ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ ಫೇಸ್‌ಬುಕ್‌, ಗೂಗಲ್,..

Last Updated 29 ಫೆಬ್ರುವರಿ 2020, 11:00 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಅನುಮೋದಿಸಿರುವ ಹೊಸ ನಿಬಂಧನೆಗಳಿಗೆ ಫೇಸ್‌ಬುಕ್‌, ಗೂಗಲ್‌ ಮತ್ತು ಟ್ವಿಟರ್‌ ವಿರೋಧ ವ್ಯಕ್ತಪಡಿಸಿವೆ. ನಿಯಮಗಳು ಪರಿಷ್ಕೃತಗೊಳ್ಳದಿದ್ದರೆ ದೇಶದಲ್ಲಿ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿರುವುದಾಗಿ ವರದಿಯಾಗಿದೆ.

ಸಾಮಾಜಿಕ ಮಾಧ್ಯಗಳ ಕುರಿತ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಷ್ಕೃತಗೊಳಿಸುವಂತೆ ಏಷ್ಯಾ ಇಂಟರ್‌ನೆಟ್‌ ಮೈತ್ರಿಕೂಟವು (ಎಐಸಿ), ತಿಂಗಳ ಆರಂಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಪತ್ರ ಮುಖೇನ ಒತ್ತಾಯಿಸಿರುವುದಾಗಿ ದಿ ನ್ಯೂಸ್‌ ಇಂಟರ್‌ನ್ಯಾಷನಲ್‌ ಶುಕ್ರವಾರ ವರದಿ ಮಾಡಿದೆ.

ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು ಇಸ್ಲಾಮಾಬಾದ್‌ನಲ್ಲಿ ಕಡ್ಡಾಯವಾಗಿ ಕಚೇರಿ ತೆರೆಯಬೇಕು, ಮಾಹಿತಿ ಸಂಗ್ರಹಕ್ಕೆ ಡೇಟಾ ಸರ್ವರ್‌ಗಳನ್ನು ಸಿದ್ಧಪಡಿಸಬೇಕು ಹಾಗೂ ಸರ್ಕಾರ ಗುರುತಿಸಿದ ವಿಷಯಗಳನ್ನು ತೆಗೆದು ಹಾಕಬೇಕಾಗುತ್ತದೆ. ಸರ್ಕಾರದ ನಿಯಮಗಳ ಅನ್ವಯ ಕಾರ್ಯಾಚರಿಸದಿದ್ದರೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ ಹಾಗೂ ಸೇವೆ ಸ್ಥಗಿತಗೊಳಿಸಲಾಗುತ್ತದೆ.

ಅಸ್ಪಷ್ಟ ಮತ್ತು ಮನಬಂದಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಎಐಸಿ, ನಿಬಂಧನೆಗಳ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಖಾಸಗಿತನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಕಾರ್ಯನಿರ್ವಹಿಸುವಂತೆ ಒತ್ತಾಯಿಸಲಾಗಿದೆ ಎಂದಿದೆ.

ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರಚಾರ ನಡೆಸುವ ಪಾಕಿಸ್ತಾನಿಯರ ವಿರುದ್ಧ ಕ್ರಮಕೈಗೊಳ್ಳಲು ಅನುವಾಗುವಂತೆ ಕಾನೂನು ರೂಪಿಸಲಾಗುತ್ತಿದೆ. ಸಂಶಯಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ, ಅವರ ಖಾತೆಗಳ ಮಾಹಿತಿ ತಡಕಾಡಲು ಕಾನೂನು ಸಹಕಾರ ಸಿಗಲಿದೆ. ಸರ್ಕಾರದೊಂದಿಗೆ ಕಂಪನಿಗಳು ಸಹಕರಿಸದಿದ್ದರೆ, ಸುಮಾರು ₹21.65 ಕೋಟಿಯಷ್ಟು (ಪಾಕಿಸ್ತಾನದ 500 ದಶ ಲಕ್ಷ ರೂಪಾಯಿ) ದಂಡ ವಿಧಿಸಬಹುದು ಅಥವಾ ಅವುಗಳ ಸೇವೆ ಸ್ಥಗಿತಗೊಳಿಸಬಹುದು.

ಟ್ವಿಟರ್, ಗೂಗಲ್‌ ಹಾಗೂ ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮ ಕಂಪನಿಗಳು ವಿರೋಧ ವ್ಯಕ್ತಪಡಿಸಿ, ನಿಯಮ ಪರಿಷ್ಕೃತಗೊಳ್ಳದಿದ್ದರೆ ಸೇವೆ ನಿಲ್ಲಿಸುವುದಾಗಿ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT