ಶನಿವಾರ, ಏಪ್ರಿಲ್ 17, 2021
32 °C
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಸಂದೇಶಗಳು

ಜಿ.ಟಿ.ದೇವೇಗೌಡರಿಗೆ ಬಿಜೆಪಿಗೆ ಸ್ವಾಗತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಇನ್ನೂ ಜೆಡಿಎಸ್‌ನಲ್ಲೇ ಇದ್ದರೂ, ‘ಬಿಜೆಪಿಗೆ ಸ್ವಾಗತ’ ಎಂದು ಕೋರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಇಂತಹ ಸಂದೇಶಗಳನ್ನು ಹರಿಯಬಿಟ್ಟಿರುವವರು ಬಿಜೆಪಿ ಕಾರ್ಯಕರ್ತರು. ಸಚಿವರು ಅರೆ ಮನಸ್ಸಿನಲ್ಲಿದ್ದರೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯುವುದೇ ಇಂತಹ ಪ್ರಚಾರದ ಉದ್ದೇಶ ಎಂದು ಹೇಳಲಾಗುತ್ತಿದೆ.

‘ಜೆಡಿಎಸ್‌ನ ಎಲ್ಲ ಶಾಸಕರೂ ಒಗ್ಗಟ್ಟಿನಿಂದ ಇದ್ದಾರೆ’ ಎಂದು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಿದ್ದಂತೆಯೇ ಮೂವರು ಶಾಸಕರು ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಪಕ್ಷ ಕಷ್ಟಪಡುತ್ತಿದ್ದು, ಸರ್ಕಾರಕ್ಕೂ ಅಪಾಯ ಎದುರಾಗಿದೆ. ಈ ಹಂತದಲ್ಲೇ ಜಿ.ಟಿ.ದೇವೇಗೌಡರನ್ನು ಕೆಣಕುವ ರೀತಿಯಲ್ಲಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯತೊಡಗಿವೆ.

ಉನ್ನತ ಶಿಕ್ಷಣ ಸಚಿವರು ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಸಾಲಿಗೆ ಹೋಗಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿ ಕಾಣಿಸಿತ್ತು. ಇದು ಇಂತಹ ಸಂದೇಶಗಳ ಒಳಮರ್ಮವೇ ಆಗಿರಬಹುದೇ ಎಂದು ಚಿಂತಿಸುವಂತೆಯೂ ಮಾಡಿತು.

‘ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ರಾಜೀನಾಮೆ ಪರ್ವಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ, ಅಮಿತ್‌ ಶಾ
ಕಾರಣ ಅಲ್ಲ’ ಎಂದು ಜಿ.ಟಿ.ದೇವೇಗೌಡರು ಹೇಳಿದಾಗಲೇ ಅವರು ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ ಎಂದು ಹೇಳಲಾಗಿತ್ತು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಬಳಿಕ ಸಮಜಾಯಿಸಿ ನೀಡಿದ್ದರೂ, ಅವರು ಆಗಾಗ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಇನ್ನು ಮುಂಬೈಯಲ್ಲಿ ಆಪರೇಷನ್ ನಡೆಯುವುದಿಲ್ಲ, ಇಲ್ಲೇ ಅದು ನಡೆಯುತ್ತದೆ’ ಎಂದು ಎರಡು ದಿನದ ಹಿಂದೆಯಷ್ಟೇ ಅವರು ನಿಗೂಢ ಎನ್ನುವಂತಹ ಮಾತನ್ನು ಆಡಿದ್ದರು. 

‘ಸದ್ಯದ ಸ್ಥಿತಿಯಲ್ಲಿ ಜಿ.ಟಿ.ದೇವೇಗೌಡರು ಪಕ್ಷ ತೊರೆಯಲಾರರು. ಆದರೆ ಈ ಸರ್ಕಾರ ಪತನವಾದರೆ ಬಳಿಕ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು’ ಎಂದು ಅವರನ್ನು ಹತ್ತಿರದಿಂದ ಬಲ್ಲ ಮೂಲಗಳು ಹೇಳಿವೆ.

‘ಮೈತ್ರಿ ಸರ್ಕಾರ ನಿಮಗೆ ಮೋಸ ಮಾಡಿದೆ. ಒಬ್ಬ ಪ್ರಭಾವಿ ಮುಖ್ಯಮಂತ್ರಿಯನ್ನು ಸೋಲಿಸಿದ ನಿಮ್ಮನ್ನು ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಅಲ್ಲದೆ ನಿಮ್ಮ ಮಗ ಹರೀಶ್ ಗೌಡಗೆ ಹುಣಸೂರಿನಲ್ಲಿ ಟಿಕೆಟ್ ನೀಡದೆ ಅಪ್ಪ-ಮಕ್ಕಳು ನಿಮಗೆ ಅನ್ಯಾಯ ಮಾಡಿದರು. ಹೀಗಾಗಿ ನೀವು ಬಿಜೆಪಿಗೆ ಬಂದು ಚಾಮುಂಡೇಶ್ವರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ’ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು