ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯ ಅಡಿಪಾಯ ನೋಡಿ ಪರಿಹಾರ ನೀಡುವುದು ಸೂಕ್ತ’

ಗಂಗಾವಳಿಯ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ
Last Updated 16 ಆಗಸ್ಟ್ 2019, 8:25 IST
ಅಕ್ಷರ ಗಾತ್ರ

ಕಾರವಾರ: ‘ಮನೆಗಳಲ್ಲಿ ನಾಲ್ಕು- ಐದು ಅಡಿ ನೀರು ತುಂಬಿ ಹಾನಿಯಾಗಿದೆ ಎಂದು ಕೇವಲ ಶೇ 50ರಷ್ಟು ಪರಿಹಾರ ನೀಡುವುದು ಸರಿಯಲ್ಲ. ಗ್ರಾಮೀಣ ಭಾಗದ ಬಹುತೇಕರ ಮನೆ ಗೋಡೆಗಳು ಮಣ್ಣಿನದ್ದಾಗಿವೆ.ಮನೆಯ ಅಡಿಪಾಯ ನೋಡಿ ಪರಿಹಾರ ನೀಡಬೇಕು’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗಂಗಾವಳಿ ನದಿಯ ಪ್ರವಾಹದಿಂದ ಹಾನಿಗೊಳಗಾದ ಅಂಕೋಲಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು, ನೆರೆಯಿಂದ ಆಗಿರುವ ಹಾನಿಯನ್ನು ಅವಲೋಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಡಿಪಾಯಕ್ಕೆ ಹೆಚ್ಚಿನ ಹಾನಿಯಾಗಿದ್ದರೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೂ ತಿಳಿಸಿದ್ದೇನೆ’ ಎಂದರು.

ಸರಳೆಬೈಲ್‌ಗೆ ಮೊದಲು ಭೇಟಿ ನೀಡಿದ ಅವರು, ಮಳೆಯಿಂದಾಗಿ ಹಾನಿಗೆ ಒಳಗಾದ ಮಾಣಿ ಗೌಡ ಅವರ ಮಣ್ಣಿನ ಮನೆಯನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿ, ‘ಭಾಗಶಃ ಬಿದ್ದ ಮನೆಗಳಿಗೆ ಕನಿಷ್ಠ ₹ 5,200, ಗರಿಷ್ಠ ₹ 90 ಸಾವಿರದವರೆಗೆ ಪರಿಹಾರ ನೀಡುವಂತೆ ನಾನು ಕಂದಾಯ ಸಚಿವನಾಗಿದ್ದಾಗ ಆದೇಶಿಸಿದ್ದೆ. ಅದಕ್ಕೂ ಮೊದಲು ₹ 2 ಸಾವಿರ– ₹ 3 ಸಾವಿರಪರಿಹಾರ ನೀಡುತ್ತಿದ್ದರು. ಅದನ್ನು ಬದಲಾಯಿಸಿ, ಮನೆಗೆ ಶೇ 75ರಷ್ಟುಹಾನಿಯಾದರೆ ಶೇ 100ರಷ್ಟು ಪರಿಹಾರ ಕೊಡಲು ಅವಕಾಶ ಕಲ್ಪಿಸಿದ್ದೆ’ ಎಂದುನೆನಪಿಸಿಕೊಂಡರು.

ಹೆಬ್ಬುಳದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ರಾಜನಗುಳಿ, ಹೊಳೆಗದ್ದೆ, ಸಂಕದಗುಳೆ ಗ್ರಾಮದ 50ಕ್ಕೂ ಅಧಿಕ ಸಂತ್ರಸ್ತರನ್ನು ಮಾತನಾಡಿದರು. ತಮ್ಮ ಮನೆಗಳು ಬಿದ್ದು ಹೋಗಿರುವ ಹಾಗೂ ಮನೆಗೆ ತೆರಳಲು ರಸ್ತೆಗಳು ಇಲ್ಲದ ಬಗ್ಗೆ ಸಂತ್ರಸ್ತರು ಹೇಳಿಕೊಂಡರು.

ಜಾನುವಾರು ಗಣತಿಯಲ್ಲಿದ್ದರೆ ಸಾಕು:‘ಆಕಳುಗಳು ಪ್ರವಾಹದಲ್ಲಿ ಮೃತಪಟ್ಟಿವೆ. ಅವುಗಳ ಬಗ್ಗೆ ಯಾವ ದಾಖಲೆಯೂ ನಮ್ಮ ಬಳಿ ಇಲ್ಲ. ಜತೆಗೆ, ಅರಣ್ಯ ಅತಿಕ್ರಮಣ ಮಾಡಿಕೊಂಡು ಇಷ್ಟು ವರ್ಷ ವಾಸವಿದ್ದೆವು. ಇದೀಗ ಏನೂ ಇಲ್ಲದೆ ನಿರ್ಗತಿಕರಾಗಿದ್ದೇವೆ’ ಎಂದುಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ದೇಶಪಾಂಡೆ, ‘ಜಾನುವಾರು ಗಣತಿಯಲ್ಲಿ ನಿಮ್ಮ ದನಗಳು ಒಳಗೊಂಡಿದ್ದರೆ ಸಾಕು. ಪರಿಹಾರಕ್ಕೆ ಮತ್ತೆ ಬೇರಾವುದೇ ಪುರಾವೆಗಳು ಬೇಡ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ’ ಎಂದರು.

‘ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಮತ್ತೆ ಮನೆ ಕಟ್ಟಿಕೊಂಡರೆ ಈಗಿನ ಪರಿಸ್ಥಿತಿಯೇ ಮುಂದುವರಿಯುತ್ತದೆ. ಅತಿಕ್ರಮಣಕಾರರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗ ಹುಡುಕಿ, ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಿ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ನೀಡಿದರು.

ಸಿಹಿ ಉಣಬಿಡಿಸಿ:ಇದೇ ವೇಳೆ ₹ 10 ಸಾವಿರ ಹಣವನ್ನು ಪಿ.ಡಿ.ಒ ಕೈಗಿತ್ತು, ‘ಮಕ್ಕಳಿಗೆ ಚಾಕಲೇಟ್, ತಿಂಡಿ, ಜನರಿಗೆ ಸಿಹಿ ಮಾಡಿಸಿ ಉಣಬಡಿಸಿ’ ಎಂದು ಹೇಳಿದರು.

‘ಹೆಬ್ಬುಳದ ಪರಿಹಾರ ಕೇಂದ್ರ ಮುಂದುವರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜತೆಗೆ, ಶೀಘ್ರವಾಗಿ ₹ 10 ಸಾವಿರ ಪರಿಹಾರದ ಹಣವನ್ನು ವಿತರಣೆ ಮಾಡಲು ತಿಳಿಸಿದ್ದೇನೆ. ಹೆಬ್ಬುಳ ಭಾಗದಲ್ಲಿ ಜಾನುವಾರಿಗೆ ಮೇವಿನ ಕೊರತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಹಸಿ ಅಥವಾ ಒಣ ಮೇವಿನ ವ್ಯವಸ್ಥೆಗೂ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ’ ಎಂದು ದೇಶಪಾಂಡೆ ತಿಳಿಸಿದರು.

‘ಪ್ರವಾಹ ಸಂತ್ರಸ್ತರಾದವರಲ್ಲಿ ಅನೇಕರು ಅರಣ್ಯ ಅತಿಕ್ರಮಣ ಮಾಡಿಕೊಂಡು ಬಹಳ ವರ್ಷದಿಂದ ವಾಸವಿದ್ದವರು. ಹೀಗಾಗಿ ಅವರಿಗೆ ಅದನ್ನು ಸಕ್ರಮ ಮಾಡಿಕೊಡಲು ಅವಕಾಶವಿದ್ದರೆ ಸರ್ಕಾರ ಮಟ್ಟದಲ್ಲಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

ರಾಮನಗುಳಿಯ ರಾಮನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿ, ನೀರಿನಲ್ಲಿ ನೆನೆದು‌ ಹಾಳಾದ ಅಕ್ಕಿಯನ್ನು ಕೈಯಲ್ಲಿ ಹಿಡಿದು ಬೇಸರಿಸಿದರು. ‘ಸರ್ಕಾರದಿಂದ ಆಹಾರದ ಪ್ಯಾಕೆಜ್ ನೀಡುತ್ತಾರೆ. ಪಿ.ಡಿ.ಒ.ಜೊತೆ ಕೇಳಿ ಪಡೆಯಿರಿ. ಮನೆಗೆ ಹಾನಿಯಾಗಿದ್ದರೆ ಪರಿಹಾರ ನೀಡುತ್ತಾರೆ, ಭಯ ಪಡಬೇಡಿ’ ಎಂದು ಸಮಾಧಾನಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್, ರಮಾನಂದ ನಾಯಕ, ಗುತ್ತಿಗೆದಾರ ಜಿ.ಕೆ.ಶಿವಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT