ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕ್ಯಾಸೆಟ್ ಟೇಪ್' ಅನ್ವೇಷಕ ಲೂ ಅಟೆನ್ಸ್ ಇನ್ನಿಲ್ಲ

ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ತಯಾರಿಯಲ್ಲೂ ಪ್ರಮುಖ ಪಾತ್ರ
Last Updated 13 ಮಾರ್ಚ್ 2021, 15:33 IST
ಅಕ್ಷರ ಗಾತ್ರ

ನವದೆಹಲಿ: ಆಡಿಯೋ 'ಕ್ಯಾಸೆಟ್ ಟೇಪ್' ಅನ್ವೇಷಕ ಮತ್ತು 'ಕಾಂಪ್ಯಾಕ್ಟ್ ಡಿಸ್ಕ್' (ಸಿಡಿ) ತಯಾರಿಸಲು ಪ್ರಮುಖ ಪಾತ್ರ ವಹಿಸಿರುವ ಡಚ್ ಎಂಜಿನಿಯರ್ಲೂ ಅಟೆನ್ಸ್ (ಲಾವ್ ಆಟೆನ್ಸ್ ) ಮಾರ್ಚ್ 6ರಂದು ನಿಧನರಾಗಿದ್ದಾರೆ ಎಂದು ಡಚ್ ಮಾಧ್ಯಮಗಳು ವರದಿ ಮಾಡಿವೆ.

ಎಲೆಕ್ಟ್ರಿಕಲ್ ದೈತ್ಯ ಸಂಸ್ಥೆ ಪಿಲಿಪ್ಸ್‌ಗಾಗಿ ಕೆಲಸ ಮಾಡುವಾಗ ಅಟೆನ್ಸ್ ಕಂಡು ಹಿಡಿದ ಕ್ಯಾಸೆಟ್ ಟೇಪ್, ಇಡೀ ವಿಶ್ವದ ಸಂಗೀತ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. ತಲೆಮಾರಿನಿಂದ ತಲೆಮಾರಿನ ಸಂಗೀತ ಪ್ರೇಮಿಗಳಿಗೆ ತಮ್ಮ ಮೆಚ್ಚಿನ ಹಾಡುಗಳ ಕೇಳಲು ಮತ್ತು ಸಂಗೀತ ಮಿಶ್ರಣವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದ್ದವು.

ಕ್ಯಾಸೆಟ್ ಟೇಪ್ ಎಷ್ಟೊಂದು ಜನಪ್ರಿಯತೆ ಗಿಟ್ಟಿಸಿದೆಯೆಂದರೆ ಜಗತ್ತಿನಲ್ಲಿ 100 ಶತಕೋಟಿಗೂ ಹೆಚ್ಚು ಕ್ಯಾಸೆಟ್ ಟೇಪ್‌ಗಳು ಉತ್ಪಾದಿಸಲ್ಪಟ್ಟಿದ್ದವು. 1960ರ ದಶಕದಿಂದ ಆರಂಭವಾಗಿ 2000ನೇ ಇಸವಿಯ ವರೆಗೂ ಜನಪ್ರಿಯತೆ ಕಾಯ್ದುಕೊಂಡಿತ್ತು.

94 ವರ್ಷದ ಲೂ ಅಟೆನ್ಸ್ ಅಗಲಿಕೆಯು ಅತಿಯಾದ ನೋವುಂಟು ಮಾಡಿದೆ ಎಂದು ಪಿಲಿಪ್ಸ್ ಮ್ಯೂಸಿಯಂನ ನಿರ್ದೇಶಕ ಓಲ್ಗಾ ಕೂಲೆನ್ ಸಂತಾಪ ಸೂಚಿಸಿದ್ದಾರೆ.

ತಂತ್ರಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಲೂ ಅಟೆನ್ಸ್ ಹೊಸ ಹೊಸ ತಂತ್ರಜ್ಞಾನಗಳನ್ನು ಶೋಧನೆ ಮಾಡುವಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು.

1926ರಲ್ಲಿ ಡಚ್ ನಗರವಾದ ಬೆಲ್ಲಿಂಗ್‌ವರ್ಲ್ಡ್‌ನಲ್ಲಿ ಜನಿಸಿದ ಅಟೆನ್ಸ್, ಅತಿ ಚಿಕ್ಕ ವಯಸ್ಸಿನಲ್ಲಿಯೇ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ತೋರಿದ್ದರು.

ಚಿತ್ರ ಕೃಪೆ: ಐಸ್ಟೋಕ್
ಚಿತ್ರ ಕೃಪೆ: ಐಸ್ಟೋಕ್

ಎರಡನೇ ಮಹಾಯುದ್ಧದ ಸಮಯದಲ್ಲಿ ಹಾಲೆಂಡ್ ಮೇಲೆ ಜರ್ಮನಿಯ ಆಕ್ರಮಣದ ಸಮಯದಲ್ಲಿ 'ಫ್ರೀ ಡಚ್‌' (ಡಚ್‌ ವಿಮುಕ್ತಿ) ಎಂಬ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗಬಲ್ಲ, ವಿಶೇಷ ಆಂಟೆನ್ನಾ ಇರುವ ರೇಡಿಯೊವನ್ನು ಅವರು ಅಭಿವೃದ್ಧಿಪಡಿಸಿದ್ದರು. ಜರ್ಮನಿಯ ಜಾಮರ್‌ಗಳನ್ನೂ ಮೀರಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದ ಕಾರಣಕ್ಕಾಗಿ ಅವುಗಳನ್ನು 'ಜರ್ಮನ್‌ ಫಿಲ್ಟರ್‌' ಎಂದು ಕರೆಯಲಾಗುತ್ತಿತ್ತು.

ಲೂ ಅಟೆನ್ಸ್ ಎಂಜಿನಿಯರ್‌ ಪದವಿ ಅಧ್ಯಯನದ ಬಳಿಕ 1952ರಲ್ಲಿ ಪಿಲಿಪ್ಸ್ ಸಂಸ್ಥೆಯಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡರು. 1960ರಲ್ಲಿ ಸಂಸ್ಥೆಯ ಪ್ರಾಡಾಕ್ಟ್ ಡೆವೆಲಪ್‌ಮೆಂಟ್ ಹೆಡ್ ಹುದ್ದೆಯನ್ನು ವಹಿಸಿದರು.

1963ನೇ ಇಸವಿಯಲ್ಲಿ ಅಟೆನ್ಸ್ ಹಾಗೂ ಅವರ ತಂಡವು ಬರ್ಲಿನ್ ರೆಡಿಯೊ ಎಲೆಕ್ಟ್ರಾನಿಕ್ಸ್ ಪ್ರದರ್ಶನದಲ್ಲಿ ಕ್ಯಾಸೆಟ್ ಟೇಪ್ ಅವಿಷ್ಕರಿಸಿತ್ತು. 1982ರಲ್ಲಿ ಕಾಂಪ್ಯಾಕ್ಟ್ ಡಿಸ್ಕ್ ಅವಿಷ್ಕಾರದಲ್ಲೂ ಲೂ ಅಟೆನ್ಸ್ ಪ್ರಮುಖ ಪಾತ್ರ ವಹಿಸಿದರು. ಇದು ಬಳಿಕ ಕ್ಯಾಸೆಟ್ ಟೇಪ್‌ಗಳ ಜನಪ್ರಿಯತೆಯನ್ನು ಮೀರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT