ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಜಿಲ್ಲೆಗಳಲ್ಲಿ ಅಬ್ಬರದ ಮಳೆ; ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ

ಉಡುಪಿಯಲ್ಲಿ ಜಲಾವೃತಗೊಂಡ ಮನೆಗಳು
Last Updated 4 ಜುಲೈ 2020, 21:08 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಶನಿವಾರ ಚುರುಕು ಪಡೆದಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಮೃತ್ಯುಂಜಯ, ಪಯಸ್ವಿನಿ, ಫಲ್ಗುಣಿ ನದಿಗಳಲ್ಲಿ ನೀರಿನ ಹರಿವು ರಭಸ ಪಡೆದುಕೊಂಡಿದೆ. ಮರವೂರು, ತುಂಬೆ ಅಣೆಕಟ್ಟೆಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಕಟೀಲಿನಿಂದ ಬಜಪೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಶನಿವಾರವೂ ಗುಡ್ಡ ಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಅನಾಹುತ ಸೃಷ್ಟಿ:ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಾಪು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ, ಬೈಂದೂರು ತಾಲ್ಲೂಕುಗಳಲ್ಲಿ ಮಳೆ ಬಿರುಸಾಗಿದ್ದು, ಅನಾಹುತಗಳನ್ನು ಸೃಷ್ಟಿಸಿದೆ.‌

ಕಾಪುವಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಉಡುಪಿಯಲ್ಲಿ ಬೈಲೂರು, ಬನ್ನಂಜೆ, ಮೂಡನಿಡಂಬೂರು, ಮಠದ ಬೆಟ್ಟು ಪ್ರದೇಶ ಜಲಾವೃತಗೊಂಡಿದೆ. ಕಲ್ಸಂಕ ಕಾಲುವೆ ತುಂಬಿ ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.ಭಾರಿ ಮಳೆಗೆ 23 ವಿದ್ಯುತ್ ಕಂಬಗಳು ಬಿದ್ದಿವೆ. 6 ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಕೊಟ್ಟಿಗೆಹಾರ, ಕಳಸ ಭಾಗದಲ್ಲಿ ಧಾರಾಕಾರವಾಗಿ ಸುರಿದಿದೆ.

ಕಾರವಾರದಲ್ಲಿ ಭಾರಿ ಮಳೆ:ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದರೆ, ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಮುಂಗಾರು ಚುರುಕಾಗಿರುವುದರಿಂದ ಅರಬ್ಬಿ ಸಮುದ್ರದ ದಡಕ್ಕೆ ದೊಡ್ಡ ಅಲೆಗಳು ಅಪ್ಪಳಿಸುತ್ತಿವೆ.

ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ:ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಆಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಹೆಚ್ಚಳವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ದಾವಣಗೆರೆ ನಗರ ಹಾಗೂ ಮಲೇಬೆನ್ನೂರಿನಲ್ಲಿ ಮಳೆಯಾಗಿದೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಕರಾವಳಿಯಲ್ಲಿ ‘ಯೆಲ್ಲೊ ಅಲರ್ಟ್‌’
ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಜುಲೈ 5ರಿಂದ 9ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಐದೂ ದಿನಗಳು ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಎಷ್ಟು ಮಳೆ?: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಶನಿವಾರ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೋಟ 14, ಕಾರವಾರ 12, ಕಾರ್ಕಳ, ಗೋಕರ್ಣ 11, ಉಡುಪಿ 10, ಮೂಡುಬಿದಿರೆ, ಪಣಂಬೂರು, ಮಂಗಳೂರು, ಬ್ರಹ್ಮಾವರ 9, ಪುತ್ತೂರು, ಸುಳ್ಯ 8, ಕುಂದಾಪುರ 7, ಉಪ್ಪಿನಂಗಡಿ, ಭಟ್ಕಳ 6, ಸುಬ್ರಹ್ಮಣ್ಯ, ಮಡಿಕೇರಿ, ವಿರಾಜಪೇಟೆ, ಕಳಸ 5, ಸಿದ್ದಾಪುರ, ಭಾಗಮಂಡಲ 4, ಧರ್ಮಸ್ಥಳ, ಶೃಂಗೇರಿ, ನಂಜನಗೂಡು, ಮಾಗಡಿ 3, ಬೆಳಗಾವಿ, ಸೋಮವಾರಪೇಟೆ, ಮೂಡಿಗೆರೆ, ತೀರ್ಥಹಳ್ಳಿ, ಕೊಳ್ಳೇಗಾಲ, ಮದ್ದೂರು, ಶಿರಾದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT