ಮಂಗಳವಾರ, ಸೆಪ್ಟೆಂಬರ್ 22, 2020
26 °C
ಸೋಮವಾರಪೇಟೆ ರಸ್ತೆಯಲ್ಲೂ ಬಿರುಕು: ಆತಂಕ, ಬೆಳಗಾವಿ ಸೇತುವೆಗಳು ಜಲಾವೃತ

ಮಲೆನಾಡಿನಲ್ಲಿ ಮುಂಗಾರು ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಜೋರಾಗಿದೆ. ಹಾಸನ ಜಿಲ್ಲೆಯ ಕೆಲವೆಡೆ ಮತ್ತು ಉತ್ತರ ಕರ್ನಾಟಕದ ಕೆಲವೆಡೆ ಶನಿವಾರ ಉತ್ತಮ ಮಳೆಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ರೈತರು ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದಿವೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟವು 2,859 ಅಡಿಯಾಗಿದ್ದು ಪ್ರಸ್ತುತ 2,810 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಒಳಹರಿವು ಶನಿವಾರ 725 ಕ್ಯುಸೆಕ್ ಇತ್ತು. ಮೈಸೂರು, ಹಾಸನ ಹಾಗೂ ಆಲೂರಿನಲ್ಲಿ ತುಂತುರು ಮಳೆಯಾಗಿದೆ. ಸಕಲೇಶಪುರದಲ್ಲಿ ಬಿರುಸಿನ ಮಳೆಯಾಗಿದೆ.

ರಸ್ತೆ ಮೇಲೆ ಗುಡ್ಡ ಕುಸಿತ: ಮೂಡಿಗೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಇದೇ ತಾಲ್ಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತತ್ಕೊಳ ಗ್ರಾಮದ ಬಳಿ ಗುಡ್ಡ ಕುಸಿದು ಮೂಡಿಗೆರೆ- ಕುಂದೂರು ರಸ್ತೆಯ ಸಂಪರ್ಕ ಕೆಲ ಕಾಲ ಕಡಿತಗೊಂಡಿತ್ತು. ಬಣಕಲ್ ಸಮೀಪ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಪಾವತಿ, ಊರುಬಗೆಹಳ್ಳ, ಚಿಕ್ಕಳ್ಳಗಳಲ್ಲಿ ನೀರು ಹೆಚ್ಚಾಗಿದೆ.

ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ತೀರ್ಥಹಳ್ಳಿ, ಸಾಗರ, ಭದ್ರಾವತಿ, ಶಿಕಾರಿಪುರ, ಹೊಸನಗರ, ನಗರ ಹೋಬಳಿ, ಸೊರಬ, ತುಮರಿ, ಕೋಣಂದೂರಿನಲ್ಲಿ ಜೋರಾಗಿ ಮಳೆಯಾಗಿದೆ.

ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿರುವ ಕಾರಣ ಶಿವಮೊಗ್ಗದ ತುಂಗಾ ನದಿ ಸಮೀಪದ ಕೋರ್ಪಲಯ್ಯ ಛತ್ರದ ಬಳಿಯ ಮಂಟಪ ಮುಳುಗುವ ಹಂತ ತಲುಪಿದೆ.

ಶಿವಮೊಗ್ಗ 34.20 ಮಿ.ಮೀ., ಭದ್ರಾವತಿ 16.60 ಮಿ.ಮೀ., ತೀರ್ಥಹಳ್ಳಿ 62.40 ಮಿ.ಮೀ., ಸಾಗರ 37 ಮಿ.ಮೀ., ಶಿಕಾರಿಪುರ 15.80 ಮಿ.ಮೀ., ಸೊರಬ 27 ಮಿ.ಮೀ., ಹೊಸನಗರ 162.40 ಮಿ.ಮೀ. ಮಳೆಯಾಗಿದೆ.

ಸೇತುವೆ ಜಲಾವೃತ: ದಿನವಿಡೀ ಮೋಡಕವಿದ ವಾತಾವರಣ, ಆಗಾಗ ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಮಳೆಯೂ ಹಾಜರಿ ಹಾಕಿ ಮರೆಯಾಗುತ್ತಿತ್ತು. ಹುಬ್ಬಳ್ಳಿ –ಧಾರವಾಡದಲ್ಲಿ ಆಗಾಗ ಮಳೆ ಸುರಿಯಿತು.

ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಖಾನಾಪುರದ ಸುತ್ತಲಿನ ಪ್ರದೇಶದಲ್ಲಿ ಮಳೆ ಮತ್ತೆ ಹೆಚ್ಚಾಗಿದೆ.

ದಕ್ಷಿಣ ಮಹಾರಾಷ್ಟ್ರದಿಂದ ನೀರಿನ ಹರಿವು ಹೆಚ್ಚಾಗಿ ಮತ್ತೆ ನೆಲಮಟ್ಟದ ಮೂರು ಸೇತುವೆಗಳು ಜಲಾವೃತವಾಗಿವೆ. ಆದರೆ ನವಿಲುತೀರ್ಥ, ಹಿಡಕಲ್‌ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಮಾತ್ರ ಮಳೆ ಬಂದಿಲ್ಲ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ವೇದ ಹಾಗೂ ದೂಧ್‌ಗಂಗಾ ನದಿಗೆ ನಿರ್ಮಿಸಲಾಗಿರುವ ಕಾರದಗಾ– ಭೋಜ ಸೇತುವೆ, ವೇದಗಂಗಾ ನದಿಗೆ ನಿರ್ಮಿಸಲಾಗಿರುವ ಭೋಜವಾಡಿ– ಕುನ್ನೂರ, ದೂಧ್‌ಗಂಗಾ ನದಿಗೆ ನಿರ್ಮಿಸಲಾಗಿರುವ ಮಲಿಕವಾಡ– ದತ್ತವಾಡ ಸೇತುವೆಗಳು ಜಲಾವೃತವಾಗಿವೆ. ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 22,000 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಗಾಗ ರಭಸದ ಮಳೆಯಾಯಿತು. ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳ ವಿವಿಧೆಡೆ ದಿನವಿಡೀ ದಟ್ಟವಾದ ಮೋಡ ಕವಿದು, ಮಳೆ ಸುರಿಯಿತು.

ಕರಾವಳಿ ಪ್ರದೇಶದಲ್ಲಿ ಮಳೆ ಕುಂಠಿತವಾಗಿದೆ. ಕರಾವಳಿ ಭಾಗದಲ್ಲಿ ಕಳೆದೆರಡು ದಿನಗಳ ಹಿಂದೆ ಬಿರುಸಾಗಿದ್ದ ಮಳೆ ಈಗ ಬಿರುಸು ಕಳೆದುಕೊಂಡಿದೆ.


ಮಡಿಕೇರಿ–ಸೋಮವಾರಪೇಟೆ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕುಸಿಯುವ ಆತಂಕ ಉಂಟಾಗಿದೆ

ಅಪಾಯದ ಮುನ್ಸೂಚನೆ
ಮಡಿಕೇರಿ: ಸತತ ಮಳೆಗೆ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲೂ (ರಾಜರಾಜೇಶ್ವರಿ ಶಾಲೆ ಬಳಿ) ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ರಸ್ತೆ ಕುಸಿದಿದ್ದ ಸ್ಥಳದಲ್ಲಿ ಸ್ಯಾಂಡ್‌ಬ್ಯಾಗ್‌ ಅಳವಡಿಸಿ, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಅಂಥ ಸ್ಥಳಗಳಲ್ಲಿ ಈಗ ಬಿರುಕು ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಬ್ಯಾರಿಕೇಡ್‌ ಹಾಕಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮತ್ತೆ ವರುಣ ಅಬ್ಬರಿಸಿದರೆ ರಸ್ತೆ ಕುಸಿದು ವಾಹನ ಸಂಚಾರ ಬಂದ್‌ ಆಗುವ ಸಾಧ್ಯತೆ ಇದೆ.

ಕೆಆರ್‌ಎಸ್‌: ಒಳಹರಿವು ಹೆಚ್ಚಳ
ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಾಗಿದೆ. ಶನಿವಾರ ಸಂಜೆಯ ವೇಳೆಗೆ 3,385 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಗುರುವಾರ 660 ಕ್ಯುಸೆಕ್‌ ಇದ್ದರೆ, ಶುಕ್ರವಾರ 1200 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಜಲಾಶಯದ ನೀರಿನ ಮಟ್ಟ 81.10 ಅಡಿ ಇದ್ದು, ಹೊರಹರಿವು 345 ಕ್ಯುಸೆಕ್‌ ಇದೆ. ಜೂನ್‌ 29ರಂದು ಮಳೆ ಕೊರತೆಯಿಂದ ಜಲಾಶಯದ ನೀರಿನ ಮಟ್ಟ 79.88 ಅಡಿಗೆ ಇಳಿದಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು