ಶುಕ್ರವಾರ, ಫೆಬ್ರವರಿ 26, 2021
29 °C

ಭ್ರಷ್ಟ ಕಂಪನಿಯ ಬೆನ್ನಿಗೆ ನಿಂತ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನೈಸ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಕೋರ್ಟ್‌ಗೆ ಸಲ್ಲಿಸಿರುವ ಹೆಚ್ಚುವರಿ ಆಕ್ಷೇಪಣಾ ಪತ್ರದಲ್ಲಿ, ಆ ಕಂಪನಿಯ ವಾದವನ್ನು ಸಮರ್ಥಿಸುವಂತಹ ಅಂಶಗಳೇ ಹೆಚ್ಚಿವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸುಪ್ರೀಂಕೋರ್ಟ್‌, ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೇನೂ ಕೇಳಿರಲಿಲ್ಲ. ಯಾರದೋ ಒತ್ತಡದಿಂದ ಕಂಪನಿಯ ಹಿತಕಾಯಲು ರಾಜ್ಯ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಆಕ್ಷೇಪಣಾ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ನೈಸ್ ಕಂಪನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಳ್ಳು ಮಾಹಿತಿಗಳನ್ನು ಅದರಲ್ಲಿ ಸೇರಿಸಲಾಗಿದೆ’ ಎಂದು ಆರೋಪಿಸಿದರು.

‘ನೈಸ್‌ ಸಂಸ್ಥೆ ಸರ್ಕಾರದಿಂದ ನಾಲ್ಕು ಟೌನ್‌ ಶಿಪ್‌ಗಳಿಗೆ ಮಾತ್ರ ಅನುಮತಿ ಪಡೆದುಕೊಂಡಿತ್ತು. ಆದರೆ ಕಡತಗಳನ್ನು ತಿದ್ದಿ ಶ್ರೀರಂಗಪಟ್ಟಣದ ಬಳಿ ಮತ್ತೊಂದು ಟೌನ್‌ ಶಿಪ್‌ ನಿರ್ಮಿಸುತ್ತಿದೆ. ಅದಕ್ಕಾಗಿ ರೈತರಿಗೆ ಅರಿವಿಲ್ಲದಂತೆ ಜಮೀನನ್ನು ಕಬಳಿಸಿದೆ. ಹಗರಣಕ್ಕೆ ಸಂಬಂಧಿಸಿದ ಹಿಂದಿನ ಸರ್ಕಾರದ ಸದನ ಸಮಿತಿಯ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಹಿಂದೆ ನೈಸ್‌ ಯೋಜನೆಯ ವಿರುದ್ಧ ರೈತರನ್ನು ಸಂಘಟಿಸಿ ಚಳುವಳಿ ರೂಪಿಸಿದ್ದ ಜೆಡಿಎಸ್ ಮುಖಂಡ ಎಚ್‌.ಡಿ. ದೇವೇಗೌಡ ಅವರು ಮತ್ತೆ ಹೋರಾಟಕ್ಕೆ ಬಂದು ರೈತರ ಪರವಾಗಿ ನಿಲ್ಲಬೇಕು’ ಎಂದು ಮನವಿ ಮಾಡಿದರು.

ಭ್ರಷ್ಟಾಚಾರ ನಿರ್ಮೂಲನಾ ಮತ್ತು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅಬ್ರಹಾಂ ಟಿ.ಜಿ, ‘2010ರಿಂದ ನೈಸ್‌ ರಸ್ತೆಯಲ್ಲಿ ಸಂಗ್ರಹಿಸಿದ ಸುಂಕದಲ್ಲಿ ನಯಾಪೈಸೆಯನ್ನೂ ಸಹ ಕಂಪನಿ ತೆಗೆದುಕೊಳ್ಳುವಂತಿಲ್ಲ ಎನ್ನುವ ಆದೇಶವಿದೆ. ಆದರೆ ಆ ಆದೇಶದ ಕಡತವನ್ನು ಮುಚ್ಚಿ, ಹೊಸ ನಿಯಮವನ್ನು ತಂದು ಸುಂಕವನ್ನು ಬಾಚಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು