ಬುಧವಾರ, ಆಗಸ್ಟ್ 10, 2022
21 °C

ಕಂಗನಾ ಬಂಗಲೆ ಕೆಡವಲು ಕೈ ಹಾಕುತ್ತಲೇ ಟ್ರೆಂಡ್‌ ಆದ 'ಪ್ರಜಾಪ್ರಭುತ್ವದ ಸಾವು'

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕಂಗನಾ ಅವರ ಬಂಗಲೆಯನ್ನು ಕೆಡವಲು ಬಿಎಂಸಿ ಮುಂದಾದ ಬೆನ್ನಲ್ಲೇ #DeathOfDemocracy ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಕಂಗನಾ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು. ಹೀಗಾಗಿ ಅವರ ಬಂಗಲೆಯನ್ನು ಕೆಡವಲು ಶಿವಸೇನಾ ಮುಂದಾಗಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾನ್ಯ ಜನರು, ಸಿನಿಮಾ ತಾರೆಯರು, ಪತ್ರಕರ್ತರು, ರಾಜಕಾರಣಿಗಳು ಈ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಕಂಗನಾ ಪರವಾಗಿ ಹಲವರು ಟ್ವೀಟ್ ಮಾಡಿದ್ದಾರೆ. ಕಂಗನಾ ವಿರುದ್ಧವೂ ಹಲವರು ಟ್ವೀಟ್ ಮಾಡಿದ್ದಾರೆ.

‘ಮುಂಬೈನಲ್ಲಿ ಏನಾಗುತ್ತಿದೆ. ಕನಿಷ್ಠ ಪಕ್ಷ ಕಂಗನಾ ಅವರು ಬರುವವರೆಗಾದರೂ ಬಿಎಂಸಿ ಕಾಯಬೇಕಿತ್ತು. ಯಾರದೋ ಕನಸಿನ ಮನೆಯನ್ನು ಒಡೆದುಹಾಕುವುದು ತಪ್ಪು. #DeathOfDemocracy’ ಎಂದು ಬಿಗ್‌ಬಾಸ್ ತಾರೆ ಹಿಮಾಂಶಿ ಖುರಾನಾ ಟ್ವೀಟ್‌ ಮಾಡಿದ್ದಾರೆ.

‘ಕಂಗನಾ ಅವರ ಮೇಲೆ ರಾಜಕೀಯ ದ್ವೇಷ ಸಾಧನೆ ಮಾಡುತ್ತಿರುವ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಬೇಕು. ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ಅರ್ನಬ್ (@realarnab) ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನ ನಂತರ ಉದ್ಧವ್ ಅವರ ರಾಜಿನಾಮೆಯನ್ನು ಆಗ್ರಹಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.

‘ಮುಂಬೈನಲ್ಲಿ ಮಳೆಯ ಕಾರಣ ಹಲವು ರಸ್ತೆಗಳು ಜಲಾವೃತವಾಗಿವೆ. ಅವನ್ನು ಸರಿಪಡಿಸುವುದನ್ನು ಬಿಟ್ಟು, ಕಂಗನಾ ಅವರ ಮನೆ ಕೆಡವಲು ಬಿಎಂಸಿ ಮುಂದಾಗಿದೆ. ಇದು ಮಹತ್ವದ ಕೆಲಸ’ ಎಂದು ರಾಹುಲ್ ಪಟೇಲ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಸ್ವರೂಪದ ಪ್ರಶ್ನೆಗಳನ್ನು ಕೇಳಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.

ಕಂಗನಾ ವಿರುದ್ಧವೂ ಟ್ವೀಟ್‌: ‘ಕಂಗನಾ ಅವರೇ ನಿಮ್ಮ ಮನೆಯ ಕಟ್ಟಡ ನಿಯಮಬಾಹಿರವಾಗಿತ್ತೇ? ಈ ಬಗ್ಗೆ ನೀವೇಕೆ ಏನೂ ಹೇಳುತ್ತಿಲ್ಲ’ ಎಂದು ಸಾಗರ್‌ ಖನ್ನಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕಂಗನಾ ಅವರ ಟ್ವಿಟರ್ ಖಾತೆಗೆ ಅವರು ಟ್ಯಾಗ್ ಮಾಡಿದ್ದಾರೆ. ಕಂಗನಾ ಅವರಿಗೆ, ಸಾವಿರಾರು ಮಂದಿ ತಮ್ಮ ಟ್ವೀಟ್‌ಗಳಲ್ಲಿ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ತಮ್ಮ ಕಟ್ಟಡ ನಿಯಮಬಾಹಿರವಾಗಿತ್ತೇ ಎಂಬುದನ್ನು ಕಂಗನಾ ಅವರು ಸ್ಪಷ್ಟಪಡಿಸಬೇಕು ಎಂದು ಹಲವರು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. ‘ನನ್ನ ಮನೆಯಲ್ಲಿ ಯಾವುದೇ ರೀತಿಯ ಅಕ್ರಮ ನಿರ್ಮಾಣ ನಡೆದಿಲ್ಲ. ನನ್ನ ಬಳಿ ಎಲ್ಲಾ ದಾಖಲೆಗಳೂ ಇವೆ. ಸೆಪ್ಟೆಂಬರ್ 30ರವರೆಗೆ ಏನನ್ನೂ ಕೆಡವಬೇಡಿ ಎಂದು ಹೈಕೋರ್ಟ್ ತಡೆ ನೀಡಿದೆ. ಇದನ್ನು ಬಿಎಂಸಿ ಉಲ್ಲಂಘಿಸಿದೆ’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು ಶಾರುಕ್ ಖಾನ್ ಅವರ ಮನ್ನತ್‌ ಬಂಗಲೆಯ ಹೊರಗಿನ ರ‍್ಯಾಂಪ್‌ ಅನ್ನು ಬಿಎಂಸಿ ತೆರವು ಮಾಡಿದ್ದಾಗ, ‘ಜನಸಾಮಾನ್ಯರು ಇದನ್ನು ಸಂಭ್ರಮಿಸುತ್ತಿದ್ದಾರೆ. ಬಿಎಂಸಿ ಸರಿಯಾದ ಕೆಲಸ ಮಾಡಿದೆ’ ಎಂದು ಟ್ವೀಟ್ ಮಾಡಿದ್ದರು. ಪ್ರೀತಿ ಅವರು ಬುಧವಾರ, ‘ಸರ್ಕಾರವನ್ನು ಪ್ರಶ್ನಿಸಿದಕ್ಕೆ ಕಂಗನಾ ಅವರ ಕಟ್ಟಡವನ್ನು ಕೆಡವಲಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರೀತಿ ಅವರ ಟ್ವೀಟ್‌ ವಿರುದ್ಧ ಹಲವರು ಕಿಡಿಕಾರಿದ್ದಾರೆ. ‘ಶಾರುಕ್ ವಿರುದ್ಧ ಕ್ರಮ ತೆಗದುಕೊಂಡರೆ ಅದು ಮೆಚ್ಚತಕ್ಕ ಕೆಲಸ. ಅದೇ ಸ್ವರೂಪದ ಕ್ರಮವನ್ನು ಕಂಗನಾ ವಿರುದ್ಧ ತೆಗೆದುಕೊಂಡರೆ ಅದು ಪ್ರಜಾಪ್ರಭುತ್ವದ ಸಾವು ಹೇಗಾಗುತ್ತದೆ’ ಎಂದು ರಾಹುಲ್ ಮುಖರ್ಜಿ ಎಂಬುವವರು ಪ್ರಶ್ನಿಸಿದ್ದಾರೆ. ಇನ್ನೂ ಹಲವರು ಈ ಪ್ರಶ್ನೆ ಕೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು