ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ‘ಟಿಕ್‌ಟಾಕ್‌’ಗೆ ಬಹಿಷ್ಕಾರ: ಬೆಂಗಳೂರು ಮೂಲದ ‘ಚಿಂಗಾರಿ’ಗೆ ಅದೃಷ್ಟ

Last Updated 22 ಜೂನ್ 2020, 12:37 IST
ಅಕ್ಷರ ಗಾತ್ರ
ಚೀನಾದ ‘ಟಿಕ್‌ಟಾಕ್‌’ಗೆ ಬಹಿಷ್ಕಾರ: ಬೆಂಗಳೂರು ಮೂಲದ ‘ಚಿಂಗಾರಿ’ಗೆ ಅದೃಷ್ಟ
ADVERTISEMENT
""

ಬೆಂಗಳೂರು: ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ವೀರ ಯೋಧರು ಹುತಾತ್ಮರಾದ ಬೆಳವಣಿಗೆಯ ನಂತರ ದೇಶದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಲವರು ಚೀನಾ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ದೇಶಿಯ ಆ್ಯಪ್‌ಗಳಿಗೆ ಶುಕ್ರದಿಸೆ ಬಂದಿದೆ.

ಮನರಂಜನಾ ಆ್ಯಪ್‌ ಟಿಕ್‌ಟಾಕ್‌ ಮೇಲೂ ಜನರ ಮುನಿಸಿಕೊಂಡಿದ್ದು, ಅದನ್ನು ಅನ್‌ಇನ್‌ಸ್ಟಾಲ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಲಾಭ ಪಡೆದು ಸ್ಥಳೀಯ ಮನರಂಜನಾ ಆ್ಯಪ್‌ಗಳು ಜನಪ್ರಿಯಗೊಳ್ಳುತ್ತಿವೆ. ಹೀಗಾಗಿ ಬೆಂಗಳೂರು ಮೂಲದ ‘ಚಿಂಗಾರಿ’ ಆ್ಯಪ್‌ ಅನ್ನು ಕಳೆದ 72 ಗಂಟೆಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿದ್ದಾರೆ.

ಚೀನಾದ ‘ಟಿಕ್‌ಟಾಕ್‌’ಗೆ ಬಹಿಷ್ಕಾರ: ಬೆಂಗಳೂರು ಮೂಲದ ‘ಚಿಂಗಾರಿ’ಗೆ ಅದೃಷ್ಟ

‘ದೇಶದ ಬಳಕೆದಾರರು ಚೀನಿ ಸೋಷಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳನ್ನು ಬಹಿಷ್ಕರಿಸಲು ಮುಂದಾಗಿರುವುದರಿಂದ ‘ಮೇಡ್ ಇನ್ ಇಂಡಿಯಾ’ ಅಪ್ಲಿಕೇಶನ್‌ಗಳು ಜನಪ್ರಿಯತೆ ಗಳಿಸುತ್ತಿವೆ’ ಎಂದು ಬೆಂಗಳೂರಿನಲ್ಲಿರುವ ಚಿಂಗಾರಿ ಆ್ಯಪ್‌ ಡೆವೆಲಪರ್‌ಗಳು ಹೇಳಿದ್ದಾರೆ.

'ಚಿಂಗಾರಿ ಅಪ್ಲಿಕೇಶನ್ ಕೇವಲ 72 ಗಂಟೆಗಳಲ್ಲಿ ಸುಮಾರು 5,00,000 ಬಳಕೆದಾರರನ್ನು ಗಳಿಸಿದೆ. ಇನ್ನೂ ಹೆಚ್ಚಿನ ಮಂದಿ ಚಿಂಗಾರಿ ಕುಟುಂಬಕ್ಕೆ ಸೇರುತ್ತಿದ್ದಾರೆ’ ಎಂದು ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿರುವ ಬಿಸ್ವಾತ್ಮ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಹೇಳಿದ್ದಾರೆ.

‘ಚಿಂಗಾರಿಯ ಬೇಡಿಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ, ಟಿಕ್‌ಟಾಕ್ ಆ್ಯಪ್‌ನ ತದ್ರೂಪಾಗಿದ್ದ ‘ಮಿಟ್ರಾನ್’ ಅಪ್ಲಿಕೇಶನ್ ಅನ್ನು ಮೀರಿಸಿದೆ,’ ಎಂದೂ ಡೆವೆಲಪರ್‌ಗಳು ತಿಳಿಸಿದ್ದಾರೆ.

ಜೂನ್ 10 ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಚಿಂಗಾರಿಯ ಡೆವೆಲಪರ್‌ಗಳು, ಅಪ್ಲಿಕೇಶನ್ ಒಂದು ಲಕ್ಷಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಗಳಿಸಿರುವುದಾಗಿಯೂ ಚಂದಾದಾರರ ಸಂಖ್ಯೆ ನಿರಂತರವಾಗಿ ಏರುತ್ತಿರುವುದಾಗಿಯೂ ತಿಳಿಸಿದ್ದರು.

ಆಡಿಯೊ ಮತ್ತು ವಿಡಿಯೊ ಆಧಾರಿತ ಉಚಿತ ಸಾಮಾಜಿಕ ತಾಣವಾದ ಚಿಂಗಾರಿಯನ್ನು 2019ರಲ್ಲಿ ಬಿಸ್ವಾತ್ಮ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಎಂಬ ಇಬ್ಬರು ಡೆವೆಲಪರ್‌ಗಳು ಅಭಿವೃದ್ಧಿಪಡಿಸಿದ್ದರು. ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚಿಂಗಾರಿ ಡೆವೆಲಪರ್‌ಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ಬಳಕೆದಾರರನ್ನು ಗಳಿಸುವ ಇರಾದೆ ಹೊಂದಿದ್ದಾರೆ. 10 ಲಕ್ಷ ಡೌನ್‌ಲೋಡ್‌ಗಳನ್ನು ಗಳಿಸುವತ್ತ ಡೆವೆಲಪರ್‌ಗಳು ದೃಷ್ಟಿ ಹರಿಸಿದ್ದಾರೆ.

ಅನೇಕ ಭಾಷೆಗಳಲ್ಲಿ ಲಭ್ಯವಿರುವ ಚಿಂಗಾರಿ ಆ್ಯಪ್‌, ಬಳಕೆದಾರರಿಗೆ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು, ಸ್ನೇಹಿತರೊಂದಿಗೆ ಚಾಟ್ ಮಾಡಲು, ಜನರೊಂದಿಗೆ ಸಂವಹನ ನಡೆಸಲು, ವಿಷಯವನ್ನು ಹಂಚಿಕೊಳ್ಳಲು ಅವಕಾಶ ನೀಡಿದೆ.

ವಾಟ್ಸಾಪ್ ಸ್ಟೇಟಸ್‌ಗೆ ಬೇಕಾದ ವೀಡಿಯೊಗಳು ಮತ್ತು ಆಡಿಯೊ ತುಣುಕುಗಳು, ಜಿಫ್‌ ಸ್ಟಿಕ್ಕರ್‌ಗಳು, ಫೋಟೊಗಳನ್ನು ಚಿಂಗಾರಿಯ ಮೂಲಕ ಪಡೆಯಲು ಅವಕಾಶಗಳಿವೆ. ವಿಡಿಯೊವೊಂದು ಹೆಚ್ಚು ವೈರಲ್‌ ಆದಂತೆ ಅದನ್ನು ಅಪ್ಲೋಡ್‌ ಮಾಡಿದವರಿಗೆ ಚಿಂಗಾರಿ ಆ್ಯಪ್‌ ಹಣವನ್ನೂ ಪಾವತಿಸುತ್ತದೆ. ವಿಡಿಯೊದ ವೀಕ್ಷಣೆಗೆ ತಕ್ಕಂತೆ ಅಂಕಗಳನ್ನು ನೀಡಲಾಗುತ್ತದೆ. ಅಂಕಗಳನ್ನು ಬಳಕೆದಾರರು ಹಣವಾಗಿ ಪರಿವರ್ತಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT