ಭಾನುವಾರ, ಜೂನ್ 26, 2022
26 °C

ಕಾಲ್‌ ರೆಕಾರ್ಡಿಂಗ್‌ಗೆ ಗೂಗಲ್‌ ನಿರ್ಬಂಧ

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

ಕಾಲ್‌ ರೆಕಾರ್ಡ್‌ ಮಾಡುವುದು ಸ್ಮಾರ್ಟ್‌ಫೋನ್‌ಗಳಲ್ಲಿನ ಅತ್ಯಂತ ಪ್ರಮುಖ ಸೌಲಭ್ಯಗಳಲ್ಲೊಂದು. ಇದು ಹಲವು ಉದ್ದೇಶಕ್ಕೆ ಬಳಕೆಯಾಗುತ್ತದೆ. ಇದರಿಂದ ಉತ್ಪಾದನೆಯಾಗುವ ಡೇಟಾ ಅಂತೂ ಕೋಟ್ಯಂತರ ಬೆಲೆ ಬಾಳುವಂಥದ್ದು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬಳಕೆಯಾಗುವ ಈ ಕಾಲ್‌ ರೆಕಾರ್ಡಿಂಗ್‌ ಸೌಲಭ್ಯದ ಹಿಂದೆ ‘ಗೌಪ್ಯತೆಯ ಉಲ್ಲಂಘನೆ’ಯ ಆರೋಪವೂ ಇದೆ. ಕರೆಯಲ್ಲಿರುವ ಎಲ್ಲರೂ ರೆಕಾರ್ಡ್‌ ಮಾಡುವುದಕ್ಕೆ ಸಮ್ಮತಿಸಿರಬೇಕು ಎಂಬುದು ಗೂಗಲ್‌ ಅಭಿಪ್ರಾಯ. ಗೂಗಲ್ ಕಳೆದ ವರ್ಷ ಕಾಲ್‌ ರೆಕಾರ್ಡಿಂಗ್‌ ಮಾಡುವಾಗ ‘ನಿಮ್ಮ ಕರೆ ರೆಕಾರ್ಡ್‌ ಆಗುತ್ತಿದೆ…’ ಎಂಬ ಧ್ವನಿಯೊಂದನ್ನ ಹೊರಡಿಸಲು ನಿರ್ಧರಿಸಿದಾಗ ಗೌಪ್ಯತೆ ವಿಚಾರದಲ್ಲಿ ಗೂಗಲ್‌ ಮಹತ್ವದ ನಿರ್ಧಾರ ಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೂಗಲ್‌, ತನ್ನ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಎಲ್ಲ ಕರೆ ರೆಕಾರ್ಡ್‌ ಮಾಡುವ ಆ್ಯಪ್‌ಗಳಿಗೆ ನಿಷೇಧ ಹೇರಿದೆ. ಆ್ಯಪ್‌ ಸ್ಟೋರ್‌ನಲ್ಲಿ ಹಲವು ಕಾಲ್‌ ರೆಕಾರ್ಡ್‌ ಮಾಡುವ ಆ್ಯಪ್‌ಗಳು ಇದ್ದವು. ಇವುಗಳನ್ನೆಲ್ಲ ಥರ್ಡ್‌ ಪಾರ್ಟಿ ಆ್ಯಪ್‌ಗಳು ಎಂದು ಕರೆಯಲಾಗಿದ್ದು, ಗೂಗಲ್‌ಗೂ, ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಗೂ ಸಂಬಂಧವಿಲ್ಲದವುಗಳು.

ಆದರೆ, ವಾಸ್ತವವಾಗಿ ಈ ಕಾಲ್ ರೆಕಾರ್ಡಿಂಗ್‌ ಆ್ಯಪ್‌ಗಳಿಗೆ ಹೇರಿರುವ ನಿರ್ಬಂಧ ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿರುವವರಿಗೆ ಬಾಧಿಸುವುದು ಅಷ್ಟಕ್ಕಷ್ಟೇ! ಏಕೆಂದರೆ, ಜನಪ್ರಿಯ ಬ್ರ್ಯಾಂಡ್‌ನ ಫೋನ್‌ಗಳಲ್ಲೆಲ್ಲ ಆ ಬ್ರ್ಯಾಂಡ್‌ನ ಯೂಸರ್‌ ಇಂಟರ್‌ಫೇಸ್‌ನಲ್ಲೇ ಈ ಸೌಲಭ್ಯವನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ, ಇಂಥ ಸ್ಮಾರ್ಟ್‌ಫೋನ್ ಬಳಸುತ್ತಿರುವವರು ಎಂದಿನಂತೆ ಕಾಲ್ ರೆಕಾರ್ಡ್‌ ಮಾಡಿಕೊಳ್ಳಬಹುದು.

ನಿಷೇಧಿಸಿದ್ದು ಏಕೆ?

ಹಲವು ವರ್ಷಗಳಿಂದಲೂ ಕರೆ ರೆಕಾರ್ಡ್‌ ಮಾಡುವ ಬಗ್ಗೆ ಗೂಗಲ್‌ ತನ್ನ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದೆ. ಇದು ಬಳಕೆದಾರರ ಗೌಪ್ಯತೆಯ ಉಲ್ಲಂಘನೆ ಎಂಬುದು ಅದರ ಅಭಿಪ್ರಾಯ. ಇದೇ ಕಾರಣಕ್ಕೆ, ತನ್ನ ಡೈಲರ್‌ ಆ್ಯಪ್‌ನಲ್ಲಿ ಇರುವ ಕಾಲ್‌ ರೆಕಾರ್ಡಿಂಗ್‌ ಸೌಲಭ್ಯಕ್ಕೆ ಕಳೆದ ವರ್ಷ ಧ್ವನಿ ಸೂಚನೆಯನ್ನು ಅಳವಡಿಸಿತ್ತು. ಅಂದರೆ, ನೀವು ಫೋನ್‌ ಕರೆಯಲ್ಲಿದ್ದಾಗ ರೆಕಾರ್ಡಿಂಗ್‌ ಬಟನ್ ಒತ್ತಿದರೆ, ಕರೆಯ ಆ ಕಡೆಯಲ್ಲಿರುವವರಿಗೂ ‘ಈ ಕರೆಯನ್ನು ರೆಕಾರ್ಡ್‌ ಮಾಡಲಾಗುತ್ತಿದೆ’ ಎಂಬ ಧ್ವನಿ ಸಂದೇಶ ಕೇಳಿಸುತ್ತಿತ್ತು. ಈ ಸೌಲಭ್ಯ ಈಗಲೂ ಮುಂದುವರೆದಿದೆ.

ಇನ್‌ಸ್ಟಾಲ್‌ ಮಾಡಿದ ಆ್ಯಪ್‌ ಅಬಾಧಿತ

ಈ ನಿಷೇಧ ಕೇವಲ ಹೊಸದಾಗಿ ಆ್ಯಪ್‌ ಸ್ಟೋರ್‌ನಿಂದ ಆ್ಯಪ್‌ ಇನ್‌ಸ್ಟಾಲ್‌ ಮಾಡಿಸಿಕೊಳ್ಳುವುದರ ಮೇಲೆ ಮಾತ್ರ ಅನ್ವಯಿಸುತ್ತದೆ. ಉದಾಹರಣೆಗೆ, ಈಗಾಗಲೇ ಕಾಲ್‌ ರೆಕಾರ್ಡಿಂಗ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದರೆ, ಅದು ಮೊದಲಿನ ಹಾಗೆಯೇ ಕೆಲಸ ಮಾಡುತ್ತಿರುತ್ತದೆ. ಅಷ್ಟೇ ಅಲ್ಲ, ಅದು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸಿಗುತ್ತಿಲ್ಲವಷ್ಟೇ. ಬೇರೆ ಬೇರೆ ಪ್ಲೇ ಸ್ಟೋರ್‌ಗಳಿಂದ ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ. ಅದು ಸ್ವಲ್ಪ ಅಪಾಯಕಾರಿ ನಿರ್ಧಾರವಾದರೂ, ಅದಕ್ಕೆ ಅವಕಾಶವಿದೆ. ಹೀಗಾಗಿ, ಈ ಸೌಲಭ್ಯಕ್ಕೇನೂ ತೊಂದರೆ ಇಲ್ಲ.

ಒಳಗಿನ ಫೀಚರ್‌ಗಳೂ ಮಾಯ

ಕಾಲ್ ರೆಕಾರ್ಡಿಂಗ್‌ ಎಂಬುದು ಸದ್ಯಕ್ಕೆ ಅತ್ಯಂತ ಸಾಮಾನ್ಯ ಸೌಲಭ್ಯ. ಹೀಗಾಗಿ, ಹಲವು ಆ್ಯಪ್‌ಗಳು ಒಂದು ಫೀಚರ್‌ ಆಗಿ ಇದನ್ನು ಹೊಂದಿದ್ದವು. ಉದಾಹರಣೆಗೆ, ಟ್ರ್ಯೂಕಾಲರ್‌ ಎಂಬ ಆ್ಯಪ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಸೌಲಭ್ಯವೂ ಇತ್ತು. ಆದರೆ, ಈಗ ಗೂಗಲ್‌ನ ಹೊಸ ನೀತಿಯಿಂದಾಗಿ ಟ್ರ್ಯೂಕಾಲರ್ ಈ ಸೌಲಭ್ಯವನ್ನು ತೆಗೆದುಹಾಕಿದೆ.

ಇಂತಹ ಹಲವು ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಿಂದ ನಿಷೇಧಕ್ಕೊಳಗಾಗುವ ಭೀತಿಯಲ್ಲಿ ಈ ಸೌಲಭ್ಯವನ್ನು ತೆಗೆದುಹಾಕಬೇಕಾಗಿದೆ.
ಪರ್ಯಾಯ ವಿಧಾನಗಳಿಗೆ ಮೊರೆ ಹೋಗುವ ಬಳಕೆದಾರರು ಸಾಮಾನ್ಯವಾಗಿ ಇಂತಹ ಸೌಲಭ್ಯಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲದಿದ್ದರೆ, ಅವುಗಳ ಮೇಲೆ ಅವಲಂಬಿಸಿರುವವರು ಇತರ ಸುರಕ್ಷಿತವಲ್ಲದ ಪ್ಲೇ ಸ್ಟೋರ್‌ಗಳನ್ನು, ವೆಬ್‌ಸೈಟ್‌ಗಳು ಬಳಸಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಇದರಿಂದ ಬಳಕೆದಾರರ ಸುರಕ್ಷತೆಗೆ ಇನ್ನಷ್ಟು ಅಪಾಯವೇ ಎದುರಾಗುತ್ತದೆ. ಹೀಗಾಗಿ, ಇತರ ವೆಬ್‌ಸೈಟ್‌ಗಳಲ್ಲಿ ಸಿಗುವ ಆ್ಯಪ್‌ಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.

ಕಾನೂನು ಏನು ಹೇಳುತ್ತದೆ?

ಕರೆ ರೆಕಾರ್ಡಿಂಗ್‌ಗೆ ಸಂಬಂಧಿಸಿದ ಕಾನೂನು ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇದೆ. ಉದಾಹರಣೆಗೆ, ಅಮೆರಿಕದ ಕಾನೂನು ಪ್ರಕಾರ ಕರೆ ರೆಕಾರ್ಡಿಂಗ್‌ ಮಾಡಲು ಒಂದು ಪಕ್ಷದ ಅನುಮತಿ ಇದ್ದರೆ ಸಾಕು. ಉದಾಹರಣೆಗೆ, ಕರೆ ಮಾಡುವವರ ಅನುಮತಿ ಇದ್ದರೂ, ಕರೆ ಸ್ವೀಕರಿಸಿದವರ ಅನುಮತಿ ಇದ್ದರೂ ಕರೆ ರೆಕಾರ್ಡ್‌ ಮಾಡಬಹುದು. ಕೆಲವು ದೇಶಗಳಲ್ಲಿ ಇಬ್ಬರ ಅನುಮತಿಯೂ ಬೇಕಾಗಿರುತ್ತದೆ. ಹೀಗಾಗಿ, ಗೂಗಲ್‌ ಈ ಸೌಲಭ್ಯವನ್ನೇ ನಿಷೇಧಿಸುವ ಮೂಲಕ ಕಾನೂನಿನ ವಿಚಾರದಲ್ಲಿ ಹೆಚ್ಚು ಸುರಕ್ಷಿತವಾಗಿರುವ ವಿಧಾನವನ್ನು ಅನುಸರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು