ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ: ಸ್ತ್ರೀಶಕ್ತಿಗೆ ಬೇಕು ಅವಕಾಶ

ಚುನಾವಣೆ ಹೊಸ್ತಿಲಿನಲ್ಲಿ ಮುನ್ನೆಲೆಗೆ ಬಂದ ಬೇಡಿಕೆ
Last Updated 13 ಜೂನ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಮೂರೂ ಪಕ್ಷಗಳಲ್ಲಿ ಪೈಪೋಟಿ ಆರಂಭವಾಗಿದ್ದು, ‌ಪುರುಷ ಅಭ್ಯರ್ಥಿಗಳ ಹೆಸರು ಮುಂಚೂಣಿಯಲ್ಲಿದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಈ ಬಾರಿ ಹೆಚ್ಚಿನ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಮುನ್ನೆಲೆಗೆ ಬಂದಿದೆ.

ಪರಿಷತ್‌ ಸದಸ್ಯತ್ವದಿಂದ ನಿವೃತ್ತರಾಗುತ್ತಿರುವ ಸದಸ್ಯರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. ಕನಿಷ್ಠ ಅವರ ದುಪ್ಪಟ್ಟು ಸಂಖ್ಯೆಯಲ್ಲಾದರೂ ಮಹಿಳೆಯರಿಗೆ ಅವಕಾಶ ಸಿಗಬೇಕು ಎಂಬ ಅಪೇಕ್ಷೆ ಮಹಿಳಾ ಆಕಾಂಕ್ಷಿಗಳಲ್ಲಿ ಇದೆ. ಪರಿಷತ್ತಿಗೆ ನಡೆಯಲಿರುವ ಆಯ್ಕೆ ಅಥವಾ ನಾಮನಿರ್ದೇಶನದಲ್ಲಿ ಬಿಜೆಪಿಯಿಂದ ಒಂದಿಷ್ಟು ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರ ಆ ಪಕ್ಷದ ಮಹಿಳಾ ಪ್ರಮುಖರಲ್ಲಿದೆ.

ಕಾಂಗ್ರೆಸ್‌ನಿಂದ ಕನಿಷ್ಠ ಒಂದು ಹಾಗೂ ಬಿಜೆಪಿಯಿಂದ ಕನಿಷ್ಠ ಎರಡು ಸೀಟುಗಳನ್ನು ಮಹಿಳೆಯರಿಗೆ ನೀಡಲೇಬೇಕು ಎಂಬ ಒತ್ತಾಯ ಬಲವಾಗಿದ್ದು, ಈಗಾಗಲೇ ವರಿಷ್ಠರ ಗಮನಕ್ಕೂ ತಂದಿದ್ದಾರೆ. ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದೇ ಇರುವುದು ಒಂದಿಷ್ಟು ತಲೆನೋವು ತರುವ ವಿಚಾರವೂ ಆಗಿದೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳುತ್ತವೆ.

ತೆನೆ ಹೊತ್ತ ಮಹಿಳೆಯ ಚಿಹ್ನೆ ಹೊಂದಿರುವ ಜೆಡಿಎಸ್‌ ಪಕ್ಷ ಉದಯವಾದ ಕಾಲದಿಂದಲೂ ಒಬ್ಬ ಮಹಿಳೆಯನ್ನೂ ಮೇಲ್ಮನೆಗೆ ಕಳುಹಿಸಿಲ್ಲ. ಲೀಲಾದೇವಿ ಆರ್‌.ಪ್ರಸಾದ್, ರುತ್ ಮನೋರಮಾ, ಶೀಲಾ ನಾಯಕ್‌, ಶಾರದಾ ಪೂರ್ಯಾನಾಯ್ಕ್ ಅವರಂತಹ ಹಿರಿಯರು ಪಕ್ಷದಲ್ಲಿ ಇದ್ದರೂ ಪರಿಷತ್ ಚುನಾವಣೆ ಸಂದರ್ಭದಲ್ಲಿ ಮಹಿಳಾ ಲಾಬಿ ನಡೆದಿಲ್ಲ. ತಮ್ಮ ಪಕ್ಷದಲ್ಲಿ ಗೌಡರ ನಿರ್ಧಾರವೇ ಅಂತಿಮವಾಗುವುದರಿಂದಾಗಿ ಪ್ರಭಾವ ಬೀರಿದರೂ ಪ್ರಯೋಜನವಾಗದು ಎಂಬ ಅಭಿಮತ ಈ ಪಕ್ಷದ ಮಹಿಳಾ ಮಣಿಗಳಲ್ಲಿದೆ.

‘ಜೆಡಿಎಸ್‌ಗೆ ಲಭ್ಯ ಇರುವ ಒಂದು ಸೀಟಿಗೆ ಎಷ್ಟು ಆಕಾಂಕ್ಷಿಗಳು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಈ ಬಾರಿ ಮಹಿಳೆಯರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದ್ದಂತಿದೆ. ಸದ್ಯ ಏನನ್ನೂ ನಿಖರವಾಗಿ ತಿಳಿಸಲಾಗದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

ಹೆಚ್ಚು ಅವಕಾಶ: ‘ಈ ಬಾರಿ ವಿಧಾನಸಭೆಯಿಂದ ನಾಲ್ಕು ಸ್ಥಾನಗಳು ಬಿಜೆಪಿಗೆ ಲಭಿಸಲಿವೆ ಹಾಗೂ ನಾಮನಿರ್ದೇಶನ ಮೂಲಕ 5 ಸೀಟುಗಳನ್ನು ತುಂಬಿಸುವ ಅವಕಾಶವೂ ಬಿಜೆಪಿಗೆ ಲಭಿಸಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 9 ಮಂದಿಯಲ್ಲಿ ಎರಡರಿಂದ ಮೂರು ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಡಬೇಕು. ಕನಿಷ್ಠ ಇಬ್ಬರನ್ನಾದರೂ ಪರಿಗಣಿಸಬೇಕು ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ನಾನೂ ಸಹ ಆಕಾಂಕ್ಷಿಗಳಲ್ಲಿ ಒಬ್ಬಳು’ ಎಂದು ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

ಒಂದು ಸೀಟನ್ನಾದರೂ ಕೊಡಿ: ‘ಕಾಂಗ್ರೆಸ್‌ನಲ್ಲಿ ಹಲವಾರು ಆಕಾಂಕ್ಷಿಗಳಿದ್ದಾರೆ. ನಾನು ಸಹ ಒಬ್ಬಳು ಆಕಾಂಕ್ಷಿ. ಎರಡು ಸೀಟುಗಳಲ್ಲಿ ಒಂದನ್ನಾದರೂ ಮಹಿಳೆಯರಿಗೆ ಬಿಟ್ಟುಕೊಡಿ ಎಂದು ಕೇಳಿದ್ದೇನೆ’ ಎಂದು ಕಾಂಗ್ರೆಸ್‌ನ‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.‌

ನಮ್ಮ ಧ್ವನಿಯನ್ನೇ ಅಡಗಿಸುತ್ತಾರೆ: ವಾಸಂತಿ ಶಿವಣ್ಣ

‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದಲ್ಲಿ ಮಹಿಳಾ ಮೀಸಲಾತಿ ತಂದರು. ಮಹಿಳೆಯರಿಗೆ ಕೆಲಸ ಕೊಟ್ಟರು. ನಾವು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ವಿಧಾನ ಪರಿಷತ್‌ನಂತಹ ವಿಷಯಗಳಿಗೆ ಬಂದಾಗ ಸೋನಿಯಾ ಗಾಂಧಿ ಅವರಿಗೆ ನಮ್ಮ ಹೆಸರನ್ನು ಕಳಹಿಸುವುದೇ ಇಲ್ಲ. ಸೋನಿಯಾ ಗಾಂಧಿ, ಇಂದಿರಾ ಗಾಂಧಿ ಅವರೂ ಹೀಗೆಯೇ ಮಾಡಿರುತ್ತಿದ್ದರೆ ಯಾವ ಗಂಡಸರೂ ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೇಲ್ಮನೆಯ 29 ಸೀಟುಗಳಲ್ಲಿ ಮಹಿಳೆಯರಿಗೆ ಸಿಕ್ಕಿದ್ದು ಕೇವಲ 3 ಸೀಟು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಇಲ್ಲದ ಕಾರಣ ಪುರುಷ ನಾಯಕರ ಬಾಹುಳ್ಯದಿಂದ ನಾವು ನರಳುತ್ತಿದ್ದೇವೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಾಸಂತಿ ಶಿವಣ್ಣ ಹೇಳಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು

ಶಾಸನ ಸಭೆಗಳನ್ನೂ ಕ್ರಮೇಣ ಮಹಿಳಾ ಧ್ವನಿ ಹೆಚ್ಚುವುದು: ಪ್ರಮೀಳಾ ನಾಯ್ಡು

ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಶೇ 50ರಷ್ಟು ಮಹಿಳಾ ಪ್ರಾತಿನಿಧ್ಯ ಇದೆ, ಶಾಸನ ಸಭೆಗಳಲ್ಲೂ ಕ್ರಮೇಣ ಮಹಿಳಾ ಧ್ವನಿ ಹೆಚ್ಚುವುದು ನಿಶ್ಚಿತ ಆರ್‌.ಪ್ರಮೀಳಾ ನಾಯ್ಡು, ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ.

ಅಂಕಿ ಅಂಶ

ವಿಧಾನ ಪರಿಷತ್ ಒಟ್ಟು ಸದಸ್ಯರ ಸಂಖ್ಯೆ-75

ಹಾಲಿ ಮಹಿಳಾ ಸದಸ್ಯರ ಸಂಖ್ಯೆ-4

ಚುನಾವಣೆ ಮೂಲಕ ಭರ್ತಿಯಾಗಲಿರುವ ಸ್ಥಾನ-7

ಸ್ಥಾನಕ್ಕೆ ಸರ್ಕಾರದಿಂದ ನಾಮನಿರ್ದೇಶನ-5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT