ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ನಿಜದ ಸವಾಲು ಮರೆಸಿದ #CoupleChallenge

Last Updated 26 ಸೆಪ್ಟೆಂಬರ್ 2020, 5:44 IST
ಅಕ್ಷರ ಗಾತ್ರ

ಪ್ರಾಣಿಗಳಿಗೆ ಬಲೆ ಹಾಕಿ, ಬೇಟೆಯಾಡಿ ಜೀವಂತವಾಗಿ ಹಿಡಿಯುವಂತೆ ಆಫ್ರಿಕಾ ದೇಶದ ನಿಗ್ರೋ ಸಮುದಾಯದವರನ್ನು ಹಿಡಿದು, ಕೈಕಾಲು ಕಟ್ಟಿಹಾಕಿ, ಬಲೆಯೊಳಗೆ ಅದುಮಿ ಹಡಗಿನಲ್ಲಿ ದೂರದ ಯುರೋಪ್‌ನ ರಾಷ್ಟ್ರಗಳಿಗೆ‌ ಹಾಗೂ ಅಮೆರಿಕಕ್ಕೆ ಗುಲಾಮ’ರನ್ನಾಗಿ ಮಾರುವ ಪದ್ಧತಿ 16–17ನೇ ಶತಮಾನದಲ್ಲಿ ಚಾಲ್ತಿಯಲ್ಲಿತ್ತು. ಹೀಗೆ ಬಂಧಿಸಲ್ಪಟ್ಟು ಕ್ರಯ–ವಿಕ್ರಯಕ್ಕೆ ಒಳಗಾಗುವ ಗುಲಾಮರ ಕೈಕಾಲುಗಳಿಗೆ ಸರಪಳಿ ಬಿಗಿಯಲಾಗಿರುತ್ತಿತ್ತು. ಬಳಿಕ ದಂಡಿಸಿ, ಹೆದರಿಸಿ ದುಡಿಸಿಕೊಳ್ಳಲಾಗುತ್ತಿತ್ತು. ದೈಹಿಕ ಬಂಧನವಿದ್ದರೂ ಆಲೋಚನೆಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಹೊಸ ಚಿಂತನೆಗಳು-ಸ್ವಾತಂತ್ರ್ಯದ ಅಭೀಪ್ಸೆಗಳು ಪುಟಿಯಲು, ಈಡೇರಲು ಅಸಾಧ್ಯವಾದರೂ ಕನಸುಗಳನ್ನು ಕಟ್ಟಿಕೊಳ್ಳಲು ಅಡ್ಡಿಯೇನಿರಲಿಲ್ಲ.

ಇಂತಹ ಸಮುದಾಯದವರು ತಮಗಾಗುತ್ತಿದ್ದ ಕ್ರೌರ್ಯ, ಶೋಷಣೆಯ ವಿರುದ್ಧ ಸಿಡಿದೆದ್ದು ಕ್ರಾಂತಿ ನಡೆಸಿದ್ದು ಇತಿಹಾಸ. ಈಗಿನ ಕಾಲದಲ್ಲಿ ದೈಹಿಕ ಗುಲಾಮಗಿರಿ ತಳ್ಳುತ್ತಿಲ್ಲ. ಆದರೆ, ಅದೇ ಮಾದರಿಯೊಳಗೆ ಮಾನಸಿಕ ಗುಲಾಮಗಿರಿಯನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ತಮ್ಮ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಸುವ ಗುಲಾಮಗಿರಿ ಇರಬಹುದು, ತಮ್ಮ ಸುತ್ತಲಿನ ಅವ್ಯವಸ್ಥೆ, ಶೋಷಣೆ, ಅನ್ಯಾಯದ ಬಗ್ಗೆ ಅರಿವೇ ಇಲ್ಲದಂತೆ ಮಾಡುವಸಾಮಾಜಿಕ ಜಾಲತಾಣದ ಆಕರ್ಷಣೆ ಅಥವಾ ಧರ್ಮದ ಅಫೀಮು ಕುಡಿಸಿ ತನ್ಮಯಗೊಳಿಸುವ ಗುಲಾಮಗಿರಿ ಇರಬಹುದು; ಇವು ಗುಲಾಮಿತನದ ಹೊಸ ರೂಪಗಳು.

ಇದನ್ನು ಏತಕ್ಕೆ ಪ್ರಸ್ತಾಪಿಸಬೇಕಾಯಿತೆಂದರೆ ಕಳೆದವಾರವಿಡೀ ಫೇಸ್‌ಬುಕ್‌ನಲ್ಲಿ ಕಪಲ್ ಚಾಲೆಂಜ್‌(couple challenge) ಹ್ಯಾಷ್ ಟ್ಯಾಗ್‌ನಡಿ ‘ಬೃಹತ್ ಆಂದೋಲನ’ವೇ ನಡೆಯಿತು. ಅದರ ಬೆನ್ನಲ್ಲೇ ಕೆಲವರು ಸಿಂಗಲ್ ಚಾಲೆಂಜ್ ಶುರುವಿಟ್ಟುಕೊಂಡರು. ಕೊರೊನಾ ಕಾರಣದಿಂದ ಹೆಚ್ಚು ಜನ ಮನೆಯಲ್ಲೇ ಇರುವ ಕಾರಣಕ್ಕೋ ಏನೋ ಇದ್ದಬದ್ಧವರೆಲ್ಲ ಗಂಡ–ಹೆಂಡತಿ ಜತೆಗಿರುವ ಫೋಟೋ ಹಾಕಿದ್ದೇ ಹಾಕಿದ್ದು. ಲೈಕ್‌ಗಳು ಬಿದ್ದದ್ದೇ ಬಿದ್ದದ್ದು. ಹಾಗಂತ ತಮ್ಮ ಹೆಂಡತಿಯ ಜತೆಯೋ ಗಂಡನ ಜತೆಯೋ ಫೋಟೋ ತೆಗೆಸಿಕೊಂಡು ಹಾಕಿ ಸಂಭ್ರಮಿಸುವುದು ತಪ್ಪೇನೂ ಅಲ್ಲ.

ಸದಾ ಜಾಗೃತವಾಗಿರುವ, ವ್ಯವಸ್ಥೆಯ ಒಳಿತು–ಕೆಡಕುಗಳ ಬಗ್ಗೆ ವಿಮರ್ಶೆ ಮಾಡಬಹುದಾದ ಒಂದು ದೊಡ್ಡ ಜನವರ್ಗವನ್ನು ಒಂದು ಮೋಹಕ್ಕೆ, ಮಾಯೆಗೆ ಒಳಗು ಮಾಡಿ, ಜಗತ್ತನ್ನೇ ಮರೆಯುವಂತೆ ಮಾಡುವ ಹಿಂದಿನ ಶಕ್ತಿ–ಹಿತಾಸಕ್ತಿ ಏನು ಎಂಬುದನ್ನು ವಿಶ್ಲೇಷಿಸುವುದು ಇಂದಿನ ತುರ್ತು ಕೂಡ. ಸದಾ ಎಚ್ಚರದಲ್ಲಿರುವ ಸಮುದಾಯವನ್ನು ಸಮ್ಮೋಹನಗೊಳಿಸಿ, ತಲ್ಲೀನಗೊಳಿಸುವ ಹ್ಯಾಷ್ ಟ್ಯಾಗ್‌ಗಳು ತನ್ನಿಂತಾನೇ ಸೃಷ್ಟಿಯಾಗುವುದಿಲ್ಲ. ಇದರ ಹಿಂದೆ ವ್ಯವಸ್ಥಿತವಾದ ಶಕ್ತಿ ಕೆಲಸ ಮಾಡಿದೆಯೇ ಎಂಬ ಅನುಮಾನವೂ ಮೂಡದಿರದು.

ಒಂದೆರಡು ದಶಕಗಳ ಹಿಂದೆ ಹೋಟೆಲ್‌ಗಳಲ್ಲಿ ಕಾಫಿ–ಟೀ ಬೆಲೆ 25 ಪೈಸೆಯೋ 50 ಪೈಸೆಯೋ ಜಾಸ್ತಿ ಮಾಡಿದರೆ, ದೋಸೆ ಬೆಲೆ 50 ಪೈಸೆ ಅಥವಾ ₹1 ಹೆಚ್ಚಿಸಿದರೆ ಯಾರ ಪ್ರಚೋದನೆಯೂ ಇಲ್ಲದೇ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿಯುತ್ತಿದ್ದರು. ಯಾವುದೇ ರಾಜಕೀಯ ಪಕ್ಷ ನೇತೃತ್ವ ವಹಿಸಬೇಕಾದ ಪ್ರಮೇಯವೂ ಇರಲಿಲ್ಲ. ಹೀಗೆ ಪ್ರತಿಭಟಿಸಿದಾಗ 50 ಪೈಸೆ ಹೆಚ್ಚಿಸಿದ್ದರೆ ಅದನ್ನು 20 ಪೈಸೆ ಇಳಿಸುತ್ತಿದ್ದರು ಹೋಟೆಲ್ ಮಾಲೀಕರು. ಹಾಗಿದ್ದರೂ ಅವರು ಲಾಭದಲ್ಲೇ ಇರುತ್ತಿದ್ದರು.

ಪೆಟ್ರೋಲ್–ಡೀಸೆಲ್ ಬೆಲೆ ಏರಿದಾಗಲಂತೂ ದಿನಗಟ್ಟಲೇ ಹರತಾಳ ನಡೆದಿದ್ದು ನೋಡಿದ್ದೇವೆ. ಈರುಳ್ಳಿ ಬೆಲೆ ಏರಿಕೆಯನ್ನೇ ಮುಂದಿಟ್ಟುಕೊಂಡು ದಶಕದ ಹಿಂದೆ ದೆಹಲಿಯ ಸರ್ಕಾರವನ್ನೇ ಬದಲು ಮಾಡಿತ್ತು ಬಿಜೆಪಿ. ಯುಪಿಎ ಭ್ರಷ್ಟಾಚಾರದ ಜತೆಗೆ ಬೆಲೆ ಏರಿಕೆಯನ್ನೂ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ನರೇಂದ್ರ ಮೋದಿ ಅವರು ದೆಹಲಿಗೆ ಗದ್ದುಗೆ ಹಿಡಿದರು. ಪೆಟ್ರೋಲ್ ಬೆಲೆ ₹30ಕ್ಕೆ ಇಳಿಯಲಿದೆ ಎಂದು ಬಿಜೆಪಿ ನಾಯಕರು ಅಂದು ಭರವಸೆ ಕೊಟ್ಟಿದ್ದರು.

ಈಗ ಏನಾಗಿದೆ ನೋಡಿ; ಪೆಟ್ರೋಲ್ ಬೆಲೆ ₹83.69, ಡಿಸೇಲ್ ಬೆಲೆ ₹73.30ಕ್ಕೆ ಬಂದು ನಿಂತಿದೆ. ಬಿಜೆಪಿ ನಾಯಕರ ಭರವಸೆ ಕೊಟ್ಟಂತೆ ಆಗಿದೆಯೇ ಎಂದು ಹುಡುಕಿದರೆ, ₹30 ಕ್ಕೆ ಅರ್ಧ ಲೀಟರ್ ಡೀಸೆಲ್ ಕೂಡ ಸಿಗುವುದಿಲ್ಲ. ಅಕ್ಕಿ–ಬೇಳೆ ಕಾಳುಗಳ ಬೆಲೆಯಂತೂ ಕೈಗೇ ಎಟಕುತ್ತಿಲ್ಲ. ಆದರೆ, ಯಾರೊಬ್ಬರೂ ಕಮಕ್ ಕಿಮಕ್ ಅನ್ನುತ್ತಿಲ್ಲ. ಏಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ನಮ್ಮನ್ನು ಆವರಿಸಿಕೊಂಡಿರುವ ಸಾಮಾಜಿಕ ಜಾಲತಾಣದ ಮೋಹ; ಅಲ್ಲಿಯೇ ಹೂತುಹೋಗಿ ಬೀಡುವಷ್ಟು ಅದು ರೂಪಿಸಿರುವ ಸೆಳೆತ ಕಾರಣವೇ ಎಂಬ ಶಂಕೆ ಕಾಡದಿರದು.

ಪ್ರಭುತ್ವದ ಕಲೆಗಾರಿಕೆ

ಆಳುವವರ್ಗ ಅಥವಾ ಪ್ರಭುತ್ವ ಎಂಬುದು ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯಲು, ವ್ಯವಸ್ಥೆಯ ಬಗೆಗಿನ ಜನರ ಸಿಟ್ಟು ಕ್ರೋಡೀಕರಣವಾಗಿ ಸ್ಫೋಟವಾಗದಂತೆ ಕಾಯಲು ಅವರನ್ನು ಒಂದು ಕಡೆ ಸಕ್ರಿಯವಾಗುವಂತೆ ಮಾಡಲು ಅನೇಕ ದಾರಿಗಳನ್ನು ಹುಡುಕುತ್ತಿರುತ್ತದೆ. ಅದರಲ್ಲಿ ಬಿಜೆಪಿ–ಕಾಂಗ್ರೆಸ್ ಅಥವಾ ಮತ್ತೊಂದು ಪಕ್ಷವೆಂಬ ಭೇದವೇನಿಲ್ಲ. ಆಳುವವರೆಲ್ಲ ಒಂದೇ ದೋಣಿಯ ಪಯಣಿಗರು.

ಅಸಹನೀಯ ಕ್ರೌರ್ಯ ಮಡುಗಟ್ಟಿದಾಗ, ಆರ್ಥಿಕ ಸಂಕಷ್ಟಗಳು ಮೇಲಿಂದ ಮೇಲೆ ಬರಸಿಡಿಲಿನಂತೆ ಎರಗತೊಡಗಿದಾಗ ಜನರು ಸಿಡಿದೇಳುವುದು ಸಹಜ. ನೋಟು ರದ್ಧತಿ ಬಳಿಕ ಉಂಟಾದ ಆರ್ಥಿಕ ಹೊಡೆತದಿಂದ ಜನ ಚೇತರಿಸಿಕೊಂಡಿಲ್ಲ. ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ನೆತ್ತಿಯ ಸಿಟ್ಟು ರಟ್ಟೆಗೆ ಬರುವ ಹೊತ್ತು ಇತ್ತು. ಇಂತಹ ಕಾಲದಲ್ಲಿ ಯಾರದೇ ನೇತೃತ್ವ ಇಲ್ಲದಿದ್ದರೂ ಜನರ ಒಡಲೊಳಗಿನ ಅಸಹನೆ, ಉದ್ಯೋಗ ಸಿಗದ ಯುವಕರ ಸಿಟ್ಟು ಆಳುವವರ ಮಗ್ಗುಲಿಗೆ ಮುಳ್ಳಾಗುವ ಕಾಲವೇನೂ ದೂರ ಇರಲಿಲ್ಲ. ಚರಿತ್ರೆಯ ಗತಿಗಳನ್ನು, ಘಟನಾವಳಿಗಳನ್ನು ನೋಡಿದರೆ ಜಗತ್ತಿನ ಅನೇಕ ಕ್ರಾಂತಿಗಳ ಹಿಂದೆ ಹೀಗೆ ಹುಟ್ಟಿದ ಆಕ್ರೋಶವೇ ಕಿಡಿಯಾಗಿ, ಕೊನೆಗೆ ಪ್ರಜ್ವಲಿಸಿದ ನಿದರ್ಶನಗಳು ಸಿಗುತ್ತವೆ.

ರಾಜರ ಕಾಲ ಇರಬಹುದು; ಈಗಿನ ರಾಜಕೀಯ ಪಕ್ಷಗಳ ಕಾಲ ಇರಬಹುದು. ಜನರ ಸಿಟ್ಟನ್ನು ಶಮನಗೊಳಿಸುವ, ಆಕ್ರೋಶದ ದಿಕ್ಕನ್ನು ಬೇರೆ ಕಡೆಗೆ ಸಿಲುಕಿಸುವ, ಮದ್ಯವೋ–ಜೂಜೋ, ಮಾದಕವಸ್ತವೋ ಹೀಗೆ ಜನರನ್ನು ಹುಸಿ ಸಂತೋಷದಲ್ಲಿ ಸಿಲುಕಿಸಿ ವಾಸ್ತವದಿಂದ ವಿಮುಖಗೊಳಿಸುವ ಅಸ್ತ್ರಗಳನ್ನು ಬಳಸುವುದು ಎಲ್ಲ ಕಾಲದಲ್ಲೂ ಇದೆ.

ಆಳುವವರ ಜನವಿರೋಧಿ ನೀತಿ, ಬದುಕು ಬರ್ಬರವಾಗಿಸುವ ಧೋರಣೆಗಳ ವಿರುದ್ಧ ಜನ ಸೆಟೆದು ನಿಲ್ಲುವ ಹೊತ್ತಿನಲ್ಲಿ ದೊಡ್ಡದೊಂದು ಕೋಮುಗಲಭೆ ಎಬ್ಬಿಸಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವುದು, ಚೀನಾವೋ ಪಾಕಿಸ್ತಾನವೋ ಹೀಗೆ ಬೇರೆ ದೇಶದ ಜತೆಗೆ ಯುದ್ಧಕ್ಕೆ ಸಿದ್ಧರಾಗಿ ಎಂದು ಜನರಲ್ಲಿ ಯುದ್ಧೋನ್ಮಾದವನ್ನು ಬಿತ್ತಿ ‘ದೇಶಪ್ರೇಮ’ದಲ್ಲಿ ಮುಳುಗಿಹೋಗುವಂತೆ ಮಾಡುವುದು, ಧರ್ಮವೇ ನಾಶವಾಗುತ್ತಿದೆ ಎಂದು ಬಿಂಬಿಸಿ ಧರ್ಮಯುದ್ಧಕ್ಕೆ ಅಣಿಯಾಗುವಂತೆ ಪ್ರೇರೇಪಿಸುವುದು, ಹಿಂದೂಗಳನ್ನು ಮುಸ್ಲಿಮರ ವಿರುದ್ಧ, ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುವುದು; ಕೊನೆಗೆ ಯಾವುದೂ ಕೈಗೂಡದೇ ಇದ್ದರೆ ಇಂದಿರಾಗಾಂಧಿ ಹೇರಿದಂತೆ ತುರ್ತು ಪರಿಸ್ಥಿತಿಯ ಕರಾಳ ಶಾಸನ ಹೇರಿ ಜನರನ್ನು ಬಗ್ಗು ಬಡಿಯುವುದು ಆಳುವ ವರ್ಗಗಳು ನಡೆಸಿಕೊಂಡು ಬರುತ್ತಿರುವ ತಂತ್ರ.

ನಿತ್ಯ ತಿಂದುಣ್ಣಲು ಬೇಕಾಗುವ ವಸ್ತುಗಳ ಬೆಲೆ ಇಷ್ಟೆಲ್ಲ ಜಾಸ್ತಿಯಾಗುತ್ತಿದ್ದರೂ, ಹಿಂದೆಂದೂ ಕಾಣದಂತ ದುರಿತ ಕಾಲದತ್ತ ಸಾಗುತ್ತಿದ್ದರೂ ಉದ್ಯೋಗಗಳು ಮರೆಯಾಗುತ್ತಿದ್ದರೂ ಯುವಕರಾಗಲೀ, ಮಧ್ಯವಯಸ್ಕರಾಗಲಿ ಇದರ ವಿರುದ್ಧ ದನಿ ಎತ್ತುತ್ತಿಲ್ಲ. ಹಿಂದೆ ಮದ್ಯ, ಮಾದಕವಸ್ತು, ಜೂಜಿನ ಗುಂಗು ಹಿಡಿಸಿದಂತೆ ಇಂದಿನವರ ಕೈಯಲ್ಲಿ ಮೊಬೈಲ್ ಕೊಟ್ಟು ಕೂರಿಸಿರುವುದುಇದಕ್ಕೆ ಕಾರಣವಾಗಿದೆ ಎಂಬ ಸಂಶಯವೂ ಇದೆ.

ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿ ಎಷ್ಟು ಲೈಕ್ ಬಂದಿತೆಂದು ಕಾತರಿಸುತ್ತಾ ಕಾಯುವುದಕ್ಕೆ ನಮ್ಮನ್ನು ವ್ಯವಸ್ಥೆ ಅಣಿಗೊಳಿಸಿದೆ. ಇನ್ ಸ್ಟಾಗ್ರಾಂನಲ್ಲಿ ಹಾಕಿದ ವಿಡಿಯೊ ಎಷ್ಟು ಜನ ನೋಡಿ, ಲೈಕ್‌–ಕಮೆಂಟ್ ಹಾಕಿದ್ದಾರೆ ಎಂಬ ಕುತೂಹಲದ ಕಾಯುವಿಕೆಯೇ ದಿನವಿಡೀ ನಮ್ಮನ್ನು ಗುಂಗಿನಲ್ಲಿ ದೂಡಿರುತ್ತದೆ. ಜತೆಗೆ ಟ್ವಿಟರ್, ವಾಟ್ಸ್‌ ಆ್ಯಪ್‌ . . ಹೀಗೆ ಹತ್ತಾರು ಆ್ಯಪ್‌ಗಳು ನಮ್ಮನ್ನು Apes(ಏಪ್ಸ್–ಮನುಷ್ಯನ ಪೂರ್ವಜ‌)ಗಳನ್ನಾಗಿ ಮಾಡಿ ಮರ ಹತ್ತಿಸಿಬಿಟ್ಟಿವೆ. ಅಂಗಡಿ ಹೋದಾತ ಎಲ್ಲವನ್ನು ತೆಗೆದುಕೊಂಡು ಬಿಲ್ ಮಾಡಿಸುವ ವೇಳೆ ಫೇಸ್‌ಬುಕ್, ವಾಟ್ಸ್‌ ಆ್ಯಪ್‌ನಲ್ಲಿ ಬಂದ ಲೈಕು, ಕಮೆಂಟ್, ಮೆಸೇಜ್‌ನಲ್ಲಿ ತಲ್ಲೀನನಾದರೆ ಕಾರ್ಡ್ ಕೊಟ್ಟು ಪಾರ್ಸ್‌ವರ್ಡ್‌ ಒತ್ತುವ ಕೆಲಸ ಮಾಡುತ್ತಾನೆ ವಿನಃ ಯಾವ ವಸ್ತುವಿಗೆ ಎಷ್ಟು ಬೆಲೆ ಇದೆ ಎಂಬುದೇ ಆತನಿಗೆ ಗೊತ್ತಾಗದು. ಅಷ್ಟರಮಟ್ಟಿಗೆ ನಮ್ಮನ್ನು ಮರೆವಿಗೆ ಈ ದೂಡಿವೆ.‌

ಕಪಲ್ ಚಾಲೆಂಜ್ ವಿಷಯಕ್ಕೆ ಬಂದರೆ, ಒಬ್ಬರು ಹಾಕಿದ ಚಾಲೆಂಜ್‌ ಅನ್ನು ಸ್ವೀಕರಿಸಿದ ಲಕ್ಷಾಂತರ ಮಂದಿ ತಮ್ಮದೂ ಒಂದು ಇರಲಿ ಎಂದು ಫೋಟೋ ಹಾಕುತ್ತಲೇ ಹೋದರು. ಕೆಲವರು ಇದು ಯಾಕೆ ಎಂದು ಪ್ರಶ್ನಿಸಿದರಾದರೂ ಕೊನೆಗೆ ತಮ್ಮದನ್ನೂ ಸೇರಿಸಿದರು. ತಾವು ಹಾಕಿದ ಫೋಟೋವನ್ನು ಎಷ್ಟು ಜನ ನೋಡಿದ್ದಾರೆ, ಎಷ್ಟು ಕಮೆಂಟ್ ಬಂದಿವೆ, ಎಷ್ಟು ಲೈಕು ಬಂದಿವೆ ಎಂದು ನೋಡುವಷ್ಟರಲ್ಲಿ ಪ್ರತಿಯೊಬ್ಬರೂ ಕನಿಷ್ಠ ನಾಲ್ಕೈದು ಗಂಟೆ ಇದಕ್ಕಾಗಿ ವ್ಯಯ ಮಾಡಿರುತ್ತಾರೆ. ಹೀಗೆ, ಕೆಲಸಕ್ಕೆ ಬಾರದ ವಿಷಯಗಳತ್ತ ನಮ್ಮನ್ನು ಕೇಂದ್ರೀಕರಿಸಿ, ನಾವು ನಮ್ಮೆದುರಿನ ನಿಜದ ಸವಾಲುಗಳ ಬಗ್ಗೆ ಮೈಮರೆಯುವಂತೆ ಮಾಡುವುದು ಇದರ ಹಿಂದಿನ ಉದ್ದೇಶ ಇದ್ದಂತಿದೆ.

ನೂಕು ನುಗ್ಗಲಿನಲ್ಲಿ ಬಸ್‌ ಹತ್ತುವಾಗ ಜೇಬಿಗೆ ಬ್ಲೇಡ್ ಹಾಕಿ ದುಡ್ಡು ಎಗರಿಸುವವರಂತೆ, ₹20–₹50ರ ನೋಟು ಬೀಳಿಸಿ ಗಮನವನ್ನು ಅತ್ತ ಕೇಂದ್ರೀಕರಿಸಿ ಲಕ್ಷಾಂತರ ಹೊಡೆಯುವವರಂತೆ ಈ ಚಾಲೆಂಜ್‌ಗಳು ಕಾಣಿಸುತ್ತವೆ. ಇವು ನಮ್ಮಿಂದ ನೇರವಾಗಿ ಏನನ್ನೂ ಕಿತ್ತುಕೊಳ್ಳುತ್ತಿಲ್ಲ. ಜನಸಮುದಾಯದಲ್ಲಿರುವ, ಇರಬೇಕಾದ ವಿವೇಚನಾಶೀಲತೆಯನ್ನು, ಆಲೋಚಿಸುವ ಗುಣವನ್ನೇ ಕಿತ್ತುಕೊಳ್ಳುತ್ತಿವೆ. ಯುವ ಸಮುದಾಯವನ್ನು ಪ್ರಭಾವಿಸರುವ ಫೇಸ್‌ಬುಕ್, ವಾಟ್ಸ್‌ ಆ್ಯಪ್‌ಗಳು ಸೃಜನಶೀಲತೆಯನ್ನು, ಪ್ರತಿಭಟಿಸುವ ಮನೋಭಾವವನ್ನೇ ಕೊಂದು ಹಾಕಿವೆ. ಈ ಚಾಲೆಂ‌‌ಜ್‌ಗಳು ಕ್ಷಣಿಕ ಖುಷಿಯಲ್ಲಿ ನಮ್ಮನ್ನು ತನ್ಮಯಗೊಳಿಸಿ, ವಿಸ್ಮೃತಿಗೆ ದೂಡುತ್ತಿರುವುದರ ಬಗ್ಗೆ ಎಚ್ಚರಗೊಳ್ಳಬೇಕಾದ ಕಾಲ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT