ಬುಧವಾರ, ನವೆಂಬರ್ 25, 2020
21 °C
ಕೊರೊನಾ ವೈರಸ್ ಲಸಿಕೆ

ಸೋಂಕು ತಗುಲಿಸಿ ಮನುಷ್ಯರ ಮೇಲೆ ಲಸಿಕೆ ಪ್ರಯೋಗ; ಬ್ರಿಟನ್‌ ವಿಜ್ಞಾನಿಗಳ ಯೋಜನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಲಸಿಕೆ ಪ್ರಯೋಗ–ಪ್ರಾತಿನಿಧಿಕ ಚಿತ್ರ

ಲಂಡನ್‌: ಆರೋಗ್ಯವಂತ ವ್ಯಕ್ತಿಗಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿಸಿ, ಕೋವಿಡ್‌–19 ಲಸಿಕೆ ಪ್ರಯೋಗ ನಡೆಸಲು ಬ್ರಿಟಿಷ್‌ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ನಡೆಸಲಾಗುತ್ತಿದ್ದು, ಇದರಿಂದ ಲಸಿಕೆ ಪ್ರಯೋಗಕ್ಕೆ ವೇಗ ಸಿಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಬ್ರಿಟನ್‌ ಸರ್ಕಾರ ಸಂಶೋಧನೆಗೆ ಹಣಕಾಸು ಸಹಕಾರ ನೀಡಿದ್ದು, ಲಂಡನ್‌ ಇಂಪೆರಿಯಲ್‌ ಕಾಲೇಜಿನಲ್ಲಿ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದೆ. ಮನುಷ್ಯರಿಗೆ ಸೋಂಕು ತಗುಲಿಸಿ ಚಿಕಿತ್ಸೆ ನೀಡುವ ಮೂಲಕ ಲಸಿಕೆ ಪರೀಕ್ಷೆ ನಡೆಸುವ ಕ್ರಮ (ಹ್ಯೂಮನ್ ಚಾಲೆಂಜ್‌ ಟ್ರಯಲ್‌) ಅಪಾಯಕಾರಿ ಅಥವಾ ಅನಗತ್ಯವಾದುದು ಎಂದು ಅಮೆರಿಕ ಸರ್ಕಾರದ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಪ್ರಯೋಗಗಳಿಂದ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಗೆ ವೇಗ ಸಿಗುತ್ತದೆ. ಆದಷ್ಟು ಬೇಗ ಲಸಿಕೆ ಹೊರಬರುವುದರಿಂದ ಜಾಗತಿಕವಾಗಿ ಸಾವಿರಾರು ಜನರ ಪ್ರಾಣ ಉಳಿಸಬಹುದಾಗಿದೆ ಎಂದು ಬ್ರಿಟನ್‌ ವಿಜ್ಞಾನಿಗಳು ನಂಬಿದ್ದಾರೆ.

ಈ ಪ್ರಯೋಗವನ್ನು ಜನವರಿಯಿಂದ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿರುವ ಕೊರೊನಾ ವೈರಸ್‌ ಸಂಗ್ರಹವನ್ನು ಪ್ರಯೋಗಕ್ಕೆ ಒಳಗಾಗುವ ಆರೋಗ್ಯವಂತ ವ್ಯಕ್ತಿಗಳ ಮೂಗಿನೊಳಗೆ ಹರಿಯ ಬಿಡಲಾಗುತ್ತದೆ. ಅವರನ್ನು ಲಂಡನ್‌ನ ರಾಯಲ್‌ ಫ್ರೀ ಹಾಸ್ಪಿಟಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ನಿತ್ಯವು ಕೆಲವು ಗಂಟೆಗಳ ಅಂತರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಹಾಗೂ ಎರಡರಿಂದ ಮೂರು ವಾರಗಳ ವರೆಗೂ ಪರೀಕ್ಷೆ ಮುಂದುವರಿಸಲಾಗುತ್ತದೆ.

18ರಿಂದ 30 ವರ್ಷ ವಯಸ್ಸಿನ ನೂರು ಮಂದಿ ಆರೋಗ್ಯವಂತ ವ್ಯಕ್ತಿಗಳನ್ನು ಆರಂಭಿಕ ಪ್ರಯೋಗದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಸೋಂಕಿಗೆ ಒಳಪಟ್ಟವರಲ್ಲಿ ಉಸಿರಾಟದ ವ್ಯವಸ್ಥೆ ಮತ್ತು ಲಸಿಕೆ ಬೀರುವ ಪರಿಣಾಮ, ಸುರಕ್ಷತೆಗಳ ಬಗ್ಗೆ ಗಮನಿಸಲಾಗುತ್ತದೆ.

ಚೀನಾ ಮತ್ತು ರಷ್ಯಾದ ಲಸಿಕೆ

ಬ್ರೆಜಿಲ್‌ನಲ್ಲಿ ಚೀನಾದ ಕೊರೊನಾ ವೈರಸ್ ಲಸಿಕೆ ಸಿನೊವ್ಯಾಕ್ ಅಂತಿಮ ಹಂತದ ಪ್ರಯೋಗ ನಡೆಯುತ್ತಿದ್ದು, ಲಸಿಕೆ ಸುರಕ್ಷಿತವೆಂದು ಕಂಡು ಬಂದಿದೆ. ಸಿನೊವ್ಯಾಕ್ ಲಸಿಕೆ ಪ್ರಯೋಗ ಕೈಗೊಂಡಿರುವ ಬ್ರೆಜಿಲ್‌ನ ಇನ್‌ಸ್ಟಿಟ್ಯೂಟ್, ಲಸಿಕೆ ಸುರಕ್ಷತೆಯ ಬಗ್ಗೆ ಪ್ರಕಟಿಸಿದೆ.

ಇನ್ನೂ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಫಲಿತಾಂಶಗಳ ಮಾಹಿತಿಯನ್ನು ನವೆಂಬರ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ. 10 ಸಾವಿರ ಜನರ ಮೇಲೆ ನಡೆದಿರುವ ಪ್ರಯೋಗದ ಮಾಹಿತಿ ಹೊರ ಬರಲಿದೆ.

ಈ ನಡುವೆ ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೊಮ್ಮೆ ಭಾರತದತ್ತ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿನ ಸಂಶೋಧನೆ ಮತ್ತು ತಯಾರಿಕಾ ಸಾಮರ್ಥ್ಯವು ಜಗತ್ತಿನ ಕೋವಿಡ್‌–19 ಲಸಿಕೆ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದಿದ್ದಾರೆ.

ಪ್ರಸ್ತುತ ಜಗತ್ತಿನಾದ್ಯಂತ 44 ಕೊರೊನಾ ವೈರಸ್‌ ಲಸಿಕೆಗಳು ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿವೆ ಹಾಗೂ 154 ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡಿಸೆಂಬರ್‌ನಲ್ಲಿ ಮಾಡೆರ್ನಾ ಮದ್ದು?
 
ನವೆಂಬರ್‌ನಲ್ಲಿ ಕೊರೊನಾ ವೈರಸ್‌ ಲಸಿಕೆಯ ಮಧ್ಯಂತರ ಫಲಿತಾಂಶ ಹೊರಬರಲಿದೆ ಎಂದು ಮಾಡರ್ನ ಇಂಕ್‌ ಸಿಇಒ ಹೇಳಿರುವುದಾಗಿ ವರದಿಯಾಗಿದೆ. ಫಲಿತಾಂಶ ಸೂಕ್ತವಾಗಿದ್ದರೆ, ಅಮೆರಿಕ ಸರ್ಕಾರದಿಂದ ಕೋವಿಡ್‌–19 ಆಂಟಿಡೋಟ್‌ (ಮದ್ದು) ಬಳಕೆಗೆ ಡಿಸೆಂಬರ್‌ನಲ್ಲಿ ಅನುಮತಿ ಪಡೆಯಲಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು