ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕೊರೊನಾ ವೈರಸ್‌ನ ಉಗಮ ಸ್ಥಾನ ಎಂದ ಚೀನಾ ವಿಜ್ಞಾನಿಗಳು

Last Updated 29 ನವೆಂಬರ್ 2020, 3:06 IST
ಅಕ್ಷರ ಗಾತ್ರ

ನವದೆಹಲಿ: ಭಾರತ-ಚೀನಾ ಪೈಪೋಟಿ ಮತ್ತು ಕೋವಿಡ್-19ಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಸಾರ್ಸ್‌ ಕೊರೊನಾ ವೈರಸ್‌-2 (SARS-CoV-2) 2019ರ ಬೇಸಿಗೆಯಲ್ಲಿ ಭಾರತದಲ್ಲಿ ಹುಟ್ಟಿದೆ ಎಂದು ಚೀನಾದ ಉನ್ನತ ಮಟ್ಟದ ವಿಜ್ಞಾನ ಸಂಸ್ಥೆ, 'ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್' ತಂಡ ವಾದಿಸಿದೆ. ಹೊಸ ಅಧ್ಯಯನ ವರದಿಯೊಂದನ್ನು ಮುಂದಿಟ್ಟು ಅದು ಈ ರೀತಿ ಹೇಳಿದೆ.

ಸಾರ್ಸ್‌ ಕೊರೊನಾ ವೈರಸ್‌-2ನ ಮಾನವರ ನಡುವಿನ ಪ್ರಸರಣೆ ಸಂಭವಿಸಿದ್ದು ವುಹಾನ್‌ನಲ್ಲಿ. ಆದರೂ, ವುಹಾನ್‌ನಲ್ಲಿ ವೈರಸ್ ಹರಡುವುದಕ್ಕೂ ಮೊದಲು ಮಾನವರ ನಡುವಿನ ಈ ಹಿಂದಿನ ಪ್ರಸರಣೆಯಲ್ಲಿ ವೈರಸ್‌ ಸ್ವಲ್ಪ ಮಟ್ಟಿನ ವಿಕಸನವನ್ನು ಅದಾಗಲೇ ಕಂಡಿದೆ ಎಂದು ವಿಜ್ಞಾನಿಗಳ ಅಧ್ಯಯನ ಹೇಳಿದೆ. ಭಾರತೀಯ ಉಪಖಂಡವು ವೈರಸ್‌ನ ಮೊದಲ ಪ್ರಸರಣಾ ಪ್ರದೇಶವಾಗಿರಬಹುದು. ಕನಿಷ್ಠ ರೂಪಾಂತರಿತ ವೈರಸ್‌ ತಳಿಯ ಭೌಗೋಳಿಕ ಮಾಹಿತಿ ಮತ್ತು ವೈವಿಧ್ಯತೆಯು ಇದನ್ನು ಸೂಚಿಸುತ್ತಿದೆ ಎಂದು ಚೀನಿಯರ ಅಧ್ಯಯನ ವರದಿ ಹೇಳಿದೆ.

ವೈರಸ್‌ನ ಉಗಮಸ್ಥಾನಕ್ಕೆ ಸಂಬಂಧಿಸಿದಂತೆ ಚೀನಾ ಇತರ ದೇಶಗಳನ್ನು ದೂಷಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು, ಅದು ಇಟಲಿ ಮತ್ತು ಅಮೆರಿಕ ಕಡೆಗೂ ಬೊಟ್ಟು ಮಾಡಿತ್ತು.

ಇನ್ನೂ ವಿಮರ್ಶೆಗೆ ಒಳಪಡದ ಈ ಅಧ್ಯಯನವು 'ಫೈಲೋಜೆನೆಟಿಕ್ ಅನಾಲಿಸಿಸ್' ಎಂಬ ಅಧ್ಯಯನ ವಿಧಾನವನ್ನು ಬಳಸಿದೆ. ಈ ವಿಧಾನದಲ್ಲಿ ವೈರಸ್‌ನ ಮೂಲವನ್ನು ಕಂಡುಹಿಡಿಯಲು ವಿಜ್ಞಾನಿಗಳು ಅದರ ರೂಪಾಂತರವನ್ನು ಅಧ್ಯಯನ ಮಾಡುತ್ತಾರೆ. ಸದ್ಯ ಈ ಅಧ್ಯಯನದಲ್ಲಿ ವುಹಾನ್‌ ಕೊರೊನಾವೈರಸ್‌ನ ಮೂಲ ಎಂಬ ವಾದವನ್ನು ತಳ್ಳಿ ಹಾಕಿದೆ. ಬಾಂಗ್ಲಾದೇಶ, ಅಮೆರಿಕ, ಗ್ರೀಸ್, ಆಸ್ಟ್ರೇಲಿಯಾ, ಭಾರತ, ಇಟಲಿ, ಜೆಕ್ ರಿಪಬ್ಲಿಕ್, ರಷ್ಯಾ ಮತ್ತು ಸೆರ್ಬಿಯಾಗಳನ್ನು ಸಂಭಾವ್ಯ ದೇಶಗಳಾಗಿ ಹೆಸರಿಸಿದೆ.

'ಭಾರತ ಮತ್ತು ಬಾಂಗ್ಲಾದೇಶದಲ್ಲಿ ವೈರಸ್‌ನ ರೂಪಾಂತರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಅದೂ ಅಲ್ಲದೆ, ಭಾರತ ಮತ್ತು ಬಾಂಗ್ಲಾದೇಶಗಳು ನೆರೆಹೊರೆಯ ರಾಷ್ಟ್ರಗಳಾಗಿದ್ದು, ವೈರಸ್‌ ಈ ಉಪಖಂಡದಲ್ಲಿಯೇ ಮೊದಲು ಹರಡಿದೆ. ವೈರಸ್ ರೂಪಾಂತರಗೊಳ್ಳಲು ತೆಗೆದುಕೊಳ್ಳುವ ಸಮಯ ಮತ್ತು ಆ ಸಮಯವನ್ನು ಪ್ರದೇಶಗಳಲ್ಲಿ ಸಂಗ್ರಹಿಸಿದ ಮಾದರಿಗಳೊಂದಿಗೆ ಹೋಲಿಕೆ ಮಾಡಿದಾಗ, ಈ ಪ್ರದೇಶದಲ್ಲಿ ವೈರಸ್ ಜುಲೈ ಅಥವಾ ಆಗಸ್ಟ್ 2019ರಲ್ಲಿ ಹರಡಿದಿದೆ' ಎಂದು ವರದಿಯಲ್ಲಿ ವಾದಿಸಲಾಗಿದೆ.

'2019ರ ಮೇ ನಿಂದ ಜೂನ್ ವರೆಗೆ, ಉತ್ತರ-ಮಧ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ದಾಖಲಾದ ಅತೀ ಪ್ರಬಲ ಬಿಸಿಗಾಳಿಯು ಈ ಪ್ರದೇಶದಲ್ಲಿ ನೀರಿನ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸಿದೆ. ನೀರಿನ ಕೊರತೆಯು ಕೋತಿಗಳಂತಹ ಕಾಡು ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಆಗ ಮಾನವ-ಕಾಡು ಪ್ರಾಣಿಗಳ ಸಂಪರ್ಕ ಏರ್ಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

'ಎಲ್ಲರಿಗೂ ತಿಳಿದಿರುವಂತೆ, ನೈರ್ಮಲ್ಯವಿಲ್ಲದ, ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಸರಿ ಇಲ್ಲದ ಭಾರತದ ಉಪಖಂಡದಲ್ಲಿ ಜ್ವರದ ರೀತಿಯ ರೋಗಲಕ್ಷಣವನ್ನು ಹೊಂದಿರುವ ವೈರಸ್ ಹಲವಾರು ತಿಂಗಳುಗಳವರೆಗೆ ಯಾರಿಗೂ ಗೊತ್ತೇ ಆಗದಂತೆ ಹರಡಿರಬಹುದು,' ಎಂದು ಕಲ್ಪಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT