ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ರಾತ್ರಿಯೆಲ್ಲ ಹಾಸಿಗೆಯ ಮೇಲೆ ಅಡ್ಡಾಗಿದ್ದರೂ ಬೆಳಿಗ್ಗೆ ಏಳುವಾಗ ಯಾಕೋ ಶಿವರಾತ್ರಿಯ ಜಾಗರಣೆ ಮಾಡಿದಂತೆ ಅನಿಸುತ್ತಿದೆಯೇ? ಹಾಗಿದ್ದರೆ ಒಂದು ಕೆಲಸ ಮಾಡಿ. ನೀವು ಉಟ್ಟ ಲುಂಗಿಯನ್ನೋ ನೈಟಿಯನ್ನೋ ಪೈಜಾಮಾವನ್ನೋ ಬದಲಿಸಿ, ಹೊಸ ಪೈಜಾಮಾ ಧರಿಸಿ. ಅಂತಿಂಥ ಪೈಜಾಮಾ ಅಲ್ಲ. ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಲೂಇಜಿ ಓಕಿಪಿಂಟಿ ಮತ್ತು ಸಂಗಡಿಗರು ಸಿದ್ಧಪಡಿಸಿರುವ ವಿಶೇಷ ಪೈಜಾಮಾವನ್ನು ಧರಿಸಿ. ನಿಮ್ಮ ನಿದ್ರೆ ಸರಿ ಹೋಗದಿದ್ದರೂ, ಕನಿಷ್ಠ ನಿಮ್ಮ ನಿದ್ರಾಹೀನತೆಗೆ ಕಾರಣವಾದರೂ ಗೊತ್ತಾಗುತ್ತದೆ! ಏಕೆಂದರೆ ಈ ಪೈಜಾಮಾ, ನಿಮ್ಮನ್ನು ಬೆಚ್ಚಗಾಗಿಡುವುದರ ಜತೆಗೇ ನಿಮ್ಮ ನಿದ್ರೆಯ ಸ್ಥಿತಿ, ಲಕ್ಷಣಗಳು ಹೇಗಿದ್ದವು ಎಂದು ಪತ್ತೆ ಮಾಡುತ್ತದಂತೆ.

ನಿದ್ರಾಹೀನತೆ ಎನ್ನುವುದು ಲಕ್ಷಾಂತರ ಜನರನ್ನು ಕಾಡುವ, ವೈದ್ಯರು ಇದೇಕೆ ಎಂದು ಅರ್ಥವಾಗದೆ ತಲೆ ಕೆಡಿಸಿಕೊಳ್ಳುವ ವೈದ್ಯಕೀಯ ಸಮಸ್ಯೆ. ಇಡೀ ರಾತ್ರಿ ಮಲಗಿದ್ದರೂ, ನಿದ್ರೆ ಮಾಡಿದಂತೆ ಇರುವುದಿಲ್ಲ. ಇಂಥ ಅವಸ್ಥೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇವರು ನಿದ್ರಾಹೀನರಲ್ಲ. ಆದರೆ ಇವರ ನಿದ್ರೆ ನಿದ್ರೆಯಂತಿರುವುದಿಲ್ಲ. ಈ ನಿದ್ರಾಹೀನತೆಯಿಂದಾಗಿ ಪ್ರತಿವರ್ಷ ಏನಿಲ್ಲವೆಂದರೂ ನಲವತ್ತರಿಂದ ಐವತ್ತು ದಿನಗಳು ಅವರು ಕೆಲಸ ಸರಿಯಾಗಿ ಮಾಡುವುದಿಲ್ಲ ಎಂದೂ ವಿಜ್ಞಾನಿಗಳಿಗೆ ಆತಂಕವಿದೆ. ಬಾಯಿಯ ಮೂಲಕ ಉಸಿರಾಡುವುದು, ಗೊರಕೆ, ಉಸಿರುಗಟ್ಟುವುದು ಮೊದಲಾದ ತೊಂದರೆಗಳು ನಿದ್ರೆಗೇಡಿತನಕ್ಕೆ ಕಾರಣ ಎನ್ನುತ್ತದೆ, ವೈದ್ಯವಿಜ್ಞಾನ. ನಿದ್ರೆಯ ಮೇಲೆ ಕಣ್ಣಿಡುವ ಸಾಧನಗಳು ಹಲವು ಇವೆ. ಇತ್ತೀಚೆಗೆ ಸರ್ವೇ ಸಾಮಾನ್ಯ ಎನ್ನಿಸಿರುವ ಸ್ಮಾರ್ಟ್ ಗಡಿಯಾರಗಳೂ ಕೂಡ ನೀವು ಎಷ್ಟು ಹೊತ್ತು ಮಲಗಿದ್ದಿರಿ, ಎಷ್ಟು ಹೊತ್ತು ಚಟುವಟಿಕೆಯಿಂದ ಇದ್ದಿರಿ ಎನ್ನುವುದನ್ನು ತಿಳಿಸುತ್ತವೆ. ಆದರೆ ನೀವು ಮಲಗಿದ್ದಾಗ ನಿದ್ರೆ ಮಾಡಿದ್ದಿರೋ, ಹೊರಳಾಡುತ್ತಲೇ ಇದ್ದಿರೋ, ಗೊರಕೆ ಹೊಡೆದಿದ್ದಿರೋ ಎನ್ನುವುದು ಮಾತ್ರ ಗೊತ್ತಾಗುವುದಿಲ್ಲ. ಬೆಂಗಳೂರಿನಲ್ಲಿ ನಿದ್ರೆಯ ಅಧ್ಯಯನವನ್ನು ಮಾಡುವ ಸ್ಟಾರ್ಟ್ ಅಪ್ ಒಂದು ಸುದ್ದಿ ಮಾಡಿತ್ತು. ಅಲ್ಲಿನ ಉದ್ಯೋಗಿಗಳಿಗೆ ನಿದ್ರಿಸುವುದಷ್ಟೆ ಕೆಲಸ. ನಿದ್ರೆಯ ವೇಳೆ ಒದ್ದಾಟ ಹೇಗಿತ್ತು, ಹಾಸಿಗೆಯ ಪ್ರಭಾವ ಎಷ್ಟು, ಸುತ್ತಲಿನ ಸದ್ದು, ಉಷ್ಣತೆಯ ಪ್ರಭಾವ ಎಷ್ಟು ಎನ್ನುವುದನ್ನೆಲ್ಲ ಅದು ಅಧ್ಯಯನ ಮಾಡುತ್ತಿತ್ತು. ನಿದ್ರೆ ಮಾಡಿ ಕಾಸು ಸಂಪಾದಿಸಬಹುದಿತ್ತು.

ಓಕಿಪಿಂಟಿ ತಂಡದವರು ನಿರ್ಮಿಸಿರುವ ಪೈಜಾಮಾ ಈ ಅಧ್ಯಯನಗಳನ್ನು ಇನ್ನಷ್ಟು ಸುಲಭವಾಗಿಸುತ್ತದೆಯಂತೆ. ಇವರು ಸೃಷ್ಟಿಸಿರುವ ವೇರೆಬಲ್ ಎಲೆಕ್ಟ್ರಾನಿಕ್ ಇರುವ ಬಟ್ಟೆಯಿಂದ ಪೈಜಾಮಾವನ್ನೋ ಶರಟನ್ನೋ ಹೊಲಿದು, ಮಲಗುವಾಗ ಧರಿಸಿದರೆ ಸಾಕಂತೆ. ಅದು ನಿದ್ರೆಯ ವೇಳೆ ನಮಗೆ ಗೊತ್ತಿಲ್ಲದಂತೆಯೇ ಅಗುವ ಗೊರಕೆ, ಬಾಯಿಯಿಂದ ಉಸಿರಾಡುತ್ತಿದ್ದೀರೋ, ಮೂಗಿನಿಂದಲೋ, ಹಲ್ಲು ಕಡಿಯುವುದು, ಉಸಿರುಗಟ್ಟುವಿಕೆ, ಮಿದುಳಿನಲ್ಲಿ ಆಗುವ ವ್ಯತ್ಯಾಸದಿಂದ ಉಸಿರುಗಟ್ಟುವುದೇ ಮೊದಲಾದ ನಿದ್ರೆಗೇಡಿತನದ ಲಕ್ಷಣಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ನಿಗಾ ಇಡುತ್ತದೆಯಂತೆ. ನಿದ್ರೆಯ ವೇಳೆ ದೇಹದ ಚಟುವಟಿಕೆಗಳ ಮೇಲೆ ಕಣ್ಗಾವಲಿಡುವ ವೇರೆಬಲ್ ಎನ್ನುವ ಎಲೆಕ್ಟ್ರಾನಿಕ್ಸ್ಗಳನ್ನು ಈ ಹಿಂದೆಯೂ ಹಲವರು ರೂಪಿಸಿದ್ದರು. ಆದರೆ ಇವನ್ನು ಹಚ್ಚೆಯಂತೆ ಇಲ್ಲವೇ ಬ್ಯಾಂಡೇಜುಗಳಂತೆ ದೇಹಕ್ಕೆ ಅಂಟಿಸಿಕೊಳ್ಳಬೇಕಿತ್ತು. ಓಕಿಪಿಂಟಿ ಪೈಜಾಮಾದ ಎಲೆಕ್ಟ್ರಾನಿಕ್ಸ್ ಹಾಗಲ್ಲ. ಇದು ಚರ್ಮವನ್ನು ತಾಕದಿದ್ದರೂ ಚರ್ಮದ ಬಿಸುಪು, ರಕ್ತದ ಹರಿವು ಮೊದಲಾದವನ್ನು ಅಳೆಯಬಲ್ಲುದು. ಗೊರಕೆ ಹೊಡೆಯುವಾಗ ಅಥವಾ ಹಲ್ಲು ಕಡಿಯುವಾಗ ಗಂಟಲಿನ ಸ್ನಾಯುಗಳಲ್ಲಿ ಆಗುವ ಕಂಪನಗಳನ್ನು ಗುರುತಿಸಬಲ್ಲದು. ಇದಕ್ಕಾಗಿ ಪೈಜಾಮಾದ ಕಾಲರಿನೊಳಗೇ ಇವರು ಎಲೆಕ್ಟ್ರಾನಿಕ್ಸನ್ನು ಹುದುಗಿಸಿದ್ದಾರೆ. ಗ್ರಾಫೀನಿನ ಅತಿ ಸೂಕ್ಷ್ಮ ಎಳೆಗಳನ್ನು ಬಟ್ಟೆಯ ಮೇಲೆ ಲಗ್ನಪತ್ರಿಕೆ ಮುದ್ರಿಸಲು ಬಳಸುವ ಸ್ಕ್ರೀನ್ ಪ್ರಿಂಟಿಂಗ್ ತಂತ್ರವನ್ನು ಬಳಸಿ ಮುದ್ರಿಸಿದ್ದಾರೆ. ಇವು ಗಂಟಲಿನ ಸ್ನಾಯುಗಳಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ನಿದ್ರಿಸುವವರಿಗೆ ಅರಿವೇ ಇಲ್ಲದಂತೆ ಪತ್ತೆ ಮಾಡಬಲ್ಲಂತಹ ಸೆನ್ಸಾರುಗಳು. ಅತ್ತಿತ್ತ ಹೊರಳಾಡಿದಾಗಲೂ ಈ ಎಲೆಕ್ಟ್ರಾನಿಕ್ಸ್ ಸರ್ಕೀಟು ಮುರಿಯುವುದಿಲ್ಲ. ಇದಕ್ಕಾಗಿ ಬಟ್ಟೆಯ ಮೇಲೆ ಗ್ರಾಫೀನು ಸೆನ್ಸಾರುಗಳನ್ನು, ಬೆಳ್ಳಿಯ ಸೂಕ್ಷ್ಮತಂತುಗಳಿಂದ ಕೂಡಿಸಿದ್ದಾರೆ.

ಓಕಿಪಿಂಟಿ ವೇರೆಬಲ್ ಎಲೆಕ್ಟ್ರಾನಿಕ್ಸ್ ಬಟ್ಟೆಗೆ ಹಾಕಿರುವ ಇಸ್ತ್ರಿಯೂ ವಿಶೇಷವೇ. ಎರಡು ಬಗೆಯ ಪಾಲಿಮರುಗಳಿಂದ ಮಾಡಿದ ವಿಶೇಷ ಗಂಜಿಯನ್ನು ಹಚ್ಚಿ, ಅಲ್ಟ್ರಾವಯಲೆಟ್ ಕಿರಣಗಳಿಂದ ಬೆಳಗಿದರೆ ಸಾಕು. ಹೀಗೆ ಸರ್ಕೀಟನ್ನು ಬಾಧಿಸದೆಯೇ ಸುತ್ತಲೂ ಗಟ್ಟಿಯಾದ ಇಸ್ತ್ರಿಯನ್ನು ಹಾಕಿದ್ದಾರೆ. ಇಸ್ತ್ರಿ ಇರುವುದರಿಂದ ಎಷ್ಟೇ ಹೊರಳಾಡಿದರೂ ಎಲೆಕ್ಟ್ರಾನಿಕ್ಸಿಗೆ ಬಾಧೆ ಆಗುವುದಿಲ್ಲ. ಜೊತೆಗೆ ಸರ್ಕೀಟನ್ನು ಮುದ್ರಿಸಲು ಬಳಸುವ ಗ್ರಾಫೀನು ಶಾಯಿ ಬಟ್ಟೆಯಲ್ಲಿರುವ ನೂಲಿನ ಆಳಕ್ಕೆ ಇಳಿದು ಗಟ್ಟಿಯಾಗಿ ಕೂರುತ್ತದೆ. ಒಗೆದರೂ ನಾಶವಾಗದಂತಾಗುತ್ತದೆ.

ಇನ್ನು ಈ ಎಲೆಕ್ಟ್ರಾನಿಕ್ಸ್ ಪತ್ತೆ ಮಾಡುವ ಸಂಕೇತಗಳನ್ನು ಅರ್ಥೈಸಲು ಓಕಿಪಿಂಟಿ ಬಳಗವು ಯಾಂತ್ರಿಕ ಬುದ್ಧಿಮತ್ತೆಯನ್ನು ಬಳಸಿದೆ. ಡೀಪ್ ಲರ್ನಿಂಗ್ ತಂತ್ರವನ್ನು ಅಳವಡಿಸಿಕೊಂಡು ಸ್ಲೀಪ್ನೆಟ್ ಎನ್ನುವ ತಂತ್ರಾಂಶವನ್ನು ಇವರು ರೂಪಿಸಿದ್ದಾರೆ. ಒಮ್ಮೆ ಈ ಬಟ್ಟೆಯನ್ನು ಧರಿಸಿ ಮಲಗಿ ತೋರಿಸಿದರೆ ಸಾಕು. ಈ ತಂತ್ರಾಂಶ ಮಲಗಿದವರ ಉಸಿರಾಟವೇ ಮೊದಲಾದ ನಿದ್ರಾಸ್ಥಿತಿಯಲ್ಲಿನ ಚಲನವಲನಗಳನ್ನು ಅರ್ಥ ಮಾಡಿಕೊಳ್ಳಬಲ್ಲುದು. ಹೀಗೆ ತರಬೇತಿ ಪಡೆದ ನಂತರ ಮಲಗಿದಾಗ ಆಗುವ ಬದಲಾವಣೆಗಳನ್ನು ಗುರುತಿಸಿ, ಅದು ಉಸಿರುಗಟ್ಟಿದ್ದರಿಂದ ಆಗಿದ್ದೋ ಗೊರಕೆಯಿಂದಲೋ, ಬಾಯಿಯ ಉಸಿರಾಟದಿಂದಲೋ ಎಂದು ವಿಂಗಡಿಸಬಲ್ಲುದು.

ಈ ರೀತಿಯ ಪಟ್ಟಿ ಇರುವ ಪೈಜಾಮಾವನ್ನು ಧರಿಸಿ ಮಲಗಿದರೆ ಸಾಕು. ವೈದ್ಯರಿಗೆ ನೀವು ಮಲಗಿದ್ದಾಗ ಎಷ್ಟು ಹೊತ್ತು ಬಾಯಿಯಿಂದ ಹಾಗೂ ಎಷ್ಟು ಹೊತ್ತು ಮೂಗಿನಿಂದ ಉಸಿರಾಡಿದಿರಿ, ಎಷ್ಟು ಗೊರಕೆ ಹೊಡೆದಿರಿ, ಎಷ್ಟು ಬಾರಿ ಉಸಿರುಗಟ್ಟಿತ್ತು, ಅದರಲ್ಲಿ ಮೂಗಿನಲ್ಲಿನ ತೊಂದರೆಯಿಂದ ಆಗಿದ್ದು ಎಷ್ಟು, ನರಮಂಡಲದಲ್ಲಿನ ಏರುಪೇರುಗಳಿಂದಾಗಿದ್ದು ಎಷ್ಟು ಎಂದು ಈ ಪೈಜಾಮಾ ವಿಂಗಡಿಸಿ, ನಿಮ್ಮ ನಿದ್ರೆ ಸಾಧಾರಣದ್ದಾಗಿತ್ತೋ, ತೊಂದರೆಯಿಂದ ಕೂಡಿತ್ತೋ ಅಥವಾ ಅಪಾಯಕಾರಿ ಹೃದಯದ ಅಥವಾ ನರಮಂಡಲದ ತೊಂದರೆಯಿಂದಾಗಿ ಬಾಧಿತವಾಗಿತ್ತೋ ಎಂದು ತಿಳಿಸಬಲ್ಲುದು. ಅಷ್ಟೇ. ಸುಖನಿದ್ರೆಗೆ ಇದು ಸುಲಭ ಸೂತ್ರವಲ್ಲ ಎನ್ನುವುದು ನೆನಪಿರಲಿ.

ಈ ಹೊಸ ದಿರಿಸಿನ ತಯಾರಿಕೆಯ ವಿಧಾನ, ಅದರ ಪರೀಕ್ಷೆ ಮೊದಲಾದ ವಿವರಗಳ ಜೊತೆಗೆ ಸ್ಲೀಪ್ನೆಟ್ ತಂತ್ರಜ್ಞಾನದ ಕೋಡಿಂಗ್ ವಿವರಗಳನ್ನೂ ‘ಪಿಎನ್ಎಎಸ್’ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.