ಬುಧವಾರ, ಏಪ್ರಿಲ್ 21, 2021
25 °C

ಅರಮನೆ ಮೈದಾನದಲ್ಲಿ ಹೊಸ ವರ್ಷಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಮುಂದಿನ ವರ್ಷದಿಂದ ಅರಮನೆ ಮೈದಾನದಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಬುಧವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಗರದ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಅಸಭ್ಯ ವರ್ತನೆಗಳು ಕಂಡುಬಂದಿವೆ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ಮಂಗಳವಾರ ರಾತ್ರಿ ಪುಂಡರು ಅಸಭ್ಯ ವರ್ತನೆ ತೋರಿದ್ದಾರೆ. ಕೆಲವು ಯುವಕರಿಂದ ಕಿರುಕುಳವಾಗಿದೆ. ಕಿಡಿಕೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದಿನ ವರ್ಷವೂ ನಡೆದಿತ್ತು: ಹಿಂದಿನ ವರ್ಷದಲ್ಲೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯುವತಿಯರ ಜತೆ ಯುವಕರು ಅಸಭ್ಯವಾಗಿ ವರ್ತಿಸಿದ್ದು, ಈ ವಿಚಾರ ದೊಡ್ಡಮಟ್ಟದ ಗದ್ದಲಕ್ಕೆ ಕಾರಣವಾಗಿತ್ತು. ಇದು ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು. ಇನ್ನು ಮುಂದೆ ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರು.

ಈ ವರ್ಷವೂ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಿ.ಸಿ ಟಿ.ವಿ.ಗಳನ್ನು ಅಳವಡಿಸಿ, ಭದ್ರತೆಗೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಷ್ಟೆಲ್ಲ ಭದ್ರತೆಯ ನಡುವೆಯೂ ಯುವತಿಯರ ಮೇಲೆ ಮತ್ತೆ ದೌರ್ಜನ್ಯಗಳು ನಡೆದಿವೆ. 

ಕಠಿಣ ಕ್ರಮ: ಬೊಮ್ಮಾಯಿ
ಹೊಸ ವರ್ಷಾಚರಣೆ ಸಮಯದಲ್ಲಿ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಯಲ್ಲಿ ಅನುಚಿತ ವರ್ತನೆ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಲವು ಕಡೆಗಳಲ್ಲಿ ಹುಡುಗರು ಪಾನಮತ್ತರಾಗಿ ಗದ್ದಲ ನಡೆಸಿರುವುದು ವರದಿಯಾಗಿದೆ. ಎಲ್ಲೆಲ್ಲಿ ಇಂತಹ ಘಟನೆಗಳು ನಡೆದಿವೆ ಎಂಬ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್‌ಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು