ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ: ಇದೇ 13ರಿಂದ ಮೌಲ್ಯಮಾಪನ

Last Updated 3 ಜುಲೈ 2020, 22:27 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ನಡುವೆಯೂ ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆಯೂ ಶುಕ್ರವಾರ ಕೊನೆಗೊಂಡಿದ್ದು, 7.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಲೇ ಪರೀಕ್ಷೆ ಬರೆದಿದ್ದಾರೆ.

13ರಿಂದ ಮೌಲ್ಯಮಾಪನ ಆರಂಭವಾಗಲಿದ್ದು, 30ರೊಳಗೆ ಕೊನೆಗೊಳ್ಳಲಿದೆ. ಆಗಸ್ಟ್ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ: ಶೇ 98.10ರಷ್ಟು ಹಾಜರಾತಿ
ಬೆಂಗಳೂರು: ಶುಕ್ರವಾರದ ತೃತೀಯ ಭಾಷಾ ಪರೀಕ್ಷೆಯಲ್ಲಿ 7,76,251 ವಿದ್ಯಾರ್ಥಿಗಳ ಪೈಕಿ 7,61,506 ಮಂದಿ ಹಾಜರಾಗಿದ್ದು, ಶೇ 98.10ರಷ್ಟು ಹಾಜರಾತಿ ದಾಖಲಾಗಿದೆ.

ಕಳೆದ ವರ್ಷ ಇದೇ ಪರೀಕ್ಷೆಗೆ ಶೇ 98.76ರಷ್ಟು ಹಾಜರಾತಿ ಇತ್ತು. ಕಂಟೈನ್‍ಮೆಂಟ್ ಪ್ರದೇಶಗಳ 3,911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ವರ್ಷ ಒಟ್ಟಾರೆಯಾಗಿ ಶೇ 98.06ರಷ್ಟು ಹಾಜರಾತಿ ದಾಖಲಾಗಿದ್ದರೆ, ಕಳೆದ ವರ್ಷ ಶೇ 98.75ರಷ್ಟು ಹಾಜರಾತಿ ಇತ್ತು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.‌

ಕೃತಜ್ಞತೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳಿಸಲು ಸಹಕರಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹಾಗೂ ಅಧಿಕಾರಿಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.

‘ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಲು ಕಾರಣ. ಮೌಲ್ಯಮಾಪನಕ್ಕೆ ಸಹ ಇಂತಹದೇ ಎಸ್‌ಒಪಿ ಸಿದ್ಧಪಡಿಸಲಾಗುವುದು. ಆಗ ಶಿಕ್ಷಕರು ಧೈರ್ಯವಾಗಿ ಮೌಲ್ಯಮಾಪನ ಕೇಂದ್ರಗಳಿಗೆ ಬರುವುದು ಸಾಧ್ಯವಾಗಲಿದೆ’ ಎಂದರು.

ರಾಜ್ಯದಿಂದ ಇತಿಹಾಸ ಸೃಷ್ಟಿ
‘ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ನೆರೆ ರಾಜ್ಯಗಳಲ್ಲೂ ಪರೀಕ್ಷೆ ರದ್ದುಪಡಿಸಿದ್ದರಿಂದ ಒತ್ತಡ ಹೆಚ್ಚಾಗಿತ್ತು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ಅಧಿಕಾರಿಗಳ ಪೂರ್ಣ ಸಹಕಾರ ಸಿಕ್ಕಿತು. ಅದರ ಫಲವಾಗಿಯೇ ಪರೀಕ್ಷೆಗಳು ಯಶಸ್ವಿಯಾಗಿ ಕೊನೆಗೊಂಡಿವೆ. ಪರೀಕ್ಷಾ ಕೇಂದ್ರದ ಮೂಲಕ ಕೋವಿಡ್ ಹರಡಿದ ಒಂದೇ ಒಂದು ಪ್ರಕರಣವೂ ನಡೆದಿಲ್ಲ’ ಎಂದು ಸಚಿವ ಸುರೇಶ್‌ ಕುಮಾರ್ ತಿಳಿಸಿದರು.

ತಾಯಿಯ ನಿಧನದ ದುಃಖದಲ್ಲೂ ಪರೀಕ್ಷೆ ಬರೆದ ಮಗಳು
ಮೈಸೂರು:
ತಾಯಿಯ ನಿಧನದ ದುಃಖದಲ್ಲಿಯೂ ಇಲ್ಲಿನ ದೀಪಾ ಪ್ರೌಢಶಾಲೆಯ ವಿದ್ಯಾರ್ಥಿನಿ, ಬೀರಿಹುಂಡಿ ಗ್ರಾಮದ ಆರ್‌.ದೀಪು ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದೀಪು ತಾಯಿ ಲಕ್ಷ್ಮಮ್ಮ ಗುರುವಾರ ಸಂಜೆ ಮೃತಪಟ್ಟಿದ್ದರು.

ಆ ದಿನ ಕನ್ನಡ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ, ತಾಯಿಯ ಸಾವಿನ ದುಃಖದಲ್ಲಿಯೇ ಇಡೀ ರಾತ್ರಿ ಕಳೆದಿದ್ದಾಳೆ. ಆದರೂ ಶುಕ್ರವಾರ ರೂಪಾನಗರದ ಪರೀಕ್ಷಾ ಕೇಂದ್ರಕ್ಕೆ ಬಂದು ಕೊನೆಯ ಪರೀಕ್ಷೆ ಬರೆದಳು. ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಳು.

***
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಸಚಿವ ಸುರೇಶ್‌ಕುಮಾರ್ ಸೇರಿದಂತೆ ಎಲ್ಲರಿಗೂ ಅಭಿನಂದನೆ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ.
–ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT