ಬೆಂಗಳೂರು: ಹೊಸದಾಗಿ ಮದುವೆಯಾಗಿರುವ ಬೇಗೂರು ಕಾನ್‌ಸ್ಟೆಬಲ್ ಮಾರುತಿ ಎಂಬುವರು, ರಜೆ ಕೋರಿ ಇನ್‌ಸ್ಪೆಕ್ಟರ್ ಅವರಿಗೆ ವಿಶೇಷ ರೀತಿಯಲ್ಲಿ ಪತ್ರ ಬರೆದಿದ್ದಾರೆ. ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ನನಗೆ ಹೊಸದಾಗಿ ಮದುವೆಯಾಗಿದ್ದು, ಹೊಸ ಹುರುಪು ಇದೆ’ ಎಂದು ಪತ್ರದಲ್ಲಿ ಕಾನ್‌ಸ್ಟೆಬಲ್ ಉಲ್ಲೇಖಿಸಿದ್ದಾರೆ. ಆ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ‘ಹೊಸ ಮದುವೆ ಗಂಡಿಗೆ ರಜೆ ನೀಡಿ’ ಎಂದು ಇನ್‌ಸ್ಪೆಕ್ಟರ್ ಅವರನ್ನು ಕೋರಿದ್ದಾರೆ.
ಹತ್ತು ದಿನಗಳ ರಜೆ ಕೋರಿ ಜ. 16ರಂದು ಇನ್‌ಸ್ಪೆಕ್ಟರ್ ಹೆಸರಿಗೆ ಪತ್ರ ಬರೆದಿರುವ ಕಾನ್‌ಸ್ಟೆಬಲ್, ‘ನಮ್ಮ ಊರಿನಲ್ಲಿ ಮನೆ ದೇವರ ಪೂಜಾ ಕಾರ್ಯಕ್ರಮವಿದೆ. ಅದಕ್ಕೆ ಹೋಗಲು ರಜೆ ಮಂಜೂರು ಮಾಡಬೇಕೆಂದು ಕೋರುತ್ತೇನೆ’ ಎಂದು ಸಹ ವಿನಂತಿಸಿದ್ದಾರೆ.
ಆ ಬಗ್ಗೆ ಪ್ರತಿಕ್ರಿಯಿಸಿದ ಬೇಗೂರು ಠಾಣೆ ಇನ್‌ಸ್ಪೆಕ್ಟರ್, ‘ರಜೆ ಪತ್ರ ನನ್ನ ಕೈಸೇರಿಲ್ಲ’ ಎಂದು ಹೇಳಿದ್ದಾರೆ.
ಸ್ನೇಹಿತರಿಂದ ಅಪ್‌ಲೋಡ್: ಕಾನ್‌ಸ್ಟೆಬಲ್ ಮಾರುತಿ, ರಜೆ ಕೋರಿದ್ದ ಪತ್ರವನ್ನು ತಮ್ಮ ಸ್ನೇಹಿತರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು. ಅದೆ ಗ್ರೂಪ್‌ನಲ್ಲಿದ್ದವರೇ ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಕಾನ್‌ಸ್ಟೆಬಲ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.