ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ ವೈಶಿಷ್ಟ್ಯದ ಸ್ಯಾಮ್‌ಸಂಗ್ Galaxy S24 ಸರಣಿ ಫೋನ್ ಬಿಡುಗಡೆ

Published 18 ಜನವರಿ 2024, 12:30 IST
Last Updated 18 ಜನವರಿ 2024, 12:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್‌ಸಂಗ್ ತನ್ನ ಐಷಾರಾಮಿ ಸಾಧನಗಳಾದ ಗ್ಯಾಲಕ್ಸಿ ಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್24 ಪ್ಲಸ್ ಹಾಗೂ ಗ್ಯಾಲಕ್ಸಿ ಎಸ್24 ಸ್ಮಾರ್ಟ್‌ಫೋನ್‌ಗಳನ್ನು ಗುರುವಾರ ಜಾಗತಿಕವಾಗಿ ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎಸ್24 ಸರಣಿಯಲ್ಲಿ ಮೊಬೈಲ್ ಎಐ (ಕೃತಕ ಬುದ್ಧಿಮತ್ತೆ ತಂತ್ರಜ್ಞಾನ) ಮೂಲಕ ಬಳಕೆದಾರರಿಗೆ ಅತ್ಯುನ್ನತ ಮತ್ತು ದೂರಗಾಮಿ ಪರಿಣಾಮಗಳ ಅನುಭವಗಳನ್ನು ಒದಗಿಸಲಾಗುತ್ತದೆ ಎಂದು ಸ್ಯಾಮ್‌ಸಂಗ್ ಘೋಷಿಸಿದೆ.

ಪಠ್ಯ, ಕರೆಗಳ ಅನುವಾದದ ಮೂಲಕ ಅಡಚಣೆರಹಿತ ಸಂವಹನದ ಅನುಭವ ಮತ್ತು ಗ್ಯಾಲಕ್ಸಿಯ ಪ್ರೋ-ವಿಶುವಲ್ ಎಂಜಿನ್ ಮೂಲಕ ಚಿತ್ರಗಳ ತಿದ್ದುವಿಕೆಯ ಅಗಾಧ ಸಾಧ್ಯತೆಗಳು ಗ್ಯಾಲಕ್ಸಿ ಬಳಕೆದಾರರಿಗೆ ದೊರೆಯಲಿವೆ.

"ನಮ್ಮ ನವೀನ ತಂತ್ರಜ್ಞಾನ ಕಾರ್ಯಸಾಮರ್ಥ್ಯ ಹಾಗೂ ಜನರು ತಮ್ಮ ಫೋನನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತಾಗಿ ನಮಗಿರುವ ಅನುಭವಗಳ ಆಧಾರದಲ್ಲಿ ಗ್ಯಾಲಕ್ಸಿ ಎಐ ರೂಪುಗೊಂಡಿದೆ. ಇದೀಗ ಬಳಕೆದಾರರು ಗ್ಯಾಲಕ್ಸಿ ಎಐ ಮೂಲಕ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡು, ತಮ್ಮ ದೈನಂದಿನ ಕೆಲಸಕಾರ್ಯಗಳನ್ನು ಹೇಗೆ ಸುಲಭವಾಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ನಾವು ಕಾತುರರಾಗಿದ್ದೇವೆ" ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ, ಮೊಬೈಲ್ ಅನುಭವ ವಿಭಾಗದ ಮುಖ್ಯಸ್ಥ ಟಿ.ಎಂ.ರೋ ಹೇಳಿದರು.

ಎಸ್24 ಸರಣಿ ಫೋನ್‌ಗಳ ವೈಶಿಷ್ಟ್ಯಗಳು

ಮೊಬೈಲ್ ಫೋನ್‌ಗಳ ಪ್ರಧಾನ ಕಾರ್ಯವೇ ಸಂವಹನ. ಇದೀಗ ಲೈವ್ ಟ್ರಾನ್ಸ್‌ಲೇಟ್ ಎಂಬ ಅನುವಾದ ತಂತ್ರಜ್ಞಾನದ ಮೂಲಕ ಯಾವುದೇ ಭಾಷೆಯ ಪ್ರದೇಶದಲ್ಲಿದ್ದರೂ ದೈನಂದಿನ ಕೆಲಸ ಕಾರ್ಯಗಳನ್ನು ಸುಲಭವಾಗಿಸಿಕೊಳ್ಳಬಹುದು. ಧ್ವನಿ ಮತ್ತು ಪಠ್ಯ - ಎರಡರಲ್ಲಿಯೂ ಈ ಅನುಕೂಲ ಲಭ್ಯವಿದೆ. ಇದಕ್ಕೆ ಪ್ರತ್ಯೇಕ ಆ್ಯಪ್ ಬೇಕಾಗಿರುವುದಿಲ್ಲ. ಅದೇ ರೀತಿ ಇಂಟರ್‌ಪ್ರಿಟರ್ (ಅನುವಾದ ಸಹಾಯಕ), ಚಾಟ್ ಅಸಿಸ್ಟ್ (ಸಂವಾದದ ಧ್ವನಿ ಹೇಗಿರಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ), ಆಂಡ್ರಾಯ್ಡ್ ಆಟೋ (ವಾಹನ ಚಲಾಯಿಸುವಾಗ ನೆರವಿಗೆ ಬರುತ್ತದೆ) ಮುಂತಾಗಿ, ಕೃತಕ ಬುದ್ಧಿಮತ್ತೆ (ಎಐ) ಮೂಲಕ ಕೆಲಸ ಮಾಡುವ ತಂತ್ರಾಂಶಗಳು ದೈನಂದಿನ ಕೆಲಸ ಕಾರ್ಯಗಳನ್ನು ಮತ್ತಷ್ಟು ಸುಲಭಗೊಳಿಸುತ್ತವೆ. ಸ್ಯಾಮ್‌ಸಂಗ್ ಕೀಬೋರ್ಡ್‌ನಲ್ಲೇ ಅಂತರ್-ನಿರ್ಮಿತವಾಗಿರುವ ಎಐ ತಂತ್ರಜ್ಞಾನವು, 13 ಭಾಷೆಗಳ ಅನುವಾದವನ್ನು ಬೆಂಬಲಿಸುತ್ತದೆ.

ಎಐ ಬಳಸಿ ಸಾರಾಂಶ ಪಡೆಯಲು, ಪೂರ್ವನಿರ್ಧರಿತ ಟೆಂಪ್ಲೇಟ್ ರಚಿಸಲು, ಸುಲಭವಾಗಿ ಟಿಪ್ಪಣಿ ಮಾಡಿಕೊಳ್ಳಲು ನೋಟ್ ಅಸಿಸ್ಟ್ ನೆರವಾಗುತ್ತದೆ. ಟ್ರಾನ್‌ಸ್ಕ್ರಿಪ್ಟ್ ಅಸಿಸ್ಟ್ ಮೂಲಕ ಧ್ವನಿಯಿಂದ ಪಠ್ಯ ಪಡೆಯುವ ತಂತ್ರಜ್ಞಾನವು ಅನುವಾದಕ್ಕೂ ನೆರವಾಗುತ್ತದೆ. ಇದಲ್ಲದೆ, ಇದೇ ಮೊದಲ ಬಾರಿಗೆ ಸನ್ನೆ ಆಧಾರಿತವಾಗಿ ಹುಡುಕಾಡಲು ನೆರವಾಗುವ ಸರ್ಕಲ್ ಟು ಸರ್ಚ್ ಎಂಬ ವೈಶಿಷ್ಟ್ಯವೂ ಎಸ್24 ಸರಣಿಯ ಫೋನ್‌ಗಳಲ್ಲಿ ಲಭ್ಯವಿದೆ.

ಗ್ಯಾಲಕ್ಸಿ ಎಸ್24 ಅಲ್ಟ್ರಾ

ಗ್ಯಾಲಕ್ಸಿ ಎಸ್ 24 ಸರಣಿಯ ಅಲ್ಟ್ರಾ ಮಾಡೆಲ್ 6.8 ಇಂಚಿನ QHD+ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಇದೆ. 232 ಗ್ರಾಂ ತೂಕವಿರುವ ಈ ಫೋನ್‌ನಲ್ಲಿ 200 ಮೆಗಾಪಿಕ್ಸೆಲ್‌ನ ವೈಡ್ ಕ್ಯಾಮೆರಾ ಲೆನ್ಸ್, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಲೆನ್ಸ್, 50MP ಹಾಗೂ 10MP ಎರಡು ಟೆಲಿಫೋಟೊ ಲೆನ್ಸ್‌ಗಳು ಮತ್ತು 12 MP ಸೆಲ್ಫಿ ಕ್ಯಾಮೆರಾಗಳಿವೆ. 12GB/1TB, 12ಜಿಬಿ/512GB ಹಾಗೂ 12GB/256GB ಮಾದರಿಗಳಲ್ಲಿ ಲಭ್ಯವಿದ್ದು, 5000mAh ಬ್ಯಾಟರಿ ಇದೆ. ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1 ಕಾರ್ಯಾಚರಣಾ ವ್ಯವಸ್ಥೆಯಿದೆ.

ಗ್ಯಾಲಕ್ಸಿ ಎಸ್24 ಹಾಗೂ ಗ್ಯಾಲಕ್ಸಿ ಎಸ್24+

ಗ್ಯಾಲಕ್ಸಿ ಎಸ್24 ಸಾಧನವು 6.2 ಇಂಚು QHD+ ಸ್ಕ್ರೀನ್, 4000mAh ಬ್ಯಾಟರಿ ಹೊಂದಿದ್ದರೆ, ಎಸ್24 ಪ್ಲಸ್ ಸಾಧನವು 6.7 ಇಂಚು ಸ್ಕ್ರೀನ್ ಹಾಗೂ 4900mAh ಬ್ಯಾಟರಿ ಹೊಂದಿದೆ. ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್, 50 ಮೆಗಾಪಿಕ್ಸೆಲ್ ವೈಡ್, 10 ಮೆಗಾಪಿಕ್ಸೆಲ್ ಟೆಲಿಫೋಟೊ ಕ್ಯಾಮೆರಾ ಲೆನ್ಸ್‌ಗಳು ಹಾಗೂ 12 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ.

ಎರಡೂ ಮಾದರಿಗಳು 12+512GB ಹಾಗೂ 12+256GB ಸಾಮರ್ಥ್ಯದಲ್ಲಿ ಲಭ್ಯವಿದ್ದರೆ, ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1 ಕಾರ್ಯಾಚರಣಾ ವ್ಯವಸ್ಥೆಯಿದೆ.

ಬೆಲೆ

ಗ್ಯಾಲಕ್ಸಿ ಎಸ್24 256ಜಿಬಿ - ₹79,999

ಗ್ಯಾಲಕ್ಸಿ ಎಸ್24 512ಜಿಬಿ - ₹89,999

ಗ್ಯಾಲಕ್ಸಿ ಎಸ್24 ಪ್ಲಸ್ 256ಜಿಬಿ - ₹99,999

ಗ್ಯಾಲಕ್ಸಿ ಎಸ್24 ಪ್ಲಸ್ 512ಜಿಬಿ - ₹1,09,999

ಗ್ಯಾಲಕ್ಸಿ ಎಸ್24 ಅಲ್ಟ್ರಾ 256ಜಿಬಿ - ₹1,29,999

ಗ್ಯಾಲಕ್ಸಿ ಎಸ್24 ಅಲ್ಟ್ರಾ 512ಜಿಬಿ - ₹1,39,999

ಗ್ಯಾಲಕ್ಸಿ ಎಸ್24 ಅಲ್ಟ್ರಾ 1ಟಿಬಿ - ₹1,59,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT