ಗುರುವಾರ , ಅಕ್ಟೋಬರ್ 29, 2020
26 °C

PV Web Exclusive | ಕಡಿಮೆ ಬೆಲೆಗೆ ಪ್ರೀಮಿಯಂ ಸೌಲಭ್ಯ; ಒನ್‌ಪ್ಲಸ್‌ ನಾರ್ಡ್‌

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಒನ್‌ಪ್ಲಸ್‌ ಕಂಪನಿ ಭಾರತದಲ್ಲಿ ತನ್ನ ಮಾರುಕಟ್ಟೆ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡಿದೆ. ಕೇವಲ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಂದ ಇಲ್ಲಿ ಬೇರನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕಂಪನಿಗೆ ಸ್ಪಷ್ಟವಾಗಿ ಅರಿವಾದಂತೆ ಕಾಣುತ್ತಿದೆ. ಹೀಗಾಗಿ ಬಜೆಟೆಡ್ ಫೋನ್‌ಗಳನ್ನೂ ತಯಾರಿಸಿ ಬಿಡುಗಡೆ ಮಾಡುವತ್ತ ಗಮನ ಹರಿಸಿದೆ. ಇದರ ಮೊದಲ ಹೆಜ್ಜೆಯೇ ‘ಒನ್‌ಪ್ಲಸ್‌ ನಾರ್ಡ್’

ರಿವ್ಯೂಗೆ ಬಂದಿದ್ದ ಫೋನ್‌ನ ಕಾರ್ಯಾಚರಣಾ ವ್ಯವಸ್ಥೆ (ಒಎಸ್‌) ಅಪ್‌ಡೇಟ್‌ ಆಗಿರಲಿಲ್ಲ. ಹೀಗಾಗಿ ಕಂಪನಿ ಎರಡು ಬಾರಿ ಸಾಫ್ಟ್‌ವೇರ್‌ ಅಪ್‌ಡೇಟ್‌ ನೀಡಿದ ಬಳಿಕ, ಕ್ಯಾಮೆರಾ ಸಾಮರ್ಥ್ಯದ ನೈಜ ಅನುಭವ ಸಾಧ್ಯವಾಯಿತು.

ಆಕಾರದಲ್ಲಿ ಇದು ಒನ್‌ಪ್ಲಸ್‌ನ ತಮ್ಮ. 5ಜಿಗೆ ಬೆಂಬಲಿಸುವ ಫೋನ್ ಇದಾಗಿದೆ. ಒನ್‌ಪ್ಲಸ್‌ ಪ್ರೀಮಿಯಂ ಹ್ಯಾಂಡ್‌ಸೆಟ್‌ನ ಸೌಲಭ್ಯಗಳನ್ನು ಕಡಿಮೆ ಬೆಲೆಯಲ್ಲಿ ಬಳಸಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ್ದಾಗಿದೆ. ವಿನ್ಯಾಸ, ಕಾರ್ಯಾಚರಣೆಯ ವೇಗ, ಕ್ಯಾಮೆರಾ ಗುಣಮಟ್ಟದ ದೃಷ್ಟಿಯಿಂದ ಪ್ರೀಮಿಯಂ ಹ್ಯಾಂಡ್‌ಸೆಟ್‌ಗೆ ಸರಿಸಾಟಿ ಅಲ್ಲದಿದ್ದರೂ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬಾಟರಿ ಬಾಳಿಕೆಯು ಕಂಪನಿಯ ಈ ಹಿಂದಿನ ಕೆಲವೊಂದು ಹ್ಯಾಂಡ್‌ಸೆಟ್‌ಗಳಿಗಿಂತಲೂ ಉತ್ತಮವಾಗಿದೆ.

ಗೇಮಿಂಗ್ ಅನುಭವ ಚೆನ್ನಾಗಿದೆ. ವಿಡಿಯೊ, ಆಡಿಯೊ ಗುಣಮಟ್ಟವೂ ಉತ್ತಮವಾಗಿದೆ.


ಸೂರ್ಯಾಸ್ತದ ವೇಳೆ ತೆಗೆದಿರುವ ಚಿತ್ರ

ಕ್ಯಾಮೆರಾ: ಒನ್‌ಪ್ಲಸ್‌ 8ಗಿಂತ ಹಿಂದಿನ ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಒಂದು ಚಿತ್ರ ತೆಗೆದ ಬಳಿಕ ಅದನ್ನು ಜೂಮ್‌ ಮಾಡಿದರೆ ಕ್ಲಾರಿಟಿ ಇರುತ್ತಿರಲಿಲ್ಲ. ಈ ಬಗ್ಗೆ ರಿವ್ಯೂನಲ್ಲಿ ಉಲ್ಲೇಖಿಸಲಾಗಿತ್ತು. ‘8ಪ್ರೊ’ ಮತ್ತು ‘ನಾರ್ಡ್’ ನಲ್ಲಿ ಅದನ್ನು ಕಂಪನಿ ಸರಿಪಡಿಸಿಕೊಂಡಿದೆ. ಲ್ಯಾಂಡ್‌ಸ್ಕೇಪ್ ಚಿತ್ರಗಳನ್ನು ತೆಗೆಯಲು ಈ ಫೋನ್ ಉತ್ತಮವಾಗಿದೆ. 48 ಎಂಪಿ ಕ್ಯಾಮೆರಾದಲ್ಲಿ ಚಿತ್ರ ಬಹಳ ಸ್ಪಷ್ಟವಾಗಿ ಸೆರೆಯಾಗುತ್ತದೆ. ಕಾರು ಅಥವಾ ಬೈಕಿನಲ್ಲಿ 40 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗಲೂ ತೆಗೆದ ಚಿತ್ರದ ಗುಣಮಟ್ಟ ಉತ್ತಮವಾಗಿಯೇ ಇದೆ. ನೈಟ್‌ಸ್ಕೇಪ್ ಮೋಡ್‌ನಲ್ಲಿ ಸೂರ್ಯಾಸ್ತದ ಚಿತ್ರಗಳನ್ನು ಸೆರೆಹಿಡಿಯುವುದು ಬಹಳ ಮುದ ನೀಡಿತು. 48 ಎಂಪಿ ಕ್ಯಾಮೆರಾದ ಗುಣಮಟ್ಟದ ನೈಜ ಅನುಭವ ಪಡೆಯಲು ಕ್ಯಾಮೆರಾ ಆನ್ ಮಾಡಿದಾಗ ಅದರಲ್ಲಿ ಕಾಣುವ ‘ಪ್ರೊ’ ಆಯ್ಕೆ ಬಳಸಬೇಕು.

ಸೂಪರ್ ಮ್ಯಾಕ್ರೊ: ಮೂರು ಬಾರಿ ಸಾಫ್ಟ್‌ವೇರ್ ಅಪ್‌ಡೇಟ್ ಆದ ಬಳಿಕವೂ ಇದರ ಸೂಪರ್ ಮ್ಯಾಕ್ರೊ ಮೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೂವಿನ ದಳದಲ್ಲಿ ಇರುವ ಸೂಕ್ಷ್ಮವಾದ ಗೆರೆಗಳು, ಹೂವಿನ ಕುಸುರಿನ ರಚನೆಯು ಸ್ಪಷ್ಟವಾಗಿ ಕಾಣುವುದೇ ಇಲ್ಲ. ಆದರೆ, 48 ಎಂಪಿಯಲ್ಲಿಯೇ ಫೋಕಸ್ ಮಾಡಿದರೆ ಒಂದು ಹಂತದವರೆಗೆ ಅಂತಹ ಸೂಕ್ಷ್ಮಗಳನ್ನು ಸೆರೆಹಿಡಿಯಬಲ್ಲದು. ಆದರೆ ಶೇ 100ರಷ್ಟು ಗುಣಮಟ್ಟ ನಿರೀಕ್ಷೆ ಮಾಡಲಾಗುವುದಿಲ್ಲ.


ಕಾರಿನಲ್ಲಿ ಸುಮಾರು 40 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ತೆಗೆದಿರುವ ಚಿತ್ರ

ಸೆಲ್ಫಿ: ಮಂದ ಬೆಳಕಿನಲ್ಲಿ ಸೆಲ್ಫಿ ಕ್ಯಾಮೆರಾದಲ್ಲಿ ತೆಗೆದ ಚಿತ್ರದ ಸ್ಪಷ್ಟತೆ ಕಡಿಮೆ ಇದೆ. ಮನೆಯಿಂದ ಹೊರಗಡೆ ತೆಗೆದ ಚಿತ್ರದ ಗುಣಮಟ್ಟ ಉತ್ತಮವಾಗಿದೆ. ಪೊರ್ಟ್ರೇಟ್ ಅಲ್ಲದೆ ಫೊಟೊ ಮೋಡ್‌ನಲ್ಲಿ ತೆಗೆದ ಸೆಲ್ಫಿಯೂ ಚೆನ್ನಾಗಿದೆ.

ಬ್ಯಾಟರಿ: ಬ್ಯಾಟರಿ ಬಾಳಿಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಂಪನಿಯು ‘ಒನ್‌ಪ್ಲಸ್‌ 8 ಪ್ರೊ’ ದಿಂದ ತುಸು ಗಂಭೀರವಾಗಿ ಪರಿಗಣಿಸಿದಂತಿದೆ. ಬೇಗನೆ ಚಾರ್ಜ್ ಆಗುವಂತೆ ಮಾಡುವ ಜತೆಗೆ ಚಾರ್ಜ್ ಆಗಿದ್ದನ್ನು ಹೆಚ್ಚಿನ ಸಮಯದವರೆಗೆ ಉಳಿಯುವಂತೆಯೂ ಮಾಡಲಾಗಿದೆ. ಇದರಲ್ಲಿ 4,114 ಎಂಎಎಚ್ ಬ್ಯಾಟರಿ ಇದ್ದು, 80 ನಿಮಿಷದಲ್ಲಿ ಶೇ 100ರಷ್ಟು ಚಾರ್ಜ್ ಆಗುತ್ತದೆ. ಈಗ ಒಂದು ಮೊಬೈಲಿನ ಸಾಮಾನ್ಯ ಬಳಕೆ ಎಂದರೆ ಗೇಮ್, ಸೋಷಿಯಲ್ ಮೀಡಿಯಾ, ಬ್ರೌಸಿಂಗ್, ಯುಟ್ಯೂಬ್ ಬಳಸುವಿಕೆ ಇದ್ದೇ ಇರುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ ಬ್ಯಾಟರಿ ಒಂದೂವರೆ ದಿನ ಬಾಳಿಕೆ ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ₹ 30 ಸಾವಿರದೊಳಗಿನ ಬೆಲೆಯ ಫೋನ್‌ಗಳಲ್ಲಿ ಇದನ್ನು ಆದ್ಯತೆಯಾಗಿ ಪರಿಗಣಿಸಬಹುದು.


ಮೊಬೈಲ್‌ನ ‘ಪ್ರೊ’ ಆಯ್ಕೆಯಲ್ಲಿ ತೆಗೆದಿರುವ ಹೂವಿನ ಚಿತ್ರ

ವೈಶಿಷ್ಟ್ಯ
* ಪರದೆ: 6.44 ಇಂಚು. ಫ್ಲ್ಯೂಯೆಡ್ ಅಮೊ ಎಲ್‌ಇಡಿ. (1080x2400 ರೆಸಲ್ಯೂಷನ್)
* ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 765 ಎಸ್ ಒಸಿ
* ಆಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ ಒಎಸ್
* ಕ್ಯಾಮೆರಾ: 48+8+5+2 ಎಂಪಿ
* ಸೆಲ್ಫಿ: 32+8 ಎಂಪಿ
* 4,115 ಎಂಎಎಚ್ ಬ್ಯಾಟರಿ
* 5ಜಿ, ಬ್ಲುಟೂತ್ 5.1, ಎನ್ ಎಫ್ ಸಿ
* ಬೆಲೆ: 6+64 ಜಿಬಿ; ₹ 24,999. 12+128ಜಿಬಿ; ₹ 27,999. 12+ 256 ಜಿಬಿ; ₹ 29,999

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು