂತರ, ಎಡ ಮಂಡಿಯನ್ನು ಮಡಚಿ ಕೈಗಳಿಂದ ಪಾದವನ್ನು ಹಿಡಿದು ಮಂಡಿಯ ಬಳಿಗೆ ತಂದು ಸರಳ ಉಸಿರಾಟ ನಡೆಸಿ. ಮುಂಡವನ್ನು ಬಲಕ್ಕೆ ತಿರುಗಿಸಿ. ಉಸಿರನ್ನು ಹೊರದೂಡುತ್ತಾ ಪಾದವನ್ನು ಮೇಲೆತ್ತಿ ಎದೆಯತ್ತ ಸೆಳೆಯಿರಿ. ಪಾದವನ್ನು ಎದೆಗೆ ತಾಗಿಸಿಟ್ಟು, ಒಂದೆರೆಡು ಸರಳ ಉಸಿರಾಟ ನಡೆಸಿ.

ಬಳಿಕ, ಎಡಗಾಲನ್ನು ಪಕ್ಕಕ್ಕೆ ಸರಿಸಿಟ್ಟು, ಎಡಪಾದವನ್ನು ಕಂಕುಳ ಕೆಳಗೆ ಸೇರಿಸಿಡಿ(ಈ ಹಂತದಲ್ಲಿ ಸೊಂಟವನ್ನು ಬಲಕ್ಕೆ ಹೆಚ್ಚು ಹೆಚ್ಚು ತಿರುಗಿಸಿಟ್ಟು, ಎಡ ತೋಳಿನಿಂದ ಎಡಪಾದವನ್ನು ಹಿಂದಕ್ಕೊತ್ತಿದರೆ ಸುಲಭವಾಗುತ್ತದೆ). ಎಡ ತೊಡೆಯ ಹೊರಬದಿಯು ನೆಲಕ್ಕೆ ತಾಗಿದ್ದು, ಕೈಗಳು ಬೆನ್ನನ್ನು ಸುತ್ತುವರಿದು, ಬೆರಳುಗಳನ್ನು ಹೆಣೆದಿಡಿಯಿರಿ.

ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 20ರಿಂದ 30 ಸೆಕೆಂಡು ನೆಲೆಸಿ. ಅವರೋಹಣ ಮಾಡುವಾಗ ಕಾಲನ್ನು ನಿಧಾನವಾಗಿ ಬಿಡಿಸಿ ಮುಂದೆ ಚಾಚಿಟ್ಟು, ವಿರಮಿಸಿ. ಬಳಿಕ, ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

ಫಲಗಳು

* ಮಂಡಿಗಳು ಹಾಗೂ ಕಾಲ್ಗಿಣ್ಣುಗಳು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಹೊಂದುತ್ತವೆ.

* ಬೆನ್ನೆಲುಬಿಗೆ ಹೆಚ್ಚು ವಿಶ್ರಾಂತಿಯನ್ನು ಒದಗಿಸುತ್ತದೆ.

* ದೇಹವನ್ನು ಹೆಚ್ಚು ಸಡಿಲಗೊಳಿಸಿ ಹಗುರಗೊಳಿಸುತ್ತದೆ.

* ಭುಜ ಹಾಗೂ ಸೊಂಟಗಳ ನರ ಮತ್ತು ಸ್ನಾಯುಗಳು ಉತ್ತಮವಾಗಿ ಸೆಳೆಯಲ್ಪಟ್ಟು ಚೈತನ್ಯ ಪಡೆಯುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು