ಮಂಗಳವಾರ, ಮೇ 18, 2021
23 °C
ನೆರೆ–ಹೊರೆಯವರ ಕಷ್ಟಕ್ಕೆ ಮಿಡಿದ ನೀರು ದಾನಿಗಳ ಹೃದಯ

ಜಿನುಗುತಿದೆ ಮಾನವೀಯ ಜಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ವಿವಿಧೆಡೆ ಜೀವಜಲಕ್ಕೆ ತತ್ವಾರವಾಗಿದ್ದು, ನೆರೆ–ಹೊರೆಯವರ ಕಷ್ಟಕ್ಕೆ ಮಿಡಿದ ನೀರು ದಾನಿಗಳ ವಿವರ ಇಲ್ಲಿದೆ.

ನೀರು ಕೊಡುವ ನಿಂಗಪ್ಪ ಬಂಕಾಪುರ 

ಸವಣೂರ: ಇಲ್ಲಿನ ಉದ್ಯಮಿ ನಿಂಗಪ್ಪ ಬಂಕಾಪುರ ತಮ್ಮ ಕೊಳವೆಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ.

ಪಟ್ಟಣದ ಹೊರವಲಯದಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಕೆ ಘಟಕವಿದೆ. ಎರಡು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದ ನಿಂಗಪ್ಪ ಆಗಿನಿಂದಲೂ ನೀರಿನ ಸಮಸ್ಯೆ ಎದುರಾದಾಗಲೆಲ್ಲ ನೀರು ಕೊಟ್ಟಿದ್ದಾರೆ. ಮನೆ ಬಳಕೆ, ಜಾತ್ರೆ, ಮದುವೆ, ಸಾಮಾಜಿಕ ಕಾರ್ಯಗಳಿಗೆ ಉಚಿತವಾಗಿ ನೀರು ನೀಡುತ್ತಿದ್ದಾರೆ.

‘ಬರದಲ್ಲೂ ನನ್ನ ಕೊಳವೆಬಾವಿಯಲ್ಲಿ ನೀರಿದೆ. ಸಂಕಷ್ಟ ಪಡುವ ಜನರಿಗೆ ನೀರನ್ನು ನೀಡುತ್ತಿದ್ದೇನೆ’ ಎಂದು ನಿಂಗಪ್ಪ ಬಂಕಾಪುರ ತಿಳಿಸಿದರು.

‘ಬೆಳೆಗಿಂತ ಬಾಯಾರಿಕೆ ನೀಗುವುದೇ ಮುಖ್ಯ’


ಭಾಲ್ಕಿ ತಾಲ್ಲೂಕಿನ ತರನಳ್ಳಿಯ ಚಂದ್ರಕಾಂತ ತಳವಾಡೆ ಕೊಳವೆಬಾವಿಯಿಂದ ಜನರಿಗೆ ನೀರು ಪೂರೈಸುತ್ತಿರುವುದು

ಭಾಲ್ಕಿ: ತಾಲ್ಲೂಕಿನ ತರನಳ್ಳಿಯ ಕೃಷಿಕ ಚಂದ್ರಕಾಂತ ತಳವಾಡೆ ಎರಡು ಕೊಳವೆಬಾವಿಗಳಿಂದ ನಿತ್ಯ ನೀರು ಕೊಡುತ್ತಿದ್ದಾರೆ.

ಗ್ರಾಮದ ಓಣಿಯೊಂದಕ್ಕೆ ಆರು ತಿಂಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ. ಅಲ್ಲಿನ ಕೊಳವೆಬಾವಿಯೂ ಬತ್ತಿ ಹೋಗಿ ಜನ ಕೊಡಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆಯುತ್ತಿದ್ದರು. ಇದು ಅವರ ಮನ ಕಲಕಿತು. ಜನರ ಸಂಕಷ್ಟ ನೋಡಲಾಗದೆ ನೀರು ಕೊಡಲು ಆರಂಭಿಸಿದರು. ಅವರು ಮೂರು ವರ್ಷಗಳಿಂದ ನೀರು ಕೊಡುತ್ತಿದ್ದಾರೆ.

‘ಜನ ನೀರು ಒಯ್ಯಲು ಬಂದರೆ ವಿದ್ಯುತ್ ಲಭ್ಯತೆಗೆ ಅನುಸಾರವಾಗಿ ಬೆಳಿಗ್ಗೆ, ಸಂಜೆ ಮೂರು ಗಂಟೆ ನೀರು ಕೊಡುತ್ತಿದ್ದಾರೆ. ತಾಲ್ಲೂಕು ಆಡಳಿತ ಮಾಡಬೇಕಾದ ಕಾರ್ಯವನ್ನು ಚಂದ್ರಕಾಂತ ಮಾಡುತ್ತಿದ್ದಾರೆ’ ಎನ್ನುತ್ತಾರೆ ಹಿರಿಯರಾದ ಪ್ರಕಾಶ ಚಳಕಾಪೂರೆ.

ನೀರು ಪೂರೈಸುವ ‘ಟೀಂ ಗರೋಡಿ‌’


ಟೀಂ ಗರೋಡಿ ಸದಸ್ಯರು ನೀರು ಸರಬರಾಜು ಮಾಡುತ್ತಿರುವುದು

ಮಂಗಳೂರು: ನೀರಿಗಾಗಿ ತೊಂದರೆ ಅನುಭವಿಸುತ್ತಿರುವ ನಗರದ ನಿವಾಸಿಗಳಿಗೆ ಆಸರೆಯಾಗಿ ನಿಂತಿದೆ ‘ಟೀಂ ಗರೋಡಿ’. 

2 ವರ್ಷಗಳ ಹಿಂದೆ ‘ಟೀಂ ಗರೋಡಿ’ ಸೇವೆಯನ್ನು ಪ್ರಾರಂಭಿಸಿದೆ. ನಗರದ ಗರೋಡಿಯಲ್ಲಿ ಸ್ಥಳೀಯರ ಬೇಡಿಕೆಯಂತೆ, ಅಲ್ಲಿನ ಜನರಿಗೆ ನೀರು ಪೂರೈಕೆ ಆರಂಭಿಸಲಾಯಿತು. ನಂತರ ಬೇಡಿಕೆ ಹೆಚ್ಚಿದ್ದರಿಂದ ನಗರದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸಿದೆ.

ಇದೀಗ ಕಟ್ಟಡ ಕಾಮಗಾರಿ ಸ್ಥಗಿತವಾಗಿದ್ದು, ಗುತ್ತಿಗೆದಾರರಿಂದ ಪಿಕ್‌ಅಪ್‌ ವಾಹನ ಹಾಗೂ ತಲಾ 2 ಸಾವಿರ ಲೀಟರ್‌ ಸಾಮರ್ಥ್ಯದ ಎರಡು ಟ್ಯಾಂಕ್‌ ಪಡೆದಿರುವ ಟೀಂ ಗರೋಡಿ, ನಗರದ ಜನರಿಗೆ ರಾತ್ರಿ ಹಗಲೆನ್ನದೇ ನೀರು ಪೂರೈಕೆ ಮಾಡುತ್ತಿದೆ.

‘ಗುತ್ತಿಗೆದಾರರೊಬ್ಬರು ಟ್ಯಾಂಕರ್‌ ನೀಡಲು ಮುಂದಾಗಿದ್ದಾರೆ. ಪಿಕ್‌ಅಪ್‌ ಜತೆಗೆ ಟ್ಯಾಂಕರ್‌ ಬಳಸಿ
ಕೊಂಡು ಮತ್ತಷ್ಟು ಜನರಿಗೆ ನೀರು ಪೂರೈಸುವ ಉದ್ದೇಶವಿದೆ’ ಎನ್ನುತ್ತಾರೆ ಟೀಂ ಗರೋಡಿಯ ಬೃಜೇಶ್‌ ಗರೋಡಿ.

‘ಟೀಂ ಗರೋಡಿ ತಂಡದಲ್ಲಿ ಸುಮಾರು 80ಕ್ಕೂ ಹೆಚ್ಚು ಸದಸ್ಯರಿದ್ದು, ನೀರು ಪೂರೈಸಲು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನೀರಿನ ಅತ್ಯಂತ ಅಭಾವವಿರುವ ಜನರು ಮೊಬೈಲ್‌ 70260 99909 ಕರೆ ಮಾಡಿದರೆ, ಉಚಿತ ನೀರಿನ 
ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಮನುಷ್ಯತ್ವವೇ ದೊಡ್ಡದು’

ಕುಣಿಗಲ್: ತಾಲ್ಲೂಕಿನ ಪಡುವಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಅರ್ಜುನಹಳ್ಳಿಯ ದಲಿತರ ಕಾಲೊನಿ ಜನರ ಬಾಯಲ್ಲಿ ‘ಪುಣ್ಯಾತ್ಮ’ ಎಂದು ಹೊಗಳಿಸಿಕೊಳ್ಳುತ್ತಿದ್ದಾರೆ ಪಡುವಗೆರೆಯ ಜಯರಾಮ್.

ಕಾಲೊನಿಗೆ ನೀರು ಪೂರೈಸುತ್ತಿದ್ದ ಕೊಳಬೆಬಾವಿಯಲ್ಲಿ ನೀರು ಬತ್ತಿದೆ. ಪಿಡಿಒ ಹೇಮಂತ್ ಮತ್ತು ಕಾರ್ಯದರ್ಶಿ ತಿಮ್ಮೇಗೌಡ ಹಣಕ್ಕೆ ನೀರು ನೀಡುವಂತೆ ಖಾಸಗಿ ಕೊಳವೆಬಾವಿ ಮಾಲೀಕರನ್ನು ಸಂಪರ್ಕಿಸಿದ್ದರು.

ಈ ವಿಷಯ ತಿಳಿದ ಜಯರಾಮ್, ‘ನೀರು ನೀಡುವುದು ಪುಣ್ಯದ ಕೆಲಸ. ನಮ್ಮ ಕೊಳವೆಬಾವಿಯಲ್ಲಿ ನೀರಿದೆ. ವಿದ್ಯುತ್ ಇದ್ದಾಗ ಬಂದು ಎಷ್ಟು ನೀರನ್ನಾದರೂ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾರೆ.

ನೀರಿಗೆ ಸರ್ಕಾರದಿಂದ ಹಣ ಕೊಡಿಸುವುದಾಗಿ ಪಿಡಿಒ ಹೇಳಿದರೂ ಹಣ ನಿರಾಕರಿಸಿದ್ದಾರೆ. ಒಂದು ತಿಂಗಳಿಂದ ನೀರು ನೀಡುತ್ತಿದ್ದಾರೆ.

ತಂದೆ–ತಾಯಿ ಹೆಸರಲ್ಲಿ ಟ್ಯಾಂಕ್


ಕೊಡಿಗೇನಹಳ್ಳಿ ಗ್ರಾಮದ ವೆಂಕಟರಾಮಯ್ಯ ಮತ್ತು ಕೆ.ಟಿ.ನಾಗರಾಜು ಅವರ ಮಿನಿ ಟ್ಯಾಂಕ್‌ನಲ್ಲಿ ನೀರು ಹಿಡಿಯುತ್ತಿರುವ ಗ್ರಾಮಸ್ಥರು

ಕೊಡಿಗೇನಹಳ್ಳಿ (ಮಧುಗಿರಿ): ಗ್ರಾಮಸ್ಥರಿಗೆ ಸಿಹಿ ನೀರು ದೊರಕಿಸಿಕೊಡಬೇಕು ಎಂದು ಕೊಡಿಗೇನಹಳ್ಳಿಯ ದಿವಂಗತ ಪಟೇಲ್ ತಿಮ್ಮರಸಯ್ಯ ಹಾಗೂ ರಾಮಲಕ್ಷ್ಮಮ್ಮ ದಂಪತಿ ಬಾವಿ ತೋಡಿಸಿದ್ದರು. ಮಳೆ ಅಭಾವದ ಕಾರಣಕ್ಕೆ ಆ ಬಾವಿಯಲ್ಲಿ ಒರತೆ ಬತ್ತಿ ಹೋಯಿತು.

ನೀರಿನ ವಿಚಾರದಲ್ಲಿ ದಾನಿಯಂತೆ ಬದುಕಿದ್ದ ತಮ್ಮ ತಂದೆ–ತಾಯಿ ತೆಗೆಸಿದ ಬಾವಿಯಲ್ಲಿ ನೀರು ಬತ್ತಿದ್ದು ಮತ್ತು ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಎದುರಾಗಿದ್ದು ಅವರ ಪುತ್ರರಾದ ವೆಂಕಟರಾಮಯ್ಯ ಮತ್ತು ಕೆ.ಟಿ.ನಾಗರಾಜು ಅವರ ಮನಸ್ಸಿಗೆ ನಾಟಿತು. ಐದು ವರ್ಷಗಳ ಹಿಂದೆ ತಮ್ಮ ಜಮೀನಿನ ಪಕ್ಕದಲ್ಲೇ ಮಿನಿ ಟ್ಯಾಂಕ್ ನಿರ್ಮಿಸಿ ಗ್ರಾಮಸ್ಥರಿಗೆ ನೀರನ್ನು ಉಚಿತವಾಗಿ ನೀಡುವಂತೆ ಮಾಡಿತು.

ಕೊಳವೆಬಾವಿ ಬಿಟ್ಟುಕೊಟ್ಟ ಲಕ್ಷ್ಮಕ್ಕ

ಪಟ್ಟನಾಯಕನಹಳ್ಳಿ (ಶಿರಾ): ಹೆಂದೊರೆ ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಕ್ಕ ಜಮೀನಿನಲ್ಲಿರುವ ಕೊಳವೆಬಾವಿಯನ್ನು ಕುಡಿಯುವ ನೀರು ಪೂರೈಸಲು ಬಿಟ್ಟುಕೊಟ್ಟಿದ್ದಾರೆ.

ಅದು ತಮ್ಮ ಪಂಚಾಯಿತಿ ವ್ಯಾಪ್ತಿಗಲ್ಲ! ಪಕ್ಕದ ನಾದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟನಾಯಕನಹಳ್ಳಿ ಜನರಿಗೆ.

‘ಒಬ್ಬ ಜನಪ್ರತಿನಿಧಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕೆಲಸ. ನಾದೂರು ಪಂಚಾಯಿತಿ ಪಿಡಿಒ ತಿಪ್ಪೇಸ್ವಾಮಿ, ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮನವಿ ಮೇರೆಗೆ ನೀರು ಕೊಟ್ಟಿದ್ದೇನೆ. ಮೋಟರ್, ಪಂಪ್ ದುರಸ್ತಿಗೆ ಬಂದರೆ ಅವರು ಮಾಡಿಸಿಕೊಡುವರು’ ಎಂದು ಹೇಳಿದರು.

ಬಾವಿಯನ್ನೇ ಬಿಟ್ಟುಕೊಟ್ಟರು!

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ತೀವ್ರ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಪ್ರತಿದಿನ 5 ಟ್ಯಾಂಕರ್‌ನಷ್ಟು ನೀರು ಸರಬರಾಜು ಮಾಡುತ್ತಿದೆ.

ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಅವರ ತಂಡ ಉದ್ಯಮಿಗಳ ನೆರವಿನೊಂದಿಗೆ ನೀರು ಸರಬರಾಜು ಮಾಡುವ ಹೊಣೆ ಹೊತ್ತುಕೊಂಡಿದೆ. ಹತ್ತು ವರ್ಷಗಳಿಂದ ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡುವ ಕಾರ್ಯವನ್ನು ನಾಗರಿಕ ಸಮಿತಿ ಮಾಡಿಕೊಂಡು ಬಂದಿದೆ. 

ಬೀಡಿನಗುಡ್ಡೆಯಲ್ಲಿರುವ ಉದ್ಯಮಿ ಪ್ರಕಾಶ್ ಪೈ ಅವರು ತಮ್ಮ ಮೂರು ಬಾವಿಗಳನ್ನು ನೀರು ಸರಬರಾಜು ಮಾಡಲು ಬಿಟ್ಟುಕೊಟ್ಟಿದ್ದಾರೆ.

ಜೋಳ ಬೆಳೆಯೋದ್‌ ಬಿಟ್ಟು ನೀರು ಕೊಟ್ಟರು


ಔರಾದ್ ರೈತ ಪ್ರಕಾಶ ಅಲ್ಮಾಜೆ ಅವರು ತಮ್ಮ ಕೊಳವೆಬಾವಿ ನೀರನ್ನು ಟ್ಯಾಂಕರ್‌ಗೆ ತುಂಬಿಸುತ್ತಿರುವುದು

ಔರಾದ್‌: ಊರಿನ ಜನರ ದಾಹ ತಣಿಸಲು ರೈತ ಪ್ರಕಾಶ ಬಾಬುರಾವ ಅಲ್ಮಾಜೆ ಮೂರು ತಿಂಗಳಿನಿಂದ ಉಚಿತವಾಗಿ ನೀರು ಕೊಡುತ್ತಿದ್ದಾರೆ.

4 ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಕಳೆದ ವರ್ಷ ಕೊರೆಸಿದ ಕೊಳವೆಬಾವಿಯಲ್ಲಿ 4 ಇಂಚಿಗೂ ಹೆಚ್ಚು ನೀರು ಸಿಕ್ಕಿದೆ. ನಿತ್ಯ 30 ರಿಂದ 35 ಟ್ಯಾಂಕರ್ ನೀರು ವಿತರಿಸಲಾಗುತ್ತಿದೆ.

‘ಇನ್ನೊಬ್ಬರ ಕಷ್ಟ ನಮಗೆ ನೋಡಲಾಗದು. ಅದಕ್ಕಾಗಿ ಮೆಕ್ಕೆಜೋಳಕ್ಕೆ ಬಿಡುವ ನೀರು ಜನರಿಗೆ ಕೊಡುತ್ತಿದ್ದೇವೆ’ ಎಂದು ಪ್ರಕಾಶ ಅಲ್ಮಾಜೆ ಹೇಳುತ್ತಾರೆ.

‘ಪ್ರಕಾಶ ಅವರ ಸಹಕಾರದಿಂದ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿದೆ. ಅವರ ಉಪಕಾರ ಮರೆಯಲಾಗದು’ ಎನ್ನುತ್ತಾರೆ ಔರಾದ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿಠಲರಾವ ಹಾದಿಮನಿ.

‘ದಾಹ ನೀಗುವುದು ಪುಣ್ಯದ ಕೆಲಸ’

ಕುರುಗೋಡು: ಸಿರಿಗೇರಿ ಗ್ರಾಮದ ಶ್ರೀಕಂಠಗೌಡ ಅವರು ಮೂರು ವರ್ಷಗಳಿಂದ ತಮ್ಮ ಕೊಳವೆಬಾವಿಯಿಂದ ನವಗ್ರಾಮಕ್ಕೆ ಕುಡಿಯುವ ನೀರನ್ನು ಕೊಡುತ್ತಿದ್ದಾರೆ. ಮುದ್ದಟನೂರು ಗ್ರಾಮದಿಂದ ನವಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಇವರ ಜಮೀನಿನ ಮೂಲಕ ಹಾದು ಹೋಗಿದೆ.

ಬಾಯಾರಿದವರಿಗೆ ನೀರು ಕೊಡುವುದು ಪುಣ್ಯದ ಕೆಲಸ ಎನ್ನುವುದು ಶ್ರೀಕಂಠಗೌಡ ನಂಬಿಕೆ. ‘ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸರಾವ್ ಅವರು ನೀರು ಕೊಡುವಂತೆ ಮನವಿ ಮಾಡಿದರು. ಅರವಟಿಗೆಗಳನ್ನು ತೆರೆದು ನೀರು ದಾನ ಮಾಡುತ್ತಿರುವವರ ಮುಂದೆ ನನ್ನದೊಂದು ಅಳಿಲು ಸೇವೆ ಅಷ್ಟೇ’ ಎನ್ನುತ್ತಾರೆ ಅವರು.

‘ಮಾರಾಟದ ವಸ್ತು ಆಗದಿರಲಿ’

ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿ ರೈತರ ಅಡಿಕೆ ಬೆಳೆಗೆ ನೀರಿನ ಕೊರತೆ ಉಂಟಾಗಿತ್ತು. ಇನ್ನೊಂದೆಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಹಳ್ಳಿಗಳಲ್ಲಿ ಜನ–ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾ
ಗಿತ್ತು. ಆಗ ಪ್ರಗತಿಪರ ರೈತ ಆರ್.ರುದ್ರಮುನಿಯಪ್ಪ ತಮ್ಮ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲು ಮುಂದಾದರು. 

ನೀರು ಸರಬರಾಜು ಮಾಡುವ ಕೆಲಸವನ್ನು ಗ್ರಾಮ ಪಂಚಾಯಿತಿ ವಹಿಸಿಕೊಂಡಿದೆ.

‘ಗ್ರಾಮ ಪಂಚಾಯಿತಿವು ನಮ್ಮ ಜಮೀನಿನ ಕೊಳವೆಬಾವಿಯಿಂದ ಪೈಪ್‍ಲೈನ್ ಮಾಡಿ ಜನರಿಗೆ ನೀರು ನೀಡುತ್ತಿದೆ. ಇದರಿಂದ ಖುಷಿಯಾಗಿದೆ. ನೀರು ಎಂದಿಗೂ ಮಾರಾಟದ ವಸ್ತು ಆಗಬಾರದು’ ಎಂದು ಆರ್.ರುದ್ರಮುನಿಯಪ್ಪ ಅಭಿಪ್ರಾಯಪಟ್ಟರು.

ಈರುಳ್ಳಿ ಬಿತ್ತನೆ ಮುಂದೂಡಿಕೆ

ಕೂಡ್ಲಿಗಿ: ತಾಲ್ಲೂಕಿನ ಈಚಲಬೊಮ್ಮನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೋಡಲಾರದೆ ಮಲ್ಲಿಕಾರ್ಜುನ ತಮ್ಮ ಹೊಲದ ಕೊಳವೆ ಬಾವಿಯಿಂದ ನೀರು ಕೊಟ್ಟು ಜನರ ದಾಹ ನೀಗಿಸುತ್ತಿದ್ದಾರೆ.

ಮುಂಗಾರು ಹಂಗಾಮಿಗೆ ಈರುಳ್ಳಿ ಬಿತ್ತನೆ ಮಾಡಲು ಹೊಲವನ್ನು ಹದ ಮಾಡಿಟ್ಟುಕೊಂಡಿದ್ದಾರೆ. ಈಗ ಈರುಳ್ಳಿ ಬಿತ್ತಿದರೆ ಗ್ರಾಮಕ್ಕೆ ನೀರು ಕೊಡಲು ಆಗುವುದಿಲ್ಲ ಎಂದು ಬಿತ್ತನೆ ಕಾರ್ಯವನ್ನೇ ಮುಂದೂಡಿದ್ದಾರೆ.

ಹಿಂದಿನ ವರ್ಷ ಒಂದೂವರೆ ಎಕರೆಯಲ್ಲಿ ತರಕಾರಿಗಳನ್ನು ಬೆಳೆದಿದ್ದರು. ಆದರೆ ಈ ಬಾರಿ ಅದನ್ನು ಕೈಬಿಟ್ಟಿದ್ದಾರೆ. ಎರಡು ತಿಂಗಳ ಹಿಂದೆ ಹಾಕಿದ್ದ ಟೊಮೆಟೊ ಸಸಿಗಳನ್ನು ಕಿತ್ತು ಹಾಕಿದ್ದಾರೆ.

ಪುರಸಭೆ ಸದಸ್ಯೆಯಿಂದ ನಿತ್ಯ ನೀರು ದಾನ 

ಅಂಕೋಲಾ: ತೆಂಗಿನತೋಟಕ್ಕೆ ನೀರು ಹಾಯಿಸುವುದನ್ನು ನಿಲ್ಲಿಸಿ ಜನರಿಗೆ ಜೀವಜಲವನ್ನು ಪೂರೈಸುತ್ತಾರೆ ಇಲ್ಲಿನ ಪುರಸಭೆ ಸದಸ್ಯೆ ಶಾಂತಲಾ ನಾಡಕರ್ಣಿ.

ಬೇಸಿಗೆಯಲ್ಲಿ ಮನೆಯ ಬಾವಿ ಬತ್ತಿದ ಮೇಲೆ ಜನರು ನೀರು ಹುಡುಕಿಕೊಂಡು ಹೋಗುವುದು ಶಾಂತಲಾ ಮತ್ತು ಅರುಣ ನಾಡಕರ್ಣಿ ದಂಪತಿ ಮನೆಗೆ. ಕೊಡ ಹಿಡಿದು ಬರುವವರಿಗೆ ಅವರು ಖುಷಿಯಿಂದಲೇ ನೀರು ಕೊಡುತ್ತಾರೆ. ಮೂರು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಅವರು ಈ ಕಾಯಕ ಮಾಡಿಕೊಂಡು ಬಂದಿದ್ದಾರೆ. ‘ನೀರು ಕೊಡುವುದರ ಹಿಂದೆ ಮನುಷ್ಯತ್ವ ಇದೆಯೇ ವಿನಾ ರಾಜಕೀಯ ಉದ್ದೇಶವಿಲ್ಲ. ಸರ್ಕಾರ ಟ್ಯಾಂಕರ್ ನೀಡಿದರೆ ನಾವು ಉಚಿತವಾಗಿ ನೀರು ಕೊಡಲು ಸಿದ್ಧರಿದ್ದೇವೆ. ಇದರಿಂದ ದುಡಿಯುವ ಕೈಗಳ ಸಮಯ ಮತ್ತು ಶ್ರಮ ಉಳಿತಾಯವಾಗುತ್ತದೆ’ ಎಂಬುದು ಶಾಂತಲಾ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು