ಶನಿವಾರ, ಜುಲೈ 31, 2021
25 °C

1000 ಬಿಟ್‌ಕಾಯಿನ್‌ಗೆ ದುಪ್ಪಟ್ಟು ಹಿಂದಕ್ಕೆ! ಹಲವರ ಟ್ವಿಟರ್‌ ಅಕೌಂಟ್‌ ಹ್ಯಾಕ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌, ಟೆಸ್ಲಾ ಕಂಪನಿಯ ಸಿಇಒ ಎಲೋನ್‌ ಮಸ್ಕ್‌, ಆಪಲ್‌ ಕಂಪನಿ ಸೇರಿ ಹಲವು ಖ್ಯಾತನಾಮರ ಟ್ವಿಟರ್‌ ಅಕೌಂಟ್‌ಗಳನ್ನು ಬಿಟ್‌ಕಾಯಿನ್‌ ದಂಧೆಕೋರರು ಬುಧವಾರ ರಾತ್ರಿ ಹ್ಯಾಕ್ ಮಾಡಿದ್ದಾರೆ.

ಬರಾಕ್‌ ಒಬಾಮಾ, ಉಬರ್‌, ಕೆಲ ಬಿಟ್‌ಕಾಯಿನ್‌ ಸಂಸ್ಥೆಗಳು ಸೇರಿದಂತೆ ಹಲವು ಪ್ರಮುಖ ಖಾತೆಗಳು ಕೆಲವೇ ಹೊತ್ತಿನಲ್ಲಿ ಹ್ಯಾಕ್‌ ಆಗುತ್ತಾ ಹೋದವು.

‘ಬಿಟ್‌ಕಾಯಿನ್‌ ಮುಖಾಂತರ ನನಗೆ ಹಣ ಕಳುಹಿಸಿ. ನಾನು ನಿಮಗೆ ಅದರ ಎರಡುಪಟ್ಟನ್ನು ಹಿಂದಿರುಗಿಸುತ್ತೇನೆ,’ ಎಂಬ ಒಕ್ಕಣೆಯ ಟ್ವೀಟ್‌ಗಳನ್ನು ಹ್ಯಾಕ್‌ ಆದ ಎಲ್ಲರ ಅಕೌಂಟ್‌ ಮೂಲಕ ಟ್ವೀಟ್‌ ಮಾಡಲಾಗಿತ್ತು.

ಪ್ರತಿಷ್ಠಿತ ವ್ಯಕ್ತಿಗಳ ಟ್ವಿಟರ್‌ ಅಕೌಂಟ್‌ಗಳು ಹ್ಯಾಕ್‌ ಆಗಿವೆ ಎಂಬುದು ತಿಳಿಯುತ್ತಲೇ, ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ ಟ್ವಿಟರ್‌ ಸಂಸ್ಥೆ, ‘ ಟ್ವಿಟರ್‌ ಅಕೌಂಟ್‌ಗಳ ಮೇಲೆ ಪರಿಣಾಮ ಬೀರುತ್ತಿರುವ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ನಮಗೆ ಗೊತ್ತಾಗಿದೆ. ಅದನ್ನು ನಾವು ಪತ್ತೆಹಚ್ಚುತ್ತಿದ್ದೇವೆ. ಅಲ್ಲದೆ, ಸರಿಪಡಿಸುತ್ತಿದ್ದೇವೆ. ಮುಂದಿನ ಪ್ರತಿ ಬೆಳವಣಿಗೆಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು,’ ಎಂದು ಟ್ವೀಟ್‌ ಮಾಡಿ ಹೇಳಿತು.

‘ಹ್ಯಾಕ್‌ ಮಾಡಲಾದ ಬಿಡೆನ್‌ ಅವರ ಟ್ವಿಟರ್‌ ಖಾತೆಯನ್ನು ಟ್ವಿಟರ್‌ ಸಂಸ್ಥೆ ಲಾಕ್‌ ಮಾಡಿತು. ಅಲ್ಲದೆ, ಅವರ ಖಾತೆ ಮೂಲಕ ಮಾಡಲಾದ ನಕಲಿ ಟ್ವೀಟ್‌ಅನ್ನು ಅಳಿಸಿ ಹಾಕಲಾಯಿತು,’ ಎಂದು ಬಿಡೆನ್‌ ಅವರ ಟ್ವಿಟರ್‌ ಹ್ಯಾಂಡಲ್‌ ಮಾಡುತ್ತಿರುವ ಪ್ರಮುಖರು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

‘ಈ ವಿಳಾಸಕ್ಕೆ ನೀವು ಇನ್ನು 30 ನಿಮಿಷಗಳಲ್ಲಿ 1000 ಬಿಟ್‌ಕಾಯಿನ್‌ ಕಳುಹಿಸಿದರೆ, ನಾನು ನಿಮಗೆ ಅದರ ಎರಡರಷ್ಟನ್ನು ಹಿಂದಿರುಗಿಸುತ್ತೇನೆ,’ ಎಂದು ಖ್ಯಾತನಾಮರ ಟ್ವಿಟರ್‌ ಖಾತೆಗಳಿಂದ ಹ್ಯಾಕರ್‌ಗಳು ಟ್ವೀಟ್‌ ಮಾಡಿದ್ದರು. ಟ್ವಿಟರ್‌ ಇಂಥ ನಕಲಿ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದೆ.

‘ಇದು ಮೋಸದ ಜಾಲ. ಯಾರೂ ಇದರಲ್ಲಿ ಭಾಗವಹಿಸಬೇಡಿ,’ ಎಂದು ಜೆಮಿನಿ ಕ್ರಿಪ್ಟೋಕರೆನ್ಸಿ (ಬಿಟ್‌ಕಾಯಿನ್‌) ಎಕ್ಸ್‌ಚೇಂಜ್‌ನ ಸಹ-ಸಂಸ್ಥಾಪಕ ಕ್ಯಾಮರೂನ್ ವಿಂಕ್ಲೆವೊಸ್ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿ ಎಲ್ಲರನ್ನೂ ಎಚ್ಚರಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಟ್ವಿಟರ್‌ ಕೆಲ ಕಾಲ ವೆರಿಫೈಡ್‌ ಅಕೌಂಟ್‌ಗಳಿಂದ ಟ್ವೀಟ್‌ ಮಾಡುವುದನ್ನು ನಿರ್ಬಂಧಿಸಿತ್ತು. ಅಲ್ಲದೆ, ಪಾಸ್‌ವರ್ಡ್‌ ಬದಲಿಸುವುದನ್ನೂ ತಡೆದಿತ್ತು. ಪರಿಶೀಲನೆಯ ಬಳಿಕ ಬಹುತೇಕ ಅಕೌಂಟ್‌ಗಳಿಂದ ಈಗ ಟ್ವೀಟ್‌ ಆಗುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು