ಸೋಮವಾರ, ಆಗಸ್ಟ್ 2, 2021
28 °C

ಭಾರತಕ್ಕೆ ಭೂಪಟ ಕಳುಹಿಸಲಿದೆ ನೇಪಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಪಾಳ ಭೂಪಟ–ಸಂಗ್ರಹ ಚಿತ್ರ

ಕಠ್ಮಂಡು: ಭಾರತದ ಲಿಂಪಿಯಾಧುರ, ಲಿಪುಲೆಖ್‌‌ ಮತ್ತು ಕಾಲಾಪಾನಿಯನ್ನು ಸೇರಿಸಿಕೊಂಡು ರಚಿಸಿರುವ ತನ್ನ ನೂತನ ಭೂಪಟವನ್ನು ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತೇವೆ ಎಂದು ನೇಪಾಳ ಕೇಂದ್ರ ಸಚಿವೆ ಪದ್ಮಾ ಅರ್ಯಾಲ್ ಭಾನುವಾರ ಹೇಳಿದ್ದಾರೆ.

‘ಕಾಲಾಪಾನಿ, ಲಿಪುಲೆಖ್‌ ಮತ್ತು ಲಿಂಪಿಯಾಧುರವನ್ನು ಒಳಗೊಂಡ ಪರಿಷ್ಕೃತ ಭೂಪಟವನ್ನು ವಿಶ್ವಸಂಸ್ಥೆಯ ಹಲವು ಏಜೆನ್ಸಿಗಳಿಗೆ, ಭಾರತಕ್ಕೆ ಮತ್ತು ಎಲ್ಲಾ ದೇಶಗಳಿಗೂ ಕಳುಹಿಸುತ್ತೇವೆ. ಈ ಭೂಪಟವು ಇಂಗ್ಲಿಷ್ ಭಾಷೆಯಲ್ಲಿ ಇರಲಿದೆ. ಈಗ ನೇಪಾಳಿ ಭಾಷೆಯಲ್ಲಿರುವ ಭೂಪಟವನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಕೆಲಸ ನಡೆಯುತ್ತಿದೆ. ಆಗಸ್ಟ್‌ ಮೊದಲ ಎರಡು ವಾರಗಳಲ್ಲಿ ಭೂಪಟವನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ವಿತರಿಸುವ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಸಚಿವೆ ಪದ್ಮಾ ಹೇಳಿದ್ದಾರೆ.

‘ನಾಲ್ಕು ಸಾವಿರ ಇಂಗ್ಲಿಷ್‌ ಭೂಪಟಗಳನ್ನು ಮುದ್ರಿಸಲು ಸೂಚನೆ ನೀಡಲಾಗಿದೆ. ನೇಪಾಳಿ ಭಾಷೆಯಲ್ಲಿ ಈಗಾಗಲೇ 25,000 ಸಾವಿರ ಭೂಪಟಗಳನ್ನು ಮುದ್ರಿಸಿ, ಎಲ್ಲಾ ಸರ್ಕಾರಿ ಕಚೇರಿಗಳಿಗೆ ಹಂಚಿಕೆ ಮಾಡಲಾಗಿದೆ. ಸಾರ್ವಜನಿಕರು ಈ ಭೂಪಟವನ್ನು ಖರೀದಿಸಲು ಅವಕಾಶ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೇ 20ರಂದು ನೇಪಾಳವು ಈ ನೂತನ ಭೂಪಟವನ್ನು ಬಿಡುಗಡೆ ಮಾಡಿತ್ತು. ಭಾರತವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ‘ಇದನ್ನು ಭಾರತವು ಒಪ್ಪಿಕೊಳ್ಳುವುದಿಲ್ಲ’ ಎಂದು ಕೇಂದ್ರ ಸರ್ಕಾರವು ಹೇಳಿತ್ತು.

ಸಂಬಂಧಕ್ಕೆ 65 ವರ್ಷ

‘ಚೀನಾ ಮತ್ತು ನೇಪಾಳದ ಮಧ್ಯೆ ರಾಜತಾಂತ್ರಿಕ ಸಂಬಂಧ ಆರಂಭವಾಗಿ 65 ವರ್ಷ ಸಂದಿದೆ. ಈ ಅವಧಿಯಲ್ಲಿ ಎರಡೂ ದೇಶಗಳು ಪರಸ್ಪರರನ್ನು ಗೌರವಿಸಿವೆ, ಪರಸ್ಪರರನ್ನು ಸಮಾನವಾಗಿ ಕಂಡಿವೆ, ಪರಸ್ಪರ ಲಾಭಕ್ಕಾಗಿ ಸಹಕಾರ ನೀಡಿವೆ. ನೇಪಾಳದ ಜತೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ದ್ವಿಪ‍ಕ್ಷೀಯ ಸಹಕಾರವನ್ನು ವಿಸ್ತರಿಸಲು ಕಾತರನಾಗಿದ್ದೇನೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ.

ಚೀನಾ ಮತ್ತು ನೇಪಾಳದ ರಾಜತಾಂತ್ರಿಕ ಸಂಬಂಧಕ್ಕೆ ಶನಿವಾರ 65 ವರ್ಷ ತುಂಬಿತ್ತು. ಈ ಸಂಬಂಧ ಎರಡೂ ದೇಶಗಳ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳು ಪರಸ್ಪರ ಶುಭಕೋರಿದ್ದರು.

‘ಒಲಿ ಮಾಡಿದ ಮೂರು ತಪ್ಪುಗಳು’

‘ಭಾರತದ ಜತೆ ಗಡಿಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಕೆ.ಪಿ.ಒಲಿ ಅವರು ಭಾರತವನ್ನು ಕೆರಳಿಸುವಂತಹ ಮೂರು ತಪ್ಪುಗಳನ್ನು ಎಸಗಿದ್ದಾರೆ. ಇದರ ಬದಲಿಗೆ ರಾಜತಾಂತ್ರಿಕ ಮಾರ್ಗದಲ್ಲಿ ಗಡಿವಿವಾದ ಸರಿಪಡಿಸಿಕೊಳ್ಳಬೇಕಿತ್ತು’ ಎಂದು ನೇಪಾಳದ ಆಡಳಿತಾರೂಢ ಪಕ್ಷದ ಹಿರಿಯ ವಕ್ತಾರ ಮತ್ತು ಹಿರಿಯ ನಾಯಕ ನಾರಾಯಣಕಾಜಿ ಶ್ರೇಷ್ಠ ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ನೆಲ ನಮ್ಮದು ಎಂದು ಒಲಿ ಅವರು ಹೇಳಿದ್ದು ಸ್ವಾಗತಾರ್ಹ. ಆದರೆ ಭಾರತವನ್ನು ಕೆರಳಿಸುವಂತಹ ಹೇಳಿಕೆ ನೀಡಿದ್ದು ತಪ್ಪು. ಭಾರತದ ರಾಷ್ಟ್ರಲಾಂಛನದ ಬಗ್ಗೆ ಅಗೌರವವಾಗಿ ಮಾತನಾಡಿದ್ದು ಮೊದಲ ತಪ್ಪು. ನಮ್ಮ ಸರ್ಕಾರವನ್ನು ಬೀಳಿಸಲು ಭಾರತ ಸಂಚು ಮಾಡುತ್ತಿದೆ ಎಂದು ಆರೋಪಿಸಿದ್ದು ಎರಡನೇ ತಪ್ಪು. ರಾಮಜನ್ಮಭೂಮಿ ಅಯೋಧ್ಯೆ ಭಾರತದಲ್ಲಿ ಇಲ್ಲ, ನೇಪಾಳದಲ್ಲಿ ಇದೆ ಎಂದು ಹೇಳಿದ್ದು ಮೂರನೇ ತಪ್ಪು’ ಎಂದು ಅವರು ಹೇಳಿದ್ದಾರೆ.

ನೇಪಾಳದಿಂದ ನೀರು, ಭಾರತದ ಹಳ್ಳಿಗಳು ಮುಳುಗಡೆ

ನೇಪಾಳದಲ್ಲಿ ಹುಟ್ಟಿ, ಭಾರತಕ್ಕೆ ಹರಿಯುವ ಶಾರದಾ ನದಿಯ ಬ್ಯಾರೇಜ್‌ಗಳಿಂದ ನೇಪಾಳವು ಭಾರತಕ್ಕೆ ಲಕ್ಷಾಂತರ ಕ್ಯುಸೆಕ್‌ನಷ್ಟು ನೀರು ಬಿಟ್ಟಿದೆ. ಇದರಿಂದ ಉತ್ತರ ಪ್ರದೇಶದ 60ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ.

ನೇಪಾಳದ ಜತೆ ಗಡಿ ಹಂಚಿಕೊಂಡಿರುವ ಉತ್ತರಪ್ರದೇಶದ ಬಹ್ರೇಚ್‌ ಜಿಲ್ಲೆಯ 61 ಗ್ರಾಮಗಳು ಮುಳುಗಡೆಯಾಗಿವೆ. 7 ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಎದುರಾಗಿದೆ. ಈ ಎಲ್ಲಾ ಗ್ರಾಮಗಳ 1.50 ಲಕ್ಷಕ್ಕೂ ಹೆಚ್ಚು ಜನರು ಈ ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ. 171 ಮನೆಗಳು ಕುಸಿದಿವೆ ಎಂದು ಬಹ್ರೇಚ್‌ ಜಿಲ್ಲಾಡಳಿತವು ಹೇಳಿದೆ.

ಬ್ಯಾರೇಜ್‌ನಿಂದ ನೀರು ಬಿಡುವ ಮುನ್ನ ಸೂಚನೆ ನೀಡಲಾಗಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಜಿಲ್ಲಾಡಳಿತವು ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು