ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ: ಬ್ಯಾಕ್ಟೀರಿಯಾ ಬೆನ್ನೇರಿದ ಔಷಧ

Last Updated 7 ಜೂನ್ 2022, 19:30 IST
ಅಕ್ಷರ ಗಾತ್ರ

ನಮ್ಮ ದೇಹದೊಳಕ್ಕೆ ಔಷಧವನ್ನು ಸೇರಿಸಲು ಬ್ಯಾಕ್ಟೀರಿಯಾಗಳನ್ನೇ ಬಳಸಿಕೊಂಡರೆ ಹೇಗೆ? ಏನಿದು ‘ಬ್ಯಾಕ್ಟೀರಿಯಾ ಬೋಟ್‌’?...

***

ಕೋವಿಡ್‌ ಬಂದಾಗ ವ್ಯಾಕ್ಸೀನನ್ನು ಚುಚ್ಚಿಸಿಕೊಳ್ಳುವ ಸಂದರ್ಭದಲ್ಲಿ ನನ್ನ ಹಿರಿಯ ಗೆಳೆಯರೊಬ್ಬರು ಗೊಣಗುತ್ತಿದ್ದರು: ‘ಲಸಿಕೆಗಳನ್ನೂ ಗುಳಿಗೆಗಳ ರೂಪದಲ್ಲಿ ಸೇವಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’

ಗುಳಿಗೆ ಔಷಧಗಳನ್ನು ಸೇವಿಸುವುದು ಸುಲಭ. ಸೂಜಿ ಚುಚ್ಚಿಸಿಕೊಳ್ಳುವುದು ನೋವು ಎಂದು ಅವರ ಅನಿಸಿಕೆ. ಆದರೆ ಗುಳಿಗೆ ಔಷಧ ಯಾವಾಗಲೂ ಪರಿಣಾಮಕಾರಿಯಲ್ಲ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಇದೋ, ಎಂತಹ ಗುಳಿಗೆ ಔಷಧವನ್ನೂ ಪರಿಣಾಮಕಾರಿಯನ್ನಾಗಿ ಮಾಡಬಲ್ಲ ಉಪಾಯವೊಂದಿದೆಯಂತೆ. ಔಷಧವನ್ನು ಬೆನ್ನೇರಿಸಿಕೊಂಡ ಬ್ಯಾಕ್ಟೀರಿಯಾಗಳನ್ನು ನುಂಗಿಸಿದರೆ ಸಾಕಂತೆ! ಹೀಗೆಂದು ಪಂಜಾಬಿನ ಪಾಟಿಯಾಲಾದಲ್ಲಿರುವ ‘ಥಾಪರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ಯ ತಂತ್ರಜ್ಞ ದೀಪ್ತಿಮಾನ್‌ ಚೌಧರಿ ಮತ್ತು ಸಂಗಡಿಗರು ಮೊನ್ನೆ ಪ್ರಕಟಿಸಿದ್ದಾರೆ. ಈ ಉಪಾಯವನ್ನು ‘ಬ್ಯಾಕ್ಟೀರಿಯಾ ಬೋಟ್‌’ ಅರ್ಥಾತ್‌ ‘ಬ್ಯಾಕ್ಟೀರಿಯಾ ದೋಣಿ’ ಎಂದು ಕರೆದಿದ್ದಾರೆ.

ಗುಳಿಗೆ ಯಾವುದೇ ಆಗಲಿ ನಮ್ಮ ದೇಹ ನುಂಗದವುಗಳೆಲ್ಲವನ್ನೂ ಬಳಸಿಕೊಳ್ಳುವುದಿಲ್ಲ. ಹೀಗಾಗಿ ಔಷಧವಿಜ್ಞಾನಿಗಳಿಗೆ ನುಂಗಿದ ಗುಳಿಗೆಯೆಲ್ಲವೂ ದೇಹದಲ್ಲಿಯೇ ಉಳಿಯುವಂತೆ ಮಾಡುವುದೊಂದು ತೀರದ ಕನಸಾಗಿಬಿಟ್ಟಿದೆ. ಬಹುತೇಕ ಔಷಧಗಳನ್ನು ನುಂಗಿದ ಕೂಡಲೇ ಒಂದೋ ಹೊಟ್ಟೆಯಲ್ಲಿರುವ ಪ್ರಬಲವಾದ ಆಮ್ಲದಿಂದ ಅವು ನಿಷ್ಕ್ರಿಯವಾಗಿಬಿಡುತ್ತವೆ. ಅದನ್ನೂ ತಪ್ಪಿಸಿಕೊಂಡು ಕರುಳನ್ನು ಸೇರಿದರೂ, ಕರುಳಿನಿಂದ ರಕ್ತದೊಳಗೆ ಸೇರಲಾಗದೆ ಹಾಗೆಯೇ ಹೊರಗೆ ಹೋಗುತ್ತವೆ. ನಮ್ಮ ದೇಹ ಕೆಲವು ಔಷಧಗಳಲ್ಲಿನ ಕೇವಲ 3ರಿಂದ 10 ಶತಾಂಶದಷ್ಟನ್ನಷ್ಟೆ ಬಳಸಿಕೊಳ್ಳುತ್ತದೆಯಂತೆ. ಹೀಗಾಗಿಯೇ ಔಷಧಗಳನ್ನು ನೇರವಾಗಿ ರಕ್ತಕ್ಕೇ ಸೇರಿಸುವ ಚುಚ್ಚುಮದ್ದು ವೈದ್ಯರಿಗೆ ಪ್ರಿಯ; ರೋಗಿಗಳಿಗೆ ಕಹಿ.

ಇದನ್ನು ಬದಲಿಸಲಾಗದೇ? ಗುಳಿಗೆಗಳಲ್ಲಿರುವ ಔಷಧಗಳನ್ನೆಲ್ಲವೂ ದೇಹದೊಳಗೇ ಉಳಿಯುವಂತೆ, ದೇಹದ ಬಳಕೆಗೆ ಒಗ್ಗುವಂತೆ ಮಾಡುವುದು ಹೇಗೆ? ಇದು ವಿಜ್ಞಾನಿಗಳನ್ನೂ ಔಷಧಶಾಸ್ತ್ರಜ್ಞರನ್ನೂ ಕಾಡಿರುವ ಪ್ರಶ್ನೆ. ಇದಕ್ಕಾಗಿ ಹೊಸ ಹೊಸ ಉಪಾಯಗಳನ್ನು ರೂಪಿಸಲಾಗುತ್ತಿದೆ. ಹೊಟ್ಟೆಯೊಳಗೆ ನಿಧಾನವಾಗಿ ಕರಗುವಂತಹ ಹೊದಿಕೆ ಇರುವ ಗುಳಿಗೆಗಳನ್ನು ತಯಾರಿಸಲಾಗಿದೆ. ಅತಿ ಸೂಕ್ಷ್ಮವಾದ ಕೊಬ್ಬಿನ ಚೀಲಗಳೊಳಗೆ ಔಷಧವನ್ನು ತುಂಬಿಸಿ ಕುಡಿಸಿದ್ದೂ ಆಗಿದೆ. ಇವೆಲ್ಲ ನ್ಯಾನೋ ತಂತ್ರಜ್ಞಾನದ ಕೊಡುಗೆಗಳು. ಆದರೂ ಅತಿ ಹೆಚ್ಚು ಎಂದರೆ ಇಪ್ಪತ್ತೋ ಮೂವತ್ತೋ ಶತಾಂಶದಷ್ಟು ಔಷಧವನ್ನಷ್ಟೆ ದೇಹದೊಳಗೆ ಉಳಿಸುವ ಗುಳಿಗೆಗಳನ್ನು ತಯಾರಿಸಲು ಸಾಧ್ಯ. ಇವೆಲ್ಲ ಕಸರತ್ತಿನ ಜೊತೆಗೆ ಬ್ಯಾಕ್ಟೀರಿಯಾಗಳನ್ನೂ ಬಳಸಿಕೊಂಡರೆ ಇನ್ನಷ್ಟು ಉಪಯೋಗವಾಗಲಿದೆ ಎನ್ನುತ್ತದೆ, ದೀಪ್ತಿಮಾನ್‌ ಚೌಧರಿ ಸಂಶೋಧನೆ. ನಮ್ಮ ಹೊಟ್ಟೆಯಲ್ಲಿದ್ದರೂ ಕೇಡನ್ನುಂಟುಮಾಡದ ಬ್ಯಾಕ್ಟೀರಿಯಾಗಳ ಮೇಲೆ ‘ಕೈಟೊಸಾನ್‌’ ಎನ್ನುವ ಸಕ್ಕರೆಯ ಸೂಕ್ಷ್ಮ ಗುಳಿಗೆಗಳನ್ನು ಲೇಪಿಸಿ, ಆ ಗುಳಿಗೆಗಳೊಳಗೆ ಔಷಧವನ್ನು ಕೂಡಿಸುವ ಪ್ರಯತ್ನ ಮಾಡಿದೆ ಚೌಧರಿ ಅವರ ತಂಡ. ಹೊಟ್ಟೆಯೊಳ ಹೊಕ್ಕ ಬ್ಯಾಕ್ಟೀರಿಯಾಗಳು ಕರುಳಿನಲ್ಲಿ ಒಟ್ಟಾಗುತ್ತವೆ. ಹೀಗಾದಾಗ ಅವು ‘ಮ್ಯೂಸಿಲೇಜು’ ಎನ್ನುವ ಪದಾರ್ಥವನ್ನು ಸ್ರವಿಸುತ್ತವೆ. ಈ ಪದಾರ್ಥದಿಂದಾಗಿ ಬ್ಯಾಕ್ಟೀರಿಯಾಗಳೆಲ್ಲವೂ ಒಂದೇ ಕಡೆ ಒಟ್ಟಾಗಿ ಇರಬಹುದು. ಜೊತೆಗೆ ಇದು ಕೈಟೊಸಾನಿನಲ್ಲಿರುವ ಔಷಧ ನಷ್ಟವಾಗದಂತೆ ರಕ್ಷಣೆ ಒದಗಿಸಬಹುದು ಎನ್ನುವುದು ಚೌಧರಿ ತಂಡದ ತರ್ಕ.

ಇದು ಕೇವಲ ತರ್ಕವಲ್ಲ. ಇಂತಹ ತಂತ್ರದಿಂದ ನಿಧಾನವಾಗಿ ಔಷಧವನ್ನು ಒಸರುವ ಗುಳಿಗೆಗಳನ್ನು ತಯಾರಿಸಬಹುದು ಎನ್ನುವುದನ್ನು ಇಲಿಗಳ ಮೇಲೆ ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಇದಕ್ಕಾಗಿ ಚೌಧರಿ ‘ಲ್ಯಾಕ್ಟೊಬ್ಯಾಸಿಲಸ್‌ ಲ್ಯುಟೇರಿ’ ಎನ್ನುವ ಕರುಳಿನಲ್ಲಿ ವಾಸಿಸಬಲ್ಲ ಬ್ಯಾಕ್ಟೀರಿಯಾವನ್ನು ಉಪಯೋಗಿಸಿದೆ. ಈ ಬ್ಯಾಕ್ಟೀರಿಯಾದ ಮೈ ಮೇಲೆ 15ರಿಂದ 25 ನ್ಯಾನೊಮೀಟರ್‌ ದಪ್ಪದ ‘ಕೈಟೊಸಾನ್‌’ ಗುಂಡುಗಳನ್ನು ಅಂಟಿಸಿದೆ.

ಕೈಟೊಸಾನ್‌ ಸಕ್ಕರೆಯ ಅಣುವಾದ್ದರಿಂದ ಸುಲಭವಾಗಿ ಬ್ಯಾಕ್ಟೀರಿಯಾದ ಹೊದಿಕೆಗೆ ಅಂಟಿಕೊಳ್ಳಬಲ್ಲುದು. ಈ ಗುಂಡುಗಳಲ್ಲಿ ಸುಮಾರು ಮೂರು ನ್ಯಾನೊಮೀಟರ್‌ ಅಗಲದ ರಂಧ್ರಗಳಿದ್ದುವು. ಅನಂತರ ಈ ಬ್ಯಾಕ್ಟೀರಿಯಾಗಳನ್ನು ಔಷಧವಿರುವ ದ್ರಾವಣದಲ್ಲಿಟ್ಟು ಬೆಳೆಸಿದ್ದಾರೆ. ನ್ಯಾನೊಗುಂಡುಗಳ ಹೊದಿಕೆ ಇರುವ ಬ್ಯಾಕ್ಟೀರಿಯಾ ಇಂತಹ ಹೊದಿಕೆ ಇಲ್ಲದವುಗಳಿಗಿಂತ ನಿಧಾನವಾಗಿ ಬೆಳೆಯುತ್ತದೆ. ನ್ಯಾನೊಹೊದಿಕೆಯೊಳಗೆ ಔಷಧವನ್ನು ಸೇರಿಸಿದ್ದಾರೆ. ಇದೇ ಬ್ಯಾಕ್ಟೀರಿಯಾ ಬೋಟ್‌.

ಹೀಗೆ ಔಷಧವನ್ನು ತುಂಬಿದ ನ್ಯಾನೊಗುಂಡುಗಳ ಹೊದಿಕೆ ಬ್ಯಾಕ್ಟೀರಿಯಾ ಬೋಟ್‌ಗಳು ಗುಳಿಗೆಗಳಂತೆ ವರ್ತಿಸಬಲ್ಲುವೇ ಎನ್ನುವುದನ್ನು ಪರೀಕ್ಷಿಸಲು ಇವನ್ನು ಇಲಿಗಳಿಗೆ ತಿನ್ನಿಸಿ ಪ್ರಯೋಗ ಮಾಡಿದ್ದಾರೆ. ಇಲಿಗಳಲ್ಲಿ ಉದ್ದೇಶಪೂರ್ವಕವಾಗಿ ಕ್ಯಾನ್ಸರ್‌ ಗಂಟುಗಳು ಬೆಳೆಯುವಂತೆ ಮಾಡಿ, ಅದರ ಚಿಕಿತ್ಸೆಗೆಂದು ನೀಡುವ 5-ಫ್ಲೂರೋಸಿಲ್‌ ಎನ್ನುವ ಔಷಧವನ್ನು ಬ್ಯಾಕ್ಟೀರಿಯಾ ಬೋಟ್‌ಗಳ ರೂಪದಲ್ಲಿ ಪ್ರಯೋಗಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಕ್ಯಾನ್ಸರ್‌ ಗಂಟುಗಳು ಗಾತ್ರದಲ್ಲಿ ಬೆಳೆಯುತ್ತಲೇ ಹೋಗುತ್ತವಷ್ಟೆ. ಔಷಧಗಳನ್ನು ನೀಡಿದಾಗ ಅವುಗಳ ಬೆಳೆವಣಿಗೆ ಕುಂಠಿತವಾಗುತ್ತದೆ. ಒಂದು ತಿಂಗಳ ನಂತರ ಗಮನಿಸಿದಾಗ ಬ್ಯಾಕ್ಟೀರಿಯಾ ಬೋಟಿನ ಗುಳಿಗೆಗಳನ್ನು ತಿನ್ನಿಸಿದ ಇಲಿಗಳಲ್ಲಿ ಎಲ್ಲವುಗಳಲ್ಲಿಯೂ, ನೇರವಾಗಿ ಚುಚ್ಚುಮದ್ದಿನ ಮೂಲಕ ಔಷಧ ನೀಡಿದ ಇಲಿಗಳಲ್ಲಿ ಇದ್ದ ಗಂಟಿಗಿಂತಲೂ ಪುಟ್ಟ ಗಂಟುಗಳಿದ್ದುವು. ಔಷಧದ ಪ್ರಮಾಣ ಹೆಚ್ಚಿದ್ದ ಬ್ಯಾಕ್ಟೀರಿಯಾ ಬೋಟ್‌ಗಳನ್ನು ನುಂಗಿದ ಇಲಿಗಳಲ್ಲಿ ಗಂಟುಗಳ ಗಾತ್ರ ಎಲ್ಲದವುಗಳಿಗಿಂತಲೂ ಕಡಿಮೆ ಇತ್ತು.

ಇದು ಬ್ಯಾಕ್ಟೀರಿಯಾ ಬೋಟ್‌ಗಳು ಸಾಮಾನ್ಯ ಚುಚ್ಚುಮದ್ದಿಗಿಂತಲೂ ಪರಿಣಾಮಕಾರಿ ಎಂದು ತೋರಿಸುತ್ತದಷ್ಟೆ. ಹಾಗೆಯೇ ಇಲಿಗಳ ಕರುಳನ್ನೂ ಇವರು ಪರೀಕ್ಷಿಸಿದ್ದಾರೆ. 5-ಫ್ಲೂರೋಯುರಾಸಿಲ್‌ ಇರುವ ಜೀವಕೋಶಗಳ ಮೇಲೆ ಬೆಳಕು ಚೆಲ್ಲಿದಾಗ ಅವು ಔಷಧವಿರುವ ಪ್ರಮಾಣಕ್ಕೆ ಅನುಗುಣವಾಗಿ ಬೆಳಗುತ್ತವೆ. ಹೀಗೆ ವಿವಿಧ ಪ್ರಮಾಣದಲ್ಲಿ ಔಷಧವನ್ನು ಹೇರಿದ ಬ್ಯಾಕ್ಟೀರಿಯಾ ಬೋಟ್‌ಗಳನ್ನು ನುಂಗಿಸಿದ ಇಲಿಗಳ ಕರುಳಿನ ಜೀವಕೋಶಗಳಲ್ಲಿ ಬಹಳ ದೀರ್ಘಕಾಲದ ನಂತರವೂ ಔಷಧ ಇದ್ದುದನ್ನು ಗಮನಿಸಿದ್ದಾರೆ. ಚುಚ್ಚುಮದ್ದು ಪಡೆದ ಇಲಿಗಳ ಕರುಳಿನ ಕೋಶಗಳಲ್ಲಿ ಇವು ಕೆಲವೇ ದಿನಗಳಲ್ಲಿ ಮಾಯವಾಗಿದ್ದುವು. ಅರ್ಥಾತ್‌, ಕಡಿಮೆ ಪ್ರಮಾಣದ ಔಷಧವಿರುವ ಬ್ಯಾಕ್ಟೀರಿಯಾ ಬೋಟ್‌ನ ಗುಳಿಗೆಗಳ ಔಷಧಗಳೂ ದೀರ್ಘಕಾಲ ಪರಿಣಾಮಕಾರಿ. ಈ ಚಿಕಿತ್ಸೆ ಪಡೆದ ಇಲಿಗಳಲ್ಲಿ ಬದುಕಿ ಉಳಿದವುಗಳ ಪ್ರಮಾಣವೂ ಹೆಚ್ಚಿತ್ತು.

ಲ್ಯಾಕ್ಟೊಬ್ಯಾಸಿಲಸ್‌ ಲ್ಯುಟೇರಿ ಬ್ಯಾಕ್ಟೀರಿಯಾಗಳು ಕರುಳಿನ ಜೀವಕೋಶಗಳ ನಡುವೆ ಹೋಗಿ, ಮ್ಯುಸಿಲೇಜನ್ನು ಸ್ರವಿಸುವುದರಿಂದ ಹೀಗಾಗುತ್ತದೆ. ಅಲ್ಲಿ ಇವುಗಳ ಸಂಖ್ಯೆ ಹೆಚ್ಚುವುದರಿಂದ, ಬೋಟ್‌ಗಳಲ್ಲಿನ ಔಷಧ ನಿಧಾನವಾಗಿ ಹಾಗೂ ನೇರವಾಗಿ ಕರುಳಿನ ಕೋಶಗಳಿಗೆ ಸೇರುತ್ತದೆ. ಪರಿಣಾಮಕಾರಿ ಫಲ ದೊರೆಯುತ್ತದೆ ಎಂದು ಚೌಧರಿ ತಂಡ ತರ್ಕಿಸಿದೆ. ಅಷ್ಟೇ ಅಲ್ಲ. ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ಅನ್ನು ತಗ್ಗಿಸುವ ಔಷಧಗಳನ್ನೂ ಬಳಸಿ ಫಲ ಸಿಗುತ್ತದೆಂದು ಕಂಡುಕೊಂಡಿದೆ. ಹಾಗೆಯೇ ಲ್ಯಾಕ್ಟೊಬ್ಯಾಸಿಲಸ್‌ ಲ್ಯುಟೇರಿಯಂತೆಯೇ ಕರುಳಿನ ಜೀವಕೋಶಗಳ ನಡುವೆ ವಾಸಿಸಬಲ್ಲ ಇತರೆ ಬ್ಯಾಕ್ಟೀರಿಯಾಗಳನ್ನು ಈ ಬಗೆಯಲ್ಲಿ ಔಷಧವನ್ನು ಹೊತ್ತೊಯ್ಯುವ ಬೋಟ್‌ಗಳನ್ನಾಗಿ ಮಾಡಬಹುದು ಎಂದು ನಿರೂಪಿಸಿದೆ.

ಬ್ಯಾಕ್ಟೀರಿಯಾ ಬೋಟ್‌ ಕುರಿತ ಈ ಸಂಶೋಧನೆಯ ವಿವರಗಳನ್ನು ‘ಸೈನ್ಸ್‌ ಅಡ್ವಾನ್ಸಸ್‌’ ಪತ್ರಿಕೆ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT