ಗುರುವಾರ , ಜೂಲೈ 2, 2020
28 °C

TikTok, ShareIt, CamScanner: ನಿಷೇಧಿತ ಚೀನಾ ಆ್ಯಪ್‌ಗಳಿಗೆ ಪರ್ಯಾಯ ಇಲ್ಲಿದೆ

ಹೇಮಂತ್‌ ಕುಮಾರ್ ಎಸ್. Updated:

ಅಕ್ಷರ ಗಾತ್ರ : | |

ಭಾರೆತ ಸರ್ಕಾರ ನಿಷೇಧಿಸಿರುವ ಚೀನಾದ ಆ್ಯಪ್‌ಗಳು–ಪ್ರಾತಿನಿಧಿಕ ಚಿತ್ರ

'ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ' ತರುತ್ತಿರುವ ಕಾರಣ ನೀಡಿ ಭಾರತ ಸರ್ಕಾರ ಚೀನಾ ಮೂಲದ 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಿದೆ. ದೇಶದ ಭದ್ರತೆಯಂತಹ ಪ್ರಮುಖ ವಿಚಾರದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನ ಜಗತ್ತು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ದೇಶವೊಂದು ಸೂಪರ್ ಪವರ್‌ ಆಗಲು ಸೇನೆಯ ಬಲ, ಉನ್ನತ ಆರ್ಥಿಕತೆಯೊಂದಿಗೆ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪ್ರಮುಖ ಪಾತ್ರವಹಿಸಲಿದೆ ಎಂಬುದು ಸ್ಪಷ್ಟವಾದಂತಾಗಿದೆ. ಪ್ರಸ್ತುತ ನಿಷೇಧಿಸಿರುವ ಚೀನಾ ಆ್ಯಪ್‌ಗಳ ಪೈಕಿ ಕೆಲವು ಭಾರತೀಯರ ನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಬೆರೆತು ಹೋಗಿವೆ; ಅಂಥ ಆ್ಯಪ್‌ಗಳಿಗೆ ಪರ್ಯಾಯದ ಹುಡುಕಾಟದ ಕಡೆಗೆ ದೇಶ ಮುಖ ಮಾಡಿದೆ.

ಯುವ ಜನತೆಯನ್ನು ಸೆಳೆದುಕೊಂಡಿರುವ, ಆತ್ಮಹತ್ಯೆ, ಅವಘಡ ಹಾಗೂ ಖಿನ್ನತೆಯ ಕೂಪಕ್ಕೂ ತಳ್ಳುತ್ತಿರುವುದಾಗಿ ಚರ್ಚೆಗೆ ಗ್ರಾಸವಾಗಿರುವುದು 'ಟಿಕ್‌ಟಾಕ್‌' ಆ್ಯಪ್‌. ಇದು ಅತಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಮನೆ ಮಾತಾಗಿರುವ ಚೀನಿ ಆ್ಯಪ್‌. ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಭದ್ರತಾ ಪಡೆಗಳ ನಡುವಿನ ಘರ್ಷಣೆಯ ನಂತರ ಚೀನಾದ ವಸ್ತುಗಳ ಬಳಕೆ ನಿರ್ಬಂಧಿಸಿಕೊಳ್ಳುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ತೀವ್ರವಾಯಿತು. ಮೊಬೈಲ್‌ನಲ್ಲಿರುವ ಚೀನಾ ಆ್ಯಪ್‌ಗಳನ್ನು ಪತ್ತೆ ಮಾಡುವ ಅಪ್ಲಿಕೇಷನ್‌ ಮುನ್ನೆಲೆಗೆ ಬಂದಿತು. ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿರುವ ಕಂಪನಿಯ ಮೂಲವನ್ನು ಆಧರಿಸಿ 'ರಿಮೂವ್‌ ಚೀನಾ ಆ್ಯಪ್‌' (Remove China App) ಚೀನಾದ ಆ್ಯಪ್‌ಗಳನ್ನು ಪಟ್ಟಿ ಮಾಡಿತು. ಈಗ ಗೂಗಲ್‌ ಪ್ಲೇ ಸ್ಟೋರ್‌ನಿಂದ ಒಂದೊಂದೆ ಆ್ಯಪ್‌ಗಳು ಮಾಯವಾಗುತ್ತಿವೆ. ಟಿಕ್‌ಟಾಕ್‌, ಹೆಲೊ ಈಗಾಗಲೇ ಕಾಣೆಯಾಗಿವೆ.

ದೇಶದ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಶೇರ್‌ಇಟ್‌, ಟಿಕ್‌ಟಾಕ್‌, ಯುಸಿ ಬ್ರೌಸರ್‌ ಹಾಗೂ ಕ್ಯಾಮ್‌ಸ್ಕ್ಯಾನರ್‌ ಆ್ಯಪ್‌ಗಳ ಬಳಕೆ ಸಾಮಾನ್ಯ. ಇವುಗಳು ಚೀನಾದೆಂದು ತಿಳಿಯುತ್ತಿದ್ದಂತೆ ಬಳಕೆದಾರರು ಅನ್‌ಇನ್‌ಸ್ಟಾಲ್ ಮಾಡಿ, ಅದರ ಚಿತ್ರಗಳನ್ನು ಟ್ವಿಟರ್ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಂಡರು. ಚೀನಾ ಆ್ಯಪ್‌ಗಳನ್ನು ಮೊಬೈಲ್‌ನಿಂದ ತೆಗೆಯುವ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಿಂದ 'ರಿಮೂವ್‌ ಚೀನಾ ಆ್ಯಪ್‌' ತೆಗೆದು ಹಾಕಲಾಯಿತು. ಸಿಟ್ಟಿಗೆದ್ದ ನವಯುಗದ ಸ್ಮಾರ್ಟ್‌ಫೋನ್‌ ಬಳಕೆದಾರರು 'ಚೀನಾ ಮುಕ್ತ ಮೊಬೈಲ್‌ ಅಪ್ಲಿಕೇಷನ್‌' ಮಾತ್ರ ಹೊಂದುವ ಪಣತೊಟ್ಟರು.

ಈ ನಡುವೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಚೀನಾ ಮೂಲದ ಶಿಯೋಮಿ ರೆಡ್‌ಮಿ ಎಂಐ ಫೋನ್‌ಗಳು ದಾಖಲೆಯ ಮಾರಾಟ ಕಂಡಿರುವುದಾಗಿಯೂ ವರದಿಯಾಯಿತು.

* ಟಿಕ್‌ಟಾಕ್‌ (TikTok) ಬಿಟ್ಟು...

ಟಿಕ್‌ಟಾಕ್‌ಗೆ ಪರ್ಯಾಯವಾಗಿ ದೇಶೀಯ ಆ್ಯಪ್‌ ಆಗಿ ಬಿಂಬಿತವಾದ 'ಮಿತ್ರೋನ್' (Mitron) ಬಹುಬೇಗ ಆರೋಪಗಳಿಗೆ ಒಳಗಾಯಿತು. ಪಾಕಿಸ್ತಾನದ ಮೂಲದ ಕ್ಯುಬಾಕ್ಸಸ್‌ ಕಂಪನಿಯು ಮಿತ್ರೋನ್‌ ತನ್ನದೇ ವ್ಯವಸ್ಥೆಯ ಮೇಲೆ ಅಭಿವೃದ್ಧಿ ಪಡಿಸಿರುವುದು, ಮೇಡ್‌ ಇನ್‌ ಇಂಡಿಯಾ ಅಲ್ಲ ಎಂದು ಹೇಳಿಕೆ ನೀಡಿತು. ಗೂಗಲ್‌ ಪ್ಲೇ ಸ್ಟೋರ್‌ನಿಂದ ಮಿತ್ರೋನ್‌ ತೆಗೆಯಲಾಯಿತು. ಭಾರತದಲ್ಲಿಯೇ ಅಭಿವೃದ್ಧಿ ಪಡಿಸಿರುವುದು ಸಾಬೀತು ಮಾಡಿಕೊಂಡಿರುವ ಮಿತ್ರೋನ್‌ ಮತ್ತೆ ಡೌನ್‌ಲೋಡ್‌ಗೆ ಸಿಗುತ್ತಿದೆ. ಈಗಾಗಲೇ 1 ಕೋಟಿಗೂ ಹೆಚ್ಚು ಬಾರಿ ಮಿತ್ರೊನ್‌ ಡೌನ್‌ಲೋಡ್‌ ಆಗಿದ್ದು, 4.6 ರೇಟಿಂಗ್‌ ಸಹ ಹೊಂದಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಅಭಿವೃದ್ಧಿಯಾಗಿರುವ 'ಚಿಂಗಾರಿ'ಯನ್ನು (Chingari) ಕೆಲವರು ಇಷ್ಟ ಪಟ್ಟಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಬಾರಿ ಈ ಆ್ಯಪ್‌ ಡೌನ್‌ಲೋಡ್‌ ಆಗಿದೆ. ಬಳಕೆದಾರರಿಂದ 4.7 ರೇಟಿಂಗ್‌ ಪಡೆದಿದೆ. ಮೇಡ್‌ ಇನ್‌ ಇಂಡಿಯಾ ಟ್ಯಾಗ್‌ ಹೊಂದಿರುವ ಬೋಲೊ ಇಂಡ್ಯಾ (Bolo Indya), ರೊಪೊಸೊ (Roposo) ಸೇರಿದಂತೆ ಹಲವು ಆ್ಯಂಡ್ರಾಯ್ಡ್‌ ಅಪ್ಲಿಕೇಷನ್‌ಗಳಿವೆ.    


ಚಿಂಗಾರಿ ಆ್ಯಪ್‌

ಬಳಕೆದಾರರು ಹೆಚ್ಚಿದಂತೆ ಅಭಿವೃದ್ಧಿ ಪಡಿಸಿಕೊಳ್ಳುತ್ತಿರುವ ಈ ಆ್ಯಪ್‌ಗಳು ಟಿಕ್‌ಟಾಕ್‌ನಷ್ಟೇ ಅನುಭವ ನೀಡಲು ಇನ್ನೂ ಸಾಧ್ಯವಾಗಿಲ್ಲ. ಟಿಕ್‌ಟಾಕ್‌ನಲ್ಲಿದ್ದ ಸೆಲೆಬ್ರೆಟಿಗಳು ಈಗ ಮತ್ತೆ ಇನ್‌ಸ್ಟಾಗ್ರಾಂನತ್ತ (Instagram) ಹೊರಳುತ್ತಿದ್ದಾರೆ. ಪುಟ್ಟ ವಿಡಿಯೊ ಮಾಡಿ ಹಂಚಿಕೊಳ್ಳುವ ವೇದಿಕೆಯಾದ ಟಿಕ್‌ಟಾಕ್‌ಗೆ ಪರ್ಯಾಯವಾಗಿ ಡಬ್‌ಸ್ಮ್ಯಾಷ್‌ (Dubsmash), ಥ್ರಿಲ್ಲರ್‌ (Thriller) ರೀತಿಯ ವಿದೇಶಿ ಮೂಲದ ಹಲವು ಆ್ಯಪ್‌ಗಳಿವೆ.

ಭಾರತದ್ದೇ ಆಗಿರುವ ಶೇರ್‌ಚಾಟ್‌ (ShareChat) ವಿಡಿಯೊ ಹಂಚಿಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಚೀನಾದ ಹೆಲೊ (Helo) ಅಪ್ಲಿಕೇಷನ್‌ಗೆ ಪರ್ಯಾಯವಾಗಿ ಶೇರ್‌ಚಾಟ್‌ ಬಳಸಬಹುದಾಗಿದೆ. 4.4 ರೇಟಿಂಗ್‌ ಹೊಂದಿರುವ ಈ ಆ್ಯಪ್‌ ಈಗಾಗಲೇ 10 ಕೋಟಿಗೂ ಹೆಚ್ಚು ಸಲ ಡೌನ್‌ಲೋಡ್‌ ಆಗಿದೆ.

ಪ್ರಸ್ತುತ ಸರ್ಕಾರ ನಿಷೇಧಿಸಿರುವ ಲೈಕಿ (Likee), ಬಿಗೊ (Bigo Live), ವಿವಾ ವಿಡಿಯೊ ( Viva Video), ವಿಗೊ ವಿಡಿಯೊ (Vigo Video) ಹಾಗೂ ಕ್ವಾಯ್‌ ( Kwai) ಅಪ್ಲಿಕೇಷನ್‌ಗಳು ವಿಡಿಯೊ ಮಾಡುವ ಅಥವಾ ಹಂಚಿಕೊಳ್ಳಲು ಬಳಕೆಯಾಗುವ ಆ್ಯಪ್‌ಗಳೇ ಆಗಿವೆ. ಲೈಕಿ ಮತ್ತು ಬಿಗೊ ಸಿಂಗಾಪುರ ಮೂಲದ ಬಿಗೊ ಟೆಕ್ನಾಲಜಿ ಕಂಪನಿ ಅಭಿವೃದ್ಧಿ ಪಡಿಸಿರುವ ಆ್ಯಪ್‌ಗಳು. ಭಾರತದ ಹೊರಗೆ ಚೀನಾ ಹಾಗೂ ಸಿಂಗಾಪುರದಲ್ಲಿ ಸರ್ವರ್‌ಗಳನ್ನು ಹೊಂದಿರುವ ಅಪ್ಲಿಕೇಷನ್‌ಗಳ ಕಡೆಗೆ ಸರ್ಕಾರ ನಿಗಾವಹಿಸಿದೆ.

* ಕ್ಯಾಮ್‌ಸ್ಕ್ಯಾನರ್‌ (CamScanner) ಇಲ್ಲದೇ...

ಪುಸ್ತಕದ ಪುಟಗಳು, ಬರವಣಿಗೆ ಅಥವಾ ಇನ್ನಾವುದೇ ದಾಖಲೆ, ಫೋಟೊ ಕಾಪಿಗಳನ್ನು ಕ್ಷಣದಲ್ಲಿ ಡಿಜಿಟಲ್‌ ರೂಪ ನೀಡಲು ಕ್ಯಾಮ್‌ಸ್ಕ್ಯಾನರ್‌ ಆ್ಯಪ್‌ನ್ನು ಹೆಚ್ಚಿನ ಮೊಬೈಲ್‌ ಬಳಕೆದಾರರು ಬಳಸುತ್ತಿದ್ದಾರೆ. ದಾಖಲೆಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಪಿಡಿಎಫ್‌, ಜೆಪೆಗ್‌ ಫಾರ್ಮ್ಯಾಟ್‌ಗಳಲ್ಲಿ ಸುಲಭವಾಗಿ ರವಾನಿಸಲು, ಹಂಚಿಕೊಳ್ಳುವಲ್ಲಿ ಈ ಆ್ಯಪ್‌ ಸಹಕಾರಿ. ಇದಕ್ಕೆ ಪರ್ಯಾಯವಾಗಿ ಮೈಕ್ರೊಸಾಫ್ಟ್‌ನ ಮೈಕ್ರೊಸಾಫ್ಟ್‌ ಆಫೀಸ್‌ ಲೆನ್ಸ್ ( Microsoft Office Lens) ಅಥವಾ ಅಡೋಬ್‌ ಸ್ಕ್ಯಾನ್‌ (Adobe Scan) ಬಳಸಬಹುದು. ಇಲ್ಲವೇ ಫೋಟೊ ಕ್ಲಿಕ್ಕಿಸಿದ ಫೈಲ್‌ ಗೂಗಲ್‌ ಡ್ರೈವ್‌ನಲ್ಲಿ ಉಳಿಸಿಕೊಂಡು ಪಿಡಿಎಫ್‌ ರೂಪದಲ್ಲಿಯೂ ಹಂಚಿಕೊಳ್ಳಬಹುದು.


ಕ್ಯಾಮ್‌ಸ್ಕ್ಯಾನರ್‌ ಆ್ಯಪ್‌

* ಹಂಚಿಕೊಳ್ಳಲು ಶೇರ್‌ಇಟ್‌ (ShareIt)

ಮೊಬೈಲ್‌ ಡೇಟಾ ಬಳಸದೆ, ಕೇಬಲ್‌ಗಳನ್ನು ಸಂಪರ್ಕಿಸದೆಯೇ ಸಮೀಪದ ಮತ್ತೊಂದು ಸಾಧನಕ್ಕೆ ಆ್ಯಪ್‌, ಸಿನಿಮಾ, ಫೋಟೊ ಸೇರಿದಂತೆ ಯಾವುದೇ ಫೈಲ್‌ ಕ್ಷಣದಲ್ಲಿ ವರ್ಗಾಯಿಸಿಕೊಳ್ಳಲು ಶೇರ್‌ಇಟ್‌ ಬಳಕೆಯಾಗುತ್ತಿದೆ. ನಿಷೇಧಿಕ ಆ್ಯಪ್‌ ಪಟ್ಟಿಯಲ್ಲಿರುವ ಕ್ಸೆಂಡರ್‌ (Xender) ಕೂಡ ಫೈಲ್‌ ವರ್ಗಾವಣೆಗೆ ಸಹಕಾರಿಯಾಗಿದೆ. ಗೂಗಲ್‌ನ ಫೈಲ್ಸ್ ಬೈ ಗೂಗಲ್‌ (Files by Google) ಶೇರ್‌ಇಟ್‌ಗೆ ಪರ್ಯಾಯವಾಗಿ ಬಳಸಬಹುದಾಗಿದ್ದು, ವೇಗವಾಗಿ ಫೈಲ್‌ ವರ್ಗಾವಣೆ ಹಾಗೂ ಫೋನ್‌ ಮೆಮೊರಿ ಕ್ಲೀನ್‌ ಆಯ್ಕೆಗಳನ್ನೂ ಹೊಂದಿದೆ. ಕರ್ನಾಟಕದ ಶ್ರವಣ್‌ ಹೆಗ್ಡೆ ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಇಂಟರ್‌ನೆಟ್‌ ಬಳಕೆ ಇಲ್ಲದೆಯೇ ಫೈಲ್‌ ವರ್ಗಾವಣೆಗೆ ಅಭಿವೃದ್ಧಿ ಪಡಿಸಿರುವ ದೇಸಿ ಆ್ಯಪ್‌ ಝಡ್‌ ಶೇರ್‌ (Z Share) ಇದೆ. ರಿಲಯನ್ಸ್‌ನ ಜಿಯೊ ಸ್ವಿಚ್ (Jio Switch), ಶೇರ್‌ಆಲ್‌ ( SHAREall) ರೀತಿಯ ಹಲವು ದೇಶೀಯ ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.  

ಇಲ್ಲವೇ ಡ್ರಾಪ್‌ಬಾಕ್ಸ್‌, ಗೂಗಲ್‌ ಡ್ರೈವ್‌ ಮೂಲಕ ಆನ್‌ಲೈನ್‌ ಫೈಲ್‌ ವರ್ಗಾವಣೆ ಸಾಧ್ಯವಿದೆ.


ಗೂಗಲ್‌ ಫೈಲ್ಸ್‌

* ಯುಸಿ ಬ್ರೌಸರ್‌ (UC Browser) ಹುಡುಕಾಟ

ಬಹುತೇಕ ಚೀನಾ ಕಂಪನಿಗಳ ಮೊಬೈಲ್‌ಗಳಲ್ಲಿ ಅಂತರ್ಜಾಲ ಹುಡುಕುಕಾಟಗಳಿಗೆ ಯುಸಿ ಬ್ರೌಸರ್‌ ಬಳಕೆಯಲ್ಲಿದೆ. ಭಾರತದಲ್ಲಿ ರೆಡ್‌ಮಿ ಎಂಐ ಸೇರಿದಂತೆ ಹೆಚ್ಚು ಚೀನಾ ಫೋನ್‌ಗಳ ಬಳಕೆ ಇರುವುದರಿಂದ ಯುಸಿ ಬ್ರೌಸರ್‌ ಪ್ರಚಲಿತದಲ್ಲಿದೆ. ಇದಕ್ಕೆ ಪರ್ಯಾಯ ಎಲ್ಲ ಆ್ಯಂಡ್ರಾಯ್ಡ್‌ ಸಾಧನಗಳಲ್ಲಿರುವ ಗೂಗಲ್‌ನ ಕ್ರೋಮ್‌ (Google Chrome). ಮೊಜಿಲ್ಲಾದ ಫೈರ್‌ಫಾಕ್ಸ್‌ (Firefox Browser) ಹಾಗೂ ಬ್ರೇವ್‌ (Brave Private Browser) ಬ್ರೌಸರ್‌ಗಳನ್ನು ಉಪಯೋಗಿಸಬಹುದು.

ಅಂತರ್ಜಾಲ ಹುಡುಕಾಟಗಳಿಗೆ ಬಳಕೆಯಾಗುತ್ತಿರುವ ಹಾಂಕಾಂಗ್‌ ಮತ್ತು ಚೀನಾದ ಸಿಎಂ ಬ್ರೌಸರ್‌ (CM Browser), ಎಪಿಯುಎಸ್‌ ಬ್ರೌಸರ್‌ (APUS Browser), ಡಿಯು ಬ್ರೌಸರ್ (DU Browser) ಆ್ಯಪ್‌ಗಳನ್ನೂ ನಿಷೇಧಿಸಲಾಗಿದೆ.

* ಖರೀದಿಗೆ ಶೀನ್‌ (Shein)

ಮಹಿಳೆಯ ಉಡುಪುಗಳ ಖರೀದಿಗೆ ಬಳಕೆಯಾಗುತ್ತಿರುವ ಆ್ಯಪ್‌ ಶೀನ್‌. ಟ್ರೆಂಡ್‌ಗೆ ತಕ್ಕಂತಹ ಬಟ್ಟೆಗಳು, ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗುವಂತಹ ಸಂಗ್ರಹ ಹಾಗೂ ಕೈಗೆಟುಕುವ ದರದಲ್ಲಿ ಖರೀದಿ ವ್ಯವಸ್ಥೆಯನ್ನು ಶೀನ್‌ ನೀಡುತ್ತಿದೆ. ಇದರಿಂದ ಬುಕ್‌ ಮಾಡುವ ಬಹುತೇಕ ಉಡುಗೆ–ತೊಡುಗೆಗಳು ಚೀನಾದಿಂದಲೇ ಬರುತ್ತವೆ. ನಿಷೇಧವಾಗಿರುವ ಮತ್ತೊಂದು ಇ–ಕಾರ್ಮಸ್‌ ಆ್ಯಪ್‌ ಕ್ಲಬ್‌ಫ್ಯಾಕ್ಟರಿ (ClubFactory) ಮೂಲಕವೂ ಬಟ್ಟೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಬಹುದಾಗಿದೆ.

ಇದಕ್ಕೆ ಪರ್ಯಾಯವಾಗಿ ದೇಶದ ಬಹುದೊಡ್ಡ ಬಟ್ಟೆ ಮಾರಾಟ ವೇದಿಕೆ ಮಿಂತ್ರ (Myntra) ಬಳಸಬಹುದು. ಲೈಮ್‌ರೋಡ್‌ (LimeRoad), ರಿಲಯನ್ಸ್‌ನ ಎಜಿಯೊ (AJIO) ಹಾಗೂ ಪ್ರೈಸೀ (Pricee) ರೀತಿಯ ಹಲವು ಆ್ಯಪ್‌ಗಳಿವೆ. ಫ್ಲಿಪ್‌ಕಾರ್ಟ್‌, ಅಮೆಜಾನ್‌ ಆ್ಯಪ್‌ಗಳು ಈಗಾಗಲೇ ಬಳಕೆಯಲ್ಲಿವೆ.


ಪ್ರೈಸೀ ಆ್ಯಪ್‌

* ಸುದ್ದಿಗಳಿಗಾಗಿ ನೀಡಲು ಯುಸಿ ನ್ಯೂಸ್‌ (UC News)

ವಿವಿಧ ಸುದ್ದಿ ಮೂಲಗಳಿಂದ ಸಂಗ್ರಹಿಸಿದ ಸುದ್ದಿಗಳನ್ನು ಟ್ರೆಂಡಿಂಗ್‌ ವಿಡಿಯೊ ಹಾಗೂ ಗಾಸಿಪ್‌ಗಳನ್ನು ಯುಸಿ ನ್ಯೂಸ್‌, ನ್ಯೂಸ್‌ಡಾಗ್‌ (Newsdog) ಹಾಗೂ ಕ್ಯುಕ್ಯು ನ್ಯೂಸ್‌ಫೀಡ್‌ (QQ Newsfeed) ಆ್ಯಪ್‌ಗಳು ನೀಡುತ್ತಿವೆ. ನಿಷೇಧಗೊಂಡಿರುವ ಈ ಆ್ಯಪ್‌ಗಳ ಬದಲು ಇನ್‌ಶಾರ್ಟ್ಸ್‌ (Inshorts) ರೀತಿಯ ಸುದ್ದಿ ಸಂಗ್ರಹ ಅಪ್ಲಿಕೇಷನ್‌, ಗೂಗಲ್‌ ನ್ಯೂಸ್‌ (Google News) ಬಳಸಬಹುದು. ನಂಬಿಕಾರ್ಹ ಸುದ್ದಿಗಳಿಗಾಗಿ ಯಾವಾಗಲೂ ಡೆಕ್ಕನ್‌ ಹೆರಾಲ್ಡ್‌ (Deccan Herald) ರೀತಿಯ ಸುದ್ದಿ ಮಾಧ್ಯಮಗಳ ಅಧಿಕೃತ ಆ್ಯಪ್‌ ಬಳಸುವುದು ಸೂಕ್ತ.


ಡೆಕ್ಕನ್‌ ಹೆರಾಲ್ಡ್‌ ನ್ಯೂಸ್ ಆ್ಯಪ್‌

ಉಳಿದಂತೆ, ಸರ್ಕಾರ ನಿಷೇಧಿಸಿರುವ ಇತರೆ ಆ್ಯಪ್‌ಗಳಲ್ಲಿ ಫೋನ್‌ ವೈರಸ್‌ ಕ್ಲೀನಿಂಗ್‌ಗೆ ವೈರಸ್ ಕ್ಲೀನರ್‌ ( Virus Cleaner) ಬದಲು ಅವಾಸ್ಟ್‌ ಆ್ಯಂಟಿವೈರಸ್ ( Avast Antivirus) ಬಳಸಬಹುದು. ಮಾರ್ಗಸೂಚಿ ವ್ಯವಸ್ಥೆಗಾಗಿ ಬೈದು ಮ್ಯಾಪ್‌ ಬದಲು (Baidu Map) ಗೂಗಲ್‌ ಮ್ಯಾಪ್ಸ್‌ (Google Maps) ಹೆಚ್ಚು ಜನಪ್ರಿಯವಾಗಿದೆ. ದೇಶೀಯ ಆ್ಯಪ್ ಮ್ಯಾಪ್‌ ಮೈ ಇಂಡಿಯಾ (MapmyIndia Move) ಬಳಸಬಹುದು. ಇನ್ನೂ ಬ್ಯೂಟಿ ಫ್ಲಿಲ್ಟರ್‌ಗೆ ಬಿ612 ರೀತಿಯ ಆ್ಯಪ್‌ಗಳಿವೆ. ವಿಚ್ಯಾಟ್‌ (Wechat) ಬದಲು ವಾಟ್ಸ್‌ಆ್ಯಪ್‌ ಹೆಚ್ಚು ಬಳಕೆಯಲ್ಲಿದೆ. ನಿಷೇಧಿತ ಆ್ಯಪ್‌ಗಳಿಗೆ ದೇಶೀಯ ಅಥವಾ ಅಮೆರಿಕ ಸೇರಿದಂತೆ ಇತರೆ ಮೂಲದ ಕಂಪನಿಗಳಿಂದ ಪರ್ಯಾಯ ಆ್ಯಪ್‌ ಲಭ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು