ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಲೆಂಟೈನ್‌ ಡೇ’ ಆಚರಣೆ ವಿರೋಧಿಸಿ ಕರಪತ್ರ: ಪ್ರಮೋದ ಮುತಾಲಿಕ್‌

Last Updated 12 ಫೆಬ್ರುವರಿ 2020, 14:29 IST
ಅಕ್ಷರ ಗಾತ್ರ

ಬೆಳಗಾವಿ: ‘ಪಾಶ್ಚಾತ್ಯ ವಿಕೃತಿಯಾದ ಹಾಗೂ ವಿದೇಶಿ ಮೂಲದವರು ನಿರ್ಧರಿಸಿದ ದಿನದಂದು (ಫೆ. 14) ‘ವ್ಯಾಲೆಂಟೈನ್‌ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನ ಆಚರಿಸಬಾರದು ಎಂದು ಶ್ರೀರಾಮ ಸೇನೆ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೇಜುಗಳ ಬಳಿ ಕರಪತ್ರಗಳನ್ನು ವಿತರಿಸಲಾಗುವುದು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್‌ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಫೆ. 14ರಂದು ತಂದೆ–ತಾಯಿ ಪೂಜಿಸಿ ಎಂದು ತಿಳಿಸಲಾಗುವುದು. ಲಕ್ಷ ಕರಪತ್ರಗಳನ್ನು ಮುದ್ರಿಸಿ ಜಿಲ್ಲಾ ಘಟಕಗಳಿಗೆ ಕಳುಹಿಸಲಾಗಿದೆ. ಅವರು ಜೆರಾಕ್ಸ್‌ ಮಾಡಿ ಹಂಚುತ್ತಾರೆ. ಮುಖ್ಯವಾಗಿ ಕಾಲೇಜುಗಳ ಬಳಿ ಯುವಕ– ಯುವತಿಯರನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿಂದೂ ಸಂಸ್ಕೃತಿ ಮೇಲೆ ಆಕ್ರಮಣ ಮಾಡುವ ವಿಕೃತಿಗಳಿಗೆ ತಡೆ ಹಾಕಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ದಾಸರನ್ನಾಗಿಸುವ ಇಂತಹ ಆಚರಣೆಗಳಿಂದ ಯುವಜನರು ದೂರವಿರಬೇಕು ಎಂದು ಮನವರಿಕೆ ಮಾಡಿಕೊಡಲಾಗುವುದು’ ಎಂದರು.

‘ವ್ಯಾಲೆಂಟೈನ್‌ ಡೇಗೆ ಹಿಂದಿನಿಂದಲೂ ನಮ್ಮ ವಿರೋಧವಿದೆ. ನಮ್ಮ ಪವಿತ್ರ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿರುವ ಆಚರಣೆಗಳನ್ನು ನಿಷೇಧಿಸಬೇಕು. ಪ್ರೀತಿ, ಪ್ರೇಮಕ್ಕೆ, ಪ್ರೇಮಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಫೆ.14ರಂದೇ ಆಚರಿಸುವುದಕ್ಕೆ ವಿರೋಧವಿದೆ. ನಮ್ಮ ಯುವಕ, ಯುವತಿಯರು ಡ್ರಗ್ಸ್‌ ಮಾಫಿಯಾಕ್ಕೆ ಬಲಿಯಾಗಬಾರದು ಎನ್ನುವುದಷ್ಟೇ ನಮ್ಮ ಕಾಳಜಿ’ ಎಂದು ಹೇಳಿದರು.

‘ಹಿಂದೂ ಯುವಕ, ಯುವತಿಯರನ್ನು ದಾರಿ ತಪ್ಪಿಸಿ ದುರ್ಬಲರನ್ನಾಗಿ ಮಾಡುವ ದೊಡ್ಡ ಷಡ್ಯಂತ್ರ ವ್ಯಾಲೆಂಟೈನ್‌ ಡೇ ಮೂಲಕ ನಡೆದಿದೆ. ಇದನ್ನು ಬಲವಾಗಿ ವಿರೋಧಿಸುತ್ತೇವೆ’ ಎಂದು ಹೇಳಿದರು.

‘ನಾವು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಆದರೆ, ಪ್ರವಾಸಿತಾಣಗಳು, ಉದ್ಯಾನಗಳು, ಕಾಲೇಜುಗಳ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ಕೊಡುವಂತೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT