ಶನಿವಾರ, ಜನವರಿ 25, 2020
19 °C
‘ಮಾಧ್ಯಮ: ಪ್ರಜಾಸತ್ತೆ’ ವಿಚಾರ ಸಂಕಿರಣದಲ್ಲಿ ವಿಚಾರ ಮಂಥನ

‘ವಾಸ್ತವ ಮರೆಮಾಚಿ ಭ್ರಮೆ ಸೃಷ್ಟಿಸುವ ಮಾಧ್ಯಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಟು ವಾಸ್ತವಗಳನ್ನು ಮರೆಮಾಚಿ ಭ್ರಮೆಯನ್ನು ಸೃಷ್ಟಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಇದರ ಬದಲಾಗಿ, ಜನಪರವಾದ ಸುದ್ದಿಯನ್ನು ಬರೆಯುವ, ಪ್ರಸಾರ ಮಾಡುವ ಕೆಲಸವಾಗಬೇಕು ಎಂಬ ಅಭಿಪ್ರಾಯ ಭಾನುವಾರ ನಡೆದ ‘ಮಾಧ್ಯಮ: ಪ್ರಜಾಸತ್ತೆ’ ವಿಚಾರ ಸಂಕಿರಣದಲ್ಲಿ ವ್ಯಕ್ತವಾಯಿತು.

ಗಾಂಧಿ ವಿಚಾರ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಗೋಷ್ಠಿಯಲ್ಲಿ ಪತ್ರಕರ್ತರು ಮಾಧ್ಯಮಗಳ ಜವಾಬ್ದಾರಿಯನ್ನು ಕುರಿತು ಬೆಳಕು ಚೆಲ್ಲಿದರು. ಪತ್ರಿಕೋದ್ಯಮ ಶಾಶ್ವತವಾಗಿ ವಿರೋಧಪಕ್ಷದ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರಲು ಸಾಧ್ಯ ಎಂಬ ವಿಚಾರವನ್ನು ಸಮಗ್ರವಾಗಿ ಒತ್ತಿ ಹೇಳಿದರು.

ಹಿರಿಯ ಪತ್ರಕರ್ತ ಡಾ.ಜಿ.ರಾಮಕೃಷ್ಣ ಅವರು ‘ತಪ್ಪಿಸಬಹುದಾದ ನಂಬಿಕೆ ದ್ರೋಹ’ ಕುರಿತು ಮಾತನಾಡಿ, ‘ವಾಸ್ತವ ವಿಚಾರವನ್ನು ಜನರಿಗೆ ನೀಡಬೇಕು. 5 ಟ್ರಿಲಿಯನ್‌ ಆರ್ಥಿಕತೆ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದನ್ನು ಮಾಧ್ಯಮದಲ್ಲಿ ವಿಜೃಂಭಿಸುವಂತೆ ವರದಿ ಮಾಡಿ, ಜನರನ್ನು ಆಶಾಗೋಪುರದಲ್ಲಿ ಕೂರಿಸುವುದು ಬೇಡ. ಅದರ ಬದಲಿಗೆ ದೇಶದ ನಿಜವಾದ ಆರ್ಥಿಕತೆ ಎತ್ತ ಸಾಗುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಿಕೊಡಲಿ. ಮೋದಿಯ ಹಣದಲ್ಲಿ ತಾವೂ ಪಾಲು ಪಡೆದುಕೊಳ್ಳಬೇಕು ಎಂದು ಮಾಧ್ಯಮಗಳು ನಿಂತರೆ ಬಲು ಕಷ್ಟ’ ಎಂದು ಟೀಕಿಸಿದರು.

‘ಪತ್ರಕರ್ತ ಉದ್ಯೋಗಿ. ಮಾಲೀಕರ ಅಣತಿಯಂತೆ ವರದಿ ಬರೆಯಬೇಕಾಗಬಹುದು. ಆದರೆ, ಸರಳ ವ್ಯಾಖ್ಯಾನ ಮಾಡುವುದಕ್ಕೂ ಪತ್ರಕರ್ತರು ಇಂದು ಹಿಂಜರಿಯುವ ಪರಿಸ್ಥಿತಿಗೆ ಬಂದಿರುವುದು ಬಹಳ ದುಃಖಕರ ಸಂಗತಿ’ ಎಂದು ಅವರು ವಿಷಾದದಿಂದ ಹೇಳಿದರು.

ಹಿಮಾಲಯದ ಎತ್ತರಕ್ಕೆ ಹೊಗಳು ಬುದ್ಧಿ!:

‘ಕಾಯುವ ನಾಯಿ ಅಲ್ಲ, ಮಡಿಲ್ಲಾಡುವ ಮುದ್ದಿನ ನಾಯಿ!’ ಕುರಿತು ಮಾತನಾಡಿದ, ಪತ್ರಕ‌ರ್ತ ಡಿ.ಉಮಾಪತಿ, 6 ವರ್ಷಗಳಿಂದ ಪ್ರಶ್ನಿಸುವ ಮೂಲ ಕರ್ತವ್ಯವನ್ನೇ ಮಾಧ್ಯಮಗಳು ಮರೆತಿವೆ. ಅದರ ಬದಲು ಪ್ರಧಾನಿ ಮೋದಿಯನ್ನು ಹೊಗಳಿ, ಅಟ್ಟಕ್ಕೆ ಏರಿಸುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಕೇಳುವುದನ್ನು ಮರೆತಿದ್ದಾರೆ. ಪ್ರಶ್ನೆ ಕೇಳಿದ ಪರ್ತಕರ್ತರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಕೆಲಸದಿಂದ ತೆಗೆದುಹಾಕಿರುವುದು ಪತ್ರಕರ್ತರ ಧೈರ್ಯವನ್ನು ಅಡಗಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಳುವವರ ಪರವಾಗಿ ಮಾಧ್ಯಮ ಮುಂಚೆಯೂ ಇತ್ತು. ಆದರೆ, ಈಗ ಹೊಗಳು ಸಂಸ್ಕೃತಿ ಹಿಮಾಲಯದ ಎತ್ತರಕ್ಕೆ ಏರಿದೆ’ ಎಂದು ಟೀಕಿಸಿದರು.

‘ಕಾಯುವ ನಾಯಿ ಅಮಾಯಕರ ಮೇಲೆ ಎರಗಿ, ಬೊಗಳಿ ಕಚ್ಚುತ್ತಿದೆ. ಆಳುವವರ ಮುಂದೆ ಹೊರಳಾಡಿ, ಬಾಲ ಅಲ್ಲಾಡಿಸಿ, ಮುದ್ದಿಸಿಕೊಳ್ಳುವ ಪ್ರವೃತ್ತಿ ರೂಢಿಸಿಕೊಂಡಿದೆ’ ಎಂದು ಪತ್ರಿಕೋದ್ಯಮವನ್ನು ಕುರಿತು ವ್ಯಂಗ್ಯವಾಡಿದರು.

‘ಬ್ರೇಕಿಂಗ್ ನ್ಯೂಸ್ ಮಧ್ಯೆ ಬದುಕಲು ಕಲಿಯಿರಿ’ ಕುರಿತು ಮಾತನಾಡಿದ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ‘ಟಿಆರ್‌ಪಿ ಓಟ ಬ್ರೇಕಿಂಗ್‌ ನ್ಯೂಸ್‌ನ್ನು ನಿಯಂತ್ರಿಸುತ್ತಿದೆ. ಬ್ರೇಕಿಂಗ್‌ ನ್ಯೂಸ್‌ನಲ್ಲಿ ಇರುವುದನ್ನೆಲ್ಲಾ ನಂಬಬೇಕು ಎಂಬ ಅನಿವಾರ್ಯತೆ ಇಲ್ಲ. ಹಲವು ಟಿವಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಲ್ಲಿ ಸತ್ಯವನ್ನು ಹುಡುಕುವ ಪ್ರಯತ್ನವನ್ನು ವೀಕ್ಷಕರು ಮಾಡಬೇಕು’ ಎಂದು ಸಲಹೆ ನೀಡಿದರು.

‘ಸುದ್ದಿವಾಹಿನಿ ಮತ್ತು ಸಮಾಜ’ ಕುರಿತು ಮಾತನಾಡಿದ ಟಿವಿ 9 ಹಿರಿಯ ನಿರ್ಮಾಪಕ ಎ.ಹರಿಪ್ರಸಾದ್‌, ‘ಬ್ರೇಕಿಂಗ್ ನ್ಯೂಸ್ ಕೊಡುತ್ತಲೇ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ಸುದ್ದಿವಾಹಿನಿಗಳು ಮಾಡಿವೆ. ತೆರೆದ ಕೊಳವೆ ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ ಸುದ್ದಿಯನ್ನು ನಿರಂತರವಾಗಿ ಪ್ರಸಾರ ಮಾಡಿದ ಬಳಿಕ ಜನರಲ್ಲಿ ಜಾಗೃತಿ ಮೂಡಿದೆ. ಹಲವು ಇಂತಹ ತೆರೆದ ಕೊಳವೆ ಬಾವಿಗಳನ್ನು ಜನರೇ ಮುಚ್ಚಿದ್ದಾರೆ. ಇದು ಮಾಧ್ಯಮದ ಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಉದಾಹರಿಸಿದರು.

ಅನರ್ಹಗೊಂಡ ಪತ್ರಿಕೋದ್ಯಮ

ಪತ್ರಿಕೋದ್ಯಮ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿರಬೇಕು. ಆದರೆ, ಈಗ ಪಕ್ಷಾಂತರಗೊಂಡು ಆಡಳಿತ ಪಕ್ಷಕ್ಕೆ ಸೇರಿ ಅನರ್ಹಗೊಂಡಿದೆ ಎಂದು ಪತ್ರಕರ್ತೆ ಡಾ.ಆರ್‌.ಪೂರ್ಣಿಮಾ ವ್ಯಂಗ್ಯವಾಡಿದರು.

‘ಅಭಿವೃ‌ದ್ಧಿ ಪತ್ರಿಕೋದ್ಯಮ’ ಕುರಿತು ಮಾತನಾಡಿ ಅಭಿವೃದ್ಧಿ ಪತ್ರಿಕೋದ್ಯಮ ಈಗ ಎಲ್ಲಿದೆ? ಬದಲಿಗೆ ತಮ್ಮ ಅಭಿವೃದ್ಧಿಗೆ ಪತ್ರಿಕೋದ್ಯಮ ಎಂಬಂತಾಗಿದೆ. ಉದ್ಯಮಿಗಳಿಗೆ, ಆಡಳಿತಗಾರರಿಗೆ ಅಭಿವೃದ್ಧಿ ಎಂಬ ಮಂತ್ರ ಪಠಿಸುತ್ತಿವೆ ಎಂದು ಬೇಸರದಿಂದ ಹೇಳಿದರು.

‘ಭ್ರಷ್ಟಾಚಾರದಲ್ಲಿ ಭಾರತದ ಪತ್ರಿಕೋದ್ಯಮಕ್ಕೆ ಈ ಹಿಂದೆ ಎರಡನೇ ಸ್ಥಾನವಿತ್ತು. ಈಗ ಪದೋನ್ನತಿ ಪಡೆದು ಮೊದಲ ಸ್ಥಾನಕ್ಕೆ ಏರಿದೆ’ ಎಂದು ಕುಟುಕಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು