ಮಂಗಳವಾರ, ಜನವರಿ 31, 2023
18 °C

ಮಿಂಚಿಗೆ ಬೆಳಕೇ ತಿರುಮಂತ್ರ

ಕೊಳ್ಳೇಗಾಲ ಶರ್ಮ Updated:

ಅಕ್ಷರ ಗಾತ್ರ : | |

ಮಿಂಚು, ಸಿಡಿಲು ಅಪರಿಚಿತವೇನಲ್ಲ. ಹಾಗೆಯೇ ಸಿಡಿಲು ಬಡಿದು ಜನರು ಮರಣಿಸುವುದು, ಎಲೆಕ್ಟ್ರಾನಿಕ್‌ ಸಾಮಗ್ರಿಗಳು ಹಾಳಾಗುವುದು ಕೂಡ ಹೊಸತೇನಲ್ಲ. ಸಿಡಿಲು ಬಡಿಯದಂತೆ ಕಾಪಾಡುವಂತಹ ಸಾಧನವಿದ್ದರೆ ಎಷ್ಟು ಚೆನ್ನ ಅಲ್ಲವೇ? ಕೃತಕವಾಗಿ ಮಿಂಚೊಂದನ್ನು ಸೃಷ್ಟಿಸಿ, ಸಿಡಿಲು ಬಡಿಯದಂತೆ ತಡೆಯುವ ವಿಶಿಷ್ಟ ಪ್ರಯೋಗವೊಂದನ್ನು ಫ್ರೆಂಚ್‌ ವಿಜ್ಞಾನಿಗಳು ಮಾಡಿದ್ದಾರೆಂದು ‘ನೇಚರ್‌ ಫೋಟೋನಿಕ್ಸ್‌’ ವರದಿ ಮಾಡಿದೆ.

ಸಿಡಿಲು ಎಂದರೆ ಇನ್ನೇನಲ್ಲ. ಮೋಡಗಳಲ್ಲಿ ಕೂಡಿಕೊಂಡಿರುವ ಅಗಾಧವಾದ ವಿದ್ಯುತ್ತು ಭೂಮಿಗೆ ಇಳಿಯುವುದನ್ನೇ ಸಿಡಿಲು ಎನ್ನುತ್ತೇವೆ. ಮಿಂಚು ಈ ಸಿಡಿಲಿನ ಬಿಂಗ. ಅರ್ಥಾತ್‌, ವಿದ್ಯುತ್ತು ಹೀಗೆ ಗಾಳಿಯಲ್ಲಿ ಹರಿದುಕೊಂಡು ಬರುವಾಗ ಉಂಟಾಗುವ ಬೆಳಕು. ಬ್ಯಾಟರಿಯ ಎರಡು ತುದಿಗಳನ್ನು ಒಂದು ತಂತಿಯಿಂದ ಮುಟ್ಟಿದಾಗ ಸಿಡಿಯುವ ಕಿಡಿಯಂತೆಯೇ ಇದು ಕೂಡ. ಆದರೆ ಮಹಾ ಪ್ರಬಲ ಕಿಡಿ ಎಂದು ಹೇಳಬಹುದಷ್ಟೆ.

ಬ್ಯಾಟರಿಯ ಎರಡು ಧ್ರುವಗಳನ್ನು ಸೇರಿಸಿದಾಗ ಕಿಡಿ ಹಾರುವುದಕ್ಕೆ ಕಾರಣ, ಎರಡೂ ಧ್ರುವಗಳಲ್ಲಿ ವಿರುದ್ಧ ಬಗೆಯ ವಿದ್ಯುತ್‌ ಆವೇಶ ಅಥವಾ ಛಾರ್ಜು ಇರುತ್ತವೆ. ಇವು ಒಂದಿನ್ನೊಂದನ್ನು ಕೂಡಿದಾಗ ವಿದ್ಯುತ್ತು ಹರಿಯುತ್ತದೆ. ಅತಿ ಸಮೀಪ ಬಂದಾಗ ಕೆಲವೊಮ್ಮೆ ಗಾಳಿಯಲ್ಲಿ ಕಿಡಿ ಸಿಡಿದಂತೆ ಸಿಡಿದು ಮತ್ತೊಂದು ಧ್ರುವವನ್ನು ಸೇರುತ್ತವೆ.

ಮಿಂಚಿನಲ್ಲಿ ಆಗುವುದೂ ಹೀಗೆಯೇ. ಹಲವು ಕಾರಣಗಳಿಂದಾಗಿ ಮೋಡಗಳಲ್ಲಿ ಕೆಲವದರ ಮೇಲೆ ವಿದ್ಯುದಾವೇಶ ಆಗಿರುತ್ತದೆ. ಅದು ತನ್ನ ಬಳಿಯಲ್ಲಿರುವ ಇನ್ನೊಂದು ಮೋಡದಲ್ಲಿ ವಿರುದ್ಧ ಬಗೆಯ ಛಾರ್ಜು ಬಂದು ಒಟ್ಟಾಗುವಂತೆ ಆಕರ್ಷಿಸುತ್ತದೆ. ಒಂದು ವೇಳೆ ಈ ಮೋಡಗಳ ನಡುವೆ ಒಂದು ತಂತಿಯೋ ಅಥವಾ ವಿದ್ಯುತ್‌ ಹರಿಯಬಲ್ಲಂತ ಹಾದಿ ಏನಾದರೂ ಸೃಷ್ಟಿಯಾದರೆ ಆಗ ಮೋಡದಿಂದ ಮೋಡಕ್ಕೆ ಕಿಡಿ ಹಾರುತ್ತದೆ. ಅದನ್ನೇ ‘ಮಿಂಚು’ ಎನ್ನುತ್ತೇವೆ. ಒಂದು ವೇಳೆ ಇದೇ ವಿದ್ಯುತ್ತು ನೇರವಾಗಿ ಭೂಮಿಯನ್ನೋ, ಭೂಮಿಯಲ್ಲಿರುವ ಮರ, ಗೋಪುರ ಮೊದಲಾದ ವಸ್ತುಗಳನ್ನು ತಾಕಿ, ನೆಲದೊಳಗೆ ಹರಿದು ಹೋದಾಗ ‘ಸಿಡಿಲು ಬಡಿಯಿತು’ ಎನ್ನುತ್ತೇವೆ.

ಸಿಡಿಲು ಬಡಿಯುವ ಮುನ್ನ ಮೋಡಗಳು ದಟ್ಟವಾಗುವುದು ಗೊತ್ತಾಗಬಹುದು. ಆದರೆ ಆ ಮೋಡದಿಂದ ಎಲ್ಲಿ, ಯಾವ ಜಾಗಕ್ಕೆ ವಿದ್ಯುತ್ತು ಹರಿಯುತ್ತದೆ ಎನ್ನುವುದನ್ನು ಊಹಿಸಲಾಗದು. ಇದು ಗೊತ್ತಾಗುವಂತಿದ್ದರೆ ಸಿಡಿಲು ಬಡಿಯದಂತೆ ರಕ್ಷಿಸಿಕೊಳ್ಳುವುದು ಸುಲಭವಾಗುತ್ತಿತ್ತು. ಸಿಡಿಲಿನಿಂದ ರಕ್ಷಣೆ ಕೊಡಬಲ್ಲ ಸಾಧನಗಳು ಇಲ್ಲವೆಂತಲ್ಲ. ಇವೆ. ‘ಫ್ರಾಂಕ್ಲಿನ್‌ ಅರೆಸ್ಟರ್‌’ ಎನ್ನುವ ಸುಮಾರು ಮುನ್ನೂರು ವರ್ಷಗಳ ಹಿಂದೆ ಅಮೆರಿಕನ್‌ ವಿಜ್ಞಾನಿ ಬೆಂಜಮಿನ್‌ ಫ್ರಾಂಕ್ಲಿನ್‌ ರೂಪಿಸಿದ ಸಾಧನವಿದೆ. ಎತ್ತರದ ಗೋಪುರಗಳು, ಕಟ್ಟಡಗಳ ತುದಿಯಲ್ಲಿ ಒಂದು ಚೂಪಾದ ಸರಳಿನ ರೂಪದಲ್ಲಿ ಇದನ್ನು ನೆಟ್ಟಿರುತ್ತಾರೆ. ಇದರಿಂದ ನೇರವಾಗಿ ನೆಲಕ್ಕೆ ಭಾರೀ ಕೇಬಲ್ಲೊಂದನ್ನು ಹರಿಸಿರುತ್ತಾರೆ. ಮೋಡದಿಂದ ಹರಿಯುವ ವಿದ್ಯುತ್ತೇನಾದರೂ ಕಟ್ಟಡದ ಬಳಿ ಸುಳಿದಲ್ಲಿ, ಅದು ನೆಲಕ್ಕೇ ನೇರವಾಗಿ ಹೋಗುವಂತೆ ಈ ಸಾಧನ ಹಾದಿ ಮಾಡಿಕೊಡುತ್ತದೆ. ಹಾದಿ ಸರಾಗವಾಗಿದ್ದಾಗ ವಿದ್ಯುತ್ತು ತೊಂದರೆ ಕೊಡುವುದಿಲ್ಲ; ನಷ್ಟವಾಗುವುದು ಉಳಿಯುತ್ತದೆ.

ಹಾಗಿದ್ದರೆ ಮೋಡದಿಂದ ವಿದ್ಯುತ್ತು ನೇರವಾಗಿ ಈ ಅರೆಸ್ಟರಿಗೇ ಹರಿಯುವಂತೆ ಮಾಡಿದರೆ, ಅರೆಸ್ಟರ್‌ ಇಲ್ಲದ ಕಟ್ಟಡಗಳನ್ನೂ ಕಾಪಾಡಬಹುದಲ್ಲ? ಇದು ಫ್ರೆಂಚ್‌ ಇಂಜಿನಿಯರ್‌ ಆರಿಲಿಯ ಹೋವರ್ಡರ ತಂಡದ ಯೋಚನೆ. ಇದಕ್ಕಾಗಿ ಇವರು ಲೇಸರನ್ನು ಬಳಸಿದ್ದಾರೆ. ಲೇಸರು ಪ್ರಬಲವಾದ ಬೆಳಕಷ್ಟೆ. ಇದು ಹಾಯುವಾಗ ಗಾಳಿಯಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯುದಾವೇಶವನ್ನು ಉಂಟುಮಾಡುತ್ತದೆ ಎಂದು ತಿಳಿದಿತ್ತು. ಸ್ವಲ್ಪ ವಿದ್ಯುದಾವೇಶ ಇದ್ದರೆ, ಮಿಂಚು ಅಂತಹ ಗಾಳಿಯಲ್ಲಿ ಹಾಯುತ್ತದೆ. ಮುಂದಿನ ಹಾದಿಯಲ್ಲಿ ಆವೇಶವನ್ನುಂಟುಮಾಡುತ್ತದೆ. ಹೀಗೆ ಹಾದಿ ಮಾಡಿಕೊಂಡು ಮಿಂಚು ಮುಂದೆ ಸಾಗುತ್ತದೆ. ಮಿಂಚಿನ ಹಾದಿಯನ್ನು ನಾವು ಊಹಿಸಲು ಆಗದೇ ಇರುವುದಕ್ಕೆ ಇದೇ ಕಾರಣ. ನಿರ್ದಿಷ್ಟ ದಿಕ್ಕಿನಲ್ಲಿ ವಿದ್ಯುದಾವೇಶ ಉಂಟಾಗುವುದಿಲ್ಲ. ಹೀಗಾಗಿ ಮಿಂಚು ಹೇಗೆಂದರೆ ಹಾಗೆ ಚಲಿಸುತ್ತದೆ. ಕೆಲವೊಮ್ಮೆ ಮೋಡಗಳಲ್ಲಿಯೇ ಕೊನೆಯಾಗುತ್ತದೆ. ಕೆಲವೊಮ್ಮೆ ಮರಗಿಡಗಳನ್ನು ತಾಕುತ್ತದೆ. ಕೆಲವೊಮ್ಮೆ ಮನುಷ್ಯರನ್ನೂ ಮುರುಟಿಸುತ್ತದೆ.

ಲೇಸರನ್ನೇ ಕ್ಷಿಪ್ರವಾಗಿ ಮಿನುಗಿಸಿ, ಒಂದರ ಹಿಂದೊಂದರಂತೆ ಹೀಗೆ ವಿದ್ಯುದಾವೇಶ ಇರುವ ಗಾಳಿಯ ಹಾದಿಯನ್ನು ರೂಪಿಸಬಹುದೆ? ಹಾಗೆ ರೂಪಿಸಿದ ಗಾಳಿಯಲ್ಲಿ ಮೋಡಗಳಿಂದ ವಿದ್ಯುತ್ತು ಹರಿಯಬಲ್ಲುದೇ ಎಂದು ಹಾವರ್ಡ್‌ ತಂಡ ಪರೀಕ್ಷಿಸಿದೆ. ಸ್ವಿಟ್ಜರ್ಲೆಂಡಿನ ಬೆಟ್ಟದ ಮೇಲಿದ್ದ ಅತಿ ಎತ್ತರದ ಟೆಲಿಫೋನು ಗೋಪುರದ ಪಕ್ಕದಲ್ಲಿಯೇ ಹಲವು ಟೆರಾವಾಟ್‌ ಶಕ್ತಿಯ ಲೇಸರು ಬೆಳಕನ್ನು ಮಿಣುಕಿಸಿದ್ದಾರೆ. ಈ ಗೋಪುರಕ್ಕೆ ಪ್ರತಿವರ್ಷವೂ ಏನಿಲ್ಲವೆಂದರೂ ನೂರು ಬಾರಿ ಸಿಡಿಲು ಬಡಿಯುವುದು ದಾಖಲಾಗಿದೆ. ಮಿಣುಕಿಸಿದ್ದು ನಮಗೆ, ನಿಮಗೆ ಕಾಣುವುದಿಲ್ಲ ಬಿಡಿ. ಸೆಕೆಂಡಿಗೆ ಲಕ್ಷ ಎನ್ನುವಷ್ಟು ಬಾರಿ ಈ ದೀಪ ಮಿಣುಕುತ್ತದೆ. ಈ ಲೇಸರನ್ನು ಬಳಸಿ ಮಿಂಚನ್ನು ಧರೆಗಿಳಿಸಬಹುದೇ ಎಂದು ಪರೀಕ್ಷಿಸಿದ್ದಾರೆ.

ಈ ಬೆಳಕನ್ನು 124 ಮೀಟರು ಎತ್ತರದ ಆ ಗೋಪುರದ ಮೇಲಿದ್ದ ಕನ್ನಡಿಯ ಮೂಲಕ ಮೋಡಗಳ ಕಡೆಗೆ ಪ್ರತಿಫಲಿಸಿದ್ದಾರೆ. ಕ್ಯಾಮೆರಾಗಳನ್ನು ಬಳಸಿ ಲೇಸರಿನ ಪರಿಣಾಮಗಳನ್ನು ಚಿತ್ರಿಸಿದ್ದಾರೆ. ಮಳೆ ಮೋಡಗಳು ದಟ್ಟವಾಗಿದ್ದಾಗ ಈ ಲೇಸರು ಕಟ್ಟಡದ ತುದಿಯಿಂದ ಮೇಲಕ್ಕೆ ಮಿಂಚನ್ನು ಚಿಮ್ಮಿದ್ದು ಛಾಯಾಚಿತ್ರಗಳಲ್ಲಿ ಮೂಡಿದೆ. ಅಷ್ಟೇ ಅಲ್ಲ, ಲೇಸರು ಬೆಳಗಿದಾಗ ಈ ಪ್ರದೇಶದಲ್ಲಿ ಮೋಡಗಳಿಂದ ಹರಿದ ಸಿಡಿಲಿನ ಪ್ರಮಾಣವೂ ಕಡಿಮೆ ಆಗಿದ್ದನ್ನೂ, ಇಪ್ಪತ್ತು ಕಿಲೋಮೀಟರು ದೂರದ ಮೋಡಗಳಲ್ಲಿಯೂ ಮಿಂಚು ಹರಿದದ್ದನ್ನೂ ಗಮನಿಸಿದ್ದಾರೆ. ಅಂದರೆ ಲೇಸರು ಬಳಸಿ, ಕೃತಕವಾಗಿ ಮಿಂಚನ್ನು ಸೃಷ್ಟಿಸಿ, ಮೋಡಗಳಲ್ಲಿರುವ ವಿದ್ಯುತ್ತು ಇದರ ಮೂಲಕ ನಿರ್ದಿಷ್ಟ ಜಾಗೆಗೆ ಹರಿಯುವಂತೆ ಮಾಡಬಹುದು. ಎಲ್ಲೆಲ್ಲೋ ಇರುವ ಮಿಂಚನ್ನು ನೇರವಾಗಿ ಅರೆಸ್ಟರುಗಳ ಕಡೆಗೆ ಬರುವಂತೆ ನಿರ್ದೇಶಿಸಬಹುದು. ಈ ಮೂಲಕ ವಿಮಾನ ನಿಲ್ದಾಣ, ರಾಕೆಟ್‌ ಉಡಾವಣಾ ಸ್ಥಾನಗಳೇ ಮೊದಲಾದ ದೊಡ್ಡ ದೊಡ್ಡ ಕಟ್ಟಡಗಳಿಗೆ ರಕ್ಷಣೆ ನೀಡಬಹುದು ಎನ್ನುವ ಆಶಯವನ್ನು ಹಾವರ್ಡ್‌ ತಂಡ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು