ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರು ತುಂಬಾ ಆತುರದಲ್ಲಿದ್ದಾರೆ: ಕಾನೂನು ತಜ್ಞರ ಅಭಿಮತ

ಚರ್ಚೆಯ ಜಗ್ಗಾಟ ಎಷ್ಟು ಸರಿ
Last Updated 20 ಜುಲೈ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಬಹುಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಗಡುವಿನ ಮೇಲೆ ಗಡುವು ಕೊಟ್ಟರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ವಿರೋಧ ಪಕ್ಷ ಬಿಜೆಪಿ ಟೀಕಿಸುತ್ತಿದೆ. ಇದಕ್ಕೆ ಪ್ರತಿಯಾಗಿ, ‘ವಿಶ್ವಾಸ ಮತದ ನಿರ್ಣಯದ ಮೇಲೆ ಸುದೀರ್ಘ ಚರ್ಚೆಗೆ ಅವಕಾಶ ಬೇಕು’ ಎಂದು ಮೈತ್ರಿ ಕೂಟ ಪ್ರತಿಪಾದಿಸುತ್ತಿದೆ. ಈ ಬೆಳವಣಿಗೆಗಳ ಪರಿಣಾಮವೇನು ಎಂಬ ಬಗ್ಗೆ ಕಾನೂನು ತಜ್ಞರು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿರುವಾಗ ರಾಜ್ಯಪಾಲರು ಗಡುವು ವಿಧಿಸಬಹುದೇ?

ಬಿ.ವಿ.ಆಚಾರ್ಯ: ಖಂಡಿತಾ ವಿಧಿಸಬಹುದು.

ಪಿ.ಎಸ್‌.ರಾಜಗೋಪಾಲ್: ವಿಧಿಸುವ ಅಧಿಕಾರ ಇಲ್ಲ. ಸಭೆಯೊಳಗೆ ಏನಾಗುತ್ತದೆ ಅದು ಸಭಾಧ್ಯಕ್ಷರಿಗೆ ಬಿಟ್ಟದ್ದು. ಶಾಂತವಾಗಿ ಗದ್ದಲ ಇಲ್ಲದ ರೀತಿಯಲ್ಲಿ ನಡೆಯುತ್ತಿರುವ ಸಭೆಗೆ ಅಡ್ಡಿ ಮಾಡುವ ಅಧಿಕಾರ ಅವರಿಗೆ ಇಲ್ಲ.

* ಮುಖ್ಯಮಂತ್ರಿ ಈಗಾಗಲೇ ಗಡುವು ಉಲ್ಲಂಘಿಸಿರುವಾಗ ರಾಜ್ಯಪಾಲರ ಮುಂದಿನ ಆಯ್ಕೆಗಳೇನು?

ಆಚಾರ್ಯ: ಕೇಂದ್ರಕ್ಕೆ ವರದಿ ಕೊಡಬಹುದು, ಸರ್ಕಾರವನ್ನು ವಜಾ ಮಾಡಬಹುದು.

ರಾಜಗೋಪಾಲ: ಏನೂ ಮಾಡೋ ಹಾಗಿಲ್ಲ. 24 ಗಂಟೆ ಸಮಾಧಾನವಾಗಿ ಕೂತ್ಕೋಬೇಕು. ಕಲಾಪವನ್ನು ಕುದುರೆ ಕುಣಿಸಿದಂತೆ ಕುಣಿಸಲು ಅವರಿಗೆ ಸಾಧ್ಯವಿಲ್ಲ.

* ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆಯಲ್ಲಾ?

ಆಚಾರ್ಯ: ಯಾವ ಆದೇಶ ಕೇಳಿಕೊಂಡಾದರೂ ಸುಪ್ರೀಂ ಕೋರ್ಟ್‌ ಕದ ತಟ್ಟಬಹುದು. ಅವಿಶ್ವಾಸ ಮತದ ಮೇಲೆ ಚರ್ಚೆ ನಡೆಯಬೇಕು ಎಂದು ಎಲ್ಲೂ ಯಾವ ಕಾನೂನು ಹೇಳುವುದಿಲ್ಲ. ಪ್ರಜಾಪ್ರಭುತ್ವದ ಸಲ್ಲಕ್ಷಣಕ್ಕೆ ಅನುಗುಣವಾಗಿ ಅಲ್ಪಮತದ ಸರ್ಕಾರ ಒಂದು ಗಂಟೆಯೂ ಅಧಿಕಾರದಲ್ಲಿ ಇರಬಾರದು. ಆದರೆ, ಬಹುಮತ ಸಾಬೀತು ಪಡಿಸಲು ಒಂದೆರಡು ದಿನ ಬೇಕಾಗುವುದರಿಂದ ಅದಕ್ಕೆ ಅವಕಾಶ ಕಲ್ಪಿಸಬಹುದು. ಆದರೆ 10–12 ದಿನಗಳ ಜಗ್ಗಾಟ ನಡೆಸುವುದು ತರವಲ್ಲ. ಅಲ್ಪಮತದ ಸರ್ಕಾರ ಹಣಕಾಸು, ನೇಮಕಾತಿ ವರ್ಗಾವಣೆ ಆದೇಶಗಳನ್ನು ಮಾಡುವುದು ವಿಹಿತವಲ್ಲ.

ರಾಜಗೋಪಾಲ: ಈ ಹಿಂದೆ ಸುಪ್ರೀಂ ಕೋರ್ಟ್ ಎರಡು ವಿಭಿನ್ನ ನಿಲುವಿನ ಆದೇಶ ನೀಡಿದೆ. ಅವು ಒಂದಕ್ಕೊಂದು ತಾಳೆ ಆಗುವುದಿಲ್ಲ. ಆದಾಗ್ಯೂ ಹೀಗೇ ಮಾಡಿ ಎಂದು ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡುವುದು ತುಂಬಾ ಕಷ್ಟ. ಅವರಿಗೂ ಸಂದಿಗ್ಧವೇ ಇದೆ ಎಂದು ಕಾಣಿಸುತ್ತದೆ.

* ಈಗಿನ ಸನ್ನಿವೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಬಹುದೇ?

ಆಚಾರ್ಯ: ಖಂಡಿತಾ ಮಾಡಬಹುದು. ಆದರೆ ಈಗಿನ ರಾಜ್ಯಪಾಲರು ಮಾಡಲು ಒಪ್ಪುವುದಿಲ್ಲ ಅನ್ನಿಸುತ್ತದೆ. ಏಕೆಂದರೆ ಶಿಫಾರಸು ಮಾಡಿದರೆ ಮೈತ್ರಿ ಸರ್ಕಾರ ಅದರ ರಾಜಕೀಯ ಲಾಭ ಪಡೆಯಲು ಹವಣಿಸಬಹುದು. ‘ನಾವು ಬಹುಮತ ಸಾಬೀತುಪಡಿಸಲು ಸಿದ್ಧವಿದ್ದರೂ ನಮ್ಮ ಸರ್ಕಾರ ಕೆಡವಲಾಗಿದೆ’ ಎಂಬ ಹುಯಿಲೆಬ್ಬಿಸಬಹುದು.

ರಾಜಗೋಪಾಲ: ವಿಶ್ವಾಸ ಮತ ಕಾನೂನು ಪ್ರಕಾರನಡೆಯವ ಪರಿಸ್ಥಿತಿ ಕಾಣುತ್ತಿಲ್ಲ ಎಂಬ ಅಭಿಪ್ರಾಯದೊಂದಿಗೆ ಮೂರು ನಾಲ್ಕು ತಿಂಗಳ ಕಾಲ ಅಮಾನತಿನಲ್ಲಿ ಇರಿಸಬಹುದು. ಆಗ ಇಬ್ಬರಿಗೂ ಶಾಸಕರನ್ನು ಅನ್ಯ ಮಾರ್ಗಗಳ (ಖರೀದಿ) ಮೂಲಕ ಸೆಳೆದು ಬಲ ಹೆಚ್ಚಿಸಿಕೊಳ್ಳಲು ಅವಕಾಶ ಸಿಗುತ್ತೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು ಎಂಬುದು ಖಾತ್ರಿಯಾಗುತ್ತಿದೆ.

ರಾಜ್ಯಪಾಲರು ವರ್ತನೆ ನೋಡಿದರೆ ಅವರೇಕೋ ತುಂಬಾ ಆತುರದಲ್ಲಿದ್ದಾರೆ ಅನ್ನಿಸುತ್ತದೆ. ಆಡಳಿತಾರೂಢ ಸರ್ಕಾರವನ್ನು ಇಳಿಸುವ ಉದ್ದೇಶ ಅವರ ಮನಸ್ಸಿನಲ್ಲಿ ಇದ್ದಂತಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT